ಸ್ಟಿಂಗ್ ಪ್ರಕರಣ: ಕುಮಾರಸ್ವಾಮಿ ಮನೆ ಮುಂದೆ ಮೊಬೈಲ್ ಎಕ್ಸ್‌ಚೇಂಜ್ ಆಗಿದ್ದು ಹೌದಾ? ತನಿಖೆ ವೇಳೆ ಆರೋಪಿ ಪ್ರಜ್ವಲ್ ಏನಂದ ನೋಡಿ!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣದ ತನಿಖೆಯಲ್ಲಿ ಸಿಸಿಬಿ ತಾಂತ್ರಿಕ ಸಾಕ್ಷ್ಯಗಳ ಮೊರೆ ಹೋಗಿದೆ. ದೆಹಲಿಯಲ್ಲಿರುವ ಕುಮಾರಸ್ವಾಮಿ ನಿವಾಸದ ಬಳಿ ಮೊಬೈಲ್ ವಿನಿಮಯ ಆರೋಪದ ಕುರಿತು ಪ್ರಜ್ವಲ್ ಪ್ರಸಾದ್ ಅನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸದ್ಯ ಮೊಬೈಲ್ ಡೇಟಾ, ಸಿಸಿಟಿವಿ ದೃಶ್ಯಾವಳಿ ಹಾಗೂ ಎಫ್‌ಎಸ್‌ಎಲ್ ವರದಿಗಳ ಮೂಲಕ ಸತ್ಯಾಂಶ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಸ್ಟಿಂಗ್ ಪ್ರಕರಣ: ಕುಮಾರಸ್ವಾಮಿ ಮನೆ ಮುಂದೆ ಮೊಬೈಲ್ ಎಕ್ಸ್‌ಚೇಂಜ್ ಆಗಿದ್ದು ಹೌದಾ? ತನಿಖೆ ವೇಳೆ ಆರೋಪಿ ಪ್ರಜ್ವಲ್ ಏನಂದ ನೋಡಿ!
ತಾಂತ್ರಿಕ ಸಾಕ್ಷ್ಯ ಕಲೆಹಾಕಲು ಸಿಸಿಬಿ ಸಿದ್ಧತೆ
Edited By:

Updated on: Nov 04, 2026 | 9:12 AM

ಮುಖ್ಯಾಂಶಗಳು

  • ಪ್ರಜ್ವಲ್ ವಿಚಾರಣೆಯಲ್ಲಿ ತಿಳಿದುಬಂದಿದ್ದೇನು?
  • ತಾಂತ್ರಿಕ ಸಾಕ್ಷ್ಯ ಕಲೆಹಾಕಲು ಸಿಸಿಬಿ ಸಿದ್ಧತೆ
  • ಕುಮಾರಸ್ವಾಮಿ ದೆಹಲಿ ನಿವಾಸದ ಸಿಸಿಟಿವಿ ಪರಿಶೀಲನೆ ಚರ್ಚೆ

ಬೆಂಗಳೂರು, ನವೆಂಬರ್ 4: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಮತ್ತಷ್ಟು ಎಚ್ಚರಿಕೆಯಿಂದ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ವಿಚಾರಣೆಗೆ ಹಾಜರಾಗಿರುವ ಆರೋಪಿಗಳು ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ, ಇದೀಗ ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕುವತ್ತ ಸಿಸಿಬಿ ಗಮನ ಹರಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದ ಬಳಿ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಅನ್ನು ಆರೋಪಿಗಳು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು ಎಂದು ಆರೋಪಿ ರಿತೇಶ್ ಪಾಂಡೆ ನೀಡಿದ ಮಾಹಿತಿ ಆಧರಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು. ಈ ವಿಚಾರ ಪ್ರಕರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಆದರೆ, ಇದೀಗ ವಿಚಾರಣೆಗೆ ಹಾಜರಾಗಿರುವ ಕುಮಾರಸ್ವಾಮಿ ಅವರ ಪಿಆರ್‌ಒ ಪ್ರಜ್ವಲ್ ಪ್ರಸಾದ್, ವಿಡಿಯೋ ಮತ್ತು ಈ ಪ್ರಕರಣದ ಹಲವು ಪ್ರಮುಖ ವಿಚಾರಗಳ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದಾಗಿ ತಿಳಿದುಬಂದಿದೆ. ಹೀಗಾಗಿ, ಪ್ರಜ್ವಲ್ ಹೇಳಿಕೆಗಳನ್ನಷ್ಟೇ ಅವಲಂಬಿಸದೆ ತಾಂತ್ರಿಕ ಸಾಕ್ಷ್ಯಗಳ ಮೂಲಕ ಸತ್ಯಾಂಶ ಹೊರತೆಗೆದಿಡಲು ಸಿಸಿಬಿ ಯೋಜನೆ ರೂಪಿಸಿದೆ.

ವಿಡಿಯೋ ಬಗ್ಗೆ ಗೊತ್ತಿಲ್ಲ ಎಂದ ಪ್ರಜ್ವಲ್ ಪ್ರಸಾದ್

ಈಗಾಗಲೇ ಸಿಸಿಬಿ ವಿಚಾರಣೆಗೆ ಹಾಜರಾಗಿರುವ ಪ್ರಜ್ವಲ್ ಪ್ರಸಾದ್, ಸ್ಟಿಂಗ್ ವಿಡಿಯೋ ಕುರಿತು ತನಗೆ ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ವಿಡಿಯೋವನ್ನು ತಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದಾಗಿ ಅವರು ಹೇಳಿರುವ ಮಾಹಿತಿ ಇದೆ.

ಇದರೊಂದಿಗೆ, ರಿತೇಶ್ ಪಾಂಡೆ ಎಂಬ ವ್ಯಕ್ತಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದೂ ಪ್ರಜ್ವಲ್ ಪ್ರಸಾದ್ ವಿಚಾರಣೆ ವೇಳೆ ಹೇಳುತ್ತಿರುವುದಾಗಿ ತಿಳಿದುಬಂದಿದೆ. ಆದರೆ, ಪ್ರಕರಣದ ತನಿಖೆಯಲ್ಲಿ ಈ ಹೇಳಿಕೆಗಳು ಮತ್ತು ಈಗಾಗಲೇ ಲಭ್ಯವಾಗಿರುವ ಇತರ ಮಾಹಿತಿಗಳನ್ನು ತಾಂತ್ರಿಕ ಸಾಕ್ಷ್ಯಗಳ ಮೂಲಕ ಪರಿಶೀಲಿಸಲು ಪೊಲೀಸರು ಮುಂದಾಗಿದ್ದಾರೆ.

ಪ್ರಜ್ವಲ್ ಮೊಬೈಲ್ ವಶಕ್ಕೆ ಪಡೆದು ತಾಂತ್ರಿಕ ಪರಿಶೀಲನೆ

ಪ್ರಜ್ವಲ್ ಪ್ರಸಾದ್ ಮೊಬೈಲ್ ಅನ್ನು ವಶಪಡಿಸಿಕೊಂಡು ಅದರಲ್ಲಿರುವ ಮಾಹಿತಿಯನ್ನು ಮರುಪಡೆಯಲು ತಾಂತ್ರಿಕ ಪರಿಶೀಲನೆಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದ ಸಂಪರ್ಕಗಳು, ಸಂವಹನ ಮತ್ತು ಇತರ ಡಿಜಿಟಲ್ ಮಾಹಿತಿಗಳನ್ನು ಪರಿಶೀಲಿಸುವ ಮೂಲಕ ತನಿಖೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ.

ಈಗಾಗಲೇ ಪ್ರಕರಣದ ಆರೋಪಿಗಳ ಕೆಲವು ಮೊಬೈಲ್‌ಗಳನ್ನು ಸಿಸಿಬಿ ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿಯನ್ನು ಆದಷ್ಟು ಶೀಘ್ರ ಪಡೆಯುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ.

ದೆಹಲಿಯಲ್ಲಿ ಮೊಬೈಲ್ ಖರೀದಿ ಸುಳಿವು ಪತ್ತೆ

ತನಿಖೆಯ ಭಾಗವಾಗಿ ರಿತೇಶ್ ಪಾಂಡೆ ದೆಹಲಿಯಲ್ಲಿ ಮೊಬೈಲ್ ಖರೀದಿಸಿದ್ದ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿ ಸಿಸಿಬಿಗೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ. ಮೊಬೈಲ್ ಖರೀದಿಸಿದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದು, ಖರೀದಿಗೆ ಸಂಬಂಧಿಸಿದ ಬಿಲ್‌ನ್ನೂ ವಶಪಡಿಸಿಕೊಂಡಿದ್ದಾರೆ.

ಇದರ ಜೊತೆಗೆ, ಮೊಬೈಲ್ ಅಂಗಡಿಯ ಅಕ್ಕಪಕ್ಕದಲ್ಲಿರುವ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಂಗ್ರಹಿಸುವ ಮೂಲಕ ತನಿಖೆಗೆ ಪೂರಕವಾದ ಮಾಹಿತಿ ಕಲೆಹಾಕಲಾಗುತ್ತಿದೆ. ಈ ತಾಂತ್ರಿಕ ಮತ್ತು ದೃಶ್ಯ ಸಾಕ್ಷ್ಯಗಳ ಆಧಾರದಲ್ಲಿ ಮುಂದಿನ ತನಿಖೆಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

ಕುಮಾರಸ್ವಾಮಿ ದೆಹಲಿ ನಿವಾಸದ ಮಹಜರು?

ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ದೆಹಲಿಯಲ್ಲಿರುವ ಕುಮಾರಸ್ವಾಮಿ ಅವರ ನಿವಾಸಕ್ಕೆ ಬಂದಿದ್ದರು ಎಂಬ ಮಾಹಿತಿ ಸಿಸಿಬಿಗೆ ದೊರೆತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ, ದೆಹಲಿ ನಿವಾಸದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯುವ ಹಾಗೂ ಅಗತ್ಯವಿದ್ದರೆ ಸ್ಥಳ ಮಹಜರು ನಡೆಸುವ ಬಗ್ಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ತನಿಖೆಯ ಮುಂದಿನ ಹಂತದ ಕುರಿತು ಮಹತ್ವದ ಸಭೆ ನಡೆದಿದ್ದು, ಸಿಸಿಬಿ ಹಾಗೂ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳೊಂದಿಗೆ ಸಾಕ್ಷ್ಯ ಸಂಗ್ರಹದ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸ್ಟಿಂಗ್ ಕೇಸ್​ಗೆ ಬಿಗ್ ಟ್ವಿಸ್ಟ್: ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಪಟ್ಟಿದ್ದ ಕೃಪಾ ಆಳ್ವ? ಗಂಭೀರ ಆರೋಪ

ವಿಚಾರಣೆ ವೇಳೆ ಆರೋಪಿಗಳಿಂದ ಸ್ಪಷ್ಟ ಮಾಹಿತಿ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, ಯಾವುದೇ ಆತುರದ ಕ್ರಮಕ್ಕೆ ಮುಂದಾಗದೆ ತಾಂತ್ರಿಕ ಸಾಕ್ಷ್ಯಗಳನ್ನು ಗಟ್ಟಿಯಾಗಿ ಕಲೆಹಾಕಿ ತನಿಖೆ ಮುಂದುವರಿಸುವಂತೆ ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ತನಿಖೆಗೆ ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
Loading...
Unable to load recommendations.
Follow Us