ಕರಾವಳಿ ಜಿಲ್ಲೆಗಳಲ್ಲಿ ನೀರಿನ ಅಭಾವ; ಆತಂಕದಲ್ಲಿ ಗ್ರಾಮಸ್ಥರು
ವಿಧಾನಸಭೆ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಉಳಿದಿದ್ದು, ರಾಜ್ಯಾದ್ಯಂತ ಚುನಾವಣಾ ಕಾವು ಜೋರಾಗಿದೆ. ಈ ಮಧ್ಯೆ ಕರಾವಳಿ ಜಿಲ್ಲೆಗಳಾದ ಕಾರವಾರ, ಉಡುಪಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.
ಉಡುಪಿ: ವಿಧಾನಸಭೆ ಚುನಾವಣೆ(Karnataka Assembly Election)ಗೆ ನಾಲ್ಕು ದಿನಗಳು ಬಾಕಿ ಉಳಿದಿದ್ದು, ರಾಜ್ಯಾದ್ಯಂತ ಚುನಾವಣಾ ಕಾವು ಜೋರಾಗಿದೆ. ಈ ಮಧ್ಯೆ ಕರಾವಳಿ ಜಿಲ್ಲೆಗಳಾದ ಕಾರವಾರ(Karwar), ಉಡುಪಿ(Udupi) ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಹೌದು ಚುನಾವಣಾ ಭರವಸೆಗಳ ಮಧ್ಯೆಯೇ ಉಡುಪಿ ಜಿಲ್ಲೆಯ ಜನತೆ ನೀರಿನ ಸಮಸ್ಯೆಗೆ ಪರಿಹಾರ ದೊರೆಯದೆ ತತ್ತರಿಸಿದ್ದಾರೆ. ಜಲಮೂಲಗಳು ಬತ್ತಿ ಹೋಗುತ್ತಿರುವ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸುವ ಪರಿಸ್ಥಿತಿ ಎದುರಾಗಿದೆ. ಅದೇ ರೀತಿ ನಗರ ಪ್ರದೇಶಗಳಲ್ಲೂ ನೀರಿಗಾಗಿ ಹಾಹಾಕಾರ ಎದ್ದಿದೆ. ದಿನ ಕಳೆದಂತೆ ಬಿಸಿಲ ಧಗೆ ಹೆಚ್ಚುತ್ತಲೇ ಇದ್ದು, ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿಯುತ್ತಿದೆ.
ಇದರಿಂದ ಜಿಲ್ಲೆಯಲ್ಲಿರುವ ಬಾವಿ, ಕೊಳವೆ ಬಾವಿಗಳ ನೀರು ಬತ್ತಿ ಹೋಗುತ್ತಿವೆ. ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ವಿಸ್ತರಿಸಿಕೊಂಡು ಹೋಗುತ್ತಿದ್ದು, ಒಂದೊಂದು ಗ್ರಾಮ ಪಂಚಾಯತಿಯಲ್ಲಿ 30 ರಿಂದ 40 ಮನೆಗಳು ನೀರಿನ ಸಮಸ್ಯೆಗೆ ಸಿಲುಕಿವೆ. ಜಿಲ್ಲೆಯ ಕಾಪು, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು ಹಾಗೂ ಕುಂದಾಪುರ ತಾಲೂಕುಗಳ ಗ್ರಾಮೀಣ ಭಾಗದಲ್ಲಿ ಈಗಾಗಲೇ ನೀರಿನ ಸಮಸ್ಯೆ ಎದುರಾಗಿದೆ. ವಿವಿಧ ಗ್ರಾಮ ಪಂಚಾಯತಿಗಳಿಂದ ಟ್ಯಾಂಕರ್ ನೀರಿಗೆ ಬೇಡಿಕೆಗಳು ಕೇಳಿ ಬಂದಿದ್ದು, ಈ ತಿಂಗಳಿನಲ್ಲಿ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಹೆಚ್ಚಿದ ನೀರಿನ ಅಭಾವ
ಅಂಕೋಲಾ: ಬೇಸಿಗೆಯ ಹಿನ್ನೆಲೆ ಅಂಕೋಲಾದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಕೆಲವೇ ದಿನಗಳಲ್ಲಿ ಕಾರವಾರಕ್ಕೆ ಸರಬರಾಜಾಗುವ ನೀರಿನ ಪ್ರಮಾಣವು ಕಡಿಮೆಯಾಗಲಿದೆ. ಹೌದು ಬೇಸಿಗೆಯ ರಣ ಬಿಸಿಲಿಗೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ನೀರಿನ ಅಭಾವ ಉಂಟಾಗಿದ್ದು, ಬಾವಿ ಕೆರೆ ಸೇರಿದಂತೆ ಸರಕಾರದ ಬೋರ್ವೆಲ್ಗಳಲ್ಲೂ ಕೂಡ ನೀರಿನ ಪ್ರಮಾನ ಗಣನೀಯವಾಗಿ ಇಳಿಕೆಯಾಗಿದೆ. ಈ ಕಾರಣಕ್ಕೆ ಈಗಾಗಲೇ ಕಾರವಾರ ಸೇರಿದಂತೆ ಕರಾವಳಿ ತಾಲೂಕುಗಳ ನೂರಕ್ಕು ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ಪರಿಸ್ಥಿತಿ ಎದುರಾಗಿದೆ.
ಗಂಗಾವಳಿ ನದಿಯಲ್ಲಿ ಕಡಿಮೆಯಾದ ನೀರಿನ ಹರಿವು
ಅಂಕೋಲಾ ತಾಲೂಕಿನ ಹೊನ್ನಳ್ಳಿಯಲ್ಲಿರುವ ಗಂಗಾವಳಿ ನದಿಯಿಂದ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಕೆಲವು ದಿನಗಳಿಂದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರಿಂದ ಮುಂದಿನ ದಿನಗಳಲ್ಲಿ ನೀರಿನ ಪೂರೈಕೆ ಪ್ರಮಾಣ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಜಲಮಂಡಳಿ ತಿಳಿಸಿದೆ. ಇನ್ನು ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಮೋಟಾರ್ಗಳಲ್ಲಿ ನೀರೆತ್ತುವ ಅವಧಿಯನ್ನ 24 ಗಂಟೆಗಳಿಂದ 20 ಗಂಟೆಗಳಿಗೆ ಇಳಿಸಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:31 am, Sat, 6 May 23