ಹೀಗೇ ಮುಂದುವರಿದರೆ ಚುನಾವಣಾ ಪ್ರಚಾರಕ್ಕೂ ಬರಲ್ಲ: ಸ್ಟಿಂಗ್ ಬಗ್ಗೆ ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಖಡಕ್ ಮಾತು!
ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಕಾರ್ಯಾಚರಣೆ ವಿವಾದ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಬಳಿ ಚರ್ಚಿಸಿದ್ದು, ಖಡಕ್ ಸಂದೇಶ ರವಾನಿಸಿದ್ದಾರೆ ಎಂಬುದು ತಿಳಿದುಬಂದಿದೆ. ರಾಹುಲ್ ಗಾಂಧಿಯವರನ್ನು ಭೇಟಿಯಾದ ಸಿದ್ದರಾಮಯ್ಯ, ನಕಲಿ ವಿಡಿಯೋ ಹಿಂದಿನ ಸೂತ್ರಧಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂದೆ ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಮುಖ್ಯಾಂಶಗಳು
- ಸ್ಟಿಂಗ್ ವಿವಾದದ ಬಗ್ಗೆ ರಾಹುಲ್ ಗಾಂಧಿ ಜೊತೆ ಚರ್ಚೆ
- ನಕಲಿ ವಿಡಿಯೋ ಸೂತ್ರಧಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
- ವರ್ಚಸ್ಸಿಗೆ ಧಕ್ಕೆಯಾದರೆ ಚುನಾವಣಾ ಪ್ರಚಾರಕ್ಕೂ ಬರಲ್ಲ ಎಚ್ಚರಿಕೆ
ಬೆಂಗಳೂರು, ನವೆಂಬರ್ 3: ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಕಾರ್ಯಾಚರಣೆ ವಿವಾದ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಸದ್ದು ಮಾಡಿದೆ. ಸೋಮವಾರ ನವದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಟಿಂಗ್ ವಿಚಾರ ಪ್ರಸ್ತಾಪಿಸಿ ಖಂಡತುಂಡವಾದ ಮಾತುಗಳನ್ನಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ನಕಲಿ ವಿಡಿಯೋ ಹಿಂದಿರುವ ಸೂತ್ರಧಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂದೆ ಚುನಾವಣಾ ಪ್ರಚಾರಕ್ಕೂ ಬರುವುದಿಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ ಎಂಬುದು ಗೊತ್ತಾಗಿದೆ.
ರಾಹುಲ್ ಗಾಂಧಿ ಭೇಟಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಿದ್ದರಾಮಯ್ಯ, ‘‘ಸ್ಟಿಂಗ್ ವಿಚಾರವಾಗಿ ಚರ್ಚೆ ಮಾಡಿಲ್ಲ. ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದೇನೆ. ಪಕ್ಷದ ಬೆಳವಣಿಗೆಗಳು ಮತ್ತು ರಾಜಕೀಯ ವಿದ್ಯಮಾನಗಳು ಸೇರದಂತೆ ಪಕ್ಷ ಸಂಘಟನೆ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದೇನೆ’’ ಎಂದು ಹೇಳಿದ್ದರು. ಆದಾಗ್ಯೂ, ಅವರು ಸ್ಟಿಂಗ್ ಬಗ್ಗೆ ಖಂಡತುಂಡವಾಗಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸರಿಸುಮಾರು 45 ನಿಮಿಷಗಳ ಕಾಲ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿದ ಸಿದ್ದರಾಮಯ್ಯ, ಅಧಿಕಾರ ತ್ಯಾಗ ಮಾಡಿದ ನಂತರವೂ ತಮ್ಮ ವಿರುದ್ಧ ಷಡ್ಯಂತ್ರ ಮುಂದುವರೆದಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ ಎಂಬುದು ಗೊತ್ತಾಗಿದೆ. ಪುತ್ರ, ಶಾಸಕ ಡಾ. ಯತೀಂದ್ರ ಹಾಗೂ ಆಪ್ತ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಜೊತೆ ತೆರಳಿದ್ದ ಸಿದ್ದರಾಮಯ್ಯ, ಸ್ಟಿಂಗ್ ಪ್ರಕರಣದ ಇಂಚಿಂಚು ಮಾಹಿತಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.
ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಹೇಳಿದ್ದೇನು?
‘‘ನಿಮ್ಮ ಮಾತಿಗೆ ಗೌರವ ಕೊಟ್ಟು ಅಧಿಕಾರ ತ್ಯಾಗ ಮಾಡಿದ್ದೇನೆ. ಭವಿಷ್ಯದಲ್ಲಿ ಚುನಾವಣಾ ಕಣಕ್ಕೂ ಇಳಿಯಲ್ಲ ಎಂದು ಬಹಿರಂಗವಾಗಿ ಹೇಳಿದ್ದೇನೆ. ನಾನು ಮತ್ತೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಹೀಗಿದ್ದರೂ ನನ್ನನ್ನು ಮುಗಿಸಲು ಸಂಚು ರೂಪಿಸುತ್ತಿರುವ ಆ ಕಾಣದ ಕೈಗಳು ಯಾವುವು’’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅಲ್ಲದೆ, ನಕಲಿ ವಿಡಿಯೋವನ್ನು ಸೋರಿಕೆ ಮಾಡಿದವರು ಯಾರು ಎಂಬುದು ನನಗೆ ಚೆನ್ನಾಗಿಯೇ ಗೊತ್ತಿದೆ ಎಂದು ಹೇಳಿರುವ ಅವರು, ‘‘ನನ್ನ ವ್ಯಕ್ತಿತ್ವವನ್ನೇ ನಾಶ ಮಾಡಲು ಪಿತೂರಿ ರೂಪಿಸಿದ ಸೂತ್ರಧಾರಿ ಯಾರು? ಅಧಿಕಾರ ಕಳೆದುಕೊಂಡ ಮೇಲೂ ನನ್ನ ಮಾನಹರಣ ಮಾಡುವ ಈ ಹೊಲಸು ರಾಜಕೀಯ ಯಾಕೆ? ರಾಜ್ಯದಲ್ಲಿ ನಮ್ಮದೇ ಆಡಳಿತವಿದ್ದರೂ ಕಿಡಿಗೇಡಿಗಳ ಈ ನಕಲಿ ಜಾಲವನ್ನು ಸರ್ಕಾರ ಮಟ್ಟಹಾಕಿಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಎಕ್ಸ್ ಸಂದೇಶ
Today in Delhi, I met Leader of the Opposition in the Lok Sabha and senior Congress leader Shri @RahulGandhi and held discussions with him.
Urban Development Minister @Dr_Yathindra_S and Legal Adviser to the Chief Minister @ASPonnanna accompanied me during the meeting.
ದೆಹಲಿಯಲ್ಲಿ ಇಂದು ಲೋಕಸಭೆ ವಿಪಕ್ಷ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಸಮಾಲೋಚನೆ ನಡೆಸಿದೆ.
ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಈ ವೇಳೆ ನನ್ನೊಂದಿಗಿದ್ದರು.
— Siddaramaiah (@siddaramaiah) November 2, 2026
ಪರಿಷತ್ ಚುನಾವಣೆ ಸೋಲಿಗೆ ಅದೇ ಕಾರಣ ಎಂದ ಸಿದ್ದರಾಮಯ್ಯ!
ಸ್ಟಿಂಗ್ ಕಾರ್ಯಾಚರಣೆ ಕಾರಣದಿಂದಾಗಿಯೇ ಇತ್ತೀಚಿನ ಪರಿಷತ್ ಚುನಾವಣೆಯ ನಾಲ್ಕು ಸ್ಥಾನಗಳಲ್ಲಿ ಪಕ್ಷಕ್ಕೆ ಸೋಲಾಗಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ದಶಕಗಳ ಕಾಲ ಹೋರಾಟ ಮಾಡಿ ಗಳಿಸಿದ ನನ್ನ ವರ್ಚಸ್ಸಿಗೆ ಸ್ವಪಕ್ಷೀಯರಿಂದಲೇ ಧಕ್ಕೆಯಾಗುತ್ತಿದೆ ಎಂದು ಸಿದ್ದರಾಮಯ್ಯ ರಾಹುಲ್ ಗಾಂಧಿ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಕಲಿ ವಿಡಿಯೋ ರೂಪಿಸಿದ ಅಸಲಿ ಸೂತ್ರಧಾರಿಗಳು ಯಾರು? ಅವರ ಉದ್ದೇಶ ಗೊತ್ತಾಗಬೇಕು ಎಂದು ಹೈಕಮಾಂಡ್‌ಗೆ ಗಡುವು ನೀಡಿರುವ ಸಿದ್ದರಾಮಯ್ಯ, ‘ನನ್ನ ವರ್ಚಸ್ಸಿಗೆ ಮಸಿಬಳಿಯುವ ಕೆಲಸ ಮುಂದುವರಿದರೆ ಮುಂದಿನ ಚುನಾವಣೆ ಪ್ರಚಾರಕ್ಕೆ ಬರುವುದಿಲ್ಲ’ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Tue, 3 November 26




