AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲೇ ಪ್ರಥಮ ಬಾರಿಗೆ ಹಳ್ಳಗಳಿಗೆ ಬಾಂದಾರ ನಿರ್ಮಿಸುವ ಯೋಜನೆಗೆ ಸಾಕ್ಷಿಯಾದ ವಿಜಯಪುರ

ವಿಜಯಪುರದಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಹಳ್ಳಗಳಿಗೆ ಬಾಂದಾರ ನಿರ್ಮಿಸುವ ಯೋಜನೆಗೆ ಸಚಿವ ಎಂ.ಬಿ. ಪಾಟೀಲ್ ಚಾಲನೆ ನೀಡಿದ್ದಾರೆ. ಹಳ್ಳಗಳಿಗೆ ನೀರು ಹರಿಸುವುದರಿಂದ ಅಂತರ್ಜಲ ಹೆಚ್ಚಳ, ಪ್ರಾಣಿ ಪಕ್ಷಿಗಳಿಗೆ ನೀರು ಹಾಗೂ ಕೃಷಿ ಸಮೃದ್ಧಿಗೆ ನೆರವಾಗಲಿದೆ. 176 ಹಳ್ಳಗಳನ್ನು ಒಳಗೊಂಡ ಈ ಯೋಜನೆ ಜಿಲ್ಲೆಯನ್ನು ಅಂತರ್ಜಲ ಸಮೃದ್ಧಿಯ ಮಾದರಿ ಜಿಲ್ಲೆಯನ್ನಾಗಿಸಲಿದೆ. 10 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತ ಆರಂಭಗೊಂಡಿದೆ.

ದೇಶದಲ್ಲೇ ಪ್ರಥಮ ಬಾರಿಗೆ ಹಳ್ಳಗಳಿಗೆ ಬಾಂದಾರ ನಿರ್ಮಿಸುವ ಯೋಜನೆಗೆ ಸಾಕ್ಷಿಯಾದ ವಿಜಯಪುರ
ಬಾಂದಾರಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ ಸಚಿವ ಎಂಬಿ ಪಾಟೀಲ್​​Image Credit source: tv9 kannada
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Apr 19, 2026 | 8:50 PM

Share

ವಿಜಯಪುರ, ಏಪ್ರಿಲ್​ 19: ದೇಶದಲ್ಲೇ ಪ್ರಪ್ರಥಮ ಬಾರಿಗೆ ಹಳ್ಳಗಳಿಗೆ ಬಾಂದಾರ ನಿರ್ಮಿಸುವ ಯೋಜನೆಗೆ (Bandar Project) ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ಇಂದು ಚಾಲನೆ ನೀಡಿದ್ದಾರೆ. ಹಳ್ಳ, ಕೊಳ್ಳಗಳಿಗೆ ನೀರು ಹರಿಸುವುದರಿಂದ ಅಂತರ್​ ಜಲ ಹೆಚ್ಚಾಗುತ್ತದೆ ಹಾಗೂ ಪ್ರಾಣಿ ಪಕ್ಷಿಗಳಿಗೆ ನೀರು ಸಿಗುತ್ತದೆ. ಇದೊಂದು ವಿಶಿಷ್ಟ ಯೋಜನೆಯಾಗಿದ್ದು, ಇದಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿನ ಎಲ್ಲಾ ಹಳ್ಳಗಳಿಗೆ 1ಕಿ.ಮೀಗೆ ಒಂದರಂತೆ ಬಾಂದಾರ ನಿರ್ಮಾಣ ಮಾಡುವ ಯೋಜನೆಗೆ ಒಂದು ಚಾಲನೆ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ ಪಾಟೀಲ್, ಮೊದಲ ಹಂತದ ಬಾಂದಾರ ನಿರ್ಮಾಣಕ್ಕೆ ಇಂದು ಚಾಲನೆ ನೀಡಿದರು. ಬಬಲೇಶ್ವರ ಕ್ಷೇತ್ರದ ಕಾತ್ರಾಳ, ನಂದ್ಯಾಳ, ಅರ್ಜುಣಗಿ ಗ್ರಾಮಗಳಲ್ಲಿ ಬಾಂದಾರಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಬಾಂದಾರ ನಿರ್ಮಿಸುವ ಯೋಜನೆಗೆ ಸಚಿವ ಎಂಬಿ ಪಾಟೀಲ್ ಚಾಲನೆ 

ಬಳಿಕ ಮಾತನಾಡಿದ ಎಂ.ಬಿ ಪಾಟೀಲ್, ಈ ಹಿಂದೆ 2024ರಲ್ಲಿ ಬಿಎಲ್ಡಿಇ ಸಂಸ್ಥೆಯ ನೇತೃತ್ವದಲ್ಲಿ ಕೆರೆಗಳಿಗೆ ನೀರು ಭರಿಸುವ ಕಾರ್ಯ ಮಾಡಲಾಗಿತ್ತು. ನಂತರ ರಾಜ್ಯದ ನಾಲ್ಕೈದು ಸಾವಿರ ಕೆರೆಗಳಿಗೆ ನೀರು ಭರಿಸಿದ್ದೇವೆ. ಕೆರೆಗಳಿಗೆ ನೀರು ಹರಿಸಿದ ಕಾರಣ ಅಂತರ್ಜಲ ಹೆಚ್ಚಿದೆ. ಇದರ ಮಧ್ಯೆ ಜಿಲ್ಲೆಯ ವಿವಿಧ ಏತ ನೀರಾವರಿ ಯೋಜನೆಯ ಕಾಲುವೆಯ ಭಾಗದಲ್ಲಿ 176 ಹಳ್ಳಗಳು ಬರುತ್ತದೆ. ಈ ಕಾಲುವೆಗಳ ಮೂಲಕ ಬರುವ 176 ಹಳ್ಳಗಳಲ್ಲಿ 1 ಮೀಟರ್ ಎತ್ತರದ ಚೆಕ್ ಡ್ಯಾಂ ನಿರ್ಮಾಣ ಮಾಡಲು ಇಂದು ಭೂಮಿ ಪೂಜೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಕಚೇರಿ ಸಮಯ ಬದಲಾವಣೆ: ವಿಜಯಪುರ ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಹೇಳೋರಿಲ್ಲ, ಕೇಳೋರಿಲ್ಲ

ಈ ಸರಣಿ ಬಾಂದಾರಗಳಿಂದ ನೀರು ನೆಲದಲ್ಲಿ ಇಂಗುವ ಮೂಲಕ ಅಂತರ್ಜಲ ಹೆಚ್ಚಲು ಕಾರಣವಾಗುತ್ತದೆ. ಇದರಿಂದ ಕೊಳವೆ ಬಾವಿ ಹಾಗೂ ಬಾವಿಗಳ ನೀರಿನ ಸೆಲೆ ಹೆಚ್ಚುತ್ತವೆ. ಮಳೆಗಾಲದಲ್ಲಿ ಕೃಷ್ಣಾನದಿಯಿಂದ ಸಮುದ್ರಕ್ಕೆ 700 ಟಿಎಂಸಿ ನೀರು ಹರಿದು ವ್ಯರ್ಥವಾಗಿ ಹೋಗುತ್ತದೆ. ಇದೇ ನೀರನ್ನು ಹಳ್ಳಗಳಿಗೆ ಹರಿಸಿ ಇಂಗಿಸುವ ಯೋಜನೆ ಇದಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಯೋಜನೆಯಿಂದ ಯಾರಿಗೆಲ್ಲಾ ಅನುಕೂಲ?

ಈ ಯೋಜನೆಯಿಂದ ಜಿಲ್ಲೆಯ 400ಕ್ಕೂ ಅಧಿಕ ಗ್ರಾಮಗಳ ಜನರಿಗೆ, ರೈತರಿಗೆ ಮತ್ತು ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಲಿದೆ. ಪ್ರಾಯೋಗಿವಾಗಿ 10 ಕೋಟಿ ರೂ.ನ 6 ಪ್ಯಾಕೇಜ್​ಗಳನ್ನು ಇಂದು ಆರಂಭಿಸಲಾಗಿದೆ. ಕೆರೆಗಳಿಗೆ ನೀರು ಹರಿಸಲಾಗಿದೆ. ಇದರ ಜೊತೆಗೆ ಹಳ್ಳಗಳಲ್ಲಿ ನೀರು ಹರಿಸಿದರೆ ದೇಶದಲ್ಲೇ ಅಂತರ್ಜಲದ ಮಾದರಿಯ ಜಿಲ್ಲೆಯಾಗಲಿದೆ. ಆ ಮೂಲಕ ದೇಶಕ್ಕೆ ನಾವು ಮಾದರಿಯಾಗುತ್ತೇವೆ ಎಂದರು.

ಈಗಾಗಲೇ ವಿಜಯಪುರ ಜಿಲ್ಲೆಯ 200ಕ್ಕೂ ಅಧಿಕ ಕೆರೆಗಳಿಗೆ ನೀರು ಭರಿಸಲಾಗಿದೆ. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಈ ಯೋಜನೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಅನುಕೂಲವಾಗಿದೆ. ಬಿರು ಬೇಸಿಗೆಯಲ್ಲಿ ಯಾವುದೇ ನೀರಿನ ಸಮಸ್ಯೆ ಉಂಟಾಗಿಲ್ಲ. ಇದರ ಮಧ್ಯೆ ಜಿಲ್ಲೆಯ 176 ಹಳ್ಳಗಳಲ್ಲಿ, ಮಳೆಗಾಲದಲ್ಲಿ ನೀರು ಹರಿಸಿ ಆ ನೀರು ಅಂತರ್ಜಲವಾಗಿ ಪರಿವರ್ತನೆಯಾಗುವಂತೆ ಮಾಡಲು ಬಾಂದಾರಗಳ ನಿರ್ಮಾಣ ಮಾಡುತ್ತಿರೋದು ವಿಶೇಷ ಕಾಮಗಾರಿ ಆಗಿದೆ.

ಸಚಿವ ಎಂ.ಬಿ ಪಾಟೀಲ್​ ಕಾರ್ಯ ಮೆಚ್ಚುಗೆ

ಜಿಲ್ಲೆಯಲ್ಲಿ ಹಳ್ಳಗಳಿಗೆ ಕಾಲುವೆಗಳ ಮೂಲಕ ಮಳೆಗಾಲದಲ್ಲಿ ನೀರು ಹರಿಸಿ ಅದನ್ನು ಇಂಗಿಸುವುದಕ್ಕೆ ಬಾಂದಾರ ನಿರ್ಮಾಣ ಮಾಡುತ್ತಿರೋದಕ್ಕೆ ಜಿಲ್ಲೆಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಸಚಿವ ಎಂ.ಬಿ ಪಾಟೀಲ್​ ಕಾರ್ಯ ಮೆಚ್ಚುಗೆಗೆ ಪಾತ್ರವಾದುದು ಎಂದು ಹೇಳಿದ್ದಾರೆ. ಬಾಂದಾರಗಳ ನಿರ್ಮಾಣ ರೈತರ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಬಬಲೇಶ್ವರ ಪಟ್ಟಣದ ರೈತರಾದ ವಿ.ಎಸ್ ಪಾಟೀಲ್​​ ಹೇಳಿದ್ದಾರೆ.

ಇದನ್ನೂ ಓದಿ: ವಿಜಯಪುರ: ಅನ್ನದಾತರ ಪಾಲಿಗೆ ಕಂಟಕವಾದ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ; ಏಕೆ?

ಸದ್ಯ ಬಬಲೇಶ್ವರ ಕ್ಷೇತ್ರದಲ್ಲಿ ಆರಂಭವಾದ ಆರು ಪ್ಯಾಕೇಜ್​ಗಳಲ್ಲಿ ಬಾಂದಾರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ 9 ತಿಂಗಳಲ್ಲಿ ಬಾಂದಾರ ನಿರ್ಮಾಣ ಕಾಮಗಾರಿಯನ್ನು ಮುಕ್ತಾಯ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯ ಜಿಲ್ಲೆಯ ಹಳ್ಳಗಳಿಗೆ ಬಾಂದಾರ ನಿರ್ಮಾಣ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಕಾಮಗಾರಿ ಶೀಘ್ರವಾಗಿ ಮುಗಿಯಲಿ ಎಂಬುವುದು ಜನರ ಆಶಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us