ಯಾದಗಿರಿ: ಜಾನುವಾರುಗಳನ್ನು ರಕ್ಷಿಸಲು ಚಿರತೆಗೆ ಆಹಾರವಾದ ಎರಡು ನಾಯಿಗಳು
ಯಾದಗಿರಿ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಜನರಲ್ಲಿ ಚಿರತೆ ದಾಳಿಗಳ ಭೀತಿ ಹೆಚ್ಚಳವಾಗಿದೆ. ಇದಕ್ಕೆ ಕಾರಣ, ನಾಲ್ಕು ದಿನಗಳಲ್ಲಿ ನಾಲ್ಕು ಸಾಕು ಪ್ರಾಣಿಗಳು ಚಿರತೆಗೆ ಬಲಿಯಾಗಿರುವುದು.
ಯಾದಗಿರಿ: ತಾಲೂಕಿನ ರಾಮಸಮುದ್ರದಲ್ಲಿ ಚಿರತೆ ಅಟ್ಟಹಾಸ ಹೆಚ್ಚಾಗುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ ನಾಲ್ಕು ಸಾಕು ಪ್ರಾಣಿಗಳು ಬಲಿಯಾಗಿವೆ. ರಾತ್ರಿಯಾದರೆ ಸಾಕು ರಾಮಸಮುದ್ರ ಗ್ರಾಮಕ್ಕೆ ಚಿರತೆ ಎಂಟ್ರಿ ಕೊಡುತ್ತಿದೆ. ಹೀಗಾಗಿ ಮನೆಯೊಳಗಿಂದ ಹೊರಗೆ ಕಾಲಿಡಲು ಜನರು ಭಯ ಪಡುವಂತಾಗಿದೆ. ರೈತರಾದ ನಾಗೇಂದ್ರರೆಡ್ಡಿ ಮತ್ತು ಮಲ್ಲಿಕಾರ್ಜುನಗೆ ಸೇರಿದ ಎರಡು ಜಾನುವಾರು (Leopard Attack On Cattles) ಬಲಿಯಾಗಿವೆ. ಅಲ್ಲದೆ, ಜಾನುವಾರುಗಳ ರಕ್ಷಣೆಗೆ ಮುಂದಾದ ಎರಡು ಸಾಕು ನಾಯಿಗಳು ಚಿರತೆ ದಾಳಿಗೆ (Leopard Attack On Dogs) ಜೀವ ಕಳೆದುಕೊಂಡಿವೆ. ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಗಳು ನಡೆದಿರುವುದರಿಂದ ಜಮೀನಿಗೆ ಹೋಗಲು ರಾಮಸಮುದ್ರ ಗ್ರಾಮದ ರೈತರು ಹಿಂದೇಟು ಹಾಕುತ್ತಿದ್ದಾರೆ. ಇನ್ನು, ಚಿರತೆ ದಾಳಿ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಆದರೆ ಈವರೆಗೆ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ, ಇದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಬೋನ್ ಇರಿಸಿ ಚಿರತೆ ಸೆರೆಹಿಡಿದು ಮುಂದೆ ನಡೆಯುವ ಜೀವ ಹಾನಿಯನ್ನು ತಪ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಗೊಂಗಡಿಪುರ ಗ್ರಾಮಕ್ಕೆ ನುಗ್ಗಿ ನಾಯಿ ಕೊಂದು ತಿಂದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಇನ್ನು ಚಿರತೆ ದಾಳಿ ಬಗ್ಗೆ ಮಾತನಾಡಿದ ಡಿಎಫ್ಒ ಕಾಜೊಲ್ ಪಾಟೀಲ್, ಯಾದಗಿರಿಯಲ್ಲಿ ಹಲವು ದಿನಗಳಿಂದ ಚಿರತೆ ದಾಳಿ ನಡೆಸಿರುವ ಮಾಹಿತಿ ತಿಳಿದುಬಂದಿದೆ. ಚಿರತೆ ಹಿಡಿಯಲು ಯಾದಗಿರಿಯಲ್ಲಿ ಬೋನ್ಗಳು ಲಭ್ಯವಿಲ್ಲ, ಕಾರ್ಯಾಚರಣೆಗೆ ಬೇಕಾದ ಅಗತ್ಯ ಸೌಲಭ್ಯಗಳು ಕಡಿಮೆ ಇವೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಶಿಬಿರಗಳನ್ನು ಏರ್ಪಡಿಸುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Thu, 2 February 23