3 ಶತಮಾನ ಹಳೆಯ ವಿಶಿಷ್ಟ ವಾಸ್ತುಶಿಲ್ಪದ ಕೋಟೆ.. ವೇಗವಾಗಿ ತನ್ನ ಕೊನೆ ದಿನ ಎಣಿಸುತ್ತಿದೆ!
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಸುಂದರ ಕೋಟೆ ಅವನತಿಯತ್ತ ಸಾಗಿದೆ. ಅತ್ಯಂತ ಭದ್ರ ಹಾಗೂ ವಿಶಿಷ್ಟ ವಾಸ್ತು ಶಿಲ್ಪದ ಮೂಲಕ ತನ್ನಯದೇ ಆದ ಐತಿಹ್ಯ ಹೊಂದಿರುವ ಈ ಕೋಟೆ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ! ಮೂರು ಶತಮಾನಗಳ ಹಿಂದೆ ಭವ್ಯತೆ ಮೆರೆದ ಕೋಟೆ ಪುರಾತತ್ವ ಇಲಾಖೆಯ ನಿರ್ಲಕ್ಷಕ್ಕೆ ಒಳಗಾಗಿದೆ. ಕೋಟೆ ತುಂಬೆಲ್ಲ ಮುಳ್ಳು ಕಂಟಿಗಳಿಂದ ಆವರಿಸಿದ್ದು ಜೂಜುಕೋರರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಯ ನೆಚ್ಚಿನ ತಾಣವಾಗಿ ಮಾರ್ಪಾಡಾಗಿದೆ. 18ನೇ ಶತಮಾನದಲ್ಲಿ ನಿರ್ಮಾಣವಾದ 13 ಎಕರೆ ವಿಶಾಲವಾದ […]
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಸುಂದರ ಕೋಟೆ ಅವನತಿಯತ್ತ ಸಾಗಿದೆ. ಅತ್ಯಂತ ಭದ್ರ ಹಾಗೂ ವಿಶಿಷ್ಟ ವಾಸ್ತು ಶಿಲ್ಪದ ಮೂಲಕ ತನ್ನಯದೇ ಆದ ಐತಿಹ್ಯ ಹೊಂದಿರುವ ಈ ಕೋಟೆ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ! ಮೂರು ಶತಮಾನಗಳ ಹಿಂದೆ ಭವ್ಯತೆ ಮೆರೆದ ಕೋಟೆ ಪುರಾತತ್ವ ಇಲಾಖೆಯ ನಿರ್ಲಕ್ಷಕ್ಕೆ ಒಳಗಾಗಿದೆ.
ಕೋಟೆ ತುಂಬೆಲ್ಲ ಮುಳ್ಳು ಕಂಟಿಗಳಿಂದ ಆವರಿಸಿದ್ದು ಜೂಜುಕೋರರ ಅಡ್ಡೆಯಾಗಿ, ಅನೈತಿಕ ಚಟುವಟಿಕೆಯ ನೆಚ್ಚಿನ ತಾಣವಾಗಿ ಮಾರ್ಪಾಡಾಗಿದೆ. 18ನೇ ಶತಮಾನದಲ್ಲಿ ನಿರ್ಮಾಣವಾದ 13 ಎಕರೆ ವಿಶಾಲವಾದ ಭವ್ಯ ಕೋಟೆ ಕಾಯಕಲ್ಪಕ್ಕೆ ಕಾಯುತ್ತಿದೆ. 1820 ರಿಂದ 1850 ರ ಮಧ್ಯದಲ್ಲಿ ರಾಮಚಂದ್ರ ಜಾಧವ್ ಮತ್ತು ಧನಾಜಿ ಜಾಧವ್ ಅವರಿಂದ ಈ ಕೋಟೆ ನಿರ್ಮಾಣಗೊಂಡಿದೆ.
ಮರಾಠರ ಸಾಮಂತ ರಾಮಚಂದ್ರ ಸೇನ ಜಾಧವರ ಕಾಲದಲ್ಲಿ ಇದನ್ನು ಪುನರ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕೋಟೆ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ. ಚೌಕಾಕಾರದಲ್ಲಿ ನಿರ್ಮಿಸಲಾಗಿದೆ. ವಿಶಾಲ ಪ್ರವೇಶ ದ್ವಾರ, ಪ್ರಾಂಗಣ, ಅಂತರ ಗೋಪುರಗಳನ್ನು ಹೊಂದಿದೆ. ಗೋಡೆಗಳು 150 ಅಡಿಗಳಷ್ಟು ಎತ್ತರವಾಗಿವೆ.
ಎಂದೂ ಬತ್ತದ ಬಾವಿ ಇದೆ ಕೋಟೆಯ ಪಕ್ಕದಲ್ಲಿ ಪುರಾತನ ಎಂದೂ ಬತ್ತದ ಬಾವಿ ಇದೆ. ಚಂದ್ರಸೇನನ ಮಗ ರಾಮಚಂದ್ರ ಜಾಧವ್ ಕಾಲದಲ್ಲಿ ಈ ಬಾವಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತದೆ. ಬಾವಿ ಆಳವಿದ್ದು, ನೋಡಲು ಸುಂದರವಾಗಿದೆ. ಎಂತಹ ಭೀಕರ ಜಲಕ್ಷಾಮ ಉಂಟಾದರೂ ನೀರು ಬತ್ತದಿರುವುದು ಈ ಬಾವಿಯ ವಿಶೇಷ.
ಕೋಟೆಯನ್ನು ಪುನರುಜ್ಜೀವನಗೊಳಿಸಿದರೆ ಪಟ್ಟಣದ ಅಂದ ಹೆಚ್ಚಾಗಲಿದೆ ಪ್ರಾಚೀನ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ಭವ್ಯ ಪರಂಪರೆಗೆ ಸಾಕ್ಷಿಯಾಗಿರುವ ಕೋಟೆ ಈಗ ಅನಾಥವಾಗಿದೆ. ಭಾಲ್ಕಿ ತಾಲೂಕಿನ ಭಾತಂಬ್ರಾ ಕೋಟೆ ಜಿಲ್ಲೆಯ ಪ್ರಮುಖ ಕೋಟೆಗಳಲ್ಲಿ ಒಂದಾಗಿದೆ. ಇದನ್ನು ಪುನರುಜ್ಜೀವನಗೊಳಿಸಿದರೆ ಪಟ್ಟಣದ ಅಂದ ಹೆಚ್ಚಾಗಲಿದೆ. ವಿವಿಧೆಡೆಯ ಪ್ರವಾ ಸಿಗರನ್ನು ಸೆಳೆಯಲಿದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ.
ಜಿಲ್ಲಾಡಳಿತ ಏನ್ ಮಾಡಬೇಕು? ಆಡಳಿತಯಂತ್ರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಕೋಟೆ ಆವರಣವನ್ನು ಸ್ವಚ್ಛಗೊಳಿಸಬೇಕು, ಉದ್ಯಾನ ಬೆಳೆಸಿ ಆಕರ್ಷಣೀಯ ತಾಣವಾಗಿಸಬೇಕು. ಗೈಡ್ ನೇಮಕ ಮಾಡಬೇಕು, ಸ್ಮಾರಕಗಳ ಸ್ಥಳದಲ್ಲಿ ಅವುಗಳ ಇತಿಹಾಸವಿರುವ ಫಲಕ ಹಾಕಬೇಕು ಎಂಬುದು ಸ್ಥಳೀಯರ ಇಚ್ಚೆಯಾಗಿದೆ. ಹೀಗಾಗಿಯೇ ಸಾಕಷ್ಟು ಸಲ ಜಿಲ್ಲಾಡಳಿತಕ್ಕೆ ಇಲ್ಲಿನ ಜನಪ್ರತಿನಿಧಿಗಳಿಗೆ ಹೇಳಿದರೂ ಯಾರೂ ಕೋಟೆಯ ಅಭಿವೃದ್ಧಿ ಬಗ್ಗೆ ಚಕಾರ ಎತ್ತುತ್ತಿಲ್ಲ.
ಕನ್ನಡ ನಾಡಿನ ವೈಭವ ಸಾರುವ ಕೋಟೆ ಈ ಪುರಾತನ ಕೋಟೆಯನ್ನೋಮ್ಮೇ ಸುತ್ತು ಹಾಕಿದರೆ ಶಿಲ್ಪ ಕಲೆಯ ವೈಭವ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ. ಈ ಅಪೂರ್ವ ಕೆತ್ತನೆಗಳು ನಿಧಾನವಾಗಿ ನಶಿಸಿಹೋಗುತ್ತಿರುವುದು ಕಲಾ ಪ್ರೀಯರಿಗೆ ನಿರಾಸೆ ಮೂಡಿಸಿದೆ. ಪುರಾತತ್ವ ಇಲಾಖೆಯ ಬೇಜವಾಬ್ದಾರಿತನ ಗ್ರಾಮಸ್ಥರ ನಿರ್ಲಕ್ಷ್ಯದಿಂದ ಕನ್ನಡ ನಾಡಿನ ವೈಭವದ ಗತ ಇತಿಹಾಸವನ್ನ ಸಾರುವ ಕೋಟೆ ಇಂದು ತೆರೆಯ ಮರೆಯಲ್ಲಿ ಸರಿಯುವ ಎಲ್ಲಾ ಲಕ್ಷಣಗಳು ಗೋಚರವಾಗಿವೆ.
ಸ್ಥಳೀಯರಿಗೆ ಕೋಟೆ ಬಗ್ಗೆ ಇರುವ ಅಸಡ್ಡೆಯ ನಡುವೆಯೂ ಈ ಕೋಟೆ ಇಂದಿಗೂ ತನ್ನ ಗತವೈಭವವನ್ನ ಕಾಪಾಡಿಕೊಂಡು ಬಂದಿರುವುದೇ ಸೂಜಿಗದ ವಿಷಯ. ಇಂತಹ ಇತಿಹಾಸ ಸಾರುವ ಕೋಟೆಯನ್ನ ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆ ಕೋಟೆಯ ಜಿರ್ಣೋದ್ಧಾರಕ್ಕೆ ಸೂಕ್ತ ಕ್ರಮ ಕೈಗೊಂಡು ಅದರ ಸಂರಕ್ಷಣೆಯತ್ತ ಗಮನಹರಿಸುವ ಜರೂರತ್ತು ಬಹಳಷ್ಟಿದೆ -ಸುರೇಶ್ ನಾಯಕ್
Published On - 1:46 pm, Sun, 14 June 20