ಇಂದು ಅಂಗಾರಕ ಸಂಕಷ್ಟ ಚತುರ್ಥಿ; ಈ ಪವಿತ್ರ ದಿನದ ಮಹತ್ವ ನೀವು ತಿಳಿಯಲೇ ಬೇಕು

Angarki Sankashti Chaturthi 2021: ಇಂದು ಈ ವರ್ಷದ ಅಂಗಾರಕ ಸಂಕಷ್ಟ ಚತುರ್ಥಿ ಮೊದಲ ದಿನ. ಮಹತ್ವ ಏನಿರಬಹುದು? ಪೂಜಾ ವಿಧಿವಿಧಾನಗಳು ಹೇಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಇಂದು ಅಂಗಾರಕ ಸಂಕಷ್ಟ ಚತುರ್ಥಿ; ಈ ಪವಿತ್ರ ದಿನದ ಮಹತ್ವ ನೀವು ತಿಳಿಯಲೇ ಬೇಕು
ಗಣೇಶ ವಿಗ್ರಹ (ಪ್ರಾತಿನಿಧಿಕ ಚಿತ್ರ)
Follow us
shruti hegde
| Updated By: ಸಾಧು ಶ್ರೀನಾಥ್​

Updated on: Mar 02, 2021 | 11:16 AM

ಮಾರ್ಚ್​ ತಿಂಗಳ ಮೊದಲ ಮಂಗಳವಾರವಾದ ಇಂದು ಅಂಗಾರಕ ಸಂಕಷ್ಟಿ ದಿನ. ಸಂಕಷ್ಠಿ ಅಂದ ತಕ್ಷಣ ಮೊದಲು ನೆನಪಾಗುವುದು ಗಣಪತಿ. ಗಣಪನ ಸನ್ನಿಧಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸುವತ್ತ ಭಕ್ತರು ತೆರಳುತ್ತಾರೆ. ಹಾಗೆಯೇ ಈ ದಿನದಂದು ಗಣೇಶನನ್ನು ಧ್ಯಾನಿಸುತ್ತಾರೆ. ಅಂಗಾರಕ ಸಂಕಷ್ಟ ಚತುರ್ಥಿ ಅಥವಾ ಅಂಗಾರಕ ಸಂಕಷ್ಟ ಚತುರ್ಥಿ ದಿನವು ಹಿಂದೂಗಳಿಗೆ ಶುಭ ಉಪವಾಸದ ದಿನ. ಮಂಗಳವಾರದಂದು ಬರುವ ಸಂಕಷ್ಟಿ ಚತುರ್ಥಿಯನ್ನೇ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಆಚರಿಸಲಾಗುತ್ತದೆ. ಈ ವ್ರತ ಗಣೇಶನಿಗೆ ಅರ್ಪಿತವಾಗಿದೆ ಮತ್ತು ಇದನ್ನು ‘ಅಂಗಾರಕ ಸಂಕಷ್ಟ ಚತುರ್ಥಿ’ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ್‌ನಲ್ಲಿ ಪ್ರತಿ ಚಂದ್ರ ಮಾಸದ ‘ಕೃಷ್ಣ ಪಕ್ಷ’ ಸಮಯದಲ್ಲಿ ಪೂರ್ಣಿಮಾ (ಹುಣ್ಣಿಮೆಯ ದಿನ) ನಂತರ ‘ಚತುರ್ಥಿ’ (4 ನೇ ದಿನ) ದಿನದಂದು ಉಪವಾಸವನ್ನು ಮಾಡಲಾಗುತ್ತದೆ.

ಈ ಬಾರಿ 2021 ರಲ್ಲಿ 3 ಅಂಗಾರಕ ಚತುರ್ಥಿ ಆಚರಣೆ ಈ ವರ್ಷ ಅಂದರೆ 2021 ರ ಅಂಗಾರಕ ಚತುರ್ಥಿ ದಿನವನ್ನು ಮಾರ್ಚ್‌ 2 ರಂದು ಮಂಗಳವಾರ ಅಂದರೆ ಇಂದು ಆಚರಿಸಲಾಗುತ್ತಿದೆ. ಈ ಬಾರಿ 2021 ರಲ್ಲಿ ನಾವು 3 ಅಂಗಾರಕ ಚತುರ್ಥಿಯನ್ನು ಆಚರಿಸಬಹುದಾಗಿದ್ದು, ಮಾರ್ಚ್‌ 2 ರಂದು, ಜುಲೈ 27 ರಂದು ಮತ್ತು ನವೆಂಬರ್‌ 23 ಈ ದಿನಗಳಲ್ಲಿ ಅಂಗಾರಕ ಚತುರ್ಥಿಯನ್ನು ಆಚರಿಸಬಹುದಾಗಿದೆ.

ಮಾರ್ಚ್ 2021 ರ ಅಂಗಾರಕ ಚತುರ್ಥಿ ಶುಭ ಮುಹೂರ್ತ ವರ್ಷದ ಮೊದಲ ಅಂಗಾರಕ ಚತುರ್ಥಿಯನ್ನು ಈ ಬಾರಿ ಮಾರ್ಚ್‌ 2 ರಂದು ಮಂಗಳವಾರ ಅಂದರೆ ಇಂದು ಆಚರಿಸಲಾಗುತ್ತಿದೆ. ಈ ಅಂಗಾರಕ ಚತುರ್ಥಿಯು ಮಾರ್ಚ್‌ 2 ರಂದು ಬೆಳಗ್ಗೆ 5:46 ರಿಂದ ಆರಂಭವಾಗಿ ಮಾರ್ಚ್‌ 3 ರಂದು ಬೆಳಗ್ಗೆ 2:59 ರವರೆಗೆ ಇರುತ್ತದೆ.

ಅಂಗಾರಕ ಸಂಕಷ್ಟ ಚತುರ್ಥಿ ಮಹತ್ವ ಅಂಗಾರಕ ಚತುರ್ಥಿಯನ್ನು ಎಲ್ಲಾ ಸಂಕಷ್ಟ ಗಣೇಶ ಚತುರ್ಥಿ ದಿನಗಳಲ್ಲಿ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಮರಾಠಿ ಸಂಸ್ಕೃತಿಯ ಅನುಯಾಯಿಗಳಿಗೆ ಈ ದಿನವು ಅಪಾರ ಮಹತ್ವದ್ದಾಗಿದೆ. ಈ ಹಬ್ಬದ ಆಚರಣೆಗಳು ವಿಶೇಷವಾಗಿ ಭಾರತದ ಪಶ್ಚಿಮ ಪ್ರದೇಶಗಳಲ್ಲಿ ಪ್ರಸಿದ್ಧವಾಗಿವೆ. ಮಹಾರಾಷ್ಟ್ರದಲ್ಲಿ ಅಂಗಾರಕ ಚತುರ್ಥಿ ದಿನದಂದು ಗಣೇಶ ದೇವಾಲಯಗಳಲ್ಲಿ ವಿಶೇಷ ಪೂಜಾ ವ್ಯವಸ್ಥೆ ಮಾಡಲಾಗುತ್ತದೆ.

ಅಂಗಾರಕ ಎಂಬ ಪದ ಹುಟ್ಟಿಕೊಂಡಿದ್ದು ಹೇಗೆ? ‘ಅಂಗಾರಕ’ ಎಂಬುದು ಸಂಸ್ಕೃತ ಮೂಲದ ಪದವಾಗಿದ್ದು, ಇದರ ಅರ್ಥ ‘ಸುಟ್ಟ ಕಲ್ಲಿದ್ದಲಿನಂತೆ ಕೆಂಪು಼’ ಎಂದರ್ಥ. ಈ ದಿನದಂದು ಭಗವಾನ್‌ ಗಣೇಶನನ್ನು ಪೂಜಿಸುವುದರ ಮೂಲಕ ಮತ್ತು ಉಪವಾಸ ವ್ರತವನ್ನು ಮಾಡುವುದರಿಂದ ಅವರ ಎಲ್ಲಾ ಆಸೆಗಳನ್ನು ಈಡೇರಿಸುತ್ತಾನೆ ಎಂದು ಹಿಂದೂ ಭಕ್ತರು ಬಲವಾಗಿ ನಂಬುತ್ತಾರೆ.

ಅಂಗಾರಕ ಚತುರ್ಥಿ ದಿನವು ವಿಮೋಚನೆಯ ದಿನ. ಈ ದಿನ ಭಗವಾನ್‌ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯು ಗಣೇಶ ಮತ್ತು ಮಂಗಳ ಗ್ರಹಗಳ ಆಶೀರ್ವಾದವನ್ನೂ ಪಡೆಯುತ್ತಾನೆ. ಅಂತಹ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂಬ ನಂಬಿಕೆ ಜನರದ್ದು. ಜೊತೆಗೆ, ಜಿವನದಲ್ಲಿ ನೆಮ್ಮದಿಯಿಂದ ಬಾಳಬಹುದು.

ಅಂಗಾರಕ ಚತುರ್ಥಿ ಪೂಜೆ ವಿಧಾನ ಹೇಗಿರಬೇಕು? ಅಂಗಾರಕ ಚತುರ್ಥಿಯಲ್ಲಿ ಭಕ್ತರು ಬೇಗನೆ ಎದ್ದು ಸ್ನಾನ ಮಾಡುತ್ತಾರೆ. ಅವರು ಮಣ್ಣು, ತಾಮ್ರ ಅಥವಾ ಚಿನ್ನದಿಂದ ಮಾಡಿದ ಗಣೇಶನ ವಿಗ್ರಹವನ್ನು ಪೂಜಿಸುತ್ತಾರೆ. ಸರಿಯಾದ ಆಚರಣೆಗಳು ಮತ್ತು ಅರ್ಪಣೆಗಳೊಂದಿಗೆ ಅವನನ್ನು ಪೂಜಿಸಲಾಗುತ್ತದೆ. ಗಣೇಶನ ಅಚ್ಚುಮೆಚ್ಚಿನ ಸಿಹಿ ‘ಮೋದಕ’ ವನ್ನು ‘ಆರತಿ’ ಮಾಡಿದ ನಂತರ ಅರ್ಪಿಸಲಾಗುತ್ತದೆ.

ಈ ದಿನ ಗಣೇಶನನ್ನು ಮೆಚ್ಚಿಸಲು ಭಕ್ತರು ಅಂಗಾರಕ ಚತುರ್ಥಿ ದಿನದಂದು ಕಟ್ಟುನಿಟ್ಟಾದ ವ್ರತವನ್ನು ಇಟ್ಟುಕೊಳ್ಳುತ್ತಾರೆ. ಉಪವಾಸವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ ಚಂದ್ರನನ್ನು ನೋಡಿದ ನಂತರ ಕೊನೆಗೊಳ್ಳುತ್ತದೆ. ಇಡೀ ದಿನವನ್ನು ಏನನ್ನೂ ತಿನ್ನದೇ ಧ್ಯಾನದಲ್ಲಿ ಕಳೆಯುತ್ತಾರೆ. ಕೆಲವು ಜನರು ಭಾಗಶಃ ಉಪವಾಸವನ್ನು ಆಚರಿಸುತ್ತಾರೆ. ಇದರಲ್ಲಿ ಹಣ್ಣುಗಳನ್ನು ಮತ್ತು ಸಾಬುದಾನ ಖಿಚಡಿಗಳನ್ನು ತಿನ್ನಲು ಅವಕಾಶವಿದೆ.

ಉಪವಾಸ ಆಚರಿಸುವಾಗ, ಉಪವಾಸಕ್ಕೆ ಯಾವುದೇ ಭಂಗ ಬರದ ರೀತಿ ನೋಡಿಕೊಳ್ಳುವುದು ಉತ್ತಮ. ದೇವರನ್ನು ನಿಷ್ಠೆಯಿಂದ ಪೂಜಿಸುತ್ತ, ಧ್ಯಾನದ ಕಡೆಗೆ ಗಮನವಿರುವುದರಿಂದ ಗಣೇಶನ ಆಶೀರ್ವಾದ ಪಡೆಯ ಬಹುದಾಗಿದೆ.

ಅಂಗಾರಕ ಚತುರ್ಥಿ ವ್ರತವು ಚಂದ್ರನನ್ನು ನೋಡಿದ ನಂತರ ಮತ್ತು ಗಣೇಶ ದೇವರ ಪೂಜೆಯನ್ನು ಮಾಡಿದ ನಂತರ ಕೊನೆಗೊಳ್ಳುತ್ತದೆ. ಭಕ್ತರು ಗಣೇಶನಿಗೆ ‘ಅರ್ಘ್ಯ’ ಅರ್ಪಿಸುತ್ತಾರೆ. ನಂತರ ಶುದ್ಧ ಆಹಾರ ಸೇವಿಸುವ ಮೂಲಕ ಇಂದಿನ ಉಪವಾಸ ಮುಗಿಯುತ್ತದೆ. ಭಕ್ತರು ಈ ದಿನದಂದು ಶ್ರೀಗಂಧವನ್ನು ತೇಯ್ದು, ಅಕ್ಕಿ ಮತ್ತು ಹೂವುಗಳೊಂದಿಗೆ ಚಂದ್ರ ದೇವನನ್ನು ಪೂಜಿಸುತ್ತಾರೆ.

ಗಣೇಶನಿಗೆ ಅರ್ಪಿತವಾದ ವೈದಿಕ ಮಂತ್ರಗಳನ್ನು ಈ ದಿನ ಪಠಿಸಲಾಗುತ್ತದೆ. ಅಂಗಾರಕ ಚತುರ್ಥಿಯ ದಿನದಂದು ಚಂದ್ರನು ಉದಯಿಸುವ ಮೊದಲು ‘ಗಣಪತಿ ಅಥರ್ವ ಶೇಷ’ ಓದುವುದು ಬಹಳ ಲಾಭದಾಯಕ. ಗಣೇಶನನ್ನು ಸ್ತುತಿಸಿ ಭಜನೆಗಳು ಮತ್ತು ಧಾರ್ಮಿಕ ಸ್ತುತಿಗೀತೆಗಳನ್ನು ಸಹ ಈ ದಿನ ಹಾಡಲಾಗುತ್ತದೆ.

ಅಂಗಾರಕ ಚತುರ್ಥಿ ಆಚರಣೆಯ ಪ್ರಯೋಜನ

ಅಂಗಾರಕ ಚತುರ್ಥಿಯ ಪ್ರಾಮುಖ್ಯತೆ ಮತ್ತು ಆಚರಣೆಗಳನ್ನು ಧಾರ್ಮಿಕ ಗ್ರಂಥಗಳಾದ ‘ಗಣೇಶ ಪುರಾಣ’ ಮತ್ತು ‘ಸ್ಮೃತಿ ಕೌಸ್ತುಭ’ ಗಳಲ್ಲಿ ಉಲ್ಲೇಖಿಸಲಾಗಿದೆ. ಸಂತೋಷದಾಯಕ ಮತ್ತು ಸಮೃದ್ಧ ಜೀವನಕ್ಕಾಗಿ ಭಕ್ತರು ಈ ದಿನ ಗಣೇಶನನ್ನು ಆರಾಧಿಸುತ್ತಾರೆ. ಹಿಂದೂ ಪುರಾಣ ಕಥೆಗಳ ಪ್ರಕಾರ, ಗಣೇಶನು ಬುದ್ಧಿವಂತಿಕೆಯ ಸರ್ವೋಚ್ಚ ಅಧಿಪತಿ ಮತ್ತು ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸುವವನು. ಆದ್ದರಿಂದ ಗಣೇಶ, ತನ್ನನ್ನು ಪೂಜಿಸುವುದರಿಂದ ತನ್ನ ಭಕ್ತರ ಜೀವನದಲ್ಲಿನ ಎಲ್ಲಾ ವಿಘ್ನಗಳನ್ನು ದೂರವಾಗಿಸುತ್ತಾನೆ ಮತ್ತು ಅವರ ಜೀವನದಲ್ಲಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾನೆ.

ಇದನ್ನೂ ಓದಿ: ವಿನಾಯಕನಿಗೆ ಎಷ್ಟು ನಮಸ್ಕಾರ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತೆ?