
ಬೆಂಗಳೂರು, ನವೆಂಬರ್ 3: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಕೃಪಾ ಆಳ್ವ ಅವರ ಹಿಂದಿನ ಕಾರ್ಯವೈಖರಿ ಈಗ ಮತ್ತೆ ಮುನ್ನೆಲೆಗೆ ಹಾಗೂ ಚರ್ಚೆಗೆ ಬಂದಿದೆ. ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಇ-ಮೇಲ್ ಮೂಲಕ ದೂರು ನೀಡಿದ್ದರು. ಆದರೆ, ಆ ದೂರಿನ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಬದಲು ಪ್ರಕರಣವನ್ನು ಮುಚ್ಚಿಹಾಕಲು ಕೃಪಾ ಆಳ್ವ ಪ್ರಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಕೃಪಾ ಆಳ್ವ 2015ರಿಂದ 2018ರವರೆಗೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ಇ-ಮೇಲ್ ಮೂಲಕ ದೂರು ದಾಖಲಿಸಿದ್ದರು. ಮಹಿಳೆ ನೀಡಿದ್ದ ದೂರಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಬೇಕಿತ್ತು ಎಂಬುದು ಈಗ ಕೇಳಿಬಂದಿರುವ ಆರೋಪ.
ಆದರೆ, ದೂರು ಬಂದಿದ್ದರೂ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವ ಬದಲು ಪ್ರಕರಣವನ್ನು ಮುಚ್ಚಿಹಾಕಲು ಕೃಪಾ ಆಳ್ವ ಪ್ರಯತ್ನಿಸಿದ್ದರು ಎಂಬ ಆರೋಪ ಇದೆ. ಮಹಿಳೆಯ ದೂರಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ತನಿಖೆಗೆ ವಹಿಸುವ ಬದಲು ಅದನ್ನು ನಿರ್ಲಕ್ಷಿಸಲಾಗಿತ್ತೇ ಎಂಬ ಪ್ರಶ್ನೆಯೂ ಎದ್ದಿದೆ. ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದ ವ್ಯಕ್ತಿಯ ವಿರುದ್ಧವೇ ಇಂತಹ ಆರೋಪ ಕೇಳಿಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ನೀಡಿದೆ.
ಮತ್ತೊಂದು ಬೆಳವಣಿಗೆಯೆಂದರೆ, 2018ರಿಂದಲೂ ಕೃಪಾ ಆಳ್ವ ಅವರು ಕೇರಳ ಮೂಲದ ಮಹಿಳೆಯ ಸಂಪರ್ಕದಲ್ಲಿದ್ದರು ಎಂಬುದು. 2023ರಲ್ಲಿ ಮಹಿಳೆಯ ಹೇಳಿಕೆಯನ್ನು ವಿಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಅಂದರೆ, ಮಹಿಳೆ ಈ ಹಿಂದೆ ನೀಡಿದ್ದ ದೂರಿನ ವಿಚಾರ ಮತ್ತು ನಂತರದ ಸಂಪರ್ಕದ ಹಿನ್ನೆಲೆ ಇದೀಗ ಸ್ಟಿಂಗ್ ಪ್ರಕರಣದ ಚರ್ಚೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ.
ಮಹಿಳೆ ಯಾವ ಕಾರಣಕ್ಕೆ ಇ-ಮೇಲ್ ಮೂಲಕ ದೂರು ನೀಡಿದ್ದರು? ಆ ದೂರಿನ ಬಗ್ಗೆ ಆಯೋಗದ ಅಧ್ಯಕ್ಷೆಯಾಗಿದ್ದ ಕೃಪಾ ಆಳ್ವ ಕೈಗೊಂಡ ಕ್ರಮಗಳೇನು? ದೂರು ಬಂದಿದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದರೇ? 2023ರಲ್ಲಿ ಮಹಿಳೆಯ ಹೇಳಿಕೆಯನ್ನು ವಿಡಿಯೋ ರೂಪದಲ್ಲಿ ದಾಖಲಿಸಿಕೊಳ್ಳುವ ಅಗತ್ಯ ಏನಿತ್ತು? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ವಿಡಿಯೋ ಸೆಪ್ಟೆಂಬರ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಡಿಯೋ ಮೂಲಕ ತಮ್ಮ ಮಾನಹಾನಿ ಮತ್ತು ಬ್ಲ್ಯಾಕ್‌ಮೇಲ್‌ಗೆ ಯತ್ನಿಸಲಾಗಿದೆ ಎಂದು ಆರೋಪಿಸಿ ಸಿದ್ದರಾಮಯ್ಯ ಅಕ್ಟೋಬರ್ 6ರಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಸಿಬಿ, ಅಕ್ಟೋಬರ್ 29ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ವಿಡಿಯೋದಲ್ಲಿ ಬಿಂಬಿಸಲಾದ ಆರೋಪಗಳು ಕಟ್ಟುಕಥೆಯಾಗಿರುವ ಸಾಧ್ಯತೆ ಇದೆ ಎಂಬ ಪ್ರಾಥಮಿಕ ತೀರ್ಮಾನವನ್ನು ತಿಳಿಸಿತ್ತು. ವಿಡಿಯೋದಲ್ಲಿನ ಘಟನೆಗಳಿಗೆ ಸಂಬಂಧಿಸಿದಂತೆ ಈವರೆಗೆ ಸಂಗ್ರಹಿಸಿದ ಹೇಳಿಕೆಗಳು ಮತ್ತು ಸಾಕ್ಷ್ಯಗಳು ಆರೋಪಗಳನ್ನು ದೃಢಪಡಿಸುವುದಿಲ್ಲ ಎಂದೂ ಹೇಳಿತ್ತು. ಆದರೆ ವಿಡಿಯೋ ಚಿತ್ರೀಕರಣ, ಅದರ ನೈಜತೆ ಮತ್ತು ಪ್ರಸಾರದ ಹಿಂದಿನ ವ್ಯಕ್ತಿಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿತ್ತು.
ಇದರ ಬೆನ್ನಲ್ಲೇ ಕೃಪಾ ಆಳ್ವ, ವಿನೋದ್ ಕುಮಾರ್ ಮತ್ತು ಪ್ರಶಾಂತ್ ಕುಮಾರ್ ಅವರಿಗೆ ಬೆಂಗಳೂರಿನ 66ನೇ ಸಿಸಿಹೆಚ್ ನ್ಯಾಯಾಲಯ ನವೆಂಬರ್ 2ರಂದು ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿತ್ತು. ತನಿಖೆಗೆ ಸಹಕರಿಸಬೇಕು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಹೈಕಮಾಂಡ್ ನಾಯಕ ರಾಹುಲ್ ಗಾಂಧಿಯನ್ನು ಸಿದ್ದರಾಮಯ್ಯ ಭೇಟಿಯಾಗಿ ಸ್ಟಿಂಗ್ ವಿಡಿಯೋ ಹಿಂದಿರುವ ಸೂತ್ರಧಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮುಂದುವರಿದರೆ ಮುಂದಿನ ಚುನಾವಣಾ ಪ್ರಚಾರಕ್ಕೂ ಬರುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ.
ಸ್ಟಿಂಗ್ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪವಾದ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಬೆಂಗಳೂರಿನ ಆರ್. ಅಶೋಕ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಕುಮಾರಸ್ವಾಮಿ, ಆರ್. ಅಶೋಕ್, ಸಂಸದರಾದ ಬಸವರಾಜ ಬೊಮ್ಮಾಯಿ, ಡಾ. ಕೆ. ಸುಧಾಕರ್ ಸೇರಿದಂತೆ ಮೈತ್ರಿ ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ: ಹೀಗೇ ಮುಂದುವರಿದರೆ ಚುನಾವಣಾ ಪ್ರಚಾರಕ್ಕೂ ಬರಲ್ಲ: ಸ್ಟಿಂಗ್ ಬಗ್ಗೆ ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಖಡಕ್ ಮಾತು!
ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ನಾಯಕರು ಚರ್ಚಿಸಿದ್ದಾರೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಮತ್ತು ಈ ವಿಚಾರದಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆದಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ