AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣ ಅಂಗಾರಕ ಚತುರ್ದಶಿ; ಜೀವನದಿ ಸ್ವರ್ಣೆಯಲ್ಲಿ ಪುಣ್ಯಸ್ನಾನ ಮಾಡಲು ಹರಿದು ಬಂತು ಭಕ್ತ ಸಾಗರ

ಕೃಷ್ಣಪಕ್ಷ, ಚತುರ್ದಶಿ ತಿಥಿ ಹಾಗೂ ಮಂಗಳವಾರದ ದಿನವನ್ನು ಕೃಷ್ಣಾಂಗಾರಕ ಚತುರ್ದಶಿ ಎಂದು ಪರಿಗಣಿಸಿ ವರ್ಷಂಪ್ರತಿ ಪುಣ್ಯಸ್ನಾನ ಕೈಗೊಳ್ಳಲಾಗುತ್ತದೆ. ಇಲ್ಲಿನ ಗಣಪತಿ ಸನ್ನಿಧಾನಕ್ಕೆ ಸಾವಿರಾರು ಜನ ಭೇಟಿ ನೀಡಿ ಪುಣ್ಯ ಸ್ನಾನ ಮಾಡುತ್ತಾರೆ. ಈ ದಿನ ಸ್ವರ್ಣಾ ನದಿಯಲ್ಲಿ ಮುಳುಗಿದಾಗ ಒಂದು ವಿಶಿಷ್ಟವಾದ ಶಬ್ಧ ಕೇಳುತ್ತದೆ ಎನ್ನುವುದು ಜನರ ನಂಬಿಕೆ.

ಕೃಷ್ಣ ಅಂಗಾರಕ ಚತುರ್ದಶಿ; ಜೀವನದಿ ಸ್ವರ್ಣೆಯಲ್ಲಿ ಪುಣ್ಯಸ್ನಾನ ಮಾಡಲು ಹರಿದು ಬಂತು ಭಕ್ತ ಸಾಗರ
ಕೃಷ್ಣಾಂಗಾರಕ ಚತುರ್ದಶಿ ಬಂತೆಂದರೆ ಭಕ್ತರು ಪುಣ್ಯಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ
Follow us
TV9 Web
| Updated By: preethi shettigar

Updated on: Oct 06, 2021 | 9:01 AM

ಉಡುಪಿ: ನದಿಗಳಲ್ಲಿ ಕೈಗೊಳ್ಳುವ ಪುಣ್ಯಸ್ನಾನಕ್ಕೆ ನಮ್ಮ ಪರಂಪರೆಯಲ್ಲಿ ವಿಶೇಷ ಮಹತ್ವವಿದೆ. ಅದರಂತೆ ಕರಾವಳಿ ಜಿಲ್ಲೆ ಉಡುಪಿಯ ಜೀವನದಿ ಸ್ವರ್ಣೆಯಲ್ಲಿ ಪುಣ್ಯಸ್ನಾನ ಕೈಗೊಳ್ಳಲು ಸಾವಿರಾರು ಜನ ಭಕ್ತರು ಹಾತೊರೆಯುತ್ತಾರೆ. ಅದರಲ್ಲೂ ಕೃಷ್ಣಾಂಗಾರಕ ಚತುರ್ದಶಿ ಬಂತೆಂದರೆ ಭಕ್ತರು ಪುಣ್ಯಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಶಾಸ್ತ್ರ ಪುರಾಣಗಳಲ್ಲಿ ಉಲ್ಲೇಖಿತವಾದ ಕೆಲವೊಂದು ನದಿಗಳಿಗೆ ನಮ್ಮ ಪರಂಪರೆಯಲ್ಲಿ ವಿಶೇಷ ಸ್ಥಾನ ನೀಡಲಾಗಿದೆ. ಉಡುಪಿಗೆ ನೀರುಣಿಸುವ ಸ್ವರ್ಣಾ ನದಿಗೂ ಶಾಸ್ತ್ರಗಳಲ್ಲಿ ಮಹತ್ವ ಕಲ್ಪಿಸಲಾಗಿದೆ.

ವೇದಾಚಲ ಪರ್ವತದಲ್ಲಿ ಹುಟ್ಟುವ ಈ ನದಿಯ ಬಗ್ಗೆ ನಾಲ್ಕು ಶತಮಾನಗಳ ಹಿಂದೆ ವಾದಿರಾಜ ಗುರು ಸಾರ್ವಭೌಮರು ಉಲ್ಲೇಖಿಸಿದ್ದರು. ಅವರು ಬರೆದ ತೀರ್ಥ ಪ್ರಬಂಧದಲ್ಲಿ ಸ್ವರ್ಣ ನದಿಯಲ್ಲಿ ಪುಣ್ಯಸ್ನಾನ ಕೈಗೊಳ್ಳುವ ಬಗ್ಗೆ ಬರೆಯಲಾಗಿದೆ. ಶತಶತಮಾನಗಳು ಕಳೆದರೂ ಜನರ ನಂಬಿಕೆ ಮಾತ್ರ ದೃಢವಾಗಿದೆ. ನಿನ್ನೆ (ಅಕ್ಟೋಬರ್ 5) ಕೃಷ್ಣ ಅಂಗಾರಕ ಚತುರ್ದಶಿಯ ದಿನ.

ಈ ಶುಭ ದಿನದಂದು, ಹರಿಯುವ ನೀರಲ್ಲಿ ಮುಳುಗಿ ಪುಣ್ಯಸ್ಥಾನ ಕೈಗೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದಿದ್ದರು. ಮಣಿಪಾಲ ಸಮೀಪ ಇರುವ ಶೀಂಭ್ರ ಕ್ಷೇತ್ರದಲ್ಲಿ ಅಷ್ಟಮಠದ ಯತಿಗಳು ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಬಂದ ಭಕ್ತರು ಪುಣ್ಯಸ್ನಾನ ಕೈಗೊಂಡರು ಎಂದು ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಹೇಳಿದ್ದಾರೆ.

ಕೃಷ್ಣಪಕ್ಷ, ಚತುರ್ದಶಿ ತಿಥಿ ಹಾಗೂ ಮಂಗಳವಾರದ ದಿನವನ್ನು ಕೃಷ್ಣಾಂಗಾರಕ ಚತುರ್ದಶಿ ಎಂದು ಪರಿಗಣಿಸಿ ವರ್ಷಂಪ್ರತಿ ಪುಣ್ಯಸ್ನಾನ ಕೈಗೊಳ್ಳಲಾಗುತ್ತದೆ. ಇಲ್ಲಿನ ಗಣಪತಿ ಸನ್ನಿಧಾನಕ್ಕೆ ಸಾವಿರಾರು ಜನ ಭೇಟಿ ನೀಡಿ ಪುಣ್ಯ ಸ್ನಾನ ಮಾಡುತ್ತಾರೆ. ಈ ದಿನ ಸ್ವರ್ಣಾ ನದಿಯಲ್ಲಿ ಮುಳುಗಿದಾಗ ಒಂದು ವಿಶಿಷ್ಟವಾದ ಶಬ್ಧ ಕೇಳುತ್ತದೆ ಎನ್ನುವುದು ಜನರ ನಂಬಿಕೆ.

ವಾದಿರಾಜ ಗುರುಗಳು ತಿಳಿಸಿದಂತೆ ನೀರಿನಲ್ಲಿ ಮುಳುಗಿದ ಸಂದರ್ಭ ಚಟಚಟ ಎಂಬ ಶಬ್ಧ ಕಿವಿಗೆ ಬೀಳುತ್ತಂತೆ. ಈ ಶಬ್ಧ ಕೇಳಿದರೆ ನಮ್ಮ ಪಾಪಗಳೆಲ್ಲವೂ ಪರಿಹಾರವಾಗುತ್ತದೆ. ಕೃಷ್ಣ ಅಂಗಾರಕ ಚತುರ್ದಶಿಯಂದೇ ಈ ವಿದ್ಯಮಾನ ನಡೆಯುವುದರಿಂದ ಪುಣ್ಯಸ್ನಾನಕ್ಕೆ ವಿಶೇಷ ಮಹತ್ವ ಇದೆ. ಕರಾವಳಿ ಮಾತ್ರವಲ್ಲದೆ ಬೆಂಗಳೂರು ರಾಯಚೂರು ಬಳ್ಳಾರಿ ಮುಂತಾದ ಭಾಗಗಳಿಂದಲೂ ಜನ ಸ್ವರ್ಣ ನದಿಯಲ್ಲಿ ಪುಣ್ಯಸ್ನಾನ ಕೈಗೊಳ್ಳಲು ಬರುತ್ತಾರೆ ಎನ್ನುವುದು ವಿಶೇಷ.

ಉಡುಪಿ ಕೃಷ್ಣ ದೇವರಿಗೆ ಲಕ್ಷಾಂತರ ಭಕ್ತರಿದ್ದಾರೆ. ವಾದಿರಾಜ ಗುರು ಸಾರ್ವಭೌಮರನ್ನು ಪ್ರಾಥಸ್ಮರಣೀಯರು ಎಂದು ಪೂಜಿಸುವ ಜನರಿದ್ದಾರೆ. ಇವರೆಲ್ಲರಿಗೂ ಕಷ್ಟ ಅಂಗಾರಕ ಚತುರ್ದಶಿ ಮಹತ್ವದ ದಿನವಾಗಿದೆ.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ: Temple Tour: ಕುಕ್ಕೇ ಸುಬ್ರಹ್ಮಣ್ಯ ದೇಗುಲದಷ್ಟೇ ಪ್ರಸಿದ್ಧಿ ಪಡೆದಿದೆ ಹಾಸನದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ

Saundatti Yellamma Temple: 18 ತಿಂಗಳ ಬಳಿಕ ಸವದತ್ತಿ ರೇಣುಕಾ ಯಲಮ್ಮ ದೇವಾಲಯ ಓಪನ್, ದರ್ಶನಕ್ಕೆ ಷರತ್ತು ಬದ್ಧ ಅನುಮತಿ