Siddaramaiah Anguish: ಕೇಂದ್ರದಿಂದ ಅನ್ಯಾಯ ಅನ್ಯಾಯ… ಬಜೆಟ್ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರವನ್ನು ಕುಟುಕಿದ ಸಿದ್ದರಾಮಯ್ಯ
Karnataka Budget 2025-26, state vs center: ಸಿಎಂ ಸಿದ್ದರಾಮಯ್ಯ ತಮ್ಮ ಮೂರೂವರೆ ಗಂಟೆ ಭಾಷಣದಲ್ಲಿ ಕೇಂದ್ರದ ವಿರುದ್ಧ ಹಲವು ಬಾರಿ ಟೀಕೆ ಮಾಡಿದ್ದಾರೆ. ಕೇಂದ್ರದ ಮಲತಾಯಿ ಧೋರಣೆಯಿಂದಾಗಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬುದು ಮುಖ್ಯಮಂತ್ರಿಗಳ ಪ್ರಮುಖ ಆಕ್ಷೇಪ. ಜಿಎಸ್ಟಿ ಹಂಚಿಕೆಯ ಸೂತ್ರದಲ್ಲಿ ಆದ ಬದಲಾವಣೆಯಿಂದ ರಾಜ್ಯಕ್ಕೆ ವರ್ಷಕ್ಕೆ ಸುಮಾರು 12,000 ಕೋಟಿ ರೂ ನಷ್ಟ ಆಗುತ್ತಿದೆ ಎಂದರು.

ಬೆಂಗಳೂರು, ಮಾರ್ಚ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶುಕ್ರವಾರ 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ (Karnataka Budget Size) ಮಂಡನೆ ಮಾಡಿದ್ದಾರೆ. ಈ ಬಾರಿ 38,000 ಕೋಟಿ ರೂನಷ್ಟು ಹೆಚ್ಚುವರಿ ಆದಾಯವನ್ನು ರಾಜ್ಯಕ್ಕೆ ತಂದಿದ್ದಾರೆ. ಸುಮಾರು ಮೂರೂವರೆ ಗಂಟೆ ಕಾಲ ಬಜೆಟ್ ಭಾಷಣ ಮಾಡಿದ ಸಿದ್ದರಾಮಯ್ಯ (Siddaramaiah), ಹಲವು ಬಾರಿ ಕೇಂದ್ರ ಸರ್ಕಾರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಮತ್ತೆ ಒತ್ತಿ ಹೇಳಿದ್ದಾರೆ.
‘ಜಿಎಸ್ಟಿ ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಸೆಸ್ ಮತ್ತು ಸರ್ಚಾರ್ಜ್ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆಯಲ್ಲಿ ರಾಜ್ಯಗಳ ಪಾಲಿನಲ್ಲಿ ಕರ್ನಾಟಕವನ್ನು ಪರಿಗಣಿಸಲಾಗಿಲ್ಲ. 15ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ರಾಜ್ಯದ ತೆರಿಗೆ ಪಾಲು ಕಡಿಮೆ ಆಗಿದೆ. ಇದರಿಂದ ಕರ್ನಾಟಕ ರಾಜ್ಯವು ವಿತ್ತೀಯ ಸವಾಲು ಎದುರಿಸುವಂತಾಯಿತು’ ಎಂದು ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ವಿಷಾದಿಸಿದರು.
ಇದನ್ನೂ ಓದಿ: Karnataka Budget Size: 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ನಲ್ಲಿ ಸರ್ಕಾರದ ಸಾಲ, ಖರ್ಚು ಮತ್ತು ವೆಚ್ಚಗಳ ವಿವರ
14ನೇ ಹಣಕಾಸು ಆಯೋಗವು ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ಪಾಲು ಶೇ. 4.713 ಎಂದು ನಿಗದಿ ಮಾಡಿತ್ತು. 15ನೇ ಹಣಕಾಸು ಆಯೋಗವು ಈ ಪಾಲನ್ನು ಶೇ. 3.647ಕ್ಕೆ ಇಳಿಸಿತು. ಇದರಿಂದ ಕರ್ನಾಟಕಕ್ಕೆ ವರ್ಷಕ್ಕೆ ಅಂದಾಜು 12,000 ಕೋಟಿ ರೂ ನಷ್ಟ ಅಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕಕ್ಕೆ ತೆರಿಗೆ ಪಾಲು ಕಡಿಮೆ ಆದ ಕಾರಣ ಅದಕ್ಕೆ ಪರಿಹಾರವಾಗಿ ರಾಜ್ಯಕ್ಕೆ 11,495 ಕೋಟಿ ರೂ ಮೊತ್ತದ ವಿಶೇಷ ಗ್ರ್ಯಾಂಟ್ಗಳನ್ನು ನೀಡುವಂತೆ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಅನುದಾನ ನೀಡಲಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
2023-24ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ ಘೋಷಿಸಲಾಗಿತ್ತು. ಆದರೆ, ಇನ್ನೂ ಕೂಡ ಆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಇದನ್ನೂ ಓದಿ: ದುಡಿಯುವ ವರ್ಗಕ್ಕೆ ಅಲ್ಪ ಬಿಸಿ ಮುಟ್ಟಿಸಿದ ಸಿದ್ದರಾಮಯ್ಯ ಬಜೆಟ್: ವೃತ್ತಿ ತೆರಿಗೆ ಏರಿಕೆ
ಜಲಜೀವನ್ ಮಿಷನ್ ಯೋಜನೆಯಲ್ಲಿ 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 3,800 ಕೋಟಿ ರೂ ಬರಬೇಕಿತ್ತು. ಅದರಲ್ಲಿ ಬಿಡುಗಡೆ ಆಗಿರುವುದು 571 ಕೋಟಿ ರೂ ಮಾತ್ರವೇ ಎಂದು ಅವರು ತಿಳಿಸಿದರು.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




