ಸುದ್ದಿ ವಿಶ್ಲೇಷಣೆ| 86 ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡರ ಟೀಕೆ ಎಷ್ಟು ಸರಿ?

86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠ ಅಲಂಕರಿಸಲಿರುವ ಡಾ ದೊಡ್ಡರಂಗೇಗೌಡರನ್ನು ಹಿಗ್ಗಾಮುಗ್ಗಾ ಹೀಗಳೆಯುತ್ತಿರುವ ಸಾಮಾಜಿಕ ಜಾಲತಾಣಿಗರು ಕಣ್ಣು ತೆರದು ನೋಡುವುದು ಒಳಿತು. ಈ ವಿಚಾರಕ್ಕೆ ಇನ್ನೂ ಹಲವಾರು ಮಗ್ಗಲುಗಳಿವೆ ಎಂಬುದನ್ನು ಅವರು ಇಲ್ಲಿ ಗಮನಿಸಬೇಕಾಗುತ್ತದೆ.

ಸುದ್ದಿ ವಿಶ್ಲೇಷಣೆ| 86 ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡರ ಟೀಕೆ ಎಷ್ಟು ಸರಿ?
ದೊಡ್ಡರಂಗೇಗೌಡ
Follow us
ಡಾ. ಭಾಸ್ಕರ ಹೆಗಡೆ
| Updated By: ಆಯೇಷಾ ಬಾನು

Updated on:Jan 24, 2021 | 7:37 AM

ಮುಂದಿನ ತಿಂಗಳು ಹಾವೇರಿಯಲ್ಲಿ ನಡೆಯಲಿರುವ ಎಂಭತ್ತಾರನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ದೊಡ್ಡ ರಂಗೇಗೌಡರು ಮತ್ತು ಅವರನ್ನು ಆಯ್ಕೆ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತ್ಯಾಸಕ್ತರು ಟೀಕಿಸುತ್ತಿದ್ದಾರೆ. ಪರಿಷತ್ತಿನ ಈ ನಿರ್ಣಯ ವಿವಾದವೊಂದನ್ನು ಹುಟ್ಟು ಹಾಕುವಂತೆ ಕಾಣುತ್ತಿದೆ.

ಮೂರು ರೀತಿಯ ವಿಚಾರಗಳನ್ನು ಎತ್ತಿಕೊಂಡು ಸಾಮಾಜಿಕ ಜಾಲತಾಣ ಮತ್ತು ವಾಟ್ಸಾಪ್​ನ ಹಲವಾರು ಗುಂಪಿನಲ್ಲಿ ಗೌಡರನ್ನು ಜಾಡಿಸಿದ್ದಾರೆ. ಕೆಲವರು ಬಳಸಿರುವ ಭಾಷೆ ಮತ್ತು ಅಭಿಪ್ರಾಯಗಳನ್ನು ಯಥಾವತ್ತಾಗಿ ಇಲ್ಲಿ ನೀಡಲಾಗದು. ಆದರೆ ಅವರೆಲ್ಲರ ಮಾತಿನ ಭಾವಾರ್ಥ ಏನು ಎಂಬುದನ್ನು ಮೊದಲು ನೋಡೋಣ: ಡಾ ಗೌಡರು ಸಾಹಿತಿಯಲ್ಲ. ಓರ್ವ ಚಲನಚಿತ್ರ ಹಾಡು ಬರೆಯುವವರಿಗೆ ಇಂಥ ಗೌರವ ಕೊಡುವುದು ಸರಿಯಲ್ಲ. 2018 ರಲ್ಲಿ ಕನ್ನಡದ ದಿನಪತ್ರಿಕೆಯೊಂದರಲ್ಲಿ ಗೌಡರು, ನರೇಂದ್ರ ಮೋದಿ ಮೇಲೆ ಬರೆದ ಕವಿತೆಯನ್ನಿಟ್ಟುಕೊಂಡು ಅವರನ್ನು ಟೀಕಿಸಿದ್ದಷ್ಟೇ ಅಲ್ಲ ಇದೇ ಕಾರಣಕ್ಕಾಗಿಯೇ ಅವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಕೊಡಲಾಯಿತು ಎಂದು ನಿರ್ಣಯ ಮಂಡಿಸಿದವರು ಇದ್ದಾರೆ. ಇದರ ಜೊತೆಗೆ, ಕನ್ನಡ ದಿನಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಒಪ್ಪಿಕೊಂಡರೆ ತಪ್ಪೇನು ಎಂಬ ಭಾವಾರ್ಥ ಬರುವಂತೆ ಮಾತನಾಡಿದ ಗೌಡರ ನಿಲುವನ್ನಿಟ್ಟುಕೊಂಡು ಇನ್ನು ಕೆಲವರು ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟಕ್ಕೆ ವಿವಾದ ತಪ್ಪಿದ್ದಲ್ಲ! ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟಕ್ಕೂ ವಿವಾದಕ್ಕೂ ಹತ್ತಿರದ ನಂಟು ಇರುವಂತಿದೆ. ಎಂಬತ್ತರ ದಶಕದಲ್ಲಿ ಕೆಲವರು ಕನ್ನಡ ಸಾಹಿತ್ಯ ಪರಿಷತ್ತು ವಿರುದ್ಧ ಸೆಟೆದು ನಿಂತರು. ಲಂಕೇಶ್ ಮತ್ತು ಇತರೇ ದೊಡ್ಡ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತು​ ನಡೆಸುವ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸಿದ್ದಷ್ಟೇ ಅಲ್ಲ, ಈ ಸಮ್ಮೇಳನಕ್ಕೆ ಪ್ರತಿಯಾಗಿ ಬೇರೆ ಸಮ್ಮೇಳನ ನಡೆಸಿದ್ದು ಈಗ ಇತಿಹಾಸ. ಆದರೆ ಹುಟ್ಟುಹಾಕಿದ ಆ ಸಂಪ್ರದಾಯವನ್ನು ಮುಂದುವರಿಸಲು ಆಗಲೇ ಇಲ್ಲ. ತೀರಾ ಇತ್ತೀಚೆಗೆ, ಧಾರವಾಡ ಸಾಹಿತ್ಯ ಸಂಭ್ರಮ ಎಂಬ ಕಾರ್ಯಕ್ರಮ ಪ್ರತಿ ವರ್ಷ ಜನವರಿಯಲ್ಲಿ ನಡೆಯಲು ಪ್ರಾರಂಭವಾಯಿತು. ಇಡೀ ಕಾರ್ಯಕ್ರಮ ಎಷ್ಟು ಚೇತೋಹಾರಿಯಾಗಿತ್ತೆಂದರೆ, ಕೆಲವೇ ವರ್ಷಗಳಲ್ಲಿ ಸಾಹಿತ್ಯ ಮತ್ತು ಸಂಸ್ಕ್ರತಿಯ ಬಗ್ಗೆ ಹೊಸ ರೂಪದ ಚರ್ಚೆ ಮತ್ತು ಚಿಂತನೆಯನ್ನು ಹುಟ್ಟುಹಾಕುವುದರಲ್ಲಿತ್ತು. ಮತ್ತು ಸಾಹಿತ್ಯ ಪರಿಷತ್ತು​ ನಡೆಸುವ ಜಾತ್ರೆಯನ್ನು ಹಿಂದಿಕ್ಕುತ್ತಿತ್ತು. ಆದರೆ ಕನ್ನಡಿಗರ ದುರಾದೃಷ್ಟ. ಗಿರಡ್ಡಿ ಗೋವಿಂದರಾಜ್​ ಅವರ ದೇಹಾಂತ್ಯವಾದ ಮೇಲೆ ಆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು. ಇದು ಕನ್ನಡಿಗರಿಗೆ ಆದ ದೊಡ್ಡ ಹಾನಿ. ಬೇರೆ ಬೇರೆ ಊರುಗಳಲ್ಲಿ ಇಂಥದೇ ಕಾರ್ಯಕ್ರಮ ಕೆಲವು ವರ್ಷ ನಡೆದಿರಬಹುದು. ಇಲ್ಲ ಎಂದು ಹೇಳಲಾಗದು. ಇವೆಲ್ಲವನ್ನು ನೋಡಿದಾಗ ನಾವೊಂದು ಊಹೆ (hypothesis)ಯನ್ನು ಮಾಡಬಹುದು. ಸರ್ಕಾರದ ಬೆಂಬಲವಿಲ್ಲದೇ ಜನರೇ ನಿಂತು ದೊಡ್ಡ ಪ್ರಮಾಣದ ಸಾಹಿತ್ಯ ಉತ್ಸವಗಳನ್ನು ಪ್ರತಿ ವರ್ಷ ನಡೆಸುವುದು ಕಷ್ಟ. ಹೊಸ ಉಮೇದಿಯಲ್ಲಿ ಒಂದೆರಡು ವರ್ಷ ಇಂಥ ಉತ್ಸವ ಮಾಡಿದರೂ, ಬೇರೆ ಬೇರೆ ಕಾರಣಕ್ಕೆ ಇಂಥ ಉತ್ಸವಗಳನ್ನು ಮುಂದುವರಿಸಲಾಗದೇ ನಿಲ್ಲುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದು ವಿಷಾದನೀಯ ಸಂಗತಿ.

ಸರ್ಕಾರದ ಹಣದೊಂದಿಗೆ ನಡೆವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಗಳ ಹಿಂದೆ ರಾಜಕೀಯದ ನೆರಳು ಇರುವುದು ಇಂದು ನಿನ್ನೆಯದಲ್ಲ. ಹಾಗಂತ ಸಾರ್ವಜನಿಕರ ಮತ್ತು ಖಾಸಗೀ ಕಂಪೆನಿಗಳ ಸಿಎಸ್​ಆರ್​ ಹಣದ ನೆರವಿನೊಂದಿಗೆ ಮಹಾನಗರಗಳಲ್ಲಿ ಪ್ರಾರಂಭವಾಗಿರುವ Literary fest (ಸಾಹಿತ್ಯ ಉತ್ಸವ) ಗಳು ರಾಜಕೀಯದ ಕರಿನೆರಳಿಂದ ಎಷ್ಟು ದೂರವಾಗಿವೆ? ಇವು ನಮ್ಮ ಸಾಹಿತ್ಯದ ಒಲವನ್ನು ಬಲಗೊಳಿಸುವುದು ಹೋಗಲಿ, ಸಾಹಿತ್ಯದಿಂದ ದೂರ ಕರೆದುಕೊಂಡು ಹೋಗುವ ಸಾಧ್ಯತೆಯಿದೆಯೇನೋ ಎಂಬ ಸಂಶಯ ಬರುತ್ತಿವೆ. ಕೆಲವು Literary fest ನಡೆಸುವವರ ಒಳಬಳಗದ (clique) ಹೊಂಚು ಒಂದು ಕಡೆ. ಹತ್ತಿರ ಹೋದರೆ ಸಾಕು, ಮೂಗಿಗೆ ಅಮರುವ ಅವರ ಸಾಂಸ್ಕೃತಿಕ ಸಂಚಿನ ವಾಸನೆ ಇನ್ನೊಂದೆಡೆ. ಹಾಗಾಗಿ ಕನ್ನಡ ಸಾಹಿತ್ಯ ಪರಷತ್ತಿನ ವಾರ್ಷಿಕ ಸಮ್ಮೇಳನವನ್ನು ಬಯ್ಯುವವರು ಮತ್ತು ಪ್ರತಿ ವರ್ಷ ಈ ಸಮ್ಮೇಳನಗಳಿಗೆ ಆಯ್ಕೆ ಆಗುವ ಅಧ್ಯಕ್ಷರುಗಳನ್ನು ಟೀಕಿಸುವ ಕೂಗುಮಾರಿಗಳು ಈ ಮೇಲಿನ ವಿಚಾರಗಳನ್ನು ಚಿಂತಿಸಬೇಕಾಗಿದೆ.

ಗೌಡರ ಮೇಲಿನ ಟೀಕೆ ಎಷ್ಟು ಸರಿ? ದೊಡ್ಡರಂಗೇಗೌಡರು ಕವಿಗಳು. ಸಿನಿಮಾಕ್ಕೆ ಬರೆದ ಅವರ ಕೆಲವು ಹಾಡುಗಳು ಚೆನ್ನಾಗಿವೆ. ಅವರು ಪ್ರಾಧ್ಯಾಪಕರಾಗಿ ಕೂಡ ಕೆಲಸ ಮಾಡಿದ್ದಾರೆ. ಮೋದಿಯವರನ್ನು ಕುರಿತು ಅವರು ಬರೆದಿದ್ದು ಸರಿಯೇ? ಹಿಂದೆ ರಾಜರುಗಳನ್ನು ಹೊಗಳಿ ಬರೆದ ಹಲವಾರು ಕೃತಿಗಳು ಇಂದಿಗೂ ಮಹತ್ವದ ಕೃತಿಯೆಂದು ಕರೆಸಿಕೊಂಡಿರುವುದುಂಟು. ಪ್ರಜಾಪ್ರಭುತ್ವದಲ್ಲಿ ಕವಿಯೊಬ್ಬ, ರಾಜಕೀಯ ನಾಯಕರನ್ನು ಹೊಗಳಿ ಬರೆಯುವ ಸಂಪ್ರದಾಯವಿಲ್ಲ. ಇದನ್ನು ಜನ ಮತ್ತು ಸಾಹಿತ್ಯ ವಲಯ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಗೌಡರನ್ನು ಟೀಕಿಸುವುದು ಸರಿ. ಅವರು ಬಿಜೆಪಿಯಿಂದ ನಾಮ ನಿರ್ದೇಶಿತ ವಿಧಾನ ಪರಿಷತ್​ ಸದಸ್ಯರಾಗಿ ಕೂಡ ಕೆಲಸ ಮಾಡಿದ್ದಾರೆ. ಅವರು ತಮ್ಮ ರಾಜಕೀಯ ನಿಲುವನ್ನು ಎಂದೂ ಮುಚ್ಚಿಟ್ಟುಕೊಂಡಿಲ್ಲ. ಅಷ್ಟರ ಮಟ್ಟಿಗೆ ಅವರು ತಮ್ಮ ಪ್ರಾಮಾಣಿಕತೆ ಪ್ರದರ್ಶಿಸಿದ್ದಾರೆ.

ಇನ್ನು ಅವರ ಕಾವ್ಯದ ವಿಚಾರಕ್ಕೆ ಬಂದಾಗ, ಅದು ಹೇಗಿದೆ? ಅವರಿಗಿಂತ ಒಳ್ಳೆಯ ಕವಿ ಇರಲಿಲ್ಲವೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಲು? ಬೇರೆ ಯಾರನ್ನೋ ಅಧ್ಯಕ್ಷರನ್ನಾಗಿ ಮಾಡಬಹುದಿತ್ತಲ್ಲ? ಇದು ಪ್ರಾಯಶಃ ಬಾಲಿಶ ಪ್ರಶ್ನೆ. ಓರ್ವ ಸಾಹಿತಿಯ ಕೃತಿಗಳನ್ನು ರಾಜಕೀಯದ ನೆಲೆಯಲ್ಲಿ ವಿಶ್ಲೇಷಿಸುವುದಕ್ಕಿಂತ ಓದಿ ಆನಂದಿಸಬೇಕೆ ಅಥವಾ ಬಿಡಬೇಕೆ ಎಂದು ಮೊದಲು ನಿರ್ಣಯಿಸುವುದು ಒಳಿತು. ಹಾಗಂತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದ ಆಯ್ಕೆಯ ಹಿಂದೆ ರಾಜಕೀಯ ಇರುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದನ್ನು ನಂಬಲು ಸಾಧ್ಯವೇ ಇಲ್ಲ. ಕಳೆದ 45 ವರ್ಷಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ಕೊಟ್ಟ ಉತ್ತರ ಕನ್ನಡದ ಯಾವ ಸಾಹಿತಿಯೂ ಈ ಗೌರವ ಪಡೆಯಲಿಲ್ಲ ಎಂಬುದನ್ನು ಗಮನಿಸಿದರೆ ನಮಗೆ ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ಪ್ರಶ್ನೆಗಳು ಏಳುವುದು ತಪ್ಪಲ್ಲ.

2017 ರಲ್ಲಿ ಇಂಗ್ಲೀಷ್​ ಹಾಡುಗಾರ ಮತ್ತು ಸಂಗೀತ ಕೃತಿ ರಚಿಸುವ ಬಾಬ್​ ಡೈಲನ್​ಗೆ ನೋಬೆಲ್​ ಬಂದಾಗ ಎಲ್ಲರ ಹುಬ್ಬು ಮೇಲೇರಿದ್ದುಂಟು. ಆದ್ದರಿಂದ ಈ  ರೀತಿ ಆಯ್ಕೆಯಲ್ಲಿನ ವೈಪರಿತ್ಯ ಇದು ನಮ್ಮ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಎಲ್ಲೆಲ್ಲೂ ಈ ಸಂಸ್ಕೃತಿ ಇದೆ ಎಂಬುದನ್ನು ಒಪ್ಪಿಕೊಳ್ಳೋಣ.

ಕೊನೆಯದಾಗಿ ಹಿಂದಿ ವಿಚಾರದಲ್ಲಿ ಅವರು ಕೊಟ್ಟ ಹೇಳಿಕೆ. ಹಿಂದಿಯನ್ನು ಒಂದು ಭಾಷೆಯಾಗಿ ಒಪ್ಪಿಕೊಳ್ಳುವುದು ತಪ್ಪಲ್ಲ. ಅದು ಹೇಗೆ ತಪ್ಪಾಗುತ್ತದೆ? ಅದರ ಹೇರಿಕೆ ತಪ್ಪು ಎಂಬುದನ್ನು ಹೇಳಬೇಕೇ ಹೊರತು ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ (ಅದನ್ನು ರಾಷ್ಟ್ರ ಭಾಷೆ ಮಾಡಿದ ಪಕ್ಷ ಯಾವುದು?) ಎಂದು ಒಪ್ಪಿಕೊಂಡರೆ ತಪ್ಪಿಲ್ಲ.  ಈ ಹೇಳಿಕೆಯನ್ನಿಟ್ಟುಕೊಂಡು ಅವರನ್ನು ಟೀಕಿಸುವವರು, ಸಾಹಿತ್ಯ ಸಮ್ಮೇಳನದ ತನಕ ಕಾದು ಅಲ್ಲಿ ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಿ ಟೀಕಿಸಲು ತಯಾರಾಗಬೇಕೆ ವಿನಹ ಒಂದು ಪತ್ರಿಕಾ ಸಂದರ್ಶನವಿಟ್ಟುಕೊಂಡು ಅವರನ್ನು ಗಲ್ಲುಗಂಬಕ್ಕೆ ಏರಿಸುವಷ್ಟು ಮುಂದಕ್ಕೆ ಹೋಗುವುದು ಪ್ರಾಯಶಃ ಒಳ್ಳೆಯ ಲಕ್ಷಣವಲ್ಲ.

Kannada Sahitya Sammelana 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ದೊಡ್ಡರಂಗೇ ಗೌಡ ಆಯ್ಕೆ

Published On - 8:22 pm, Sat, 23 January 21