ವಿಜಯಪುರ: ಸಾವಯವ ಪದ್ಧತಿ ಮೂಲಕ ಬಾಳೆ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ರೈತ
ಅನೇಕ ಕಾರಣಗಳಿಂದ ಕೃಷಿ ಕ್ಷೇತ್ರ ಬಿಟ್ಟು ಇತರೆ ಉದ್ಯೋಗಗಳತ್ತ ಮುಖ ಮಾಡಿದವರು ಇದೀಗ ಮತ್ತೆ ಕೃಷಿಯತ್ತ ಮುಖ ಮಾಡುವ ಬಗ್ಗೆ ಅಲ್ಲಲ್ಲಿ ವರದಿಗಳನ್ನು ನೋಡಿರುತ್ತೇವೆ. ಇದೀಗ ಅಂಥವರಿಗೆ ವಿಜಯಪುರದ ರೈತರೊಬ್ಬರು ಪ್ರೇರಣೆಯಾಗಿದ್ದಾರೆ. ಅದರಲ್ಲೂ ಸಾವಯುವ ಪದ್ಧತಿಯಲ್ಲಿ ಬಾಳೆ ಬೆಳೆದು ಬದುಕನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ. ವಿವರಗಳನ್ನು ತಿಳಿಯಲು ಮುಂದೆ ಓದಿ.
ವಿಜಯಪುರ, ಜುಲೈ 15: ರಾಸಾಯನಿಕ ರಸಗೊಬ್ಬರ ಬಳಸಿ ಬೆಳೆದ ಹಾಗೂ ವಿಷಯುಕ್ತ ಆಹಾರವೇ ಇಂದು ಹೆಚ್ಚಾಗಿದೆ. ಬೆಳೆಗಳನ್ನು ಬೆಳೆಯಲು ರಾಸಾಯನಿಕ ಗೊಬ್ಬರ, ಔಷಧಿಗಳನನ್ನು ಯಥೇಚ್ಛವಾಗಿ ಬಳಸಿ ನೆಲ, ಜಲ ಹಾಗೂ ವಾಯುವನ್ನೂ ಸಹ ವಿಷಕಾರಿಯಾಗಿ ಮಾಡಿದ್ದೇವೆ. ಇದೇ ಕಾರಣದಿಂದ ಇದೀಗ ಸಾವಯವ ಬೆಳೆಗಳಿಗೆ ಬೇಡಿಕೆ ಬರುತ್ತಿದೆ. ಹಿಂದಿನ ಕಾಲದಂತೆ ಸಾವಯವ ಪದ್ಧತಿಯ ಮೂಲಕ ಬೆಳೆಯುವ ಹಣ್ಣು, ತರಕಾರಿ, ಧವಸ, ಧಾನ್ಯಗಳಿಗೆ ಬೇಡಿಕೆ ಬರುತ್ತಿವೆ. ಕೆಲ ದೇಶಗಳಲ್ಲಿ ಸಾವಯವ ಪದ್ಧತಿ ಮೂಲಕ ಬೆಳೆಯವ ಹಣ್ಣು, ತರಕಾರಿ, ಧವಸ ಧಾನ್ಯಗಳಿಗೆ ಭಾರಿ ಬೇಡಿಕೆಯಿದೆ. ಇದೀಗ ವಿಜಯಪುರದ ರೈತರೊಬ್ಬರು ಸಾವಯವ ಪದ್ಧತಿ ಮೂಲಕ ಬಾಳೆ ಹಣ್ಣುಗಳನ್ನು ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಕೆ ಮಾಡುತ್ತಿದ್ದಾರೆ.
ವಿಜಯಪುರದ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದ ಈರಣ್ಣ ಹಳ್ಳಿ ಸಾವಯವ ಪದ್ದತಿ ಮೂಲಕ ಬಾಳೆ ಬೆಳೆದು ಸೈ ಎನಿಸಿಕೊಂಡ ರೈತ. 2008 ರಿಂದಲೂ ಬಾಳೆ ಕೃಷಿಯನ್ನು ಮಾಡಿ ಅಧಿಕ ಲಾಭ ಮಾಡಿಕೊಂಡಿರುವ ಈರಣ್ಣ ಈ ಬಾರಿ 12 ಎಕರೆ ಸಾವಯವ ಪದ್ಧತಿ ಮೂಲಕ ಬಾಳೆ ಬೆಳೆಯನ್ನು ಬೆಳೆದಿದ್ದಾರೆ. ಈ ಬಾರಿ ಮಹಾರಾಷ್ಟ್ರದ ಕನ್ಹೇರಿ ಮಠದ ಕಾಡ ಸಿದ್ದೇಶ್ವರ ಸ್ವಾಮೀಜಿಗಳ ಪ್ರೇರಣೆಯಂತೆ 12 ಎಕರೆ ಭೂಮಿಯಲ್ಲಿ ಸಾವಯವ ಪದ್ಧತಿ ಮೂಲಕ ಬಾಳೆ ಬೆಳೆ ಬೆಳೆದ್ದಾರೆ.
ಬಾಳೆ ಬೆಳೆಯಲು ಬಳಸಿದ ಸಾವಯವ ಗೊಬ್ಬರ, ಔಷಧಗಳೇನು?
ರಾಸಾಯನಿಕ ಗೊಬ್ಬರ ಔಷಧಗಳನ್ನು ಉಪಯೋಗ ಮಾಡಿ ಬೆಳೆದ ಬಾಳೆಗಿಂತ ಈರಣ್ಣ ಹಲ್ಳಿಯವರ ಜಮೀನಿನಲ್ಲಿರೋ ಬಾಳೆ ಭರಪೂರವಾಗಿ ಬೆಳೆದು ನಿಂತಿದೆ. 12 ಎಕರೆ ಬಾಳೆ ಬೆಳೆಯೋಕೆ ಇವರು 5 ರಿಂದ 6 ಲಕ್ಷ ಖರ್ಚು ರೂಪಾಯಿ ಖರ್ಚು ಮಾಡಿದ್ದಾರೆ. ಗೋಕುಪಾಮೃತ, ಗೋಮೂತ್ರ, ಜೀವಾಮೃತ, ಬಯೋ ಡೈಜಿಸ್ಟ್, ಎರೆಹುಳು ಜಲ ಮಾತ್ರ ಬಳಕೆ ಮಾಡಿ ಬೆಳೆದಿದ್ದಾರೆ. ವಿವಿಧ ವ್ಯಾಪಾರಸ್ಥರು 22 ರಿಂದ 25 ರೂಪಾಯಿಗೆ ಕೆಜಿ ಹಣ್ಣು ಖರೀದಿಗೆ ಮುಗಿ ಬಿದ್ದಿದ್ದಾರೆ. ಖರ್ಚು ವೆಚ್ಚಗಳನ್ನು ತೆಗೆದು ಇವರು ನಿವ್ವಳ 60 ರಿಂದ 70 ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದಾರೆ.
25 ಎಕರೆ ಪ್ರದೇಶದಲ್ಲಿ ಬಾಳೆ ಕೃಷಿ
2008 ರಲ್ಲಿ ಇವರು ಇತರೆ ರೈತರಂತೆ ಬಾಳೆ ಬೆಳೆದು 9 ಲಕ್ಷ ರೂಪಾಯಿ ಗಳಿಕೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಕನಿಷ್ಟವೆಂದರೂ 25 ಎಕರೆ ಬಾಳೆ ಬೆಳೆಯುತ್ತಿದ್ದಾರೆ. ಈ ಬಾರಿ 12 ಎಕರೆ ಅಪ್ಪಟವಾಗಿ ಸಾವಯವ ಪದ್ಧತಿಯಲ್ಲಿ ಬಾಳೆ ಹಣ್ಣನ್ನು ಬೆಳೆದಿದ್ದಾರೆ. ಸುಮಾರು 400 ಟನ್ ಫಸಲು ಬರುತ್ತದೆ ಎಂಬ ಲೆಕ್ಕವಿದೆ.
ಇದನ್ನೂ ಓದಿ: ಬಂಜಾರ ಸಮುದಾಯದಲ್ಲಿ ಆಷಾಢ ಮಾಸದಲ್ಲಿ ನಡೆಯುತ್ತೆ ‘ಸಿತಲಾ ಹಬ್ಬ’; ಏನಿದರ ವಿಶೇಷತೆ?
ಇರಾನ್, ಇರಾಕ್ಗೂ ರಫ್ತು
ಆಂದ್ರಪ್ರದೇಶದ ವ್ಯಾಪಾರಸ್ಥರ ಮೂಲಕ ಇರಾನ್, ಇರಾಕ್ ಸೇರಿದಂತೆ ಇತರೆ ದೇಶಗಳಿಗೆ ಬಾಳೆ ಹಣ್ಣನ್ನು ರಪ್ತು ಮಾಡುತ್ತಿದ್ದಾರೆ. ಸಾವಯವ ಪದ್ಧತಿಯ ಇವರ ತೋಟದಲ್ಲಿ ಬೆಳೆದ ಬಾಳೆ ಫಸಲನ್ನು ಕಂಡು ಇತರೆ ರೈತರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟು ಸಮೃದ್ಧವಾದ ಫಸಲು ಬಂದಿದೆ. ಈರಣ್ಣ ಹಳ್ಳಿ ತಾನಷ್ಟೇ ಬಾಳೆ ಬೆಳೆದು ಹಣ ಗಳಿಕೆ ಮಾಡುತ್ತಿದ್ದಾರೆ. ಸುತ್ತಮುತ್ತಲ ಗ್ರಾಮಗಳ ಜನರು ಬಾಳೆ ಕೃಷಿ ಮಾಡಲು ಆಸಕ್ತಿ ಹೊಂದಿದ್ದರೆ, ಅವರಿಗೆ ಬಾಳೆ ಸಸಿಗಳನ್ನು ತರಿಸಿಕೊಡುವುದರಿಂದ ಹಿಡಿದು ಮಾರುಕಟ್ಟೆಯಲ್ಲಿ ಮಾರಾಟ ಮಾಡುವರೆಗೂ ಅವರಿಗೆ ಸಹಾಯ ಮಾಡುತ್ತಾರೆ. ಬಾಳೆ ಬೆಳೆಯುವಾಗ ಏನಾದರೂ ಸಮಸ್ಯೆಯಾಗಿದ್ದರೆ ಸ್ವತಃ ರೈತರ ಜಮೀನುಗಳಿಗೆ ತೆರಳಿ ಸಮಸ್ಯೆ ಬಗೆ ಹರಿಸಿಕೊಡುತ್ತಾರೆ. ಹೀಗಾಗಿ ಈ ಭಾಗದ ರೈತರು ಅಷ್ಟೇಯಲ್ಲಾ ಇತರೆ ಜಿಲ್ಲೆಗಳ ರೈತರು ಹಾಗೂ ನೆರೆಯ ಮಹಾರಾಷ್ಟ್ರದ ರೈತರು ಇಲ್ಲಿ ಆಗಮಿಸಿ ಈರಣ್ಣ ಹಳ್ಳಿಯವರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಹೋಗುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ