ಮುಂಬೈ: ಬಾಲಿವುಡ್ ತಾರಾ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪುಟಾಣಿ ತೈಮೂರ್ ಹುಡುಗಾಟದಲ್ಲಿ ಮಿಂದು ಪುಳಕಿತರಾಗುತ್ತಿದ್ದ ಈ ಜೋಡಿಗೆ ಈಗ ಮತ್ತೊಬ್ಬ ಪುಟಾಣಿ ಜನಿಸಿದ್ದಾನೆ. ಭಾನುವಾರ ಬೆಳಗ್ಗೆ ಕರೀನಾ ಗಂಡುಮಗುವಿಗೆ ಜನ್ಮನೀಡಿದ್ದಾರೆ. ನಿನ್ನೆ ರಾತ್ರಿಯಷ್ಟೇ ‘ಬೆಬೊ’ ಮುಂಬೈನ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು.
ಅಗಸ್ಟ್ 12, 2020ರಂದು ತಾರಾ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮತ್ತೊಮ್ಮೆ ಅಪ್ಪ ಅಮ್ಮ ಆಗುತ್ತಿರುವ ಸಂಭ್ರಮವನ್ನು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದರು. ‘ನಮ್ಮ ಕುಟುಂಬಕ್ಕೆ ಇನ್ನೋರ್ವ ಸದಸ್ಯನ ಆಗಮನವಾಗುತ್ತಿದೆ. ನಿಮ್ಮೆಲ್ಲರ ಹಾರೈಕೆ ಸದಾ ಇರಲಿ ಎಂದು ಈ ಜೋಡಿ ಹೇಳಿತ್ತು.
ಕರೀನಾ ಕಪೂರ್ ಅವರ ಸಹೋದರಿ ಇಂದು ಬೆಳಗ್ಗೆ ಬೆಬೊ ಗಂಡು ಮಗುವಿಗೆ ಜನ್ಮ ನೀಡಿದ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. 2012ರಲ್ಲಿ ಕರೀನಾ ಕಪೂರ್ ಸೈಫ್ ಅಲಿ ಖಾನ್ ಅವರನ್ನು ವಿವಾಹವಾಗಿದ್ದು 2016ರಲ್ಲಿ ತೈಮೂರ್ಗೆ ಜನ್ಮ ನೀಡಿದ್ದರು.
ರಿದಿಮಾ ಕಪೂರ್ ಇನ್ಸ್ಟಾಗ್ರಾಂ ಸ್ಟೇಟಸ್
ಗರ್ಭಿಣಿಯಾದ ನಂತರವೂ ಚಟುವಟಿಕೆ ನಿಲ್ಲಿಸಿರಲಿಲ್ಲ
ಕರೀನಾ ಗರ್ಭವತಿಯಾದ ನಂತರವೂ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ. ರ‍್ಯಾಂಪ್ ವಾಕ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಮಗ ತೈಮೂರ್ ಅಲಿ ಖಾನ್ ಮತ್ತು ಪತಿ ಸೈಫ್ ಅಲಿ ಖಾನ್ ಜೊತೆಗೆ 10 ದಿನಗಳ ಕಾಲ ಧರ್ಮಶಾಲೆಯಲ್ಲಿ ಕಳೆದಿದ್ದರು. ಸದ್ಯ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಮಗುವಿನ ಆರೈಕೆ ಮತ್ತು ಕೆಲಸ ಎರಡನ್ನು ಸರಿದೂಗಿಸಿಕೊಂಡು ಹೋಗುವುದು ತಾಯಿಯಾಗಿ ನನ್ನ ಕರ್ತವ್ಯ ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದರು.
ಗರ್ಭಿಣಿಯಾದವರು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಗರ್ಭಾವಸ್ಥೆಯಲ್ಲಿರಲಿ ಅಥವಾ ಹೆರಿಗೆಯ ನಂತರದ ದಿನಗಳಲ್ಲಿಯೇ ಆಗಲಿ, ನಾವು ಸಕ್ರಿಯರಾಗಿದ್ದರೆ ಎಲ್ಲವೂ ಸಾಧ್ಯ. ಯೋಗ ಮತ್ತು ವ್ಯಾಯಾಮದ ಜೊತೆ ಸದಾ ಗುರುತಿಸಿಕೊಳ್ಳುವುದರಿಂದ ತಾಯಿ ಮತ್ತು ಮಗು ಇಬ್ಬರೂ ಕೂಡ ಆರೋಗ್ಯವಾಗಿರುತ್ತಾರೆ. ದೇಹರಚನೆ ಮೊದಲಿನಂತೆ ಕಾಪಾಡಿಕೊಳ್ಳಲು ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಕರೀನಾ ಕಪೂರ್ ಖಾನ್ ತಿಳಿಸಿದ್ದರು.
ಹೊಸ ಮನೆಯಲ್ಲಿ ಅಣ್ಣನಿಗೆ ಸಾಥಿಯಾಗಲಿದ್ದಾನೆ ತಮ್ಮ!
ನೂತನ ಅಪಾರ್ಟ್ಮೆಂಟ್ಗೆ ಸ್ಥಳಾಂತರವಾಗಿದ್ದ ಸೈಫ್ ಅಲಿ ಖಾನ್ ಮತ್ತು ಕರೀನಾ ದಂಪತಿ ಹೊಸ ಮನೆ ಬಗ್ಗೆ ಹೆಚ್ಚು ಉತ್ಸಾಹಿಗಳಾಗಿದ್ದರು. ಅವರು ಕೊರೊನಾ ಸಂದರ್ಭದಲ್ಲಿಯೇ ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು. ಈ ಬಗ್ಗೆ ಮಾತನಾಡಿದ ಸೈಫ್ ತನ್ನ ಕುಟುಂಬ ಬೆಳೆದಿರುವ ಕಾರಣಕ್ಕೆ ದೊಡ್ಡ ಅಪಾರ್ಟ್ಮೆಂಟ್ ಅಗತ್ಯವಾಗಿತ್ತು. ನನ್ನ ಸಹೋದರಿ ಸೋಹಾ ಮತ್ತು ಅವಳ ಪತಿ ಕುನಾಲ್, ನನ್ನ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಹಾಗೂ ಇನ್ನೊಬ್ಬಳು ಸಹೋದರಿ ಸಬಾ ಕೂಡ ಆಗಾಗ ಮನೆಗೆ ಬರುವುದರಿಂದ ಇದರ ಅಗತ್ಯ ಇತ್ತು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ತಾಯಿ ಶರ್ಮಿಳಾ ಟ್ಯಾಗೋರ್ ಮಾತ್ರ ದೆಹಲಿಯಲ್ಲಿದ್ದಾರೆ ಎಂದಿದ್ದರು. ಇದೀಗ ಹೊಸ ಮನೆಯಲ್ಲಿ ವಾಸ್ತವ್ಯ ಹೂಡಿರುವಾಗಲೇ ಮಗು ಜನಿಸಿದ ಸಂಭ್ರಮ ಈ ದಂಪತಿಗೆ ದೊರಕಲಿದೆ.
ನೂತನ ಅಪಾರ್ಟ್ಮೆಂಟ್ಗೆ ಸ್ಥಳಾಂತರವಾದ ಹೊಸದರಲ್ಲೇ ಬಾಲಿವುಡ್ ನಟಿ ಕರೀನಾ ಕಪೂರ್ ಇನ್ಸ್ಟಾಗ್ರಾಮ್ನಲ್ಲಿ ಮುಂಬೈನ ತಮ್ಮ ಹೊಸ ಅಪಾರ್ಟ್ಮೆಂಟ್ ಫೋಟೊ ಪೊಸ್ಟ್ ಮಾಡಿ ಖುಷಿ ಹಂಚಿಕೊಂಡಿದ್ದು, ಇದು ನನ್ನ ಕನಸಿನ ಮನೆ ಎಂದು ಹೇಳಿಕೊಂಡಿದ್ದರು. ಈಗ ಕನಸಿನ ಮನೆಯಲ್ಲಿ ತೈಮೂರ್ಗೆ ಆಡಲು ತಮ್ಮನ ಆಗಮನವಾಗಿರುವುದು ಸಹಜವಾಗಿ ತಾರಾ ಜೋಡಿಗೆ ಸಂಭ್ರಮ ಹೆಚ್ಚಿಸಿದೆ.
ಇದನ್ನೂ ಓದಿ: ನಟ ಕಿಚ್ಚ ಸುದೀಪ್ ಮನೆಯಲ್ಲಿ ಭೋಜನ ಸವಿದ ಬಾಲಿವುಡ್ ಕ್ಯೂಟ್ ಕಪಲ್
ವಿರುಷ್ಕಾ ದಂಪತಿಗೆ ಹೆಣ್ಣು ಮಗು; ಟ್ವಿಟರ್ನಲ್ಲಿ ತೈಮೂರ್ ಮೀಮ್ ಟ್ರೆಂಡಿಂಗ್