AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗೆರೆ ಬೆಳಗಿಸಿದ ಅನುವಾದ ಲೋಕ; ರಾಜ್ಯೋತ್ಸವದ ವೇಳೆ ಕನ್ನಡದ ಕಟ್ಟಾಳುವನ್ನ ಕಳೆದುಕೊಂಡ ಸಾರಸ್ವತ ಲೋಕ

ಆಡು ಮುಟ್ಟದ ಸೊಪ್ಪಿಲ್ಲ, ರವಿ ಬೆಳಗೆರೆ ಬರೆಯದ ಕ್ಷೇತ್ರವಿಲ್ಲ ಎಂದರೆ ತಪ್ಪಾಗಲಾರದು. ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ಬೆಳಗೆರೆ ಅನುವಾದದ ಮೂಲಕ ಸಾಹಿತಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದರು. ಪತ್ರಕರ್ತ, ಸಾಹಿತಿ ಖುಷ್ವಂತ್ ಸಿಂಗ್, ಮನೋಹರ್ ಮಳಗಾಂವ್ಕರ್ ಮುಂತಾದ ಅಗ್ರಗಣ್ಯರನ್ನು ಕನ್ನಡಕ್ಕೆ ತಂದ ಹಿರಿಮೆ ರವಿ ಬೆಳಗೆರೆಯವರದ್ದು. ರವಿ ಬೆಳಗೆರೆ ಅವರದ್ದು ಅಕ್ಷರಶಃ ಅನುವಾದವಲ್ಲ. ಮೂಲದ ಪುಸ್ತಕವನ್ನು ಕನ್ನಡದ ದಾಟಿಗೆ ಒಗ್ಗಿಸಿಕೊಂಡು ತುಂಟತನದ ಸ್ಪರ್ಶ ನೀಡುತ್ತಿದ್ದದ್ದು ಅವರ ಶೈಲಿ. ಓದಿದರೆ ಸಾಕು, ಇದು ರವಿ ಬೆಳಗೆರೆಯವರ ಅನುವಾದ ಎಂದು ತಿಳಿಯುತ್ತಿತ್ತು ಎನ್ನುತ್ತಾರೆ […]

ಬೆಳಗೆರೆ ಬೆಳಗಿಸಿದ ಅನುವಾದ ಲೋಕ; ರಾಜ್ಯೋತ್ಸವದ ವೇಳೆ ಕನ್ನಡದ ಕಟ್ಟಾಳುವನ್ನ ಕಳೆದುಕೊಂಡ ಸಾರಸ್ವತ ಲೋಕ
ಸಾಧು ಶ್ರೀನಾಥ್​
|

Updated on: Nov 14, 2020 | 12:43 PM

Share

ಆಡು ಮುಟ್ಟದ ಸೊಪ್ಪಿಲ್ಲ, ರವಿ ಬೆಳಗೆರೆ ಬರೆಯದ ಕ್ಷೇತ್ರವಿಲ್ಲ ಎಂದರೆ ತಪ್ಪಾಗಲಾರದು. ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ಬೆಳಗೆರೆ ಅನುವಾದದ ಮೂಲಕ ಸಾಹಿತಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದರು. ಪತ್ರಕರ್ತ, ಸಾಹಿತಿ ಖುಷ್ವಂತ್ ಸಿಂಗ್, ಮನೋಹರ್ ಮಳಗಾಂವ್ಕರ್ ಮುಂತಾದ ಅಗ್ರಗಣ್ಯರನ್ನು ಕನ್ನಡಕ್ಕೆ ತಂದ ಹಿರಿಮೆ ರವಿ ಬೆಳಗೆರೆಯವರದ್ದು.

ರವಿ ಬೆಳಗೆರೆ ಅವರದ್ದು ಅಕ್ಷರಶಃ ಅನುವಾದವಲ್ಲ. ಮೂಲದ ಪುಸ್ತಕವನ್ನು ಕನ್ನಡದ ದಾಟಿಗೆ ಒಗ್ಗಿಸಿಕೊಂಡು ತುಂಟತನದ ಸ್ಪರ್ಶ ನೀಡುತ್ತಿದ್ದದ್ದು ಅವರ ಶೈಲಿ. ಓದಿದರೆ ಸಾಕು, ಇದು ರವಿ ಬೆಳಗೆರೆಯವರ ಅನುವಾದ ಎಂದು ತಿಳಿಯುತ್ತಿತ್ತು ಎನ್ನುತ್ತಾರೆ ಮಂಗಳೂರಿನ ಓದುಗ ಪ್ರಶಾಂತ್ ಭಟ್.

ಸ್ವತಃ ಜ್ಯೋತಿಷ್ಯದಲ್ಲಿ ನಂಬಿಕೆ ಇರದಿದ್ದರೂ ಓ ಮನಸೆ ಪತ್ರಿಕೆಯಲ್ಲಿ “ಮಹಾಸ್ವಪ್ನ” ಹೆಸರಿನಲ್ಲಿ ರಾಶಿಗಳ ಗುಣಗಳನ್ನು ಬರೆಯುತ್ತಿದ್ದರು. ಅದು ಜಗದ್ವಿಖ್ಯಾತ ಜ್ಯೋತಿಷಿ ಮತ್ತು ಕವಿ ಲಿಂಡಾ ಗುಡ್​ಮನ್ ಅವರ ಬರಹಗಳ ಅನುವಾದವಾಗಿತ್ತು.

ಖುಷ್ವಂತ್ ಸಿಂಗ್ ಅವರ ಬರಹಗಳಲ್ಲಿರುತ್ತಿದ್ದ ಸತ್ಯ, ಸಾಮಾಜಿಕ ಕಳಕಳಿ, ಮೊನಚಾದ ಹಾಸ್ಯ, ಜೀವನಪ್ರೀತಿ ಮತ್ತು ಕಾಮದ ಅಂಶಗಳನ್ನು ಅನುವಾದದಲ್ಲೂ ಮೂಲಕ್ಕೆ ಧಕ್ಕೆ ಬರದಂತೆ ನೋಡಿಕೊಂಡಿದ್ದರು. ಮನೋಹರ ಮಳಗಾಂವ್ಕರ್ ಅವರ ದಂಗೆಯ ದಿನಗಳು ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕಥೆ. ಸೈನಿಕರ ನಿಸ್ಸಹಾಯಕತೆ, ಕ್ರೌರ್ಯ, ನಿಷ್ಠೆ, ಪ್ರತಿಭಟನೆ, ಮೋಸ, ಸಣ್ಣತನ ಮತ್ತು ಔದಾರ್ಯಗಳ ಕುರಿತು ಈ ಪುಸ್ತಕ ವಿವರಿಸುತ್ತದೆ. ಕನ್ನಡದ ಓದುಗರು ಈ ಪುಸ್ತಕಗಳನ್ನು ಬಹಳ ಮೆಚ್ಚಿಕೊಂಡಿದ್ದರು.

ಹಿಮಾಲಯನ್ ಬ್ಲಂಡರ್ ನ ರೋಚಕ ಕಥೆ ರವಿ ಬೆಳಗೆರೆ ಅನುವಾದಿಸಿದ ಹಿಮಾಲಯನ್ ಬ್ಲಂಡರ್ ಒಂದು ಮಹದದ್ಭುತ ಕೃತಿ. 1962ರಲ್ಲಿ ನಡೆದ ಇಂಡೋ-ಚೀನಾ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರಿಗೇಡಿಯರ್ ಜಾನ್ ಪಿ ದಳವಿ, ಸೈನಿಕರ ಅಂದಿನ ಸ್ಥಿತಿಯ ಕುರಿತು ಒಂದು ಪುಸ್ತಕ ಬರೆದಿದ್ದರು. ಯುದ್ಧದಲ್ಲಿ ಭಾರತೀಯ ಸೈನಿಕರು ಪಟ್ಟ ಕಷ್ಟ ಕೋಟಲೆಗಳ ಕುರಿತು ಯಥಾವತ್ತಾಗಿ ವರ್ಣಿಸಿದ್ದರು. ಮೈ ಕೊರೆಯುವ ಚಳಿಯಲ್ಲಿ ಯೋಧರು, ಧರಿಸಲು ಸರಿಯಾದ ಉಡುಪುಗಳಿಲ್ಲದೆ, ಶೂಗಳಿಲ್ಲದೆ ಯಾವ ರೀತಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ವಿವರಿಸಿದ್ದರು. ಲಕ್ಷಾಂತರ ಕನ್ನಡಿಗರಿಗೆ ಬೆಳಗೆರೆ ಎಂದಾಕ್ಷಣ ನೆನಪಾಗುವುದೇ ಹಿಮಾಲಯನ್ ಬ್ಲಂಡರ್!

ಮೂಲ ಲೇಖಕರೇ ಮಾರುಹೋಗಿದ್ದಿದೆ! “ಹಂತಕಿ ಐ ಲವ್ಯೂ” ಕೃತಿ ಸಿನಿಮಾವೊಂದರ ಕನ್ನಡೀಕರಣ. ಇಟಾಲಿಯನ್ ಮಾಫಿಯಾದ ಗಾಡ್ ಫಾದರ್ ಅನ್ನು ಭಾರತೀಯ ಶೈಲಿಗೆ ಒಗ್ಗಿಸಿದ್ದರು. ಮಾರ್ಕ್ವೇಜ್ ನ ಲವ್ ಇನ್ ದ ಟೈಮ್ ಆಫ್ ಕಾಲರಾ ಕೃತಿಯ ರವಿ ಬೆಳಗೆರೆ ರೂಪವೇ “ಮಾಂಡೋವಿ”. ರವಿ ಬೆಳಗೆರೆಯವರ ಭಾವಾನುವಾದ ಶೈಲಿಗೆ ಸ್ವತಃ ಮೂಲ ಲೇಖಕರೂ ಮಾರುಹೋಗಿದ್ದಿದೆ.

“ನಾನು ಮಾರ್ಕ್ವೇಜ್​ನ ಮೂಲ ಕಾದಂಬರಿ ಓದಿದ್ದೇನೆ. ರವಿ ಬೆಳಗೆರೆ ಬರೆದ ಮಾಂಡೋವಿಯನ್ನೂ ಓದಿದ್ದೇವೆ. ಇದು ಭಾಷಾಂತರವೂ ಅಲ್ಲ, ರೂಪಾಂತರವೂ ಅಲ್ಲ. ಇದು ಬೇರೆಯದೇ ಕೃತಿ ಮತ್ತು ರವಿಯ ಉತ್ಕೃಷ್ಟ ಕೃತಿಯೂ ಹೌದು” -ಚಂದ್ರಶೇಖರ್ ಕಂಬಾರ ಜ್ಞಾನಪೀಠ ಪ್ರಶಸ್ತಿ ವಿಜೇತರು

ಮರೆಯಲಾರದ ಅನುವಾದಗಳು ಭಯೋತ್ಪಾದಕರ ದಾಳಿಯಾದಾಗ ದಾಳಿಯ ಮಾಸ್ಟರ್​ ಮೈಂಡ್ ಗಳನ್ನು ಅವರದ್ದೇ ದೇಶದಲ್ಲಿ ಮಟ್ಟಹಾಕುವ ಕಥೆ “ಹಿಮಾಗ್ನಿ”ಯದ್ದು. ಇದೂ ಸಹ ಪ್ರಖ್ಯಾತ ಕಾದಂಬರಿಯೊಂದರ ಭಾವಾನುವಾದ. ಇತ್ತೀಚೆಗೆ ಹಿಂದಿಯಲ್ಲಿ ತೆರೆ ಕಂಡ “ಫ್ಯಾಂಟಮ್” ಚಿತ್ರವೂ ಇದೇ ಕಥಾ ಹಂದರ ಹೊಂದಿತ್ತು. “ರಾಜರಹಸ್ಯ”, “ದಂಗೆಯ ದಿನಗಳು” ಮತ್ತು “ಹಿಮಾಲಯನ್ ಬ್ಲಂಡರ್” ಅವರು ಮಾಡಿದ ನೇರ ಅನುವಾದಗಳಾಗಿವೆ. ತೆಲುಗು ಕತೆಗಳ ಅನುವಾದವಾದ “ವಿವಾಹ” ಅಪ್ಪಟ ಸಾಹಿತ್ಯಿಕ ಕೃತಿ. ಪ್ರೊತಿಮಾ ಬೇಡಿ ಆತ್ಮಕಥೆ “ಟೈಮ್​ಪಾಸ್​” ಅನ್ನು ಅನುವಾದಿಸಿದಾಗ ಕನ್ನಡ ಓದುಗರ ಪ್ರತಿಕ್ರಿಯೆಯೂ ವಿಭಿನ್ನವಾಗಿತ್ತು.

ಖುಷ್ವಂತ್ ಸಿಂಗ್ ಅವರ  ಕಂಪನಿ ಆಫ್ ವುಮೆನ್ ಮತ್ತು ಸನ್​ಸೆಟ್ ಕ್ಲಬ್ ಕೃತಿಗಳ ಕನ್ನಡ ಅನುವಾದ ಓದುಗರ ಮನಸಲ್ಲಿ ಇಂದಿಗೂ ಬೆಳಗೆರೆಯವರ ತುಂಟತನ ನೆನಪಿಸುತ್ತದೆ. ಸನ್​ಸೆಟ್ ಕ್ಲಬ್ ಕೃತಿಗೆ ಅವರು ಇಟ್ಟ ಹೆಸರು ವೃದ್ಧ ಚಪಲದ ಸಂಜೆ. .

ಎಷ್ಟು ವೇಗವಾಗಿ ಬರೆಯುತ್ತಿದ್ದರು ಎಂದರೆ.. ವಿಶ್ವವಿಖ್ಯಾತ ಲೇಖಕ ಮನೋಹರ ಮಳಗಾಂವ್ಕರ್ ಅವರ ಕೃತಿಗಳ ಅನುವಾದವೇ “ದಂಗೆಯ ದಿನಗಳು” ಮತ್ತು “ಅವನೊಬ್ಬನಿದ್ದ ಗೋಡ್ಸೆ”. ಬೈಕುಲ್ಲಾ ಟು ಬ್ಯಾಂಕಾಕ್ ಕೃತಿಯ ಕನ್ನಡ ರೂಪಾಂತರ “ಡಿ ಕಂಪನಿ”. ಕನ್ಫೆಶನ್ ಆಫ್ ಎ ಥಗ್ ಕೃತಿಯ ಭಾವಾನುವಾದ “ರೇಷ್ಮೆ ರುಮಾಲು” ಕೃತಿ. ಭೂಗತ ಲೋಕದಲ್ಲಿ ತಮಗಿದ್ದ ಅಗಾಧ ಜ್ಞಾನವನ್ನು ಸುಲಲಿತವಾಗಿ ಕಾದಂಬರಿಯಾಗಿಸುವದರಲ್ಲಿ ಅವರದ್ದು ಎತ್ತಿದ ಕೈ. ಅಲ್ಲದೇ ಇಂತಹ ಕಾದಂಬರಿ ರಚಿಸಲು ಅವರು ತೆಗೆದುಕೊಳ್ಳುತ್ತಿದ್ದ ಸಮಯ ಅತಿ ಕಡಿಮೆ. ತಮ್ಮ ಫಾರ್ಮ್ ಹೌಸ್​ಗಳಲ್ಲಿ ತಿಂಗಳು ಉಳಿದರೆ ಒಂದು ಕಾದಂಬರಿ ರಚಿಸಿಬಿಡುತ್ತಿದ್ದರು. ಅವರ ಅಧ್ಯಯನ ಮತ್ತು ಬರವಣಿಗೆಯ ವೇಗ ಅಷ್ಟು ಪಕ್ವವಾಗಿತ್ತು.

ಕೆಲಸಕ್ಕೆ ಬಾರದ ವಿಗ್ರಹ, ವಾಲ್​ಕ್ಲಾಕು, ಫೋಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ” ಯಂತಹ ಅರ್ಥಪೂರ್ಣ ಪುಸ್ತಕ ಕೊಟ್ಟರೆ ಮರುದಿನ ದಂಪತಿ ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವೆ? ಆ ಪುಸ್ತಕ ಅವರ ಬಳಿ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾಗುವ ಪುಸ್ತಕ. ನಿಮ್ಮ ಗೆಳೆಯರು ಮದುವೆಯಾಗುತ್ತಿದ್ದರೆ ಅವರಿಗೆ ಏನು ಕೊಡಲಿ ಎಂದು ತಡಕಾಡಬೇಡಿ. “ಉಡುಗೊರೆ” ಪುಸ್ತಕ ನಿಮ್ಮೂರಲ್ಲೂ ಸಿಗುತ್ತದೆ. -ತಮ್ಮ ಉಡುಗೊರೆ ಪುಸ್ತಕದ ಕುರಿತು ರವಿ ಬೆಳಗೆರೆ

-ಗುರುಗಣೇಶ ಭಟ್