TV9 Kannada News Live: ಮಳೆ ಎಚ್ಚರಿಕೆ:ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Karnataka News Today Live Updates: ಭಾರೀ ಮಳೆಗೆ ಮನೆ ಕುಸಿದು ಮೂವರು ಸಾವು. ರಾಜ್ಯದ ಗೃಹಜ್ಯೋತಿ ಯೋಜನೆಗೆ ಹೊಸ ಪರಿಷ್ಕರಣೆ, ಮತದಾರರ ಗುರುತು ಚೀಟಿ ಹಾಗೂ ಜಾತಿ ವಿವರ ಕಡ್ಡಾಯ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 183.50 ರೂ. ಕಡಿತ. ನಟ ಅಖಿಲ್ ರಾಜ್ ಮೇಲೆ ಫುಡ್ ಡೆಲಿವರಿ ಬಾಯ್ಸ್‌ನಿಂದ ಹಲ್ಲೆ , ಹೀಗೆ ಇಂದಿನ ಪ್ರಮುಖ ಸುದ್ದಿಗಳು ಇಲ್ಲಿದೆ ನೋಡಿ.

ಮಂಗಳೂರು ಜು.1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಮಳೆಯ ಆರ್ಭಟಕ್ಕೆ ಮನೆಯ ಹಿಂಬದಿಯ ತಡೆಗೋಡೆ ಹಾಗೂ ಮೇಲ್ಚಾವಣಿ ಕುಸಿದುಬಿದ್ದ ಪರಿಣಾಮ ಇಬ್ಬರು ಅಪ್ರಾಪ್ತ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆಯಲ್ಲಿ ಭಾರಿ ಪರಿಷ್ಕರಣೆ ನಡೆಯುತ್ತಿದ್ದು, ಇದು ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರವು ‘SIR’ ಪ್ರಕ್ರಿಯೆಯ ಮೂಲಕ ಗೃಹಜ್ಯೋತಿ ಫಲಾನುಭವಿಗಳಿಂದ ವೋಟರ್ ಐಡಿ (ಎಪಿಕ್ ಕಾರ್ಡ್ ನಂಬರ್) ಹಾಗೂ ಜಾತಿ ವಿವರಗಳನ್ನು ಕಡ್ಡಾಯವಾಗಿ ಸಂಗ್ರಹಿಸುತ್ತಿದೆ. ಅಂತಾರಾಷ್ಟ್ರೀಯ ಬಿಕ್ಕಟ್ಟಿನ ನಡುವೆಯೂ ಇಂದಿನಿಂದ (ಜುಲೈ 01) ವಾಣಿಜ್ಯ ಬಳಕೆಯ (19 ಕೆಜಿ) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಕಡಿತವಾಗಿದ್ದು, ಹೋಟೆಲ್ ಉದ್ಯಮಿಗಳು ಹಾಗೂ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ವಾಣಿಜ್ಯ ಸಿಲಿಂಡರ್ ದರದಲ್ಲಿ ಒಮ್ಮೆಗೆ 183.50 ರೂಪಾಯಿಗಳನ್ನು ಕಡಿತಗೊಳಿಸಲಾಗಿದೆ. ನಟ ಅಖಿಲ್ ರಾಜ್ ಅವರ ಮೇಲೆ ಹಲವಾರು ಫುಡ್ ಡೆಲಿವರಿ ಬಾಯ್ಸ್‌ಗಳು ಒಟ್ಟಾಗಿ ಸೇರಿ ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಟ ಅಖಿಲ್ ರಾಜ್ ಅವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ಡೆಲಿವರಿ ಬಾಯ್ಸ್‌ಗಳು ಒಟ್ಟಾಗಿ ಅವರ ಕಾರನ್ನು ಅಡ್ಡಗಟ್ಟಿ, ಗಾಜುಗಳನ್ನು ಪುಡಿಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಇದೇ ರೀತಿ ಪ್ರಮುಖ ಸುದ್ದಿಗಳ ಅಪ್ಡೇಟ್ಗಳನ್ನು ಇಲ್ಲಿ ನೀಡಲಾಗುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
LIVE NEWS & UPDATES
-
ಮಳೆ ಅಬ್ಬರ, ದೇವಿಮನೆ ಘಟ್ಟ ಭಾಗದಲ್ಲಿ ಗುಡ್ಡ ಕುಸಿತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕುಮಟಾ ತಾಲೂಕಿನ ದೇವಿಮನೆ ಘಟ್ಟ ಭಾಗದಲ್ಲಿ ಗುಡ್ಡ ಕುಸಿದಿದ್ದು, ಮಣ್ಣು ಹೆದ್ದಾರಿಗೆ ಬಿದ್ದಿದೆ. ಪರಿಣಾಮ ಕೆಲವು ಸಮಯ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766E ಬಂದ್ ಆಗಿದ್ದು, ಕೂಡಲೇ ಕಾರ್ಯಪ್ರವೃತರಾದ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ, ಮರ ಹಾಗೂ ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಳೆದ ವರ್ಷ ಇದೇ ಭಾಗದಲ್ಲಿ ಗುಡ್ಡ ಕುಸಿದು ತಿಂಗಳುಗಟ್ಟಲೇ ಸಂಚಾರ ಬಂದ್ ಆಗಿತ್ತು. ಇದೀಗ ಹೆಚ್ಚು ಮಳೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ತೆರಳಲು ಜಿಲ್ಲಾಡಳಿತ ಸೂಚನೆ ನೀಡಿದೆ.
-
ಆಹಾರ ಇಲಾಖೆಯಿಂದ ಸ್ಪೆಷಲ್ ಡ್ರೈವ್, ಪಾನ್ ಮಸಲಾ-ಗುಟ್ಕಾ ಸ್ಯಾಂಪಲ್ಸ್ ಸಂಗ್ರಹ
ಪಾನ್ ಮಸಾಲಾ, ಗುಟ್ಕಾ ಬಗ್ಗೆ ಸಿಎಂ ಡಿಕೆಶಿ ಎಚ್ಚರಿಕೆ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆಯಿಂದ ಸ್ಪೆಷಲ್ ಡ್ರೈವ್ ಆರಂಭಿಸಲು ಮುಂದಾಗಿದೆ. ಹೌದು…ಪಾನ್, ಗುಟ್ಕಾಗಳಲ್ಲಿ ಡ್ರಗ್ಸ್ ಸೇರುತ್ತಿದೆ ಎಂಬ ಆರೋಪ ಹಿನ್ನೆಲೆಲೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಅಧಿಕಾರಿಗಳು 2 ದಿನಗಳ ಕಾಲ ಸ್ಯಾಂಪಲ್ಸ್ ಸಂಗ್ರಹಿಸಲಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಸ್ಪೇಷಲ್ ಡ್ರೈವ್ ನಡೆಯಲಿದ್ದು, ಒಂದು ವೇಳೆ ಡ್ರಗ್ಸ್ ಕಂಡು ಬಂದಲ್ಲಿ ಪಾನ್, ಗುಟ್ಕಾ ನಿಷೇಧವಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
-
-
ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ (ಜುಲೈ 02) ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡುವುದರ ಜೊತೆಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಜುಲೈ 02ರಂದು ಅಂಗನವಾಡಿಯಿಂದ ಪದವಿಪೂರ್ವ ಕಾಲೇಜುವರೆಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು ಆದೇಶ ಹೊರಡಿಸಿದ್ದಾರೆ. ಅಲ್ಲದೇ ನದಿ, ಸಮುದ್ರ ತೀರ ಪ್ರದೇಶಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
-
ಸಿಎಂ ಡಿಕೆಶಿ ಭೇಟಿಯಾದ ಕೆಇಆರ್ಸಿ ಅಧ್ಯಕ್ಷ ಪಿ.ರವಿಕುಮಾರ್
ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣಗೊಳಿಸುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಇಂಧನ ಸಚಿವ ಕೆಜೆ ಜಾರ್ಜ್ ಹಾಗೂ ಸಿಎಂ ಡಿಕೆ ಶಿವಕುಮಾರ್ ಅವರು ಸಹ ಕ್ಯಾಬಿನೆಟ್ನಲ್ಲಿ ಪ್ರಸ್ತಾಪ ಮಾಡಿ ಮುಂದಿನ ಕ್ರಮಕೈಗೊಳ್ಳುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಇದರ ನಡುವೆ ಇದೀಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ರವಿ ಕುಮಾರ್ ಅವರು ಇಂದು (ಜುಲೈ 01) ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
-
ಇಂಡಿ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಇಂಡಿ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ವೇಳೆ ದಾಖಲೆ ಇಲ್ಲದೆ ಸಂಗ್ರಹಿಸಿದ್ದ 50 ಸಾವಿರ ಹಣ ಪತ್ತೆಯಾಗಿದೆ. ಇನ್ನು ಕಚೇರಿಯಲ್ಲಿದ್ದ ಖಾಸಗಿ ವ್ಯಕ್ತಿಗಳ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಲೋಕಾಯುಕ್ತ ಪೊಲೀಸರಿಂದ ಬಾಂಡ್ ರೈಟರ್ಸ್ ಕಡತ ಪರಿಶೀಲನೆ ನಡೆದಿದೆ.
-
-
ಅಮೆರಿಕದ ರಾಯಭಾರ ಕಚೇರಿ ಮೇಲೆ ಡ್ರೋನ್ ದಾಳಿ
ಇರಾಕ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಡ್ರೋನ್ ದಾಳಿಯಾಗಿದೆ. ಅಮೆರಿಕದ ರಾಯಭಾರ ಕಚೇರಿ ಮೇಲೆ ದಿಢೀರ್ ಡ್ರೋನ್ ದಾಳಿ ನಡೆದಿದ್ದು, ಕೆಲ ಡ್ರೋನ್ಗಳನ್ನು ಭದ್ರತಾ ಪಡೆಗಳು ಹೊಡೆದು ಹಾಕಿವೆ ಎಂದು ತಿಳಿದುಬಂದಿದೆ.
-
ವಿವಿಧ ಬೇಡಿಕೆ ಈಡೇರಿಕೆಗೆ ಯತೀಂದ್ರಗೆ ರೈತರ ಒತ್ತಾಯ
ವಿವಿಧ ಬೇಡಿಕೆ ಈಡೇರಿಸುವಂತೆ ರೈತರು ಸಚಿವ ಡಾ ಯತೀಂದ್ರ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿಂದು ಯತೀಂದ್ರ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ರೈತರ ಹಿತದೃಷ್ಟಿಯಿಂದ ಬಿಡದಿ ಟೌನ್ ಶಿಪ್ ಕೈ ಬಿಡಿ ಎಂದು ಮನವಿ ಮಾಡಿದ್ದಾರೆ. ಮೈಸೂರು ಚಾಮರಾಜನಗರ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿ. ವಿದ್ಯುತ್ ಖಾಸಗೀಕರಣ ಮಾಡಬೇಡಿ ಎಂದು ರೈತ ಮುಖಂಡ ಹಳ್ಳಿಕೆರೆ ಭಾಗ್ಯರಾಜ್ ಮನವಿ ಸಲ್ಲಿಸಿದ್ದಾರೆ.
-
ಜಮ್ಮು-ಕಾಶ್ಮೀರದಲ್ಲಿ ಪ್ರಕೃತಿ ವಿಕೋಪ: ದೋಡಾ ಜಿಲ್ಲೆಯಲ್ಲಿ ಭೀಕರ ಮೇಘಸ್ಫೋಟ
ಜಮ್ಮು-ಕಾಶ್ಮೀರದ ದೋಡಾ (Doda) ಜಿಲ್ಲೆಯಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮವಾಗಿ ಉಂಟಾದ ಹಠಾತ್ ಪ್ರವಾಹ ಹಾಗೂ ಮುದ್ದತ್ತಾದ ಮಳೆಯಿಂದಾಗಿ ಇಡೀ ಜಿಲ್ಲೆಯಾದ್ಯಂತ ವ್ಯಾಪಕ ಆಸ್ತಿಪಾಸ್ತಿ ಹಾನಿಯಾಗಿದೆ.
-
‘ಗೃಹಜ್ಯೋತಿಗೆ ಯಾವುದೇ ಕಡಿತ ಇಲ್ಲ, ಜಾತಿ ಪ್ರಮಾಣಪತ್ರವೂ ಬೇಕಾಗಿಲ್ಲ: ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ
ರಾಜ್ಯದ ಜನಪ್ರಿಯ ‘ಗೃಹಜ್ಯೋತಿ’ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯವನ್ನು ಕಡಿತಗೊಳಿಸಲಾಗುತ್ತಿದೆ ಎಂಬ ವದಂತಿಗಳಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತೆರೆ ಎಳೆದಿದ್ದಾರೆ. ಚಿಕ್ಕಮಗಳೂರು ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಗೃಹಜ್ಯೋತಿ ಯೋಜನೆಯ ನಿಯಮಾವಳಿಗಳಲ್ಲಿ ಯಾವುದೇ ಹೊಸ ಪರಿಷ್ಕರಣೆ ಅಥವಾ ಕಡಿತ ಮಾಡುತ್ತಿಲ್ಲ. ಅರ್ಹರಾಗಿರುವ ಪ್ರತಿಯೊಬ್ಬ ನಾಗರಿಕರಿಗೂ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು. ಯೋಜನೆಯ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದನ್ನು ಸಮರ್ಥಿಸಿಕೊಂಡ ಸಚಿವರು, “ನಾವು ಕೇವಲ ಅರ್ಹರಲ್ಲದವರನ್ನು (ಅನರ್ಹರನ್ನು) ಗುರುತಿಸಿ ಅವರ ಖಾತೆಗಳನ್ನು ಮಾತ್ರ ಪರಿಷ್ಕರಣೆ ಮಾಡುತ್ತಿದ್ದೇವೆ. ಯಾರೆಲ್ಲಾ ನಿಯಮಾವಳಿಗಳ ಪ್ರಕಾರ ನಿಜವಾದ ಅರ್ಹ ಫಲಾನುಭವಿಗಳಿದ್ದಾರೋ, ಅವರಿಗೆ ಯಾವುದೇ ತೊಂದರೆಯಾಗದಂತೆ ಯೋಜನೆ ತಲುಪಲಿದೆ,” ಎಂದರು.
-
ಮೆಜೆಸ್ಟಿಕ್‌ನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಸದ್ಯಕ್ಕೆ ಸ್ಥಗಿತ: ಜೆಸಿಬಿ ಕೆಟ್ಟುಹೋದ ಕಾರಣ ನಾಳೆಗೆ ಕಾರ್ಯಾಚರಣೆ
ರಾಜಧಾನಿ ಬೆಂಗಳೂರಿನ ಹೃದಯಭಾಗ ಎಂದೇ ಹೆಸರಾಗಿರುವ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಇಂದಿನಿಂದ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಆರಂಭಿಸಿದ್ದ ಹೈ-ವೋಲ್ಟೇಜ್ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
-
ಆಷಾಢ ಮಾಸದಲ್ಲಿ ಚಾಮುಂಡಿ ದರ್ಶನ: ಈ ಬದಲಾವಣೆ ಬಗ್ಗೆ ಭಕ್ತರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಜುಲೈ 17ರಿಂದ ಆರಂಭವಾಗಲಿರುವ ಆಷಾಢ ಮಾಸದ ಪೂಜಾ ಮಹೋತ್ಸವಕ್ಕೆ ಈ ಬಾರಿ ಮಹತ್ವದ ಬದಲಾವಣೆ ಮಾಡಲಾಗಿದೆ. ಸಾಮಾನ್ಯ ಭಕ್ತರ ಹಿತದೃಷ್ಟಿಯಿಂದ 300 ರೂ. ವಿಶೇಷ ದರ್ಶನ ಟಿಕೆಟ್ ಅನ್ನು ರದ್ದುಗೊಳಿಸಲಾಗಿದ್ದು, ವಿಐಪಿಗಳ ದರ್ಶನಕ್ಕೆ ಕಟ್ಟುನಿಟ್ಟಿನ ಸಮಯ ನಿಗದಿಪಡಿಸಲಾಗಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
-
ಸುಪ್ರೀಂ ಕೋರ್ಟ್ ಆದೇಶದಂತೆ ಬೆಂಗಳೂರಿನಲ್ಲಿ ಕೇವಲ ಶೇ. 15 ರಷ್ಟು ಫುಟ್‌ಪಾತ್ ತೆರವು: ಸಚಿವ ಕೃಷ್ಣಬೈರೇಗೌಡ
ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಜಿಬಿಎ (GBA) ಮತ್ತು ಪಾಲಿಕೆ ಜಂಟಿಯಾಗಿ ನಡೆಸುತ್ತಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯು ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಇಂದು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. “ಈ ಕಾರ್ಯಾಚರಣೆಯನ್ನು ಸರ್ಕಾರ ಸ್ವಯಂಪ್ರೇರಿತವಾಗಿ ಮಾಡುತ್ತಿಲ್ಲ, ಬದಲಿಗೆ ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿರುವ ಕಡಕ್ ಆದೇಶದ ಮೇರೆಗೆ ತೆರವು ಕಾರ್ಯ ಮಾಡಲಾಗುತ್ತಿದೆ” ಎಂದು ಸಚಿವರು ತಿಳಿಸಿದ್ದಾರೆ.
-
ಪರಿಷತ್‌ನ ಐವರು ಹಿರಿಯ ಸದಸ್ಯರಿಗೆ ಗೌರವಪೂರ್ವಕ ಬೀಳ್ಕೊಡುಗೆ ನೀಡಿದ ಸಭಾಪತಿ ಬಸವರಾಜ ಹೊರಟ್ಟಿ
ಕರ್ನಾಟಕ ವಿಧಾನ ಪರಿಷತ್‌ನಿಂದ (MLCs) ನಿವೃತ್ತಿ ಹೊಂದುತ್ತಿರುವ ಐವರು ಪ್ರಮುಖ ಸದಸ್ಯರಿಗೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಅತ್ಯಂತ ಗೌರವಪೂರ್ವಕ ಹಾಗೂ ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಲಾಯಿತು. ಪರಿಷತ್ತಿನ ಸಭಾಪತಿ (Chairman) ಬಸವರಾಜ ಹೊರಟ್ಟಿ ಅವರು ನಿವೃತ್ತ ಸದಸ್ಯರಿಗೆ ನೆನಪಿನ ಕಾಣಿಕೆ ಹಾಗೂ ಫಲಕವನ್ನು ನೀಡಿ ಗೌರವಿಸಿದರು.
-
ಫುಟ್‌ಪಾತ್ ಒತ್ತುವರಿ ಬಗ್ಗೆ ನೋಟಿಸ್ ನೀಡದೆ ಏಕಾಏಕಿ ವಸ್ತುಗಳ ತೆರವು: ಸಾರ್ವಜನಿಕರ ತೀವ್ರ ಆಕ್ರೋಶ
ರಾಜಧಾನಿ ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸಲು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಹಮ್ಮಿಕೊಂಡಿರುವ ಕಾರ್ಯಾಚರಣೆ ಇಂದಿರಾನಗರದಲ್ಲೂ ಮುಂದುವರಿದಿದೆ. ಆದರೆ, ಇಂದು ಇಂದಿರಾನಗರ 100 ಫೀಟ್ ರಸ್ತೆ ಹಾಗೂ ಬೆನ್ನಿಗಾನಹಳ್ಳಿ ಭಾಗದಲ್ಲಿ ನಡೆದ ಭರ್ಜರಿ ತೆರವು ಕಾರ್ಯಾಚರಣೆಯು ಸಾರ್ವಜನಿಕರು ಮತ್ತು ಸ್ಥಳೀಯ ವ್ಯಾಪಾರಿಗಳ ತೀವ್ರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
-
‘ಟಾಕ್ಸಿಕ್’ ಸಿನಿಮಾದ ಹೊಸ ಟೀಸರ್ ಬಿಡುಗಡೆ
ಯಶ್ ಅವರು ಸಿನಿಮಾನಲ್ಲಿ ನಟಿಸಿರುವ ಐವರು ನಾಯಕಿಯರ ವಿಶೇಷ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಯಶ್ ಅವರಂತೆಯೇ ಸಿನಿಮಾದ ನಾಯಕಿಯರ ಪಾತ್ರಗಳು ಸಹ ಬಲು ಪವರ್ಫುಲ್ ಆಗಿವೆ. ಹೆಚ್ಚಿನ ಸುದ್ದಿ ಇಲ್ಲಿದೆ ನೋಡಿ
-
ಬೆಂಗಳೂರಿನಲ್ಲಿ ಫುಟ್‌ಪಾತ್ ತೆರವು ಶುರು
ಬೆಂಗಳೂರು ನಗರದಾದ್ಯಂತ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಜಯನಗರದ ಅಶೋಕ ಪಿಲ್ಲರ್ ಸಮೀಪದಿಂದ ಬುಧವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಗೊಂಡಿದ್ದು, ಅಂಗಡಿಗಳು ಮತ್ತು ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳಿಂದ ಒತ್ತುವರಿ ಮಾಡಲಾಗಿದ್ದ ಫುಟ್ಪಾತ್ಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
-
KSRTC ಶೇ. 33 ಹಾಗೂ BMTC ಶೇ. 44 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ
ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬಿಸಿ ಈಗಾಗಲೇ ಸಾರ್ವಜನಿಕರಿಗೆ ತಟ್ಟಿದೆ. ಇದರ ಬೆನ್ನಲ್ಲೇ ಈಗ ಸಾರಿಗೆ ಬಸ್ ಪ್ರಯಾಣಿಕರ ಜೇಬಿಗೆ ದೊಡ್ಡ ಕತ್ತರಿ ಬೀಳುವ ಮುನ್ಸೂಚನೆ ಸಿಕ್ಕಿದೆ. ತೀವ್ರ ಆರ್ಥಿಕ ನಷ್ಟ ಹಾಗೂ ಡೀಸೆಲ್ ದರ ಏರಿಕೆಯಿಂದ ಕಂಗಾಲಾಗಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಿವೆ.
-
ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ರಾಜಧಾನಿ ಬೆಂಗಳೂರಿನ ಸಾರ್ವಜನಿಕರು ಹಾಗೂ ಪಾದಚಾರಿಗಳು ದೀರ್ಘಕಾಲದಿಂದ ಎದುರಿಸುತ್ತಿದ್ದ ದೊಡ್ಡ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಇಂದಿನಿಂದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಅತ್ಯಂತ ಚುರುಕಾಗಿ ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
-
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರದ ಬಿಗ್ ಫಿಲ್ಟರ್
ರಾಜ್ಯದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತಿರುವ ಗ್ಯಾರಂಟಿ ಯೋಜನೆಗಳಲ್ಲಿ ಆಗುತ್ತಿರುವ ಅಕ್ರಮಗಳು ಮತ್ತು ಅನರ್ಹರ ಪಾಲಾಗುತ್ತಿರುವುದನ್ನು ತಡೆಯಲು ಕರ್ನಾಟಕ ಸರ್ಕಾರ ಈಗ ಅಂತಿಮ ಅಸ್ತ್ರ ಪ್ರಯೋಗಿಸಿದೆ. ಇನ್ಮುಂದೆ ಕರ್ನಾಟಕ ರಾಜ್ಯದ ಅಧಿಕೃತ ಮತದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗಲಿದೆ ಎಂಬ ಬಿಗಿ ನಿಯಮ ಜಾರಿಗೆ ಬರುತ್ತಿದೆ.
-
ಮಂಗಳೂರಿನಲ್ಲಿ ಭೀಕರ ದುರಂತ: ನಿದ್ದೆಯಲ್ಲಿದ್ದಾಗಲೇ ಕುಸಿದುಬಿದ್ದ ಮನೆಯ ಹಿಂಬದಿಯ ತಡೆಗೋಡೆ
ಮಂಗಳೂರಿನಲ್ಲಿ ಮುಂಜಾನೆ ಮೂವರು ನಿದ್ದೆಯ ಮಂಪರಿನಲ್ಲಿದ್ದಾಗ ಮನೆಯ ಹಿಂಬದಿಯ ತಡೆಗೋಡೆ ಹಾಗೂ ಮೇಲ್ಚಾವಣಿ ಕುಸಿದುಬಿದ್ದ ಕಾರಣ ಮೂರು ಜನರು ಸಾವನ್ನಪ್ಪಿದ್ದಾರೆ. ಮೃತರನ್ನು ಬಿಹಾರ ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಮೃತರಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿದ್ದಾರೆ. ಮತ್ತಷ್ಟು ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - Jul 01,2026 9:16 AM




