ತಾಲ್ಲೂಕು ಕಚೇರಿಗೆ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು
ಬೆಂಗಳೂರಿನಿಂದ ಹಾಸನಕ್ಕೆ ತೆರಳುವಾಗ ಮಾರ್ಗಮಧ್ಯೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿದ್ದಾರೆ. ಸಚಿವರ ದಿಢೀರ್ ಭೇಟಿ ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿ ಆಗಿದ್ದಾರೆ. ನಾನು ನಿಮ್ಮ ಕಥೆ ಕೇಳಲು ಬೆಂಗಳೂರಿನಿಂದ ಇಲ್ಲಿಯವರೆಗೂ ಬಂದಿಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ.

ತುಮಕೂರು, ನವೆಂಬರ್ 17: ಜಿಲ್ಲೆಯ ತುರುವೇಕೆರೆ ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ದಿಢೀರ್ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ತೆರಳುವಾಗ ಮಾರ್ಗಮಧ್ಯೆ ದಿಢೀರ್ ಭೇಟಿ ನೀಡಿದ್ದು, ಕಂದಾಯ ಸಚಿವರ ದಿಢೀರ್ ಭೇಟಿ ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿ ಆಗಿದ್ದಾರೆ. ಇದೇ ವೇಳೆ ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಹೇಳಿಕೊಂಡಿದ್ದಾರೆ. ರೈತರೊಬ್ಬರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ದೂರು ನೀಡಲಾಗಿದೆ.
ಜನರ ಎದುರೇ ಅಧಿಕಾರಿಗಳನ್ನು ಸಚಿವ ಕೃಷ್ಣಭೈರೇಗೌಡ ತರಾಟೆ ತೆಗೆದುಕೊಂಡಿದ್ದಾರೆ. ಅಧಿಕಾರಿಗೆ 5 ಬಾರಿ ನೋಟಿಸ್ ನೀಡಿದ್ದೇನೆ ಎಂದು ತಹಶೀಲ್ದಾರ್ ಹೇಳಿದ್ದು, 5 ಬಾರಿ ನೋಟಿಸ್ ನೀಡಿ ಇನ್ನೂ ಯಾಕೆ ಕಾಯ್ತಾ ಇದ್ದೀರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಾಸನಕ್ಕೆ ತೆರಳಿದ್ದಾರೆ.
ಚನ್ನರಾಯಪಟ್ಟಣ ತಹಸೀಲ್ದಾರ್ಗೆ ಕಂದಾಯ ಸಚಿವ ತರಾಟಿ
ಹಾಸನ ಜಿಲ್ಲೆಗೆ ಆಗಮಿಸುವ ಮಾರ್ಗ ಮಧ್ಯೆ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಗ್ರಾಮ ಪಂಚಾಯತಿಗೂ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿ ತಹಸೀಲ್ದಾರ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 125 (ಸರ್ಕಾರಿ ಗೋಮಾಳ ಜಾಗ ದುರಸ್ತಿ) ಎಷ್ಟು ಆರಂಭಿಸಿದ್ದಾರೆ ಎಂದು ತಹಸೀಲ್ದಾರ್‌ರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರತಿಬಾರಿ ಮಳೆಯಿಂದ ತೊಂದರೆ, ಸಚಿವ ಕೃಷ್ಣ ಭೈರೇಗೌಡ ಎದುರು ಅಸಹನೆ, ಆಕ್ರೋಶ ವ್ಯಕ್ತಪಡಿಸಿದ ಸಹಕಾರನಗರ ನಿವಾಸಿಗಳು
ಈ ವೇಳೆ ಉತ್ತರ ಹೇಳಲು ತಹಸೀಲ್ದಾರ್ ತಡಬಡಾಯಿಸಿದ್ದಾರೆ. ನಾನು ಕಥೆ, ಥಿಯರಿ ಕೇಳಲು ಬೆಂಗಳೂರಿನಿಂದ ಇಲ್ಲಿಯವರೆಗೂ ಬಂದಿಲ್ಲ. ನಿಮ್ಮ ತಾಲ್ಲೂಕಿನಲ್ಲಿ 125 (ಸರ್ಕಾರಿ ಗೋಮಾಳ ಜಾಗ ದುರಸ್ತಿ) ಎಷ್ಟು ಮಾಡಿದ್ದೀರಿ ಅಂತ ಕೇಳುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಇ-ಆಫೀಸ್ ನಿರ್ಲಕ್ಷ್ಯ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ
ಜನಗಳಿಗೆ ಅರ್ಥ ಆಗುತ್ತಿದೆ ನಿಮಗೆ ಯಾಕೆ ಅರ್ಥ ಆಗುತ್ತಿಲ್ಲ. ಇದಕ್ಕೇನಾ ನೀವು ಕೆಎಎಸ್ ಮಾಡಿ ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನಾವು ಥಿಯರಿ ಮಾತನಾಡುವುದು ಬಿಟ್ಟು ಪ್ರಾಕ್ಟಿಕಲ್ ಗ್ರೌಂಡ್‌ಗೆ ಬಂದರೆ ನೀವು ಮತ್ತೆ ನಮಗೆ ಥಿಯರಿ ಹೇಳುತ್ತೀರಿ. ನಿಮಗೆ ಆಸಕ್ತಿ ಇಲ್ಲಾ, ಡಿಸಿಯವರು, ನಾನು ಬಾಯಿ ಬಡ್ಕೋಬೇಕು ನಿಮ್ಮ ಥಿಯರಿ ಕೇಳಲು ಅಲ್ಲಿಂದ ಇಲ್ಲಿಗೆ ಬಂದಿಲ್ಲ. ನನಗೂ ಸ್ವಲ್ಪ ಓದಲು ಬರುತ್ತೆ ಎಂದು ಚನ್ನರಾಯಪಟ್ಟಣ ತಹಸೀಲ್ದಾರ್ ಗೋವಿಂದರಾಜು ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.