ಉತ್ತರ ಕನ್ನಡದ ಸಮುದ್ರದಲ್ಲಿ ಅಪರೂಪದ ಕಡಲಾಮೆಗಳ ಸಂತಾನೋತ್ಪತ್ತಿ; ವಿಶಿಷ್ಟ ಜೀವಿಯ ಬಗ್ಗೆ ಕುತೂಹಲಕಾರಿ ಮಾಹಿತಿ

ಉತ್ತರ ಕನ್ನಡದ ಸಮುದ್ರದಲ್ಲಿ ಅಪರೂಪದ ಕಡಲಾಮೆಗಳ ಸಂತಾನೋತ್ಪತ್ತಿ; ವಿಶಿಷ್ಟ ಜೀವಿಯ ಬಗ್ಗೆ ಕುತೂಹಲಕಾರಿ ಮಾಹಿತಿ
ಆಲಿವ್ ರಿಡ್ಲೇ ಕಡಲಾಮೆ

ಅಳಿನಂಚಿನಲ್ಲಿರುವ ಆಲಿವ್ ರಿಡ್ಲೇ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಟ್ಟು ತೆರಳಿರುವುದು ಇದೀಗ ಉತ್ತರ ಕನ್ನಡ ಜಿಲ್ಲೆಯ ಕಡಲತೀರಕ್ಕೆ ಇನ್ನಷ್ಟು ಪ್ರಾಮುಖ್ಯತೆ ದೊರಕಿಸಿಕೊಟ್ಟಿದೆ.

TV9kannada Web Team

| Edited By: ganapathi bhat

Jan 25, 2022 | 7:15 AM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಡಲು ಅನೇಕ ಅಪರೂಪದ ಜೀವಸಂಕುಲಗಳ ವಾಸಸ್ಥಾನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಆಲಿವ್ ರಿಡ್ಲೇ ಕಡಲಾಮೆಗಳು ಜಿಲ್ಲೆಯ ಕರಾವಳಿ ತಟಗಳನ್ನ ಸಂತಾನೋತ್ಪತ್ತಿಯ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದ್ದು, ವಿವಿಧೆಡೆ ಮೊಟ್ಟೆಗಳನ್ನಿಟ್ಟು ತೆರಳಿವೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಗೊಳಪಡುವ ಈ ಆಮೆಗಳ ಮೊಟ್ಟೆಗಳನ್ನೀಗ ಸಂರಕ್ಷಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಹೌದು, 140 ಕಿ.ಮೀ. ವ್ಯಾಪ್ತಿಯ ಉತ್ತರ ಕನ್ನಡದ ಕಡಲು ಸಹಸ್ರಾರು ಅಪರೂಪದ ಜೀವಿಗಳ ವಾಸಸ್ಥಾನ. ಅದರಲ್ಲೂ ಈ ಭಾಗದಲ್ಲಿ ಅಳಿನಂಚಿನಲ್ಲಿರುವ ಆಲಿವ್ ರಿಡ್ಲೇ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನಿಟ್ಟು ತೆರಳಿರುವುದು ಇದೀಗ ಜಿಲ್ಲೆಯ ಕಡಲತೀರಕ್ಕೆ ಇನ್ನಷ್ಟು ಪ್ರಾಮುಖ್ಯತೆ ದೊರಕಿಸಿಕೊಟ್ಟಿದೆ. ಜನವರಿಯಿಂದ ಮಾರ್ಚ್ ತಿಂಗಳು ಈ ಆಮೆಗಳ ಸಂತಾನೋತ್ಪತ್ತಿ ಕಾಲವಾಗಿದ್ದು, ಕಾರವಾರದ ದೇವಬಾಗ, ಅಂಕೋಲಾದ ಕೇಣಿ ಕಡಲತೀರದಲ್ಲಿ 250ಕ್ಕೂ ಅಧಿಕ ಮೊಟ್ಟೆಗಳು ಪತ್ತೆಯಾಗಿವೆ.

ಆಮೆಗಳಿಗೆ, ಜೊತೆಗೆ ಆಮೆಗಳ ಮೊಟ್ಟೆಗಳಿಗೆ, ಅದರಲ್ಲೂ ಅಪರೂಪದ ಈ ಆಲಿವ್ ರಿಡ್ಲೇಗಳಿಗೆ ಹೊರ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಈ ಆಮೆ ಮೊಟ್ಟೆಗಳನ್ನು ತಿನ್ನುವ ಜನಾಂಗವೂ ಒಂದಿದೆ. ಹೀಗಾಗಿ ಅಂಥವರಿಂದ ಈ ಆಮೆಗಳನ್ನು ಸಂರಕ್ಷಿಸುವುದಕ್ಕಾಗಿ, ಅಳಿವಿನಂಚಿನಲ್ಲಿರುವ ಈ ಪ್ರಭೇದದ ಉಳಿವಿಗಾಗಿ ಶ್ರಮಿಸಲೆಂದೇ ಅರಣ್ಯ ಇಲಾಖೆ ಕರಾವಳಿ ಮತ್ತು ಕಡಲು ಪರಿಸರ ವಿಭಾಗವನ್ನ ಸ್ಥಾಪಿಸಿದೆ. ಈ ವಿಭಾಗದ ಆರ್‌ಎಫ್‌ಒ ಪ್ರಮೋದ್ ಅವರ ನೇತೃತ್ವದ ತಂಡ ಮೀನುಗಾರರ ಸಹಕಾರದೊಂದಿಗೆ ಈ ಮೊಟ್ಟೆಗಳನ್ನು ಸಂರಕ್ಷಿಸಿ, ದಿನವಿಡೀ ಕಾಯುವ ಕಾರ್ಯ ನಡೆಸುತ್ತಿದೆ.

Tortoise Eggs

ಹುಣ್ಣಿಮೆ, ಬೆಳಕಿರುವ ಸಮಯದಲ್ಲಿ ಮೊಟ್ಟೆಗಳನ್ನಿಡುವ ಈ ಆಮೆಗಳು, ಅವುಗಳ ರಕ್ಷಣೆಯ ಜವಾಬ್ದಾರಿಯನ್ನೂ ತಾನೇ ವಹಿಸಿಕೊಂಡಿರುತ್ತದೆ. ಮೊಟ್ಟೆಗಳನ್ನಿಟ್ಟು ಹೋಗುವಾಗ ಮೊಟ್ಟೆಗಳಿರುವ ಜಾಗ ಗೊತ್ತಾಗದಂತೆ ತಾನು ಬಂದ ದಾರಿಯನ್ನೂ ಅಳಿಸಿ ತೆರಳುತ್ತವೆ. ಆದರೂ ಅರಣ್ಯ ಇಲಾಖೆ ಈ ಆಮೆಗಳ ಗೂಡುಗಳನ್ನ ಪತ್ತೆ ಮಾಡಿವೆ. ಅಳಿವಿನಂಚಿನಲ್ಲಿರುವ ಇವುಗಳ ಸಂರಕ್ಷಣೆ ಕೇವಲ ಇಲಾಖೆಯದ್ದಷ್ಟೇ ಅಲ್ಲ, ಸಾರ್ವಜನಿಕರದ್ದೂ ಕೂಡ ಆಗಿದೆ. ಹೀಗಾಗಿ ಸಾರ್ವಜನಿಕರು ಮೊಟ್ಟೆಗಳನ್ನು ಸುರಕ್ಷಿತವಾಗಿ ಪತ್ತೆ ಮಾಡಿಕೊಟ್ಟಲ್ಲಿ ಅರಣ್ಯ ಇಲಾಖೆ ಸಾವಿರ ರೂಪಾಯಿ ನಗದು ಬಹುಮಾನವನ್ನೂ ಘೋಷಿಸಿದೆ. ಅದೇನೆ ಇರಲಿ, ಈ ಮೊಟ್ಟೆಗಳಿಂದ ಮರಿ ಹೊರ ಬರಲು ಇನ್ನೂ ಒಂದು ತಿಂಗಳು ಕಾಯಬೇಕಿದ್ದು, ಸುರಕ್ಷಿತವಾಗಿ ಎಷ್ಟು ಆಮೆಗಳ ಜನನವಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

ವಿಶೇಷ ವರಿದ: ವಿನಾಯಕ್ ಬಡಿಗೇರ್, ಟಿವಿ9 ಕನ್ನಡ

ಇದನ್ನೂ ಓದಿ: ಸಮುದ್ರದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿ: 20 ಕಿಮೀಗಳಷ್ಟು ದೂರ ಹರಡಿದ ಅನಿಲ

ಇದನ್ನೂ ಓದಿ: Nusantara ಸಮುದ್ರ ಪಾಲಾದ ಜಕಾರ್ತಾ: ನುಸಂತರಾ ಈಗ ಇಂಡೋನೇಷ್ಯಾದ ಹೊಸ ರಾಜಧಾನಿ

Follow us on

Most Read Stories

Click on your DTH Provider to Add TV9 Kannada