ಮನೆಗೆಲಸ ಮಾಡು, ವೃದ್ಧ ಪೋಷಕರನ್ನು ನೋಡಿಕೋ ಎಂದು ಪತ್ನಿಗೆ ಆರ್ಡರ್ ಮಾಡುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳು ಒಪ್ಪಿಗೆಯಿಂದ ಶುರುವಾಗು ಪವಿತ್ರವಾದ ಸಂಬಂಧವೇ ಹೊರತು, ಹೆಂಡತಿಯನ್ನು ನಿಯಂತ್ರಿಸುವ ಅಥವಾ ಆಕೆಯ ಮೇಲೆ ದರ್ಪ ಮೆರೆಯುವ ಲೈಸೆನ್ಸ್ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪೊಂದನ್ನ ನೀಡಿದೆ. ಅಲ್ಲದೇ ಪತ್ನಿ ಅಡುಗೆ ಕೆಲಸ ಮಾಡಬೇಕು, ಅನುಮತಿಯಿಲ್ಲದೆ ತವರು ಮನೆಗೆ ಹೋಗಬಾರದು ಎಂಬ ಪತಿಯ ಮನಸ್ಥಿತಿಯನ್ನು ಒಪ್ಪಲಾಗದು ಎಂದು ಅಭಿಪ್ರಾಯಪಟ್ಟಿದೆ. ಹಾಗಾದ್ರೆ, ಏನಿದು ಕೇಸ್? ಕೋರ್ಟ್ ಹೀಗೆ ಹೇಳಿದ್ಯಾಕೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, (ಆಗಸ್ಟ್ 25): ಪತಿ (Husband) ಸೇರಿದಂತೆ ಯಾರೂ ಮಹಿಳೆಗೆ (Women) ಮನೆಗೆಲಸ ಹಾಗೂ ಪೋಷಕರನ್ನು ನೋಡಿಕೊಳ್ಳುವಂತೆ ಬಲವಂತ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ತೀರ್ಪು ನೀಡಿದೆ. ಪತ್ನಿ ಮತ್ತು ಮಗಳಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲ್ಲಾಕೂರ್ ಸುಮಲತಾ ಅವರಿದ್ದ ಏಕಸದಸ್ಯ ಹೈಕೋರ್ಟ್ ಪೀಠ ಈ ತೀರ್ಪು ಕೊಟ್ಟಿದೆ.
ಮಾಲೀಕ-ನೌಕರನ ಸಂಬಂಧದಂತಿದೆ
ಕೂಲಿ ಕೆಲಸ ಮಾಡುತ್ತಿದ್ದ ಪತಿ, ಪತ್ನಿ ತನ್ನ ಪೋಷಕರನ್ನು ನೋಡಿಕೊಳ್ಳುತ್ತಿಲ್ಲ ಹಾಗೂ ಸರಿಯಾಗಿ ಮನೆಗೆಲಸ ಮಾಡುತ್ತಿಲ್ಲ ಆರೋಪಿಸಿದ್ದ. ಇದಕ್ಕೆ ಪ್ರತಿಯಾಗಿ ಪತ್ನಿ, ಪತಿಯ ಜೂಜು ಮತ್ತು ಮದ್ಯಪಾನದ ಚಟ ಹಾಗೂ ಆತನ ಕುಟುಂಬಸ್ಥರಿಂದ ದೈಹಿಕ-ಮಾನಸಿಕ ಹಿಂಸೆ ಅನುಭವಿಸಿದ್ದಾಗಿ ಪ್ರತ್ಯಾರೋಪ ಮಾಡಿದ್ದಾಳೆ. ಈ ಆರೋಪ ಪ್ರತ್ಯಾರೋಪವನ್ನು ಆಲಿಸಿದ ಕೋರ್ಟ್, ಪತಿಯ ವಾದವನ್ನು ತಳ್ಳಿಹಾಕಿದ್ದು, ಆತನ ನಡವಳಿಕೆ ಮಾಲೀಕ-ನೌಕರನ ಸಂಬಂಧದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಅಂತಿಮವಾಗಿ ಪತ್ನಿಗೆ ಮಾಸಿಕ 9 ಸಾವಿರ ರೂ. ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಪತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ: ಮಹಿಳಾ PSI ಅಶ್ಲೀಲ ವಿಡಿಯೋ ಪ್ರಕರಣ: ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೋರ್ಟ್ ಮೆಟ್ಟಿಲೇರಿದ ಸಹಾಯಕ ಅಧೀಕ್ಷಕ
ಪತ್ನಿ ಕೇವಲ ಮನೆಗೆಲಸ ಮಾಡಿಕೊಂಡೇ ಇರ್ಬೇಕೆಂದೆನಿಲ್ಲ
ಪತ್ನಿಯಾದವಳು ಕೇವಲ ಮನೆಗೆಲಸ ಮಾಡಿಕೊಂಡೇ ಇರಬೇಕು ಎಂದು ನಿರೀಕ್ಷಿಸುವಂತಿಲ್ಲ ಎಂದ ಪೀಠ, ವೃದ್ಧ ಪೋಷಕರನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ಮಗ ಅಥವಾ ಮಗಳಿಗೆ ಸೇರಿದ್ದೇ ಹೊರತು ಅಳಿಯ ಅಥವಾ ಸೊಸೆಯದಲ್ಲ ಎಂದು ಅಭಿಪ್ರಾಯಪಟ್ಟಿದೆ. ವಿವಾಹವು ಮತ್ತೊಬ್ಬರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಇಚ್ಛೆಯನ್ನು ನಿಯಂತ್ರಿಸಲು, ಆಜ್ಞಾಪಿಸಲು ಅಥವಾ ಪ್ರಾಬಲ್ಯ ಸಾಧಿಸಲು ನೀಡುವ ಪರವಾನಗಿ ಅಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ತಿಳಿಸಿದೆ.
ಮಹಿಳೆಗೆ ಇಷ್ಟಬಂದಾಗ ತವರು ಮನೆಗೆ ಹೋಗುವ ಹಕ್ಕಿದೆ
ಮಹಿಳೆಗೆ ಇಷ್ಟಬಂದಾಗ ತವರು ಮನೆಗೆ ಭೇಟಿ ನೀಡುವ ಮೂಲಭೂತ ಹಕ್ಕಿದ್ದು, ಅದಕ್ಕಾಗಿ ಗಂಡನ ಮನೆಯ ಪ್ರತಿಯೊಬ್ಬರ ಅನುಮತಿ ಪಡೆಯಬೇಕೆಂಬ ನಿಯಮವನ್ನು ಒಪ್ಪಲಾಗದು . ಮಹಿಳೆಗೆ ತನ್ನ ವೃತ್ತಿಜೀವನ ಮತ್ತು ಆರ್ಥಿಕತೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಹಕ್ಕಿದ್ದು, ವಿಧೇಯತೆಯ ಆಧಾರದ ಮೇಲೆ ಪತ್ನಿಯ ನಿಷ್ಠೆಯನ್ನು ಅಳೆಯಲಾಗದು ಎಂದೂ ಪೀಠ ಅಭಿಪ್ರಾಯಪಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Tue, 25 August 26




