ಸಿದ್ದರಾಮಯ್ಯ ಬಜೆಟ್ಗೆ ನೂರಕ್ಕೆ ನೂರು ಮಾರ್ಕ್ಸ್ ಕೊಟ್ಟ ಬಿಜೆಪಿ ಶಾಸಕರು
2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ 16ನೇ ಬಾರಿಗೆ ಆಯವ್ಯಯ ಮಂಡಿಸಿದ್ದಾರೆ. ಈ ಬಗ್ಗೆ ಬಿಜೆಜೆ ರೆಬೆಲ್ ನಾಯಕರು ಹಾಡಿಹೊಗಳಿದ್ದಾರೆ. ಬಜೆಟ್ಗೆ ನೂರಕ್ಕೆ ನೂರು ಮಾರ್ಕ್ಸ್ ಕೊಡುತ್ತೇನೆ ಎಂದು ಮಾತು ಮಾತಿಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮರ್ರನ್ನು ಬಿಜೆಪಿ ರೆಬೆಲ್ ಶಾಸಕರು ಹೊಗಳಿದ್ದಾರೆ.

ಬೆಂಗಳೂರು, ಮಾರ್ಚ್ 07: ಸಿಎಂ ಸಿದ್ದರಾಮಯ್ಯ (Siddaramaiah) ಇಂದು ತಮ್ಮ 16ನೇ ಬಜೆಟ್ (Budget) ಮಂಡನೆ ಮಾಡಿದ್ದಾರೆ. ಹತ್ತು ಹಲವು ಹೊಸ ಯೋಜನೆಗಳಿಗೆ ಅನುದಾನ ಘೋಷಿಸಲಾಗಿದೆ. ಇತ್ತ ವಿಪಕ್ಷ ಬಿಜೆಪಿ ನಾಯಕರು ಬಜೆಟ್ ವಿರುದ್ಧ ಕಿಡಿಕಾರಿದ್ದಾರೆ. ಇದು ಹಲಾಲ್, ಸಾಬರ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಬಿಜೆಪಿಯ ರೆಬೆಲ್ ಶಾಸಕರು ಮಾತ್ರ ಸಿದ್ದರಾಮಯ್ಯ ಬಜೆಟ್ ಅನ್ನು ಹಾಡಿಹೊಗಳಿದ್ದು, ಬಜೆಟ್ಗೆ ನೂರಕ್ಕೆ ನೂರು ಮಾರ್ಕ್ಸ್ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್, ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಬೆಂಗಳೂರಿಗೆ ಸಂಬಂಧಪಟ್ಟಂತೆ ನಂಬರ್ ಒನ್ ಬಜೆಟ್ ಕೊಟ್ಟಿದ್ದಾರೆ. ಬಿಜೆಪಿ ಅವರಿಗೆ ಮುಸ್ಲಿಂ ಒಂದೇ, ಬೇರೆ ಏನೂ ಕಾಣಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Karnataka Budget Size: 4.09 ಲಕ್ಷ ಕೋಟಿ ರೂ ಗಾತ್ರದ ಬಜೆಟ್ನಲ್ಲಿ ಸರ್ಕಾರದ ಸಾಲ, ಖರ್ಚು ಮತ್ತು ವೆಚ್ಚಗಳ ವಿವರ
ಬಿಜೆಪಿ ಶಾಸಕನಾಗಿ ಹೇಳುತ್ತಿದ್ದೇನೆ ನೂರಕ್ಕೆ ನೂರು ಬೆಂಗಳೂರಿಗೆ ಒಳ್ಳೆಯ ಬಜೆಟ್ ಘೋಷಣೆ ಮಾಡಿದ್ದಾರೆ. ಯಾವ ಸರ್ಕಾರದಲ್ಲಿ ಸಾಲ ಮಾಡಿಲ್ಲ ಹೇಳಿ. ಸಾಲ ಮಾಡಲಿ ಏನೇ ಮಾಡಲಿ ಬೆಂಗಳೂರಿಗೆ ಒಳ್ಳೆಯ ಬಜೆಟ್ ಘೋಷಣೆ ಮಾಡಿದ್ದಾರೆ ಎಂದಿದ್ದಾರೆ.
ಇದೊಂದು ಒಳ್ಳೆಯ ಬಜೆಟ್ ಎಂದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್
ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸಮಾಜಮುಖಿ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ವರ್ಗದ ಸಮುದಾಯಕ್ಕೂ ಯೋಜನೆಗಳನ್ನು ನೀಡಿದ್ದಾರೆ. ಕರಾವಳಿ ಭಾಗದಲ್ಲಿ ಒಳ್ಳೆಯ ಯೋಜನೆಗಳನ್ನು ಘೋಷಿಸಿದ್ದಾರೆ ಎಂದು ತಿಳಿಸಿದರು.
ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಶಾಸಕನಾಗಿ ಹೇಳುತ್ತಿದ್ದೇನೆ, ಇದೊಂದು ಒಳ್ಳೆಯ ಬಜೆಟ್. ಬಜೆಟ್ ಕುರಿತು ಬಿಜೆಪಿ ನಾಯಕರು ಆರೋಪ ಮಾಡಲಿ. ನಾನು ಶಾಸಕನಾಗಿ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Budget 2025: ಬಜೆಟ್ ಬ್ಯಾಗ್ನೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ
ಶಾಸಕ ಎಸ್ಟಿ ಸೋಮಶೇಖರ್, ಶಾಸಕ ಶಿವರಾಮ್ ಹೆಬ್ಬಾರ್ ಇತ್ತೀಚೆಗೆ ಕಾಂಗ್ರೆಸ್ನಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಕೆಲ ದಿನಗಳಿಂದ ರೆಬೆಲ್ ನಾಯಕರ ಪೈಕಿ ಇವರು ಬಿಜೆಪಿ ಕಾರ್ಯಕ್ರಮಗಳಿಂದ ಸ್ವಲ್ಪ ಕಾಯ್ದುಕೊಂಡಿದ್ದರು. ಹಾಗಾಗಿ ವಾಪಸ್ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಬಳಿಕ ಆ ವಿಚಾರ ತಣ್ಣಗಾಗಿತ್ತು. ಇದೀಗ ರಾಜ್ಯ ಸರ್ಕಾರದ ಬಜೆಟ್ಗೆ ಇಬ್ಬರು ಶಾಸಕರು ಹಾಡಿಹೊಗಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.