ರಾಯಚೂರು ಆಯ್ತು ಈಗ ಯಾದಗಿರಿ ಸರದಿ: 300ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಇಬ್ಬರೇ ಖಾಯಂ ಶಿಕ್ಷಕರು!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಸರ್ಕಾರಿ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಬ್ಬರೇ ಖಾಯಂ ಶಿಕ್ಷಕರಿದ್ದಾರೆ. ವಿಷಯವಾರು ಶಿಕ್ಷಕರ ಕೊರತೆಯಿಂದ ಅತಿಥಿ ಶಿಕ್ಷಕರನ್ನೇ ಅವಲಂಬಿಸಿದ್ದು, ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಬಗ್ಗೆಯೇ ಸರ್ಕಾರ ಅಸಡ್ಡೆ ತೋರುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ರಾಯಚೂರು ಆಯ್ತು ಈಗ ಯಾದಗಿರಿ ಸರದಿ: 300ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಇಬ್ಬರೇ ಖಾಯಂ ಶಿಕ್ಷಕರು!
ಕಕ್ಕೇರ ಸರ್ಕಾರಿ ಶಾಲೆ
Image Credit source: tv9
Edited By:

Updated on: Sep 11, 2026 | 7:02 AM

ಮುಖ್ಯಾಂಶಗಳು

  • 300ಕ್ಕೂ ಹೆಚ್ಚು ಮಕ್ಕಳಿಗೆ ಇಬ್ಬರೇ ಖಾಯಂ ಶಿಕ್ಷಕರು
  • ಆರು ವಿಷಯಗಳಿಗೂ ಅತಿಥಿ ಶಿಕ್ಷಕರ ಅವಲಂಬನೆ
  • ಯಾದಗಿರಿಯಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ

ಯಾದಗಿರಿ, ಸೆಪ್ಟೆಂಬರ್ 11: ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳ ಪೈಕಿ ಯಾದಗಿರಿಯೂ ಒಂದಾಗಿದ್ದು, ಶಿಕ್ಷಕರ ಕೊರತೆ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 300ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಕೇವಲ ಇಬ್ಬರೇ ಖಾಯಂ ಶಿಕ್ಷಕರಿರುವುದು ಇದಕ್ಕೆ ನಿದರ್ಶನವಾಗಿದೆ. ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೊಡ್ಡ ಸಂಖ್ಯೆಯ ಮಕ್ಕಳಿಗೆ ಪಾಠ ಮಾಡಲು ವಿಷಯವಾರು ಖಾಯಂ ಶಿಕ್ಷಕರ ಕೊರತೆ ಎದುರಾಗಿದೆ. ಶಾಲೆಯಲ್ಲಿ ಇಬ್ಬರು ಖಾಯಂ ಶಿಕ್ಷಕರಿದ್ದು, ಅವರಲ್ಲಿ ಒಬ್ಬರು ಮುಖ್ಯ ಶಿಕ್ಷಕರಾಗಿದ್ದರೆ, ಮತ್ತೊಬ್ಬರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ.

ಹೀಗಾಗಿ ಉಳಿದ ವಿಷಯಗಳ ಬೋಧನೆಗೆ ಶಾಲೆ ಅತಿಥಿ ಶಿಕ್ಷಕರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇರುವ ಇಬ್ಬರಲ್ಲೂ ಒಬ್ಬರು ಶಿಶುಪಾಲನಾ ರಜೆ

ಶಾಲೆಯ ಓರ್ವ ಶಿಕ್ಷಕಿ ಕಳೆದ ಕೆಲ ದಿನಗಳಿಂದ ಶಿಶುಪಾಲನಾ ರಜೆ ಪಡೆದು ತೆರಳಿದ್ದಾರೆ. ಮತ್ತೊಂದೆಡೆ, ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಖಾಯಂ ಶಿಕ್ಷಕರು ಕೂಡ ಬೇರೆ ಶಾಲೆಗಳಿಂದ ಹೆಚ್ಚುವರಿಯಾಗಿ ನಿಯೋಜನೆಗೊಂಡಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ವಿಷಯವಾರು ಬೋಧನೆಗೆ ಅಗತ್ಯವಿರುವ ಶಿಕ್ಷಕರ ಕೊರತೆ ಮತ್ತಷ್ಟು ಎದ್ದು ಕಾಣುತ್ತಿದೆ.

ಸಮರ್ಪಕವಾಗಿ ನಡೆಯುತ್ತಿಲ್ಲ ಬೋಧನೆ

ಖಾಯಂ ಶಿಕ್ಷಕರ ಕೊರತೆಯಿಂದ ಪಾಠ ಬೋಧನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದ್ದು, ಕೆಲವರು ಬೇರೆ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಎಂಬುದು ಪೋಷಕರ ಆರೋಪವಾಗಿದೆ. ಕಕ್ಕೇರ ಸರ್ಕಾರಿ ಶಾಲೆಯ ಈ ಪರಿಸ್ಥಿತಿಯು ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತಿದೆ.

ಯಾದಗಿರಿಯಲ್ಲೂ ಶಿಕ್ಷಕರ ಕೊರತೆಯದ್ದೇ ಕಥೆ

ಕೇವಲ ಕಕ್ಕೇರ ಸರ್ಕಾರಿ ಶಾಲೆಯೊಂದರ ಸಮಸ್ಯೆ ಇದಲ್ಲ. ಯಾದಗಿರಿ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲೂ ಶಿಕ್ಷಕರ ಕೊರತೆ ಮುಂದುವರಿದಿದೆ. ಜಿಲ್ಲೆಯಲ್ಲಿ 5,585 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 2,556 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಹೀಗಾಗಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿವೆ.

Yadgir Govt School Problem

ಪ್ರೌಢಶಾಲೆಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜಿಲ್ಲೆಗೆ 1,548 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 812 ಶಿಕ್ಷಕರನ್ನು ಮಾತ್ರ ನೇಮಕ ಮಾಡಲಾಗಿದೆ. ಖಾಲಿ ಹುದ್ದೆಗಳ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಮೇಲಿನ ಅವಲಂಬನೆ ಹೆಚ್ಚಾಗಿದೆ.

ಶಿಕ್ಷಣ ಇಲಾಖೆ ಉಪನಿರ್ದೇಶಕರು ಹೇಳುವುದೇನು?

ಇದರ ನೇರ ಪರಿಣಾಮ ಮಕ್ಕಳ ಶಿಕ್ಷಣದ ಮೇಲೆ ಬೀರುತ್ತಿದೆ ಎಂಬುದು ಪೋಷಕರ ಅಳಲು. ಈ ಬಗ್ಗೆ ಯಾದಗಿರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಮುಧೋಳ ಅವರನ್ನು ಕೇಳಿದಾಗ, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಾಲೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೋಷಕರ ಒತ್ತಾಯವೇನು?

ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಿದ್ದರೆ, ಮುಂದಿನ ಹಂತದ ಶಿಕ್ಷಣದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಕಕ್ಕೇರ ಶಾಲೆಗೆ ವಿಷಯವಾರು ಖಾಯಂ ಶಿಕ್ಷಕರನ್ನು ನಿಯೋಜಿಸಬೇಕು. ಜೊತೆಗೆ ಯಾದಗಿರಿ ಜಿಲ್ಲೆಯಾದ್ಯಂತ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.

ಇದನ್ನೂ ಓದಿ: ರಾಯಚೂರು: 350 ವಿದ್ಯಾರ್ಥಿಗಳಿಗೆ ಒಬ್ಬರೇ ಕಾಯಂ ಶಿಕ್ಷಕ!

ರಾಯಚೂರಿನಲ್ಲೂ ಇದೇ ರೀತಿಯ ಶಿಕ್ಷಕರ ಕೊರತೆ ಇರುವ ಕುರಿತು ಇತ್ತೀಚೆಗೆ ವರದಿಯಾಗಿತ್ತು. ಎಲೆಬಿಚ್ಚಾಲಿ ಗ್ರಾಮದ ಸರ್ಕಾರಿ ಹೈಸ್ಕೂಲ್‌ನಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಬ್ಬರೇ ಖಾಯಂ ಶಿಕ್ಷಕರಿರುವುದು ವರದಿಯಾಗಿತ್ತು. ಇದೀಗ ಪಕ್ಕದ ಯಾದಗಿರಿಯ ಕಕ್ಕೇರ ಶಾಲೆಯಲ್ಲೂ ಇದೇ ರೀತಿಯ ಸಮಸ್ಯೆ ಬೆಳಕಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us