ಕಲ್ಲು ಮಣಿಸುವುದೇ ಇವರ ನಿತ್ಯದ ಕಾಯಕ: ಸರ್ಕಾರ ಇವರನ್ನ ಗುರುತಿಸಬೇಕಿದೆ.. ಯಾಕೆ ಗೊತ್ತಾ?
ಬೀದರ್ನ ನಿವಾಸಿಯಾಗಿರುವ ಶಂಕರ್ ಕುಟುಂಬಗಳು ವಂಶಪಾರ್ಯಂಪರ್ಯವಾಗಿ ಶಿಲ್ಪಕಲೆಯನ್ನು ಮೈಗೂಡಿಸಿಕೊಂಡು ಬಂದು, ರಾಜ್ಯಾದ್ಯಂತ ಹೆಸರು ಪಡೆದಿದ್ದಾರೆ. ಇಂತಹ ಪ್ರತಿಭೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿದರೆ ಭಾರತೀಯ ಸಂಸ್ಕೃತಿ ಶಾಶ್ವತವಾಗಿ ಉಳಿಯಲು ಸಾಧ್ಯ
ಬೀದರ್: ಬೆಳ್ಳಂಬೆಳಿಗ್ಗೆ ಉಳಿ, ಚಾಣ, ಸುತ್ತಿಗೆ ಹಿಡಿದರೆ ಕಲ್ಲು ಮಣಿಸುವುದೇ ಅವರ ನಿತ್ಯದ ಕಾಯಕ. ಕಲ್ಲು ತಂದು ಅದಕ್ಕೊಂದು ರೂಪ ಕೊಟ್ಟು ಶಿಲ್ಪಗಳನ್ನು ತಯಾರಿಸುತ್ತಾರೆ. ಲಲಿತ ಕಲಾ ಸೇವೆಗೆ ನೀಡುವ ಯಾವುದೇ ಸವಲತ್ತು ಸಿಕ್ಕಿಲ್ಲವಾದರೂ ತಮ್ಮ ಕಲೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅವರು ಯಾರಿರಬಹುದು ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆಯಾ? ಅವರೇ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಶಂಕರ್ ಮತ್ತು ಸಹೋದರರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕಾಡೆಮಿ ಇಂತಹ ಪ್ರತಿಭೆಗಳನ್ನು ಗುರುತಿಸಬೇಕು:
ಮೂರ್ತಿ ಕೆತ್ತನೆಗೆ ಆಸಕ್ತಿ, ತಾಳ್ಮೆ, ಏಕಾಗ್ರತೆ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆ ದಿನದ ಶ್ರಮ ವ್ಯರ್ಥವಾಗುತ್ತದೆ. ಆದರೂ ಕೂಡಾ ಕಲೆಯನ್ನೇ ನಂಬಿಕೊಂಡು ಜೀವನವನ್ನು ನಡೆಸುತ್ತಿದೆ ಶಂಕರ್ ಕುಟುಂಬ. ತಾತ ಮುತ್ತಾತರ ಕಾಲದಿಂದಲೂ ಕಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಎಲೆಮರೆಯ ಕಾಯಿಯಂತೆ ಶಿಲ್ಪಕಲಾ ಕ್ಷೇತ್ರದಲ್ಲಿ ನೈಪುಣ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ಇಂತಹ ಪ್ರತಿಭೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿಲ್ಪಕಲಾ ಅಕಾಡೆಮಿಗಳು ಗುರುತಿಸಿ ಆರ್ಥಿಕ ಸಹಾಯ ಮಾಡಿದರೆ ಭಾರತೀಯ ಸಂಸ್ಕೃತಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ.
ನೋಡುಗರ ಕಣ್ಣಿಗೆ ಬರಿ ಕಲ್ಲು ಕಂಡರೆ, ಶಿಲ್ಪಿಯ ಕೈಯಲ್ಲಿ ಸುಂದರ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಕೆತ್ತನೆ ಕಾರ್ಯವನ್ನು ಯಾವ ಹಂತದಲ್ಲಿಯೂ ಲೋಪವಾಗದಂತೆ ಎಚ್ಚರವಹಿಸಿ ಕಲ್ಲನ್ನು ಕೆತ್ತಿ ಸುಂದರ ಶಿಲ್ಪವನ್ನು ರೂಪಿಸುತ್ತಾರೆ.
ವೃತ್ತಿಯಲ್ಲಿ ವಿಧೇಯತೆ: ತಂದೆ ಮಾಡಿಕೊಂಡು ಬರುತ್ತಿದ್ದ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಶಂಕರ್ ಮತ್ತು ಸಹೋದರರು. ಇಂದು ಸಾವಿರಾರು ಮೂರ್ತಿಗಳನ್ನು ಕೆತ್ತನೆ ಮಾಡುವುದರ ಮೂಲಕ ಜನಮನ ಗಳಿಸಿದ್ದಾರೆ. ಜನರು ಬಂದು ತಮಗಿಷ್ಟವಾದ ಮೂರ್ತಿಯನ್ನು ತಯಾರಿಸಲು ಹೇಳುತ್ತಾರೆ. ಅದೇ ತೆರೆನಾದ ಮೂರ್ತಿಗಳನ್ನು ನಾವು ಮಾಡಿಕೊಡುತ್ತೇವೆ. ಆದರೆ ಇಷ್ಟೇ ಹಣ ಕೊಡಬೇಕು ಎಂದು ಯಾರಿಗೂ ಒತ್ತಾಯಿಸುವುದಿಲ್ಲ. ಅವರು ನೀಡುವ ಹಣದಲ್ಲಿಯೇ ಸಂತೃಪ್ತ ಜೀವನವನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ಶಂಕರ್ ಹೇಳುತ್ತಾರೆ.
ಬೆಳಿಗ್ಗೆ ಮತ್ತು ಸಂಜೆ 2 ತಾಸು ಮೂರ್ತಿಗಳ ಕೆತ್ತನೆಯಲ್ಲಿ ತೊಡಗಿಕೊಳ್ಳುತ್ತಾರೆ. ಒಂದು ಮೂರ್ತಿ ರೂಪುಗೊಳ್ಳಲು 4 ತಿಂಗಳು ಸಮಯ ಹಿಡಿಯುತ್ತದೆ. 2 ಇಂಚಿನ ಮೂರ್ತಿಯಿಂದ 9 ಫೂಟ್ ಉದ್ದದ ಕಲ್ಲಿನ ಮೂರ್ತಿಯವರೆಗೂ ಶಿಲ್ಪಗಳನ್ನು ತಯಾರಿಸುತ್ತಾರೆ. 100 ರೂ. ನಿಂದ 2 ಲಕ್ಷದವರೆಗೂ ಮೂರ್ತಿಗಳನ್ನು ಜನರು ಇವರಲ್ಲಿ ಖರೀದಿಸುತ್ತಾರೆ.
ತಯಾರಿಸಿದ ಮೂರ್ತಿಗಳು: ಶ್ರೀದೇವಿ, ವೆಂಕಟೇಶ್ವರ, ಹನುಮಂತ, ತ್ರಯಂಬಕೇಶ್ವರಿ, ದುರ್ಗಾದೇವಿ, ಶರಣೆ ತಂಗಡಗಿ ನೀಲಮ್ಮ, ಅಕ್ಕಮಹಾದೇವಿ, ವಾಲ್ಮೀಕಿ ಮೂರ್ತಿಗಳು ಸೇರಿದಂತೆ ದೇವಸ್ಥಾನದ ಕಲ್ಲಿನ ಬಾಗಿಲುಗಳನ್ನು ತಯಾರಿಸಿದ್ದಾರೆ. ಹೈದರಾಬಾದ್, ಆಂದ್ರ, ತೆಲಂಗಾಣ ರಾಜ್ಯಗಳಿಗೂ ಇವರು ತಯಾರಿಸಿದ ಕಲ್ಲಿನ ಮೂರ್ತಿಗಳು ಮಾರಾಟವಾಗಿವೆ. ಮುಂಗಡವಾಗಿ ಬೇಡಿಕೆ ಸಲ್ಲಿಸಿ ಜನರು ಮೂರ್ತಿಗಳನ್ನು ಕೆತ್ತಿಸಿಕೊಳ್ಳಬಹುದು. ಮುಂಚಿತವಾಗಿ ಯಾವುದೇ ಮೂರ್ತಿಗಳನ್ನು ಇವರು ತಯಾರಿಸಿರುವುದಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ನಶಿಸುತ್ತಿದೆ ಪುರಾತನ ಕಲ್ಮೇಶ್ವರ ದೇವಾಲಯ!