ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ: 1.20 ಲಕ್ಷ ರೂ ಜತೆ ಹೊಸ ಮನೆ ನಿರ್ಮಿಸಿಕೊಡುವುದಾಗಿ ಸಿಎಂ ಭರವಸೆ
ಕರ್ನಾಟಕದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಬಾಧಿತ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಇಂದು ಬೆಳಗಾವಿ ಜಿಲ್ಲೆಯ ಅತಿವೃಷ್ಟಿ ಹಾಗೂ ಪ್ರವಾಹದಿಂದ ಬಾಧಿತ ಪ್ರದೇಶಗಲಿಗೆ ಭೇಟಿ ನೀಡಿ, ನೆರೆ ಸಂತ್ರಸ್ತರ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ 1.20 ಲಕ್ಷ ರೂ ಜೊತೆ ಹೊಸ ಮನೆ ನಿರ್ಮಿಸಿಕೊಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಬೆಳಗಾವಿ, ಆಗಸ್ಟ್ 05: ಅತಿವೃಷ್ಟಿ ಹಾಗೂ ಪ್ರವಾಹದಿಂದ ಬಾಧಿತಗೊಂಡಿರುವ ಜಿಲ್ಲೆಯ ಗೋಕಾಕ ನಗರದ ವಿವಿಧ ಪ್ರದೇಶಗಳು ಮತ್ತು ಕಾಳಜಿ ಕೇಂದ್ರಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 48 ಮನೆಗಳು ಸಂಪೂರ್ಣ, 918 ಮನೆ ಭಾಗಶಃ ಹಾನಿ ಆಗಿವೆ. 1.20 ಲಕ್ಷ ರೂ. ಹಣ ಹಾಗೂ ಮನೆ ನಿರ್ಮಾಣ ಮಾಡಿ ಕೊಡುತ್ತೇವೆ. ಎಲ್ಲಿ ಮನೆ ನಿರ್ಮಾಣ ಮಾಡುತ್ತಾರೆ ಅಲ್ಲಿಗೆ ಅವಕಾಶ ಕೊಡುತ್ತೇವೆ ಎಂದು ಹೇಳಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ
ಜಿಲ್ಲೆಯಲ್ಲಿ ಮಳೆ ಪ್ರಮಾಣ ಶೇ.60ರಷ್ಟು ಹೆಚ್ಚಾಗಿದೆ. ಮಳೆಗೆ ಜಿಲ್ಲೆಯಲ್ಲಿ ಆರು ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಮನೆ ಹಾನಿಗೆ ಈ ಹಿಂದೆ ಬಿಎಸ್ ಯಡಿಯೂರಪ್ಪ 5 ಲಕ್ಷ ರೂ. ಕೊಟ್ಟಿದ್ದರು. ಪರಿಹಾರ ದುರುಪಯೋಗವಾಗಿ ಸರಿಯಾಗಿ ವಿತರಣೆ ಆಗಲಿಲ್ಲ. ಹೀಗಾಗಿ ಪರಿಹಾರ ದುರುಪಯೋಗ ಆಗದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಈಗಾಗಲೇ 17 ಜನರಿಗೆ ಮನೆ ಪರಿಹಾರ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 41 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಟ್ವೀಟ್
ಅತಿವೃಷ್ಟಿ ಹಾಗೂ ಪ್ರವಾಹದಿಂದ ಬಾಧಿತಗೊಂಡಿರುವ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ವಿವಿಧ ಪ್ರದೇಶಗಳು ಮತ್ತು ಕಾಳಜಿ ಕೇಂದ್ರಕ್ಕೆ ಮುಖ್ಯಮಂತ್ರಿ @siddaramaiah ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಅತಿವೃಷ್ಟಿಯಿಂದಾಗಿ ಘಟಪ್ರಭಾ ನದಿಯಿಂದ ಮುಳುಗಡೆಯಾಗಿದ್ದ ಲೋಳಸೂರ ಸೇತುವೆಯನ್ನು ವೀಕ್ಷಿಸಿ, ಬಳಿಕ ಸೇತುವೆಯ ಬಳಿ ಹಿನ್ನೀರಿನಿಂದ ಒಂದು… pic.twitter.com/WgmjtGOLAG
— CM of Karnataka (@CMofKarnataka) August 5, 2024
ಪರಿಹಾರಕ್ಕೆ ಸರ್ಕಾರದ ಬಳಿ ಹಣವಿಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದು, ಸರ್ಕಾರದ ಬಳಿ ಹಣ ಇಲ್ಲ ಅಂದ್ರೆ ಇದೆಲ್ಲ ಹೇಗೆ ಮಾಡಲು ಸಾಧ್ಯ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಆರ್ಎಸ್ಎಸ್ನವರು ಸುಳ್ಳು ಹೇಳುವುದನ್ನೇ ಟ್ರೈನಿಂಗ್ ಕೊಡುತ್ತಾರೆ. ಅನಾವೃಷ್ಟಿ ಆದ ಕಡೆ ಬೆಳೆ ಹಾನಿ ಬಗ್ಗೆ ಸರ್ವೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್
ಕಾಳಜಿ ಕೇಂದ್ರ ತೆಗೆದಿದ್ದೇವೆಂದು ಸುಳ್ಳು ದಾಖಲೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ದಾಖಲೆಗಳನ್ನು ಕೊಡಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಗಾಂವಠಾಣ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆಗೆದಿದ್ದೇವೆಂದು ದಾಖಲೆ ನೀಡಲಾಗಿದೆ. ಆದರೆ ಕಾಳಜಿ ಕೇಂದ್ರ ತೆರೆಯದೇ ಸಂತ್ರಸ್ತರ ಹೆಸರಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಈ ಕುರಿತು ದಾಖಲೆ ಸಮೇತ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು.
ಇದನ್ನೂ ಓದಿ: ಕೊಡಗು: 104 ಕಡೆಗಳಲ್ಲಿ ಭೂಕುಸಿತದ ಭೀತಿ, 2,995 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್
ಗೋಕಾಕ್ ನಗರದ ಮುನ್ಸಿಪಲ್ ಕಾಲೇಜಿನಲ್ಲಿರುವ ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದರು. ಸಿಎಂ ಬರ್ತಿದ್ದಂತೆ ಸಂತ್ರಸ್ತರು ಕಾಲಿಗೆ ಬಿದ್ದು ಅಳಲು ತೋಡಿಕೊಂಡರು. ಊಟ ಹೇಗೆ ಕೊಡ್ತಿದ್ದಾರೆ ಅಂತಾ ಕೇಳಿದ ಸಿಎಂ ಸಿದ್ದರಾಮಯ್ಯ, ನೀರು ಕಡಿಮೆ ಆಗುವವರೆಗೂ ಇಲ್ಲೇ ಇರಿ, ಸರಿಯಾದಾಗ ಹೋಗಿ. ನಿಮ್ಮನ್ನು ಟಿವಿಯಲ್ಲಿ ನೋಡುತ್ತಿದ್ದೆವು, ಈಗ ನಮ್ಮ ಮುಂದೆ ಬಂದಿದ್ದೀರಿ. ಪ್ರತಿ ವರ್ಷ ಹೀಗೆ ಆಗುತ್ತೆ, ಏನಾದ್ರೂ ಶಾಶ್ವತ ವ್ಯವಸ್ಥೆ ಮಾಡುವಂತೆ ಸಿದ್ದರಾಮಯ್ಯಗೆ ಮನವಿ ಮಾಡಿದ್ದು, ಎಲ್ಲಾ ವ್ಯವಸ್ಥೆ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.