2026ರ ಮೈಸೂರು ದಸರಾಗೆ ವರ್ಣರಂಜಿತ ತೆರೆ: ಅತ್ಯದ್ಭುತ ಯಶಸ್ಸು ಕಂಡ ನವರಾತ್ರಿ ಉತ್ಸವ
Mysuru Dasara 2026, Jamboo Savari Live Updates in Kannada: ಮೈಸೂರು ದಸರಾ, ತುಮಕೂರು ದಸರಾ ಸಂಭ್ರಮ ಹಾಗೂ ಜಂಬೂಸವಾರಿ ಸಿದ್ಧತೆಗಳ ಲೈವ್ ಅಪ್ಡೇಟ್ಸ್. ಪಾಕಿಸ್ತಾನ-ಅಮೆರಿಕ ಶಾಂತಿ ಮಾತುಕತೆ ಯತ್ನ, ಇರಾನ್ ಯುರೇನಿಯಂ ನಿರಾಕರಣೆಯಂತಹ ಅಂತರಾಷ್ಟ್ರೀಯ ಸುದ್ದಿಗಳು. ಅಕ್ಟೋಬರ್ 22ರಿಂದ ಆರಂಭವಾಗುವ ಭಾರತ-ನ್ಯೂಜಿಲೆಂಡ್ 12 ಪಂದ್ಯಗಳ ರೋಮಾಂಚಕ ಕ್ರಿಕೆಟ್ ಸರಣಿ ಮಾಹಿತಿ. ಸಿನಿಮಾ ಮತ್ತು ಕ್ರೀಡಾ ಲೋಕದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ.

Mysuru Dasara 2026, Jamboo Savari Updates in Kannada: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಮತ್ತು ತುಮಕೂರು ದಸರಾ ಸಂಭ್ರಮ ಕಳೆಗಟ್ಟಿದೆ. ವಿಜಯದಶಮಿಯ ಈ ವಿಶೇಷ ದಿನದಂದು ನಾಡಿನಾದ್ಯಂತ ಜಂಬೂಸವಾರಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಅಮೆರಿಕದೊಂದಿಗಿನ ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಪಾಕಿಸ್ತಾನ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದರೂ, ಇರಾನ್ ತನ್ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ಬಿಟ್ಟುಕೊಡಲು ಸ್ಪಷ್ಟವಾಗಿ ನಿರಾಕರಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅತ್ಯಂತ ರೋಮಾಂಚಕಾರಿ ಹಾಗೂ ಬಹುಸ್ವರೂಪದ 12 ಪಂದ್ಯಗಳ ಸರಣಿಯು ಅಕ್ಟೋಬರ್ 22 ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಇದರೊಂದಿಗೆ ಅಂತರರಾಷ್ಟ್ರೀಯ ವಿದ್ಯಮಾನಗಳು, ಸಿನಿಮಾ ಮತ್ತು ಕ್ರಿಕೆಟ್ ಲೋಕದ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
LIVE NEWS & UPDATES
-
2026ರ ಮೈಸೂರು ದಸರಾಗೆ ವರ್ಣರಂಜಿತ ತೆರೆ
ನವರಾತ್ರಿಯ ಉತ್ಸವ ಅತ್ಯದ್ಭುತ ಯಶಸ್ಸು ಕಂಡಿದ್ದು, 2026ರ ಮೈಸೂರು ದಸರಾಗೆ ವರ್ಣರಂಜಿತ ತೆರೆ ಬಿದ್ದಿದೆ. ಆಗಸದಲ್ಲಿ ಸಿಡಿಮದ್ದು ಪ್ರದರ್ಶನದ ಮೂಲಕ 2026ರ ಮೈಸೂರು ದಸರಾಗೆ ವರ್ಣರಂಜಿತ ತೆರೆ ಎಳೆಯಲಾಯ್ತು.
-
ಆಕರ್ಷಕ ಪಥ ಸಂಚನಲನ
ಬನ್ನಿ ಮಂಟಪದಲ್ಲಿ ಪಂಜಿನ ಜನನ ಕವಾಯತು ಕಾರ್ಯಕ್ರಮದಲ್ಲಿ ಆಕರ್ಷಕ ಪಥ ಸಂಚನಲನ ನಡೆಯಿತು. ಎಂಟು ಶಸ್ತ್ರ ಸಜ್ಜಿತ ತುಕಡಿ ಹಾಗೂ ಎಂಟು ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆದಿದ್ದು, ರಾಜ್ಯಪಾಲರಾದ ಡಾ ಸುಧಾ ಯಾದವ್ ಅವರಿಗೆ ಗೌರವ ವಂದನೆ ಸಲ್ಲಿಕೆ ಮಾಡಲಾಯ್ತು. ಅಶ್ವಾರೋಹಿ ಪಡೆ, ನಗರ ಶಸ್ತ್ರಾಸ್ತ್ರ ಪಡೆ, ಜಿಲ್ಲಾ ಶಸ್ತ್ರಾಸ್ತ್ರ ಪಡೆ,ರೈಲ್ವೆ ರಕ್ಷಣಾ ದಳ,ಗೃಹ ರಕ್ಷಕ ದಳ, ಕೆಎಸ್ ಆರ್ ಪಿ ಪಡೆಗಳಿಂದ ಪಥ ಸಂಚಲನ ನಡೆಯಿತು.
-
-
ಸೇನಾ ತಂಡದಿಂದ ಮೈನವಿರೇಳಿಸುವ ಬೈಕ್ ಸ್ಟಂಟ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಬಂಧ ಬನ್ನಿ ಮಂಟಪ ಮೈದಾನದಲ್ಲಿ ರಾಜ್ಯಪಾಲರು, ಶಸ್ತ್ರಾಸ್ತ್ರಪಡೆಗಳ ಪರಿವೀಕ್ಷಣೆ ನೆರವೇರಿಸಿದರು. ಬಳಿಕ ನಡೆದ ಸೇನಾ ತಂಡದಿಂದ ಮೈನವಿರೇಳಿಸುವ ಬೈಕ್ ಸ್ಟಂಟ್ ನಡೆಯಿತು. ರೋಮಾಂಚನಕಾರಿ ಬೈಕ್ ಸ್ಟಂಟ್ಗೆ ಕಂಡು ಜನ ಬೆರಗಾದರು.
-
ಅದ್ಭುತ ಡ್ರೋನ್ ಶೋ ಕಂಡು ಪ್ರೇಕ್ಷಕರ ಹರ್ಷೋದ್ಘಾರ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಬಂಧ ಬನ್ನಿ ಮಂಟಪ ಮೈದಾನದಲ್ಲಿ ಆಕರ್ಷಕ ಡ್ರೋನ್ ಶೋ ನಡೆಯಿತು. ಇಂಧನ ಇಲಾಖೆಯಿಂದ ಆಯೋಜನೆ ಮಾಡಲಾಗಿ್ದ ಡ್ರೋನ್ ಶೋ ಬಣ್ಣದ ಬೆಳಕಿನ ಚಿತ್ತಾರದಲ್ಲಿ ಆಕರ್ಷಕ ಕಲಾಕೃತಿಗಳು ಮೂಡಿಬಂದವು. ಅದ್ಭುತ ಡ್ರೋನ್ ಶೋ ಕಂಡು ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿದೆ.
-
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ರಜೆ ವಿಸ್ತರಣೆ
ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ರಜೆ ವಿಸ್ತರಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆಗಳಿಗೆ ನಾಳೆ (ಅ.22ರಂದು) ರಜೆ ವಿಸ್ತರಿಸಲಾಗಿದೆ.ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಡಿಡಿ ಆದೇಶ ಹೊರಡಿಸಿದ್ದಾರೆ.
-
-
ಬನ್ನಿ ಮಂಟಪ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ವಿಶ್ವ ವಿಖ್ಯಾತ ಮೈಸೂರು ದಸರಾ ಅಂಬಾರಿ ಮೆರವಣಿಗೆ ಸಂಪನ್ನಗೊಂಡಿದ್ದು, ಇದೀಗ ಬನ್ನಿ ಮಂಟಪ ಮೈದಾನದಲ್ಲಿ ಪಂಜಿನ ಕವಾಯತು ಸೇರಿ ವಿವಿದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಡಾ ಸುಧಾ ಯಾದವ್, ಸಿಎಂ ಡಿಕೆ ಶಿವಕುಮಾರ್, ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ , ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಇಕ್ವೆಡಾರ್,ಚೀನಾ, ಯುಸ್,ಬ್ರಿಟನ್ ಡೆನ್ಮಾರ್ಕ್, ಇಸ್ರೇಲ್, ಅರ್ಮೆನಿಯಾ, ಆಸ್ಟ್ರೇಲಿಯಾ,ನೆದರ್ಲೆಂಡ್ಸ್ ಸೇರಿ ವಿವಿದ ದೇಶಗಳ ರಾಯಭಾರಿಗಳ ಉಪಸ್ಥಿತರಿದ್ದಾರೆ.
-
ಮೈಸೂರು ದಸರಾದಲ್ಲಿ ಪಂಜಿನ ಕವಾಯತು ಶುರು
ವಿಶ್ವವಿಖ್ಯಾತ ಮೈಸೂರು ದಸರಾದ ಆಕರ್ಷಣೆಯಾಗಿರುವ ಜಂಬುಸವಾರಿ ಸಂಪನ್ನಗೊಂಡಿದೆ. ಅರಮನೆಯಿಂದ 5 ಕಿ.ಮೀಟರ್ ದೂರ ಇರುವ ಬನ್ನಿಮಂಟಪದಲ್ಲಿ ಸಮಾಪ್ತಿಯಾಗಿದೆ. ಇನ್ನು ಇದೇ ಮೊದಲ ಬಾರಿ ಪ್ರಶಾಂತ್ ಆನೆ ಹೆಗಲ ಮೇಲೆ ಅಂಬಾರಿ ಹೊತ್ತು ಅದರಲ್ಲಿ ಚಾಮುಂಡೇಶ್ವರಿಯನ್ನು ಕೂಡಿಸಿಕೊಂಡು ಯಶಸ್ವಿಯಾಗಿ ಮೆರೆಸಿದ್ದಾನೆ. ಇದರ ಬೆನ್ನಲ್ಲೇ ಇದೀಗ ಪಂಜಿನ ಕವಾಯತು ಶುರುವಾಗಿದೆ.
-
2 ಗಂಟೆಯಲ್ಲಿ 5 ಕಿ.ಮೀ. ದೂರ ಕ್ರಮಿಸಿದ ಕ್ಯಾಪ್ಟನ್ ಪ್ರಶಾಂತ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಯಶಸ್ವಿ ಸಂಪನ್ನಗೊಂಡಿದ್ದು, ಪ್ರಶಾಂತ ಆನೆ ಅಂಬಾರಿ ಹೊತ್ತು ರಾಜಬೀದಿಗಳಲ್ಲಿ ಗಜಗಾಂಭೀರ್ಯದಿಂದ ಯಶಸ್ವಿಯಾಗಿ ಬನ್ನಿಮಂಟಪ ತಲುಪಿದ್ದಾನೆ. ಇಂದು ಸಂಜೆ 4.31ಕ್ಕೆ ಅರಮನೆಯಿಂದ ಹೊರಟಿದ್ದ ಜಂಬೂಸವಾರಿ ಸಂಜೆ 6.31ಕ್ಕೆ ಬನ್ನಿಮಂಟಪ ತಲುಪಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ತಾಯಿ ಚಾಮುಂಡೇಶ್ವರಿ ಹೊತ್ತು ಮೆರೆಸಿದ ಪ್ರಶಾಂತ, 2 ಗಂಟೆಯಲ್ಲಿ 5 ಕಿ.ಮೀ. ದೂರ ಕ್ರಮಿಸಿದ್ದಾನೆ. ಇದರೊಂದಿಗೆ ಯಾವುದೇ ಅಡಚಣೆ, ಅವಘಡವಿಲ್ಲ ಜಂಬುಸವಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರಸ್ತೆಯದ್ದಕ್ಕೂ ನೆರೆದಿದ್ದ ಲಕ್ಷಾಂತರ ಜನ ಜಂಬುಸವಾರಿಯನ್ನು ಕಣ್ತುಂಬಿಕೊಂಡರು.
-
ಯಶಸ್ವಿಯಾಗಿ ಬನ್ನಿಮಂಟಪ ತಲುಪಿದ ಜಂಬೂಸವಾರಿ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿದೆ. ಮೊದಲ ಬಾರಿಗೆ 750 ಕೆಜಿ ತೂಕದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಪ್ರಶಾಂತ ಯಶಸ್ವಿಯಾಗಿ ಬನ್ನಿಮಂಟಪ ತಲುಪಿದ್ದಾನೆ. 18 ವರ್ಷಗಳ ಕಾಲ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಪ್ರಶಾಂತ ಆನೆಗೆ ಈ ಬಾರಿ ಅಂಬಾರಿ ಹೊರಿಸಲಾಗಿದ್ದು, ಪ್ರಶಾಂತ ಸಹ ಚಾಮುಂಡಿಯನ್ನು ಹೊತ್ತು ಮೆರೆಸಿದ್ದಾನೆ. ಈ ಮೂಲಕ ಮೈಸೂರು ಜಂಬುಸವಾರಿ ಸಂಪನ್ನಗೊಂಡಿದೆ.
-
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ರಾಜ್ಯಪಾಲೆ ಡಾ. ಸುಧಾ ಯಾದವ್ ಭೇಟಿ
ಕರ್ನಾಟಕದ ನೂತನ ರಾಜ್ಯಪಾಲೆ ಡಾ. ಸುಧಾ ಯಾದವ್ ಅವರು ಇದೇ ಮೊದಲ ಬಾರಿಗೆ ಮೈಸೂರು ಚಾಮುಂಡಿ ಬೆಟ್ಟಕ್ಕೆ ನೀಡಿದ್ದು, ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ರಾಜ್ಯಪಾಲರಿಗೆ ದೇವಸ್ಥಾನದ ವತಿಯಿಂದ ಚಾಮುಂಡೇಶ್ವರಿ ದೇವಿಯ ಭಾವಚಿತ್ರ ಮತ್ತು ಗಣಪತಿ ವಿಗ್ರಹ ನೀಡಿ ಗೌರವಾರ್ಪಣೆ ಮಾಡಲಾಯ್ತು. ಇನ್ನು ಇಂದು ಸಂಜೆ ಬನ್ನಿ ಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ. ಇದೇ ಮೊದಲ ಬಾರಿಗೆ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
-
ಸಯ್ಯಾಜಿ ರಾವ್ ರಸ್ತೆಯಲ್ಲಿ ಸಾಗುತ್ತಿರುವ ಜಂಬುಸವಾರಿ
ಈಗಾಗಲೇ ಜಂಜುಸವಾರಿಗೆ ಚಾಲನೆ ಸಿಕ್ಕಿದ್ದು, ಇದೇ ಮೊದಲ ಬಾರಿಗೆ ಪ್ರಶಾಂತ ಮೊದಲ ಬಾರಿಗೆ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಹೊತ್ತು ಮೆರೆಸಿಕೊಂಡು ಅರಮನೆಯಿಂದ ಬನ್ನಿ ಮಂಟಪದತ್ತ ಹೆಜ್ಜೆ ಹಾಕುತ್ತಿದ್ದಾನೆ ಸದ್ಯ ಜಂಬುಸವಾರಿ ಸಯ್ಯಾಜಿ ರಾವ್ ರಸ್ತೆಯಲ್ಲಿ ಸಾಗುತ್ತಿದ್ದು, ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಣೆ ಮಾಡುತ್ತಿದ್ದಾರೆ.
-
ಜಂಬೂಸವಾರಿಗೆ ಚಾಲನೆ ನೀಡಿದ ಸಿಎಂ ಡಿಕೆಶಿವಕುಮಾರ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೈಭವೋಪೇತ ‘ಜಂಬೂಸವಾರಿ’ ಮೆರವಣಿಗೆಗೆ ಅಧಿಕೃತ ಹಾಗೂ ಮಂಗಲಮಯ ಚಾಲನೆ ದೊರೆತಿದೆ. ಸಾಂಪ್ರದಾಯಿಕವಾಗಿ ನಿಗದಿಯಾಗಿದ್ದ ಶುಭ ಮೀನ ಲಗ್ನದಲ್ಲಿ, 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಐತಿಹಾಸಿಕ ಜಂಬೂಸವಾರಿಗೆ ಚಾಲನೆ ನೀಡಿದರು.
-
ಜಂಬೂಸವಾರಿ ವೇಳೆ ಅಡ್ಡಾದಿಡ್ಡಿ ಓಡಿದ ಸೋಮಣ್ಣ ಆನೆ
ರಾಜ್ಯದ ಎರಡನೇ ಅತಿದೊಡ್ಡ ದಸರಾ ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯ ವೇಳೆ ಭಾರೀ ಅನಾಹುತ ಸಂಭವಿಸಿದ್ದು, ಜಂಬೂಸವಾರಿಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆಯು ಏಕಾಏಕಿ ದಾರಿ ತಪ್ಪಿ ರೊಚ್ಚಿಗೆದ್ದ ಪರಿಣಾಮ, ದೇವಿಯ ಬೆಳ್ಳಿ ಅಂಬಾರಿಯು ಕೆಳಗೆ ಬಿದ್ದು ಸಂಪೂರ್ಣವಾಗಿ ಹಾನಿಗೊಳಗಾಗಿದೆ.
-
ಜಂಬೂಸವಾರಿ ನೋಡಲು ನೆರೆದ ಜನರ ಸಾಗರ; ಬಲರಾಮ ದ್ವಾರದ ಬಳಿ ತಳ್ಳಾಟ-ನೂಕಾಟ, ನಾಲ್ವರು ಅಸ್ವಸ್ಥ
ವಿಶ್ವವಿಖ್ಯಾತ ಮೈಸೂರು ದಸರಾದ ಕಿರೀಟಪ್ರಾಯ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾಂಸ್ಕೃತಿಕ ನಗರಿಗೆ ದೇಶ-ವಿದೇಶಗಳಿಂದ ಜನರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ. ಅರಮನೆಯ ಬಲರಾಮ ದ್ವಾರ ಹಾಗೂ ಸುತ್ತಮುತ್ತಲ ಜಂಕ್ಷನ್ಗಳಲ್ಲಿ ಲಕ್ಷಾಂತರ ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದು, ತೀವ್ರ ತಳ್ಳಾಟ ಮತ್ತು ನೂಕಾಟ ಉಂಟಾಗಿದೆ. ಜನಸಂದಣಿಯ ಒತ್ತಡದಿಂದಾಗಿ ಬಲರಾಮ ದ್ವಾರದ ಬಳಿ ಮತ್ತೊಬ್ಬರು ಅಸ್ವಸ್ಥಗೊಂಡಿದ್ದು, ಜಂಬೂಸವಾರಿ ಮೆರವಣಿಗೆ ಆರಂಭವಾದಾಗಿನಿಂದ ಈವರೆಗೆ ಒಟ್ಟು ನಾಲ್ವರು ಅಸ್ವಸ್ಥಗೊಂಡಿದ್ದಾರೆ.
-
ರಾಜ್ಯದ ಎರಡನೇ ಅತಿದೊಡ್ಡ ಶಿವಮೊಗ್ಗ ಜಂಬೂಸವಾರಿ ಆರಂಭ
ಮೈಸೂರು ದಸರೆಯಷ್ಟೇ ವಿಜೃಂಭಣೆಯಿಂದ ಕೂಡಿರುವ ಹಾಗೂ ರಾಜ್ಯದ ಎರಡನೇ ಅತಿದೊಡ್ಡ ದಸರಾ ಮಹೋತ್ಸವವೆಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ದಸರಾ ಜಂಬೂಸವಾರಿಯು ಇಂದು ಅತ್ಯಂತ ಸಡಗರ-ಸಂಭ್ರಮದಿಂದ ಆರಂಭಗೊಂಡಿದೆ. ಐತಿಹಾಸಿಕ ಕೋಟೆ ಶಿವಪ್ಪನಾಯಕ ಅರಮನೆಯಿಂದ ಅಲ್ಲಮ ಪ್ರಭು ಮೈದಾನದವರೆಗೆ ಸಾಗುವ ಈ ಬೃಹತ್ ಶೋಭಾಯಾತ್ರೆಗೆ ಗಣ್ಯರು ಅಧಿಕೃತ ಚಾಲನೆ ನೀಡಿದ್ದಾರೆ.
-
ಚಿನ್ನದ ಅಂಬಾರಿ ಹೊರಲು ‘ಕ್ಯಾಪ್ಟನ್ ಪ್ರಶಾಂತ’ ಸಿದ್ಧ; ಅರಮನೆ ಹಿಂಭಾಗದಲ್ಲಿ ಅಂಬಾರಿ ಜೋಡಣೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, 750 ಕೆಜಿ ತೂಕದ ಭವ್ಯ ಚಿನ್ನದ ಅಂಬಾರಿಯನ್ನು ಹೊರಲು ‘ಕ್ಯಾಪ್ಟನ್ ಪ್ರಶಾಂತ’ ಆನೆ ಸಂಪೂರ್ಣವಾಗಿ ಸಿದ್ಧಗೊಂಡಿದ್ದಾನೆ. ಅರಮನೆಯ ಆನೆ ಬಿಡಾರದಿಂದ ಅರಮನೆಯ ಹಿಂಭಾಗಕ್ಕೆ ತೆರಳಿದ ಪ್ರಶಾಂತನಿಗೆ ಚಿನ್ನದ ಅಂಬಾರಿಯನ್ನು ಕಟ್ಟುವ ಪ್ರಕ್ರಿಯೆಯು ಅತ್ಯಂತ ಜಾಗರೂಕತೆಯಿಂದ ನೆರವೇರುತ್ತಿದೆ.
-
ಜಂಬೂಸವಾರಿ ವೈಭವಕ್ಕೆ ಮಾರುಹೋದ ವಿದೇಶಿ ಗಣ್ಯರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯ ಸೌಂದರ್ಯ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಈ ಬಾರಿ ಅಂತಾರಾಷ್ಟ್ರೀಯ ಮೆರಗು ದೊರೆತಿದೆ. ನಾಡಹಬ್ಬದ ರಾಜಸಭೆಯನ್ನು ಕಣ್ಣುಂಬಿಕೊಳ್ಳಲು ಮೈಸೂರು ದಸರಾ ಉತ್ಸವ ಸಮಿತಿಯ ವಿಶೇಷ ಆಹ್ವಾನದ ಮೇರೆಗೆ ವಿಶ್ವದ 11 ವಿವಿಧ ದೇಶಗಳ ರಾಯಭಾರಿಗಳು ಹಾಗೂ ಉನ್ನತ ಮಟ್ಟದ ರಾಜತಾಂತ್ರಿಕ ಗಣ್ಯರು ಸಾಂಸ್ಕೃತಿಕ ನಗರಿಗೆ ಆಗಮಿಸಿದ್ದಾರೆ.
-
ಜಂಬೂಸವಾರಿಯಲ್ಲಿ ಚಿತ್ರತಾರೆಯರ ದಂಡು; ‘ಅಂಬಾರಿ’ ಬಸ್ನಲ್ಲಿ ಸ್ಯಾಂಡಲ್ವುಡ್ ನಟ-ನಟಿಯರ ರೈಡ್
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಈ ಬಾರಿ ಸ್ಯಾಂಡಲ್ವುಡ್ನ ತಾರಾಗಣ ವಿಶೇಷ ಮೆರುಗು ತಂದಿದೆ. ದಸರಾ ಸಂಭ್ರಮವನ್ನು ಕಣ್ಣುಂಬಿಕೊಳ್ಳಲು ಮೈಸೂರಿಗೆ ಆಗಮಿಸಿದ ಚಿತ್ರರಂಗದ ಪ್ರಮುಖ ನಟ-ನಟಿಯರು, ಪ್ರವಾಸಿಗರ ಆಕರ್ಷಣೆಯಾಗಿರುವ ತೆರೆದ ‘ಅಂಬಾರಿ’ (Double Decker Open Top Bus) ಬಸ್ನಲ್ಲಿ ನಗರ ಪ್ರದಕ್ಷಿಣೆ ನಡೆಸಿ ದಸರಾ ಕಳೆ ಹೆಚ್ಚಿಸಿದರು.
-
16 ಜಿಲ್ಲೆಗಳು ಹಾಗೂ ಹೊರ ರಾಜ್ಯಗಳ ಟ್ಯಾಬ್ಲೋಗಳೊಂದಿಗೆ ಕಳೆಗಟ್ಟಿದ ಜಂಬೂಸವಾರಿ ಮೆರವಣಿಗೆ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ರೋಚಕ ಹಾಗೂ ಅಂತಿಮ ಘಟ್ಟವಾದ ಐತಿಹಾಸಿಕ ‘ಜಂಬೂಸವಾರಿ’ಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೆ ಸಾಗುವ ಈ ಬೃಹತ್ ಮೆರವಣಿಗೆಯು ಈ ಬಾರಿ ಹಿಂದೆಂದಿಗಿಂತಲೂ ಅತ್ಯಂತ ವೈಭವೋಪೇತವಾಗಿ ಮೂಡಿಬರಲು ಸಜ್ಜಾಗಿದೆ. ನಾಡಿನ ಕಲೆ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಅನಾವರಣಕ್ಕಾಗಿ ಒಟ್ಟು 60 ಸ್ತಬ್ಧಚಿತ್ರಗಳು ಹಾಗೂ 50ಕ್ಕೂ ಹೆಚ್ಚು ಸಾಂಸ್ಕೃತಿಕ ಕಲಾತಂಡಗಳು ಈ ಬಾರಿಯ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ.
-
ಬೆಂಗಳೂರು: ಉತ್ತರಹಳ್ಳಿಯ ಬ್ರಿಗೇಡ್ 7 ಗಾರ್ಡನ್ಸ್ ಅಪಾರ್ಟ್ಮೆಂಟ್ನಲ್ಲಿ ಭಾರೀ ಅಗ್ನಿ ಅವಘಡ
ಬೆಂಗಳೂರು: ಬೆಂಗಳೂರಿನ ದಕ್ಷಿಣ ಭಾಗದ ಪ್ರಮುಖ ವಸತಿ ಪ್ರದೇಶವಾದ ಉತ್ತರಹಳ್ಳಿಯ ಪ್ರತಿಷ್ಠಿತ ‘ಬ್ರಿಗೇಡ್ 7 ಗಾರ್ಡನ್ಸ್’ ಅಪಾರ್ಟ್ಮೆಂಟ್ನಲ್ಲಿ ಹಠಾತ್ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
-
ಅಧಿಕೃತ ಐಡಿ ಕಾರ್ಡ್ ಇದ್ದರೂ ಮಾಧ್ಯಮದವರಿಗೆ ನಿರ್ಬಂಧ; ಅರಮನೆ ಗೇಟ್ ಬಳಿ ಪತ್ರಕರ್ತರ ಪ್ರತಿಭಟನೆ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಕಣ್ತುಂಬಿಕೊಳ್ಳಲು ಹಾಗೂ ವರದಿ ಮಾಡಲು ಆಗಮಿಸಿದ್ದ ಮಾಧ್ಯಮದವರಿಗೆ ಪೊಲೀಸರು ಅಡ್ಡಿಪಡಿಸಿರುವ ಘಟನೆ ವರದಿಯಾಗಿದೆ. ವಾರ್ತಾ ಇಲಾಖೆಯ ಅಧಿಕೃತ ವಾಹನದಲ್ಲಿದ್ದರೂ ಹಾಗೂ ಕೈಯಲ್ಲಿ ಅಧಿಕೃತ ಐಡಿ ಕಾರ್ಡ್ (Press ID) ಹೊಂದಿದ್ದರೂ ಪತ್ರಕರ್ತರನ್ನು ಅರಮನೆ ಒಳಗೆ ಬಿಡಲು ಪೊಲೀಸರು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪತ್ರಕರ್ತರು ಬ್ರಹ್ಮಪುರಿ ಗೇಟ್ ಬಳಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ರಾಜವಂಶಸ್ಥ ಯದುವೀರ್ರಿಂದ ಕಂಕಣ ವಿಸರ್ಜನೆ, ವಿಜಯ ಯಾತ್ರೆ ಮೆರವಣಿಗೆಯೊಂದಿಗೆ ನವರಾತ್ರಿ ಆಚರಣೆ ಸಂಪನ್ನ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಸಂಸ್ಥಾನದ ರಾಜಮನೆತನದ ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಖಾಸಗಿ ನವರಾತ್ರಿ ಪೂಜಾ ಕೈಂಕರ್ಯಗಳು ಇಂದು ವಿಜಯದಶಮಿಯ ಪವಿತ್ರ ದಿನದಂದು ಕಂಕಣ ವಿಸರ್ಜನೆಯೊಂದಿಗೆ ಧಾರ್ಮಿಕವಾಗಿ ಸಂಪೂರ್ಣಗೊಂಡಿವೆ.
-
ದೇಶದ ಹುತಾತ್ಮ ಪೊಲೀಸರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವ ನಮನ
ಪೊಲೀಸ್ ಸ್ಮರಣಾರ್ಥ ದಿನದ ಅಂಗವಾಗಿ ಕರ್ತವ್ಯದ ಹಾದಿಯಲ್ಲಿ ಪ್ರಾಣತ್ಯಾಗ ಮಾಡಿದ ದೇಶದ ವೀರ ಪೊಲೀಸರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಎಕ್ಸ್ ಖಾತೆ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ದೇಶದ ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ ಹಾಗೂ ನಾಗರಿಕರ ರಕ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ಸೇವೆ ಅನನ್ಯ ಎಂದು ಪ್ರಧಾನಿ ಸ್ಮರಿಸಿದ್ದಾರೆ.
-
ಮೈಸೂರು ದಸರಾದಲ್ಲಿ ‘ವಜ್ರಮುಷ್ಟಿ ಕಾಳಗ’ ರದ್ದು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲೊಂದಾದ ‘ವಜ್ರಮುಷ್ಟಿ ಕಾಳಗ’ಕ್ಕೆ ಈ ಬಾರಿಯ ದಸರಾದಲ್ಲಿ ಬ್ರೇಕ್ ಬಿದ್ದಿದೆ. ಮೈಸೂರು ಸಂಸ್ಥಾನ ಹಾಗೂ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೋಚಕ ಹಾಗೂ ರಕ್ತತರ್ಪಣದ ಕಾಳಗವನ್ನು ರದ್ದುಗೊಳಿಸಲಾಗಿದ್ದು, ರಾಜಮನೆತನದ ಆಚರಣೆಗಳಲ್ಲಿ ಪ್ರಮುಖ ಅಂಗವಾಗಿದ್ದ ಈ ಕ್ರೀಡೆ ನಡೆಯದಿರುವುದು ಕ್ರೀಡಾಭಿಮಾನಿಗಳು ಹಾಗೂ ಇತಿಹಾಸ ಪ್ರಿಯರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
-
ಕೊಡಗು: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು – ಒಂದೇ ಕುಟುಂಬದ ಮೂವರು ದಾರುಣ ಸಾವು
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ ಕೆರೆಗೆ ಉರುಳಿ ಬಿದ್ದ ಪರಿಣಾಮ, ಕಾರಿನಲ್ಲಿದ್ದ ದಂಪತಿ ಹಾಗೂ ಅವರ ನಾಲ್ಕು ವರ್ಷದ ಹೆಣ್ಣು ಮಗು ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ. ಹಬ್ಬದ ವಾತಾವರಣದ ನಡುವೆಯೇ ಈ ದುರಂತ ನಡೆದಿದ್ದು, ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
-
ಅರಮನೆಯ ಜಯಮಾರ್ತಾಂಡ ದ್ವಾರ ಪ್ರವೇಶಿಸಿದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಚಾಮುಂಡಿ ಬೆಟ್ಟದಿಂದ ಆಗಮಿಸಿದ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯು ಮೈಸೂರು ಅರಮನೆ ಆವರಣವನ್ನು ಅತ್ಯಂತ ವಿಜೃಂಭಣೆಯಿಂದ ಪ್ರವೇಶಿಸಿದೆ. ಚಾಮುಂಡಿ ಬೆಟ್ಟದಿಂದ ತೆರೆದ ವಾಹನದಲ್ಲಿ ಮಂಗಳವಾದ್ಯ, ಕಂಸಾಳೆ ಹಾಗೂ ಸಾಂಸ್ಕೃತಿಕ ತಂಡಗಳ ವೈಭವದ ಮೆರವಣಿಗೆಯೊಂದಿಗೆ ಆಗಮಿಸಿದ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ದಾರಿಯುದ್ದಕ್ಕೂ ಲಕ್ಷಾಂತರ ಭಕ್ತಾದಿಗಳು ಜೈಕಾರ ಕೂಗಿ, ಹೂಮಳೆ ಗರೆದು ಭಕ್ತಿ ಸಮರ್ಪಿಸಿದರು.
-
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಇನ್ನೆರಡು ದಿನದಲ್ಲಿ ಎಸ್ಐಟಿ ಫೀಲ್ಡ್ ಎಂಟ್ರಿ
ಪಾಂಗಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಮರುತನಿಖೆ ಕೈಗೊಂಡಿರುವ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್ ನೇತೃತ್ವದ ಎಸ್ಐಟಿ ತಂಡವು, ಸಿಬಿಐ, ಕೋರ್ಟ್ ಹಾಗೂ ಸ್ಥಳೀಯ ಠಾಣೆಯಿಂದ ಸಲ್ಲಿಕೆಯಾಗಿದ್ದ ಎಲ್ಲಾ ತನಿಖಾ ದಾಖಲೆಗಳ ಪರಿಶೀಲನೆಯನ್ನು ಯಶಸ್ವಿಯಾಗಿ ಮುಗಿಸಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಫೀಲ್ಡ್ಗೆ ಇಳಿಯಲಿರುವ ಎಸ್ಐಟಿ ಅಧಿಕಾರಿಗಳು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಜೊತೆಗೆ, ಸೌಜನ್ಯ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುವುದು ಮತ್ತು ಈ ಹಿಂದೆ ತನಿಖೆ ನಡೆಸಿದ್ದ ಪಿಎಸ್ಐ ಹಾಗೂ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ.
-
ಅರಮನೆ ಸುತ್ತ 7,500 ಪೊಲೀಸರಿಂದ ಹೈ-ಅಲರ್ಟ್ ಭದ್ರತೆ
ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅರಮನೆ ಆವರಣ ಹಾಗೂ ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ ಒಟ್ಟು 7,500 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಂಪೂರ್ಣ ಪ್ರದೇಶವು ಖಾಕಿ ಕಣ್ಗಾವಲಿನಲ್ಲಿರಲಿದೆ.
-
ಮೈಸೂರು ದಸರಾ: ಗಣ್ಯರಿಗೆ ವಿಶೇಷ ಉಡುಗೊರೆ ಮತ್ತು ದೇವಿಯ ಉತ್ಸವ ಮೂರ್ತಿ ಮೆರವಣಿಗೆ
ನಂದಿ ಧ್ವಜ ಪೂಜೆ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಚಿವರಿಗೆ ಮೈಸೂರಿನ ಖ್ಯಾತ ಶಿಲ್ಪಿ ರಾಜೇಶ್ ಕುಟುಂಬದಿಂದ ವಿಶೇಷ ಉಡುಗೊರೆಗಳನ್ನು ಸಿದ್ಧಪಡಿಸಲಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ಅವರ ಆರಾಧ್ಯ ದೈವ ಗಂಗಾಧರ ಅಜ್ಜಯ್ಯನವರ ಪಂಪಲೋಹದ ವಿಗ್ರಹ, ಡಿಸಿಎಂ ಪರಮೇಶ್ವರ್ ಅವರಿಗೆ ಶಾಂತಿಧೂತ ಬುದ್ಧನ ವಿಗ್ರಹ ಹಾಗೂ ಸಚಿವ ಶಿವರಾಜ್ ತಂಗಡಗಿ ಅವರ ಮನೆ ದೇವತೆಯಾದ ಕನಕಾಚಲಪತಿ ದೇವರ ಮೂರ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
-
ಭಾರತ ಹಾಗೂ ನ್ಯೂಜಿಲೆಂಡ್ ಸರಣಿ ಆರಂಭ
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅತ್ಯಂತ ರೋಮಾಂಚಕಾರಿ ಹಾಗೂ ಬಹುಸ್ವರೂಪದ 12 ಪಂದ್ಯಗಳ ಸರಣಿಯು ಅಕ್ಟೋಬರ್ 22 ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಈ ದೀರ್ಘ ಪ್ರವಾಸದಲ್ಲಿ ಉಭಯ ತಂಡಗಳು ಮೊದಲು 5 ಪಂದ್ಯಗಳ ಟಿ20 ಸರಣಿ, ನಂತರ 5 ಪಂದ್ಯಗಳ ಏಕದಿನ ಸರಣಿ ಹಾಗೂ ಅಂತಿಮವಾಗಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿವೆ. ಇಲ್ಲಿದೆ ಓದಿ ಹೆಚ್ಚಿನ ಸುದ್ದಿ
-
ಸಿನಿಮಾ ಲೋಕ: ಮತ್ತೊಂದು ದೊಡ್ಡ ಪ್ರಾಜೆಕ್ಟ್ನಲ್ಲಿ ನಟಿ ರುಕ್ಮಿಣಿ ವಸಂತ್
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚಿರುವ ಕನ್ನಡತಿ ನಟಿ ರುಕ್ಮಿಣಿ ವಸಂತ್ ಈಗ ಮಲಯಾಳಂ ಸಿನಿಮಾಗಳಿಗೂ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನಿರ್ಮಾಣ ಮಾಡಲಿರುವ, ಪ್ರಸಿದ್ಧ ಗಾಯಕಿಯೊಬ್ಬರ ಜೀವನ ಚರಿತ್ರೆ ಆಧರಿಸಿದ ಬಹುನಿರೀಕ್ಷಿತ ಸಿನಿಮಾದಲ್ಲಿ ನಟಿಸುವ ಮತ್ತೊಂದು ದೊಡ್ಡ ಅವಕಾಶ ರುಕ್ಮಿಣಿ ವಸಂತ್ ಅವರನ್ನು ಅರಸಿ ಬಂದಿದೆ.
-
ಪುಷ್ಟೀಕರಿಸಿದ ಯುರೇನಿಯಂ ಬಿಟ್ಟುಕೊಡಲು ಇರಾನ್ ನಕಾರ
ಅಮೆರಿಕದೊಂದಿಗಿನ ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಪಾಕಿಸ್ತಾನ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದರೂ, ಇರಾನ್ ತನ್ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ಬಿಟ್ಟುಕೊಡಲು ಸ್ಪಷ್ಟವಾಗಿ ನಿರಾಕರಿಸಿದೆ. ಅಮೆರಿಕವು ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಂಡು, ಇರಾನ್ನ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಮಾತುಕತೆಗೆ ಸಿದ್ಧ ಎಂದು ಇರಾನ್ ಭದ್ರತಾ ಮುಖ್ಯಸ್ಥರು ತಿಳಿಸಿದ್ದು, ಯುರೇನಿಯಂ ನಮ್ಮ ರಾಷ್ಟ್ರೀಯ ಸಂಪತ್ತು ಎಂದಿದ್ದಾರೆ. ಇಲ್ಲಿದೆ ಓದಿ ಹೆಚ್ಚಿನ ಮಾಹಿತಿ
-
ತುಮಕೂರು ದಸರಾ: ಮೈಸೂರು ಮಾದರಿಯಲ್ಲಿ ಜಂಬೂಸವಾರಿ ಆರಂಭ
ಮೈಸೂರು ದಸರೆಯ ಮಾದರಿಯಲ್ಲೇ ತುಮಕೂರಿನಲ್ಲೂ ವಿಜಯದಶಮಿ ಜಂಬೂಸವಾರಿ ವಿಜೃಂಭಣೆಯಿಂದ ಆರಂಭವಾಗಿದೆ. ಹಾರಂಗಿಯ ದುಬಾರೆ ಕ್ಯಾಂಪ್ನಿಂದ ಆಗಮಿಸಿರುವ ‘ಲಕ್ಷ್ಮಣ’ ಆನೆ ಅಂಬಾರಿ ಹೊರಲಿದ್ದು, ಇದರೊಂದಿಗೆ ಕರಿಬಸವೇಶ್ವರ ದೇವಸ್ಥಾನದ ಲಕ್ಷ್ಮಿ ಹಾಗೂ ತಿಪಟೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮಿ ಆನೆಗಳು ಸಾಥ್ ನೀಡಲಿವೆ.
Published On - Oct 21,2026 9:10 AM




