ಅಮಾಯಕ ಆಟೋ‌ ಚಾಲಕನಿಗೆ ಕಳ್ಳನ ಪಟ್ಟ ಕಟ್ಟಿದ ಗಂಗೊಳ್ಳಿ ಪೊಲೀಸರು: ನಡೆದಿದ್ದೇನು?

ಉಡುಪಿಯ ಗಂಗೊಳ್ಳಿ ಪೊಲೀಸರು ಅಮಾಯಕ ಆಟೋ ಚಾಲಕನ ಮೇಲೆ ಕಳ್ಳತನದ ಸುಳ್ಳು ಆರೋಪ ಹೊರಿಸಿ ಕಾನೂನು ದುರ್ಬಳಕೆ ಮಾಡಿದ್ದರು. ಪೊಲೀಸರ ಒತ್ತಾಯಕ್ಕೆ ಸಹಿ ಹಾಕಿ ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ ಚಾಲಕ ಮಾನವ ಹಕ್ಕುಗಳ ಪ್ರತಿಷ್ಠಾನದ ನೆರವಿನೊಂದಿಗೆ ಕಾನೂನು ಹೋರಾಟ ನಡೆಸಿ ಇದೀಗ ದೋಷಮುಕ್ತರಾಗಿದ್ದಾರೆ. ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಾಲಕ ಮುಂದಾಗಿದ್ದಾರೆ.

ಅಮಾಯಕ ಆಟೋ‌ ಚಾಲಕನಿಗೆ ಕಳ್ಳನ ಪಟ್ಟ ಕಟ್ಟಿದ ಗಂಗೊಳ್ಳಿ ಪೊಲೀಸರು: ನಡೆದಿದ್ದೇನು?
ಶ್ರೀನಿವಾಸ್ ಪೂಜಾರಿ
Image Credit source: tv9 kannada
Edited By:

Updated on: Sep 08, 2026 | 6:51 PM

ಉಡುಪಿ, ಸೆಪ್ಟೆಂಬರ್​ 08: ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಓರ್ವ ಅಮಾಯಕ ಆಟೋ ಚಾಲಕನನ್ನು ಕಳ್ಳತನ ಪ್ರಕರಣದಲ್ಲಿ ಬಲಿಪಶು ಮಾಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಶೀನ ಯಾನೆ ಶ್ರೀನಿವಾಸ ಪೂಜಾರಿ ವಿರುದ್ಧ ಕಳ್ಳತನ ಆರೋಪ ಕೇಳಿಬಂದಿದೆ. ಸರ್ಕಾರಿ ಜಮೀನಿನಲ್ಲಿ ಕಲ್ಲುಕ್ವಾರೆ ಮಾಡಿ ಕೆಂಪು ಕಲ್ಲು ಕದ್ದ ಆರೋಪ ಮಾಡಲಾಗಿದೆ. ಎರಡು ತಿಂಗಳ ಬಳಿಕ ಶ್ರೀನಿವಾಸಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದು, ಈ ಕುರಿತಾಗಿ ಪರಿಚಯಸ್ಥರಲ್ಲಿ ವಿಚಾರಿಸಿದಾಗ ಕ್ರಿಮಿನಲ್ ಮೊಕದ್ದಮೆ ಹೂಡಿರುವುದು ತಿಳಿದು ಶಾಕ್ ಆಗಿದ್ದಾರೆ.

ನಡೆದಿದ್ದೇನು?

ಕುಂದಾಪುರದ ಆಲೂರು ಗ್ರಾಮದ ಶ್ರೀನಿವಾಸ ಪೂಜಾರಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಇವರ ಆಟೋವನ್ನು ಅದೇ ಗ್ರಾಮದ ಉದಯ ಶೆಟ್ಟಿ ಎಂಬಾತ ಗಂಗೊಳ್ಳಿ ಪೊಲೀಸ್ ಠಾಣೆಗೆ ಬಾಡಿಗೆಗೆ ಕರೆದೊಯ್ದಿದ್ದನು. ಠಾಣೆಯೊಳಗೆ ಹೋಗಿ ಬರುವುದಾಗಿ ಹೇಳಿ ಹೋದ ಬಳಿಕ, ಪೊಲೀಸರು ಹೊರಗಿದ್ದ ಶ್ರೀನಿವಾಸ ಪೂಜಾರಿಯನ್ನು ಒಳಗೆ ಕರೆಸಿ ವಿಚಾರಣೆ ಮಾಡಿದ್ದಾರೆ.

ಇದನ್ನೂ ಓದಿ: ದೇವಾಲಯಗಳ ಆದಾಯಕ್ಕೆ ಡಿಜಿಟಲ್ ಕಾವಲು: ಹೈಕೋರ್ಟ್‌ನಿಂದ ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರ ಜಾರಿ

‘ಉದಯ ಶೆಟ್ಟಿ ಪರಿಚಯವಿದ್ದಾರಾ?’ ಎಂದು ಕೇಳಿದಾಗ, ‘ಪರಿಚಯಸ್ಥರು’ ಎಂದಿದ್ದಾರೆ. ಇದನ್ನು ದುರುಪಯೋಗಪಡಿಸಿಕೊಂಡ ಪೊಲೀಸರು, ‘ನಿಮಗೇನೂ ಆಗುವುದಿಲ್ಲ, ತನಿಖೆಗೆ ಸಹಕರಿಸಿ’ ಎಂದು ನಂಬಿಸಿ ಓದಲು-ಬರೆಯಲು ಸರಿಯಾಗಿ ಬಾರದ ಶ್ರೀನಿವಾಸ ಬಳಿ ಕಳವು ಪ್ರಕರಣದ ದಾಖಲೆಗಳಿಗೆ ಸಹಿ ಹಾಕಿಸಿಕೊಂಡು ಆಧಾರ್ ಕಾರ್ಡ್ ಪ್ರತಿಯನ್ನೂ ಪಡೆದಿದ್ದಾರೆ.

ಆಟೋ ಚಾಲಕ ಶ್ರೀನಿವಾಸ ಪೂಜಾರಿಗೆ ಕಾದಿತ್ತು ಶಾಕ್​!

ಇನ್ನು ಘಟನೆ ನಡೆದು ಎರಡು ತಿಂಗಳ ಬಳಿಕ ಪೊಲೀಸರು ಮನೆಗೆ ಸಮನ್ಸ್ ತಂದು ಸಹಿ ಹಾಕಿಸಿಕೊಂಡು ನೀಡಿದಾಗ ಶ್ರೀನಿವಾಸಗೆ ಆಘಾತ ಕಾದಿತ್ತು. ಆ ಸಮನ್ಸ್ ಅನ್ನು ಪರಿಚಯಸ್ಥರಿಗೆ ತೋರಿಸಿದಾಗ, ಉದಯ ಶೆಟ್ಟಿ ಜೊತೆ ಸೇರಿ ಸರ್ಕಾರಿ ಜಮೀನಿನಲ್ಲಿ ಕಲ್ಲು ಕ್ವಾರೆ ಮಾಡಿ ಕೆಂಪು ಕಲ್ಲು ಕಳ್ಳತನ ಮಾಡಿರುವ ಗಂಭೀರ ಆರೋಪ ಹೊರಿಸಲಾಗಿದ್ದು, ಬಿಎನ್ಎಸ್ ಕಲಂ 303(2) ರಡಿಯಲ್ಲಿ ತಮ್ಮನ್ನೇ ಎರಡನೇ ಆರೋಪಿಯನ್ನಾಗಿ (ಎ-2) ಮಾಡಿರುವುದು ಬಯಲಿಗೆ ಬಂದಿದೆ.

‘ಜಾಮೀನು ಪಡೆಯದಿದ್ದರೆ ಜೈಲು ಪಾಲಾಗುತ್ತೀರಿ’ ಎಂದು ಆಪ್ತರು ಎಚ್ಚರಿಸಿದಾಗ ಬೆಚ್ಚಿಬಿದ್ದ ಆಟೋ ಚಾಲಕ ‘ಹೊಟ್ಟೆಪಾಡಿಗೆ ಆಟೋ ಓಡಿಸುವ ನನ್ನ ಮೇಲೆ ಕಳ್ಳನ ಪಟ್ಟ ಏಕೆ ಕಟ್ಟಿದಿರಿ? ಎಂದು ಗಂಗೊಳ್ಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೆ ಕ್ಯಾರೇ ಎನ್ನದ ಪೊಲೀಸರು, ‘ಇದೊಂದು ಸಣ್ಣ ಕೇಸು, ಕೋರ್ಟ್ ಮುಂದೆ ತಪ್ಪೊಪ್ಪಿಕೊಳ್ಳಿ. ಒಂದೆರಡು ದಿನದಲ್ಲಿ ಮುಗಿಯುತ್ತದೆ, ದಂಡದ ಹಣವನ್ನು ಮೊದಲ ಆರೋಪಿ ಉದಯ ಶೆಟ್ಟಿಯೇ ಕಟ್ಟುತ್ತಾರೆ, ಅವರೇ ಬೇಲ್ ಕೂಡ ಕೊಡಿಸುತ್ತಾರೆ’ ಎಂದು ಹಾರಿಕೆಯ ಉತ್ತರ ನೀಡಿ ಸಾಗಹಾಕಲು ಯತ್ನಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಜಯ 

ಪೊಲೀಸರ ಈ ಮೋಸದಿಂದ ಕಂಗಾಲಾಗಿದ ಶ್ರೀನಿವಾಸ ಪೂಜಾರಿ ಕಾನೂನು ವಿದ್ಯಾರ್ಥಿಯೊಬ್ಬರ ಸಲಹೆ ಮೇರೆಗೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ. ವಕೀಲ ಎನ್. ವಿವೇಕಾನಂದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾನೂನು ಸಮರ ಆರಂಭಿಸಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠವು, ‘ಆಟೋ ಚಾಲಕನನ್ನು ಯಾವ ಆಧಾರದ ಮೇಲೆ ಆರೋಪಿಯನ್ನಾಗಿ ಮಾಡಿದ್ದೀರಿ? ಎಂದು ಪ್ರಶ್ನಿಸಿ ಗಂಗೊಳ್ಳಿ ಪೊಲೀಸರಿಗೆ ಖಡಕ್ ನೋಟಿಸ್ ಜಾರಿ ಮಾಡಿತು.

ಇದನ್ನೂ ಓದಿ: 11.32 ಕೋಟಿ ರೂ. ವೆಚ್ಚದಲ್ಲಿ ಹೊಸ ರೂಪ ಪಡೆದ ಬೈಂದೂರಿನ ಸೋಮೇಶ್ವರ ಬೀಚ್: ಪ್ರವಾಸಿಗರನ್ನು ಸೆಳೆಯುತ್ತಿದೆ ‘ಪ್ರಕೃತಿ-ಆಧುನಿಕತೆಯ’ ಸಂಗಮ

ಆದರೆ ಕೋರ್ಟ್ ನೋಟಿಸ್‌ಗೆ ಪೊಲೀಸರಿಂದ ಯಾವುದೇ ಸಮಜಾಯಿಷಿ ಅಥವಾ ಉತ್ತರ ಬಾರದ ಹಿನ್ನೆಲೆ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ಶ್ರೀನಿವಾಸ ಪೂಜಾರಿಯನ್ನು ಪ್ರಕರಣದಿಂದ ಸಂಪೂರ್ಣ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.

ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ನಿರ್ಧಾರ

ಇನ್ನು ಕಳ್ಳತನದ ಆರೋಪದಿಂದ ದೋಷಮುಕ್ತರಾದ ಶ್ರೀನಿವಾಸ, ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದು ಇಲ್ಲಸಲ್ಲದ ಆರೋಪ ಹೊರಿಸಿದ ಗಂಗೊಳ್ಳಿ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us