ಶೀಘ್ರದಲ್ಲೇ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಸ್ಥಾಪನೆ; ಪೀಠಾಧಿಪತಿಯಾಗಿ ಗದ್ದುಗೆ ಏರಲಿರುವ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ

ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಮೂರನೇ ಪೀಠ ಸ್ಥಾಪನೆ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಂತೆ ಪರ ವಿರೋಧ ಹೇಳಿಕೆಗಳು ಕೇಳಿ ಬಂದವು. ವಿವಿಧ ಮಠಾಧೀಶರು, ಸಚಿವರು, ಶಾಸಕರು, ಇತರೆ ರಾಜಕಾರಣಿಗಳು ಪರ ವಿರೋಧ ಹೇಳಿಕೆಗಳನ್ನು ನೀಡಿದರು.

ಶೀಘ್ರದಲ್ಲೇ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಸ್ಥಾಪನೆ; ಪೀಠಾಧಿಪತಿಯಾಗಿ ಗದ್ದುಗೆ ಏರಲಿರುವ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ
ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ
Follow us
TV9 Web
| Updated By: sandhya thejappa

Updated on: Jan 24, 2022 | 4:21 PM

ವಿಜಯಪುರ: ರಾಜ್ಯದ ಬಹು ಸಂಖ್ಯಾತ ಸಮುದಾಯಗಳ ಪೈಕಿ ಪಂಚಮಸಾಲಿ ಸಮುದಾಯ (Panchamasali Community) ಪ್ರಬಲ ಸಮುದಾಯ. ವೀರಶೈವ ಲಿಂಗಾಯತ (Veerashaiva Lingayat) ಸಮುದಾಯ ಒಳಪಂಗಡಗಳಲ್ಲಿಯೇ ಬರುವ ಪಂಚಮಸಾಲಿ ಸಮುದಾಯ ಬಹುಸಂಖ್ಯಾತರನ್ನು ಹೊಂದಿರುವ ಸಮಾಜ. ಈಗಾಗಲೇ ಪಂಚಮಸಾಲಿ ಸಮುದಾಯಕ್ಕೆ ಎರಡು ಪೀಠಗಳಿವೆ. ಆದರೆ ಇದೀಗ ಮೂರನೇ ಪೀಠ ಸ್ಥಾಪನೆಯಾಗುವುದು ಬಹುತೇಕ ಖಚಿತವಾಗಿದೆ. ಕಳೆದ 2021 ರ ಜನವರಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಕೆಂದು ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಇತರೆ ಸ್ವಾಮೀಜಿಗಳು ಹಾಗೂ ಪಕ್ಷಾತೀತವಾಗಿ ರಾಜಕಾರಣಿಗಳು ಹೋರಾಟ ಮಾಡಿದ್ದರು. ಕೂಡಲಸಂಗಮದಿಂದ ರಾಜಧಾನಿ ಬೆಂಗಳೂರುವರೆಗೆ ಪಾದಯಾತ್ರೆ ನಡೆದಿತ್ತು. ಬಳಿಕ ಅಂದಿನ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಚಿಂತನೆ ನಡೆಸುತ್ತೇವೆ ಅಂತ ಭರವಸೆ ನೀಡಿದ್ದ ಕಾರಣ ಬೆಂಗಳೂರಿನಲ್ಲಿ ಸಮಾವೇಶ ಮಾಡುವ ಮೂಲಕ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿತ್ತು.

ಪಂಚಮಸಾಲಿ ಸಮಾಜದ ಸಮಾವೇಶದಲ್ಲಿ ಕೆಲ ಸ್ವಾಮೀಜಿಗಳು, ಆಡಳಿತ ಪಕ್ಷದ ಸಚಿವರು, ರಾಜಕಾರಣಿಗಳು ಅನುಪಸ್ಥಿತಿಯಾಗಿದ್ದರು. ಇದು ಇಡೀ ಹೋರಾಟದಲ್ಲಿ ಬಿರುಕು ಮೂಡಿತ್ತು. ಇದರ ಬೆನ್ನಲ್ಲೇ 50 ರಿಂದ 60 ವಿವಿಧ ಮಠಾಧೀಶರ ನೇತೃತ್ವದಲ್ಲಿ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಮುನ್ನಲೆಗೆ ಬಂದು ವಿವಿಧೆಡೆ ಸಭೆಗಳನ್ನು ನಡೆಸಿ ಹರಿಹರ ಹಾಗೂ ಕೂಡಲಸಂಗಮ ಪೀಠಗಳಿಗಿಂತ ವಿಭಿನ್ನ ಪೀಠವನ್ನು ಸ್ಥಾಪನೆ ಮಾಡುವ ವಿಚಾರದ ಬಗ್ಗೆ ಬೀಜ ಬಿತ್ತಿದ್ದರು.

ಎರಡೂ ಪೀಠಗಳು ಸಮಾಜದ ಜನರ ಕುರಿತು ಕೆಲಸ ಮಾಡುತ್ತಿಲ್ಲ. ನಮ್ಮ ಸಮಾಜದ ಜನರಿಗೆ ಧಾರ್ಮಿಕ ಸಂಸ್ಕಾರ ಕೇಂದ್ರಗಳ ಸ್ಥಾಪನೆ, ಸಮುದಾಯದ ಭಕ್ತರಿಗೆ ಧಾರ್ಮಿಕ ಲಿಂಗ ನಿಷ್ಟೆ, ದೀಕ್ಷೆ ಸೇರಿದಂತೆ ಇತರೆ ಧಾರ್ಮಿಕ ಮನೋಭಾವ ಬೆಳಸಲು ಮೂರನೇ ಪೀಠ ಸ್ಥಾಪನೆ ಮಾಡಲಾಗುತ್ತದೆ ಎಂದು ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಹೇಳಿತು. ಜೊತೆಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಬಳಿ ಮೂರನೇ ಪೀಠಕ್ಕಾಗಿ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಹೆಸರಲ್ಲಿ ಸ್ವಲ್ಪ ಭೂಮಿಯನ್ನೂ ಖರೀದಿ ಮಾಡಲಾಗಿದೆ. ಇದೇ ಮುಂಬರುವ ಫೆಬ್ರವರಿ 14 ರಂದು ಮೂರನೇ ಪೀಠದ ಪೀಠಾಧ್ಯಕ್ಷರ ಪೀಠಾರೋಹಣ ನೆರವೇರಲಿದೆ ಎಂದು ಘೋಷಣೆ ಮಾಡಲಾಗಿದೆ.

ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾದ ಮೂರನೇ ಪೀಠ: ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಮೂರನೇ ಪೀಠ ಸ್ಥಾಪನೆ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಂತೆ ಪರ ವಿರೋಧ ಹೇಳಿಕೆಗಳು ಕೇಳಿ ಬಂದವು. ವಿವಿಧ ಮಠಾಧೀಶರು, ಸಚಿವರು, ಶಾಸಕರು, ಇತರೆ ರಾಜಕಾರಣಿಗಳು ಪರ ವಿರೋಧ ಹೇಳಿಕೆಗಳನ್ನು ನೀಡಿದರು. ಇದರ ಮದ್ಯೆ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟ ನಮ್ಮ ಮೂರನೇ ಪೀಠಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಜೊತೆಗೆ ಮೂರು ಪೀಠ ಮಾತ್ರವಲ್ಲ ಐದು ಪೀಠಗಳಾದರೂ ನಮ್ಮ ಅಭ್ಯಂತರವಿಲ್ಲ ಅಂತ ಹೇಳಿದೆ. ಆದರೆ ಸದ್ಯ ಆರೋಪ ಪ್ರತ್ಯಾರೋಪಗಳು ಮಾತ್ರ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ.

ಮೂರನೇ ಪೀಠಾಧಿಪತಿಯಾಗಿ ಷ. ಭ್ರ. ಡಾ ಮಹಾದೇಶ ಶಿವಾಚಾರ್ಯ ಸ್ವಾಮೀಜಿ: ಎರಡು ಪೀಠಗಳ ಹೊರತಾಗಿಯೂ ಪಂಚಮಸಾಲಿ ಸಮುದಾಯದ ಮೂರನೇ ಪೀಠ ಮುಂಬರುವ ಫೆಬ್ರವರಿ 14 ಕ್ಕೆ ಅಸ್ತಿತ್ವಕ್ಕೆ ಬರಲಿದೆ. ರಾಜ್ಯದ ಪಂಚಮಸಾಲಿ ಸಮುದಾಯದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಜಮಖಂಡಿ (ಆಲಗೂರ) ಪೀಠಾಧಿಪತಿಯಾಗಿ ಷ. ಭ್ರ. ಡಾ ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಗದ್ದುಗೆ ಏರಲಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯವರಾದ ಡಾ. ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಸದ್ಯ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಭ್ರಹನ್ಮಠದ ಪೀಠಾಧಿಪತಿಯಾಗಿದ್ದಾರೆ. ಈ ಮಠದ ಉಸ್ತುವಾರಿ ಜೊತೆಗೆ ಡಾ. ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿಗಳಾಗಿದ್ದಾರೆ.

ಡಾ ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಹಿನ್ನಲೆ: ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ಮುತ್ತುರಾಜ್ ಸಂಕಣ್ಣನವರ ಹಾಗೂ ನೀಲಾಂಬಿಕಾ ದಂಪತಿಯ ಎರಡನೇ ಮಗುವಾಗಿ 1948 ರ ಜುಲೈ 11 ರಂದು ಜನಿಸಿದ್ದಾರೆ. ಸ್ವಾಮೀಜಿಗಳ ಪೂರ್ವಾಶ್ರಮದಲ್ಲಿ ಓರ್ವ ಹಿರಿಯ ಸಹೋದರಿ, ಓರ್ವ ತಮ್ಮ ಹಾಗೂ ಮೂವರು ಕಿರಿಯ ಸಹೋದರಿಯರಿದ್ದಾರೆ. ಇವರ ತಂದೆ ಮುತ್ತುರಾಜ್ ಆಗಿನ ಕಾಲದಲ್ಲಿ ಲೊಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನೀಯರ್ ಆಗಿದ್ದರು. ತಾಯಿ ಗೃಹಿಣಿಯಾಗಿದ್ದರು. ಇವರು 1 ರಿಂದ 8 ನೇ ತರಗತಿಯವರೆಗೆ ಬಾಗಲಕೋಟೆ ಜಿಲ್ಲೆ ಬಾದಮಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ 9 ರಿಂದ 10 ತರಗತಿಯನ್ನು ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಹೈಸ್ಕೂಲ್ನಲ್ಲಿ ಪೂರೈಸಿದರು. ಬಳಿಕ ಬಿಎಲ್ಡಿಇ ಸಂಸ್ಥೆಯ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಿಂದ ಹಿಡಿದು ಬಿಎಸ್ಸಿ ಪದವಿಯವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ.

ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಭ್ರಹನ್ಮಠದ ಉತ್ತರಾಧಿಕಾರಿಯಾಗಿ ಮಹಾದೇವ ಶಿವಾಚಾರ್ಯ ಸ್ವಾಮೀಜಿ: ಪದವಿ ಪಡೆದ ಬಳಿಕ ಸ್ವಾಮೀಜಿ ಅವರ ಪೂರ್ವಾಶ್ರಮದ ಎಲ್ಲಾ ಸಂಬಂಧಗಳನ್ನು ತೊರೆದು 1974 ರ ಜುಲೈ 11 ರಂದು ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಭ್ರಹನ್ಮಠದ ಉತ್ತರಾಧಿಕಾರಿಯಾಗಿ ಪಟ್ಟವನ್ನು ಏರಿದರು. ಅಂದಿನ ಮಠದ ಪೀಠಾಧಿಪತಿಯಾಗಿದ್ದ ಶ್ರೀ ಚತುರ್ಥ ಶಾಂತವೀರ ಶಿವಾಚಾರ್ಯ ಸ್ವಾಮೀಜಿಗಳ ಉತ್ತರಾಧಿಕಾರಿಯಾದರು. 1979 ರಿಂದ 1979 ರವರೆಗೆ ಅಂದಿನ ಮಠದ ಪೀಠಾಧಿಪತಿಯಾಗಿದ್ದ ಶ್ರೀ ಚತುರ್ಥ ಶಾಂತವೀರ ಶಿವಾಚಾರ್ಯ ಸ್ವಾಮೀಜಿಯವರ ಸೇವೆ ಮಾಡಿದರು. ಅವರು 1979 ರಲ್ಲಿ ಲಿಂಗೈಕ್ಯರಾದ ಬಳಿಕ ಹೆಚ್ಚಿನ ವೈದಿಕಾಭ್ಯಾಸ ಮಾಡಲು ಕಾಶಿಗೆ ತೆರಳಿದರು. 1980 ರಿಂದ ಮುರು ವರ್ಷಗಳ ಕಾಲ ಕಾಶಿ ವಿದ್ಯಾಪೀಠದಲ್ಲಿ ಸಂಸ್ಕೃತ ಭಾಷೆಯಲ್ಲಿ ಬಿಎ ಪದವಿ ಪಡೆದರು. ನಂತರ ಕಾಶಿಯ ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಂದರೆ ಈಗಿನ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದಲ್ಲಿ ವೇದಾಂತಾಚಾರ್ಯ (ಎಂಎ ಪದವಿ) ಪಡೆದರು. ಬಳಿಕ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಕ್ತಿ ವಿಶಿಷ್ಟಾದ್ವೈತ ಸಿದ್ದಾಂತ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದರು.

ಸದ್ಯ ಪಂಚಮಸಾಲಿ ಮೂರನೇ ಪೀಠದ ಪೀಠಾಧಿಪತಿಗಳಾಗಿ ಗದ್ದುಗೆ ಏರಲಿರುವ ಷ. ಭ್ರ. ಡಾ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮೂರನೇ ಪೀಠ ರಾಜಕೀಯ ರಹಿತವಾಗಿರುವಂತದ್ದು. ಯಾವುದೇ ರಾಜರಾಣಿಯ ಮುಖವಾಡ ಪೀಠವಲ್ಲ. ಪಂಚಮಸಾಲಿ ಸಮುದಾಯದ ಜನರಿಗೆ ವೈದಿಕಾರಚಣೆ, ಧಾರ್ಮಿಕ ಸಂಸ್ಕಾರ ಕೇಂದ್ರಗಳ ಸ್ಥಾಪನೆಯನ್ನು ಮೂರನೇ ಪೀಠದಿಂದ ಮಾಡಲಾಗುತ್ತದೆ. ಸಮುದಾಯದ ಜನರಿಗೆ ಧಾರ್ಮಿಕ ಲಿಂಗ ನಿಷ್ಟೆ, ದೀಕ್ಷೆ ಸೇರಿದಂತೆ ಇತರೆ ಧಾರ್ಮಿಕ ಮನೋಭಾವ ಬೆಳಸಲು ಮೂರನೇ ಪೀಠ ಕೆಲಸ ಮಾಡಲಿದೆ ಎಂಬುದು ನಿಯೋಜಿತ ಪೀಠಾಧಿಪತಿಗಳ ಮಾತಾಗಿದೆ.

ವರದಿ: ಅಶೋಕ ಯಡಳ್ಳಿ

ಇದನ್ನೂ ಓದಿ

ಬಾಗಲಕೋಟೆ: ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಆಯ್ಕೆ

‘ಇದು ಪ್ರಮೋಷನ್​ ಗಿಮಿಕ್​ ಅಲ್ಲ’; ‘ಜೇಮ್ಸ್​’ ಚಿತ್ರದಲ್ಲಿ ನಟಿಸಿದ ಬಗ್ಗೆ ರಾಘಣ್ಣ ಮಾತು