ನಮ್ಮ ಜಿಲ್ಲೆಗೆ ಬೇಕೇ ಬೇಕು ಒಂದು ಫುಡ್ ಪಾರ್ಕ್: ಇದು ವಿಜಯಪುರ ರೈತರ, ಯುವಕರ, ಉದ್ಯಮಿಗಳ ಆಗ್ರಹ
ಜಿಲ್ಲೆಗೆ ಫುಡ್ ಪಾರ್ಕ್ ಒಂದರ ಅವಶ್ಯಕತೆ ಇದ್ದು ಇದರಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡುವ ಜೊತೆಗೆ ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಹೊಸ ಭರವಸೆ ಮೂಡಿಸುವಂತಾಗುತ್ತದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ಗೆ ಜಿಲ್ಲೆಯ ರೈತ ಮುಖಂಡರು ಮನವರಿಕೆ ಮಾಡಿದರು.
ವಿಜಯಪುರ: ಬರದ ನಾಡು, ಗುಳೆ ಹೋಗುವವರ ಊರು ಎಂಬ ಕುಖ್ಯಾತಿ ಪಡೆದ ಜಿಲ್ಲೆ ಅಂದರೆ ಅದು ವಿಜಯಪುರ. ಅನೇಕ ಸ್ಮಾರಕಗಳ ಬೀಡಾಗಿದ್ದರೂ ಭೀಮಾತೀರದ ಹಂತಕರ ಜಿಲ್ಲೆ ಎಂಬ ಕಳಂಕವೂ ಈ ಜಿಲ್ಲೆಗಿದೆ. ಇಂತಹ ಜಿಲ್ಲೆಯಲ್ಲಿ ಈ ಮೊದಲು, ಅಂದರೆ, ಇಂದಿನ ವಿಜಯಪುರ ಮತ್ತು ಬಾಗಲಕೋಟೆ ಪ್ರದೇಶಗಳನ್ನು ಒಳಗೊಂಡಿದ್ದ ಅಖಂಡ ಜಿಲ್ಲೆಯಲ್ಲಿ ಪಂಚ ನದಿಗಳು ಹರಿಯುತ್ತಿದ್ದವು. ನಂತರ ಜಿಲ್ಲೆಯ ವಿಭಜನೆ ಆದ ಮೇಲೆ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ಹಾಗೂ ಡೋಣಿ ನದಿಗಳು ಮಾತ್ರ ಹರಿಯುತ್ತಿವೆ.
3 ನದಿಗಳು ಇಲ್ಲಿ ಹರಿಯುತ್ತಿದ್ದರೂ ಕೃಷಿಗೆ ನೀರು ಸಿಗದಂತಹ ಸ್ಥಿತಿ ಉಂಟಾಗಿತ್ತು. ನಂತರ 2006 ರಿಂದ ಕೆಲ ನೀರಾವರಿ ಯೋಜನೆಗಳು ಅನುಷ್ಠಾನಗೊಂಡು ರೈತರ ಜಮೀನಿನತ್ತ ನೀರು ಹರಿದು ಬರುತ್ತಿದೆ. ಇನ್ನು, ನೀರಾವರಿ ವಿಚಾರದಲ್ಲಿ ಕಾಮಗಾರಿಯ ಕೆಲಸಗಳು ಬಾಕಿ ಇದ್ದು, ರೈತರು ಸಿಕ್ಕ ನೀರಿನಲ್ಲೇ ಬದುಕು ಕಟ್ಟಿಕೊಳ್ಳುವಂತಾಗಿದೆ. ಅದರಲ್ಲೂ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ನಿಂಬೆ, ದಾಳಿಂಬೆ, ಮಾವು, ಬಾರೆ, ಪೇರಲೆ ಸೇರಿದಂತೆ ಇತರೆ ಹಣ್ಣುಗಳ ಇಳುವರಿ ಹೆಚ್ಚಾಗಲು ರೈತರ ಜಮೀನಿಗೆ ನೀರು ಹರಿದು ಬರುತ್ತಿರುವುದು ಸಹ ಒಂದು ಪ್ರಮುಖ ಕಾರಣವಾಗಿದೆ. ಇದೀಗ, ತಾವು ಬೆಳೆಸಿದ ತೋಟಗಾರಿಕಾ ಬೆಳೆಗಳು ಉತ್ತಮವಾಗಿ ಹಾಗೂ ತ್ವರಿತವಾಗಿ ಬಳಕೆಯಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಫುಡ್ ಪಾರ್ಕ್ ಒಂದರ ನಿರ್ಮಾಣವಾಗಬೇಕೆಂಬುದು ರೈತರ ಒತ್ತಾಯವಾಗಿದೆ.
ನೀರಾವರಿಯಿಂದ ತೋಟಗಾರಿಕಾ ಇಳುವರಿಯಲ್ಲಿ ಏರಿಕೆ ಜಿಲ್ಲೆಯ ಇಟ್ಟಂಗಿಹಾಳ ಹತ್ತಿರ ಫುಡ್ ಪಾರ್ಕ್ ನಿರ್ಮಿಸಬೇಕೆಂದು ರೈತರ ಹಾಗೂ ಉದ್ಯಮಿಗಳ ನಿಯೋಗವೊಂದು ನಿನ್ನೆ ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿದ್ದು ನೀರಾವರಿ ಆಧಾರಿತ ಹಾಗೂ ಮಳೆಯಾಶ್ರಿತ ಬೆಳೆಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ಇದೀಗ, ಜಿಲ್ಲೆಯಲ್ಲಿ ಬಹುತೇಕ ಕೃಷಿ ಭೂಮಿ ನೀರಾವರಿಗೆ ಒಳಪಟ್ಟಿರುವುದರಿಂದ ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಸಲಾಗುವುದು ಎಂಬ ವಿಶ್ವಾಸವನ್ನು ರೈತರು ಹೊಂದಿದ್ದಾರೆ.
ಈಗ ರೈತರು ಬೆಳೆದ ಬೆಳೆಗಳಿಗೆ ಅಗತ್ಯ ಸಂಸ್ಕರಣೆ ಹಾಗೂ ಉತ್ಪನ್ನ ತಯಾರಿಕೆಯ ಅನುಕೂಲತೆಗಳನ್ನು ಕಲ್ಪಿಸಿದರೆ, ಈ ಭಾಗದಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಉದ್ಯಮಗಳು ಆರಂಭವಾಗುತ್ತದೆ. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ, ಮಾಜಿ ಸಚಿವ M.B.ಪಾಟೀಲ್ ಕಳೆದ ನವೆಂಬರ್ 30 ರಂದು ಕೃಷಿ ಸಚಿವ B.C.ಪಾಟೀಲ್ಗೆ ಪತ್ರ ಬರೆದಿದ್ದರು. ಇದೀಗ, ಜಿಲ್ಲೆಯಿಂದ ಆಗಮಿಸಿದ ನಿಯೋಗವು ಕೃಷಿ ಸಚಿವರಿಗೆ ಈ ಕುರಿತು ಮತ್ತೊಮ್ಮೆ ಮನವರಿಕೆ ಮಾಡಿದರು.
ಫುಡ್ ಪಾರ್ಕ್ ಒಂದು, ಲಾಭ ನೂರಾರು ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ಇಟ್ಟಂಗಿಹಾಳದ ಹತ್ತಿರ ಫುಡ್ ಪಾರ್ಕ್ ನಿರ್ಮಿಸಲು 72 ಎಕರೆ ಜಾಗವನ್ನು ಈಗಾಗಲೇ ಮೀಸಲಿರಿಸಲಾಗಿದೆ, ಇದೇ ಸ್ಥಳದಲ್ಲಿ ಫುಡ್ ಪಾರ್ಕ್ ಆರಂಭಿಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗುತ್ತದೆ. ಮೊದಲೇ ಕೈಗಾರಿಕೆಗಳಿಲ್ಲದೆ ಜಿಲ್ಲೆಯ ಹಾಗೂ ನಗರ ಭಾಗದ ಯುವಕರು ನೌಕರಿ ಅರಸಿ ಗುಳೆ ಹೋಗುವ ಸ್ಥಿತಿ ಎದುರಾಗಿದೆ. ಹಾಗಾಗಿ, ಇಟ್ಟಂಗಿಹಾಳದ ಬಳಿ ಫುಡ್ ಪಾರ್ಕ್ ನಿರ್ಮಾಣವಾದರೆ ಯುವಕರಿಗೆ ಉದ್ಯೋಗ ಸಿಗಲಿದೆ. ಅಲ್ಲದೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಲವಾರು ಅವಕಾಶಗಳು ಸಿಗಲಿದೆ.
ಕೃಷಿ ಸಚಿವರನ್ನು ಭೇಟಿ ಮಾಡಿದವರು: ಜಿಲ್ಲೆಗೆ ಫುಡ್ ಪಾರ್ಕ್ ಒಂದರ ಅವಶ್ಯಕತೆ ಇದ್ದು ಇದರಿಂದ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡುವ ಜೊತೆಗೆ ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಹೊಸ ಭರವಸೆ ಮೂಡಿಸುವಂತಾಗುತ್ತದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ಗೆ ಜಿಲ್ಲೆಯ ರೈತ ಮುಖಂಡರು ಮನವರಿಕೆ ಮಾಡಿದರು. ಜಿಲ್ಲಾ ಪಂಚಾಯತಿ ಹಾಗೂ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಸ್.ಮುಂಬಾರೆಡ್ಡಿ, ಬಿ.ಎಲ್.ಡಿ.ಇ ನಿರ್ದೇಶಕ ಬಸನಗೌಡ ಎಂ.ಪಾಟೀಲ್, ಪ್ರಗತಿಪರ ರೈತರಾದ ದುಂಡಪ್ಪ ಬಡ್ರಿ, ಅಜೇಯ ಪಾಟೀಲ ಹಣಮಾಪುರ ಕೃಷಿ ಸಚಿವ ಬಿ. ಸಿ. ಪಾಟೀಲ್ರನ್ನು ಭೇಟಿಯಾದರು.
ಸದ್ಯ, ಇಟ್ಟಂಗಿಹಾಳ ಬಳಿ ಫುಡ್ ಪಾರ್ಕ್ ನಿರ್ಮಾಣಕ್ಕೆ ಮೀಸಲಾಗಿರುವ 72 ಎಕರೆ ಜಮೀನಿನ ಬಗ್ಗೆ ಸಚಿವ ಪಾಟೀಲ್ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಶೀಘ್ರವೇ ಜಿಲ್ಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಫುಡ್ ಪಾರ್ಕ್ ಸ್ಥಾಪನೆಗೆ ಕೂಡಲೇ ಕ್ರಮ ಜರುಗಿಸಲಾಗುವುದು ಎಂದು ರೈತರೊಬ್ಬರು ತಿಳಿಸಿದ್ದಾರೆ.
National farmers day 2020: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿ, ಇದೀಗ ಕೇಂದ್ರದಿಂದಲೂ ಆ್ಯಪ್ ಅಳವಡಿಕೆ!