ವಾಟ್ಸಾಪ್ ಗ್ರೂಪ್ ನೆರವಿನಿಂದ ಹೆತ್ತವರ ಮಡಿಲು ಸೇರಿದ ಮೂಕ ಬಾಲಕಿ!
ಶಿವಮೊಗ್ಗ ಜಿಲ್ಲೆಯಲ್ಲಿ ದಾರಿ ತಪ್ಪಿ ಸಂಕಷ್ಟಕ್ಕೆ ಸಿಲುಕಿದ್ದ 14 ವರ್ಷದ ಮಾತು ಬಾರದ ಬಾಲಕಿಯನ್ನು ಕರ್ನಾಟಕ ಪೊಲೀಸರು ವಾಟ್ಸಾಪ್ ನೆರವಿನಿಂದ ಕೇವಲ 48 ಗಂಟೆಗಳಲ್ಲಿ ಕುಟುಂಬದೊಂದಿಗೆ ಯಶಸ್ವಿಯಾಗಿ ಪುನರ್ಮಿಲನಗೊಳಿಸಿದ್ದಾರೆ. ಬಸ್ ತಪ್ಪಿಸಿಕೊಂಡು 30 ಕಿ.ಮೀ ದೂರ ಸಾಗಿದ್ದ ಬಾಲಕಿಯ ಫೋಟೋವನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುವ ಮೂಲಕ ಪೊಲೀಸರು ಸಮಯಪ್ರಜ್ಞೆ ಮೆರೆದು ಆಕೆಯ ಪೋಷಕರನ್ನು ಪತ್ತೆಹಚ್ಚಿದ್ದಾರೆ.

ಮುಖ್ಯಾಂಶಗಳು
- ದಾರಿ ತಪ್ಪಿದ್ದ ಮಾತು ಬಾರದ ಬಾಲಕಿಯನ್ನು ಶಿವಮೊಗ್ಗ ಪೊಲೀಸರು ರಕ್ಷಿಸಿದ್ದಾರೆ.
- ವಾಟ್ಸಾಪ್ ಗ್ರೂಪ್ ನೆರವಿನಿಂದ ಬಾಲಕಿಯ ಕುಟುಂಬವನ್ನು ಪೊಲೀಸರು ಸುಲಭವಾಗಿ ಪತ್ತೆಹಚ್ಚಿದರು.
- ಕೇವಲ 48 ಗಂಟೆಗಳಲ್ಲಿ ಬಾಲಕಿಯನ್ನು ಆಕೆಯ ಹೆತ್ತವರ ಮಡಿಲಿಗೆ ಸೇರಿಸಲಾಗಿದೆ.
ಶಿವಮೊಗ್ಗ, ಸೆಪ್ಟೆಂಬರ್ 06: ಜಿಲ್ಲೆಯಲ್ಲಿ ದಾರಿ ತಪ್ಪಿ ಸಂಕಷ್ಟಕ್ಕೆ ಸಿಲುಕಿದ್ದ 14 ವರ್ಷದ ಮೂಕ ಬಾಲಕಿಯೊಬ್ಬಳನ್ನು ಕರ್ನಾಟಕ ಪೊಲೀಸರು ಕೇವಲ ಎರಡೇ ದಿನಗಳಲ್ಲಿ ಆಕೆಯ ಕುಟುಂಬದೊಂದಿಗೆ ಯಶಸ್ವಿಯಾಗಿ ಒಪ್ಪಿಸಿದ್ದಾರೆ. ಪೊಲೀಸರ ಸಮಯಪ್ರಜ್ಞೆ ಮತ್ತು ವಾಟ್ಸಾಪ್ ಗ್ರೂಪ್‌ಗಳ ಬಳಕೆಯಿಂದ ಬಾಲಕಿಯು ಪತ್ತೆಯಾಗಿದ್ದು, ಸುರಕ್ಷಿತವಾಗಿ ಮನೆ ತಲುಪಿದ್ದಾಳೆ.
ಘಟನೆಯ ಹಿನ್ನೆಲೆ
ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ನಿವಾಸಿಯಾಗಿರುವ ಈ ಬಾಲಕಿ, ಆಗಸ್ಟ್ 25ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳಲು ಬಸ್ ಹತ್ತಿದ್ದಳು. ಸಾಮಾನ್ಯವಾಗಿ ಈಕೆ ಒಬ್ಬಳೇ ಆಸ್ಪತ್ರೆಗೆ ಹೋಗಿ ಬರುತ್ತಿದ್ದಳು. ಆದರೆ, ಅಂದು ಆಕೆ ಇಳಿಯಬೇಕಿದ್ದ ನಿಲ್ದಾಣವನ್ನು ತಪ್ಪಿಸಿಕೊಂಡು ಸುಮಾರು 30 ಕಿ.ಮೀ ದೂರದ ತಮ್ಮಡಿಹಳ್ಳಿಗೆ ತಲುಪಿದ್ದಳು. ಬಸ್‌ನ ಕೊನೆಯ ನಿಲ್ದಾಣ ಬಂದಾಗ ಇಳಿಯಲು ತಿಳಿಸಿದಾಗ ಬಾಲಕಿ ಗೊಂದಲಕ್ಕೊಳಗಾಗಿದ್ದಳು. ಆಕೆಗೆ ಮಾತನಾಡಲು ಸಾಧ್ಯವಾಗದಿರುವುದನ್ನು ಗಮನಿಸಿದ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರು ತಕ್ಷಣವೇ ‘112’ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ರಕ್ಷಣಾ ಕಾರ್ಯಾಚರಣೆ
ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿಯ (CWC) ಮುಂದೆ ಹಾಜರುಪಡಿಸಿ ಸರ್ಕಾರಿ ಮಕ್ಕಳ ಆರೈಕೆ ಕೇಂದ್ರಕ್ಕೆ ಸೇರಿಸಿದರು. ಇತ್ತ ಮನೆಗೆ ಮರಳದ ಮಗಳಿಗಾಗಿ ಕುಟುಂಬದವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಾಲಕಿ ಅಪ್ರಾಪ್ತೆಯಾಗಿದ್ದರಿಂದ ಆರಂಭದಲ್ಲಿ ಆಕೆಯ ಫೋಟೋವನ್ನು ಬಹಿರಂಗವಾಗಿ ಹಂಚಿಕೊಳ್ಳಲಿಲ್ಲ. ನಂತರ ಹಿರಿಯ ಅಧಿಕಾರಿಗಳ ಸೂಚನೆಯಂತೆ, ಬಾಲಕಿಯ ಫೋಟೋವನ್ನು ಪೊಲೀಸರ ಆಂತರಿಕ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಯಿತು.
ಕುಟುಂಬದೊಂದಿಗೆ ಪುನರ್ಮಿಲನ
ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರ ವಾಟ್ಸಾಪ್ ಮೂಲಕ ಈ ಫೋಟೋ ಬಾಲಕಿಯ ಸಹೋದರನ ಕಣ್ಣಿಗೆ ಬಿದ್ದಿದೆ. ಆತ ತಕ್ಷಣವೇ ಆಕೆಯನ್ನು ತನ್ನ ತಂಗಿ ಎಂದು ಗುರುತಿಸಿದನು. ಪೊಲೀಸರು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಸಿಡಬ್ಲ್ಯೂಸಿ (CWC) ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಆಗಸ್ಟ್ 27ರಂದು ಬಾಲಕಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಿದರು. ತಂತ್ರಜ್ಞಾನದ ಸರಿಯಾದ ಬಳಕೆ ಮತ್ತು ಪೊಲೀಸರ ಶ್ರಮದಿಂದಾಗಿ ದಾರಿ ತಪ್ಪಿದ್ದ ಬಾಲಕಿ ಸುರಕ್ಷಿತವಾಗಿ ಮನೆ ತಲುಪಿದ್ದಾಳೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




