ಸಿಎಂ ಸಿದ್ಧರಾಮಯ್ಯರನ್ನು ಭೇಟಿ ಮಾಡಿದ ರಾಜ್ಯ ಅರ್ಚಕರ ಒಕ್ಕೂಟ: ನಿವೃತ್ತಿ ವಯಸ್ಸಿನ ಮಿತಿ ರದ್ದು ಮಾಡುವಂತೆ ಮನವಿ
ಇಂದು ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ ರಾಜ್ಯ ಅರ್ಚಕರ ಒಕ್ಕೂಟದ ನಿಯೋಗ, ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಾಲಯಗಳ ಅರ್ಚಕರಿಗೆ ನಿವೃತ್ತಿ ವಯಸ್ಸಿನ ಮಿತಿ ರದ್ದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದೆ.

ಬೆಂಗಳೂರು, ಜುಲೈ 28: ದೇವಾಲಯಗಳ ಅರ್ಚಕರ ಒಕ್ಕೂಟದ ನಿಯೋಗವು ಶುಕ್ರವಾರ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಕುಮಾರಕೃಪಾದಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ, ಧಾರ್ಮಿಕ ದತ್ತಿ ಇಲಾಖೆ ಅಧೀನದ ದೇವಾಲಯಗಳ ಅರ್ಚಕರಿಗೆ ನಿವೃತ್ತಿ ವಯಸ್ಸಿನ ಮಿತಿ ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯ ಅರ್ಚಕರ ಒಕ್ಕೂಟದ ನಿಯೋಗವು ಐದು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವುಗಳನ್ನು ಸಿಎಂ ಸಿದ್ಧರಾಮಯ್ಯ ಈಡೇರಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಅರ್ಚಕರಿಗೆ ನಿವೃತ್ತಿ ವಯಸ್ಸನ್ನು 60 ಕ್ಕೆ ನಿಗದಿಪಡಿಸಿರುವ ನಿಯಮವನ್ನು ತೆಗೆದುಹಾಕಲು ವಿನಂತಿಸಲಾಗಿದೆ. ಅಷ್ಟೇ ಅಲ್ಲದೇ ತಮ್ಮ ವೇತನವನ್ನು ಪ್ರಸ್ತುತ ವರ್ಷಕ್ಕೆ 60 ಸಾವಿರ ರೂ.ಗಳಿಂದ 72 ಸಾವಿರ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಸದ್ಯ ಮುಜರಾಯಿ ಇಲಾಖೆ ಅಡಿ ಬರುವ 35 ಸಾವಿರ ಕ್ಕೂ ಹೆಚ್ಚು ದೇವಾಲಯದ ಅರ್ಚಕರಿಗೆ ಸರ್ಕಾರ ಸಂಭಾವನೆ ನೀಡುತ್ತಿದೆ.
ಇದನ್ನೂ ಓದಿ: Siddaramaiah: ಚುನಾವಣಾ ತಕರಾರು ಅರ್ಜಿ; ಸಿದ್ದರಾಮಯ್ಯಗೆ ಹೈಕೋರ್ಟ್ ನೋಟಿಸ್
ಮುಜರಾಯಿ ದೇವಾಲಯಗಳಿಗೆ ಖಾಸಗಿ ಟ್ರಸ್ಟ್ ರಚಿಸುವ ಹಿಂದಿನ ಸರ್ಕಾರದ ನಿರ್ಧಾರ ಹಿಂಪಡೆಯಬೇಕು. ಹಿಂದಿನ ಸರ್ಕಾರದ ನಿಯಮವನ್ನು ನಾವು ವಿರೋಧಿಸಿದ್ದೇವೆ. ಅರ್ಚಕರು ಮತ್ತು ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಲ್ಲಿಡುವಂತೆ ಸಿಎಂ ಅವರನ್ನು ಕೇಳಿದ್ದೇವೆ ಎಂದು ಅರ್ಚಕರ ಒಕ್ಕೂಟದ ಕಾರ್ಯದರ್ಶಿ ಡಾ.ಕೆ.ಎಸ್ಎನ್ ದೀಕ್ಷಿತ್ ಹೇಳಿರುವುದಾಗಿ ನ್ಯೂಸ್ 9 ವರದಿ ಮಾಡಿದೆ.
ಇದನ್ನೂ ಓದಿ: Karnataka Politics: ಇದೇನು ಪ್ರಜಾಪ್ರಭುತ್ವವೋ ಅಥವಾ ಸಿದ್ದರಾಮಯ್ಯನವರ ತುಘಲಕ್ ದರ್ಬಾರೋ; ಬಿಜೆಪಿ ಪ್ರಶ್ನೆ
ಧಾರ್ಮಿಕ ದತ್ತಿ ಇಲಾಖೆಯಲ್ಲೂ ನೌಕರರ ಕೊರತೆ ಇದ್ದು, ನೇಮಕ ಮಾಡುವಂತೆ ತಿಳಿಸಲಾಗಿದೆ. ಗ್ರಾಮೀಣ ಭಾಗದ ದೇವಾಲಯಗಳಿಗೆ ಪೂಜಾ ಸಾಮಗ್ರಿಗಳ ಖರೀದಿ ಮತ್ತು ಸಂಭಾವನೆ ಮಿತಿ ಹೆಚ್ಚಳಕ್ಕೆ ಒತ್ತಾಯಿಸಲಾಗಿದ್ದು, ಈಗ ಮಾಸಿಕ 5 ಸಾವಿರ ರೂ. ಇದ್ದು, 10 ಸಾವಿರ ರೂ. ಏರಿಕೆಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.