Bengaluru Mysuru Expressway; ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ನಿಷೇಧಿತ ವಾಹನಗಳಿಗೆ ಟೋಲ್ ಫ್ರೀ ಸರ್ವೀಸ್ ರಸ್ತೆ ಸಿದ್ಧ
ಪ್ರವೇಶ ನಿಯಂತ್ರಿತ ಹೆದ್ದಾರಿಯ ಎರಡೂ ಬದಿಯಲ್ಲಿ ಒದಗಿಸಲಾದ ಏಳು-ಮೀಟರ್ ಅಗಲದ, ದ್ವಿಪಥದ ಟೋಲ್ ಫ್ರೀ ಸರ್ವೀಸ್ ರಸ್ತೆಯನ್ನು ಬಳಸಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ನವದೆಹಲಿ, ಆಗಸ್ಟ್ 2: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ (Bengaluru Mysuru Expressway) ಹೆದ್ದಾರಿಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದ್ವಿಚಕ್ರ, ತ್ರಿಚಕ್ರ ಹಾಗೂ ಇತರ ಕೆಲವು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿರುವುದರಿಂದ ಅಂಥ ವಾಹನಗಳು ಟೋಲ್ ಫ್ರೀ ಸರ್ವೀಸ್ ರಸ್ತೆಯನ್ನು (Toll Free Service Road) ಬಳಸಿಕೊಳ್ಳಬಹುದು. ಸರ್ವೀಸ್ ರಸ್ತೆಗಳು ವಾಹನಗಳ ಬಳಕೆಗೆ ಲಭ್ಯವಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬುಧವಾರ ತಿಳಿಸಿದೆ. ಪ್ರವೇಶ ನಿಯಂತ್ರಿತ ಹೆದ್ದಾರಿಯ ಎರಡೂ ಬದಿಯಲ್ಲಿ ಒದಗಿಸಲಾದ ಏಳು-ಮೀಟರ್ ಅಗಲದ, ದ್ವಿಪಥದ ಟೋಲ್ ಫ್ರೀ ಸರ್ವೀಸ್ ರಸ್ತೆಯನ್ನು ಬಳಸಬಹುದು ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮಂಡ್ಯದಲ್ಲಿ ರೈಲ್ವೆ ಮೇಲ್ಸೇತುವೆಗಳಿಂದಾಗಿ ಅಡಚಣೆ ಇರುವುದು ನಿಜ. ಆದರೆ ಈ ಸ್ಥಳಗಳಲ್ಲಿ ವಾಹನಗಳು ಹಳೆಯ ಮೈಸೂರು ರಸ್ತೆಯನ್ನು ಬಳಸಬಹುದು. ಹೀಗಾಗಿ, 2 / 3 ಚಕ್ರದ ವಾಹನಗಳು ಸರ್ವೀಸ್ ರಸ್ತೆಯಲ್ಲಿ 79.6 ಕಿಮೀ ಮತ್ತು ಹಳೆಯ ಮೈಸೂರು ರಸ್ತೆಯಲ್ಲಿ 35.4 ಕಿಮೀ ಸಂಚರಿಸಬಹುದು. ಆದಾಗ್ಯೂ, ಪ್ರವೇಶ ನಿಯಂತ್ರಿತ ಹೆದ್ದಾರಿ ಬದಿಯಲ್ಲೇ ಈ ಮೂರು ಪಟ್ಟಣಗಳ ವ್ಯಾಪ್ತಿಯಲ್ಲಿ ಸಂಚರಿಸಲು ಬಯಸಿದರೆ, ಸರ್ವೀಸ್ ರಸ್ತೆ ಲಭ್ಯವಿದೆ. 118 ಕಿಮೀ ಉದ್ದದ ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಯನ್ನು ತಡೆರಹಿತವಾಗಿ ಮಾಡಲು, ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಬೆಂಗಳೂರು ಮೈಸೂರು ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ ವೇಯನ್ನು ಹೈ-ಸ್ಪೀಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗಿದ್ದು, ವಾಹನಗಳಿಗೆ 80 – 100 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ. ಹೆಚ್ಚಿನ ವೇಗದ ವಾಹನಗಳ ಚಲನೆಯು ತುಲನಾತ್ಮಕವಾಗಿ ನಿಧಾನವಾಗಿ ಚಲಿಸುವ ವಾಹನಗಳ ಸುರಕ್ಷತೆಗೆ ಅಪಾಯವನ್ನು ಉಂಟುಮಾಡಬಹುದು. ಆದ್ದರಿಂದ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಂತಹ ನಿಧಾನವಾಗಿ ಚಲಿಸುವ ವಾಹನಗಳು ಕಾರಿಡಾರ್ ಅನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಅಳವಡಿಸಿದ್ದ ಎಎನ್ಪಿಆರ್ ಕ್ಯಾಮರಾಗಳು ಮೂರೇ ದಿನಕ್ಕೆ ಸ್ಥಗಿತ!
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಕಳೆದ ಆರು ತಿಂಗಳ ಅಪಘಾತದ ಅಂಕಿಅಂಶಗಳನ್ನು ಗಮನಿಸಿದಾಗ 2 ಚಕ್ರದ ವಾಹನಗಳ ಪಾಲು ಶೇ 30 ರಷ್ಟು ಇದೆ. ಶೇ 65-75 ರಷ್ಟು ಕಾರುಗಳು / ಬೈಕ್‌ಗಳಂತಹ ವಾಹನಗಳು ಅತಿ ವೇಗದ ಚಾಲನೆಯಿಂದ ಅಪಘಾತಕ್ಕೀಡಾಗಿವೆ. ಶೇ 25 ರಷ್ಟು ಅಪಘಾತ ಪ್ರಕರಣಗಳು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆಗಳನ್ನು ಒಳಗೊಂಡಿವೆ. ಇದಕ್ಕೆ ಲೇನ್ ಶಿಸ್ತನ್ನು ಅನುಸರಿಸದಿರುವುದು, ನಿಧಾನವಾಗಿ ಚಲಿಸುವ ವಾಹನಗಳು ಬಲಬದಿಯ ಲೇನ್ ಅನ್ನು ಆಕ್ರಮಿಸಿಕೊಂಡಿರುವುದು ಮುಖ್ಯ ಕಾರಣವಾಗಿದೆ ಎಂದು ಸಚಿವಾಲಯದ ಪ್ರಕಟಣೆ ಉಲ್ಲೇಖಿಸಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆಯನ್ನು ಕಾಪಾಡುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸಚಿವಾಲಯ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ