ಚಿಕ್ಕಬಳ್ಳಾಪುರ: ಆರು ಕಾರುಗಳಲ್ಲಿ ಆಗಮಿಸಿದ ನವವಿವಾಹಿತೆಯ ಪೋಷಕರ ಕಡೆಯವರು ಆಕೆಯನ್ನು ಸಿನಿಮೀಯ ರೀತಿಯಲ್ಲಿ ಬಲವಂತವಾಗಿ ಎಳೆದೊಯ್ದಿರುವ ಕುಕೃತ್ಯ ನಡೆದಿದೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದ್ಯಾವರಹಳ್ಳಿ ಗ್ರಾಮದಲ್ಲಿ ವಿವಾಹಿತೆ ವೈದ್ಯೆ ಚೈತನ್ಯಾ ಎಂಬ ಮಹಿಳೆಯನ್ನು ದುರುಳರು ಹೀಗೆ ಎಳೆದೊಯ್ದಿದ್ದಾರೆ.
ನವ ಜೋಡಿ ಮೂರು ತಿಂಗಳ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ವೈದ್ಯೆ ಚೈತನ್ಯಾ ಹಾಗೂ ಇಂಜಿನಿಯರ್ ಪೃಥ್ವಿ ಪ್ರೀತಿಸಿ ಮದುವೆ ಮಾಡಿಕೊಂಡಿದ್ರು. ಆದ್ರೆ ಮದುವೆಗೆ ವೈದ್ಯೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ರು. ಅಂದಿನಿಂದ ದ್ಯಾವರಹಳ್ಳಿ ಗ್ರಾಮದಲ್ಲಿ ಗಂಡ ಪೃಥ್ವಿ ಮನೆಯಲ್ಲಿಯೇ ವೈದ್ಯೆ ತಂಗಿದ್ದರು. ವೈದ್ಯೆ ಚೈತನ್ಯಾ ಬೆಂಗಳೂರಿನ ಬಾಣಸವಾಡಿ ಮೂಲದವರು.
ಪೊಲೀಸರು ರಕ್ಷಣೆಯಲ್ಲಿ ವಿವಾಹವಾಗಿದ್ದರು! ಪೋಷಕರ ವಿರೋಧದ ಹಿನ್ನೆಲೆ ಮದುವೆ ಸಮಯದಲ್ಲಿ ಪೊಲೀಸರು ರಕ್ಷಣೆ ನೀಡಿದ್ದರು. ವೈದ್ಯೆಯನ್ನು ಎಳೆದೊಯ್ಯುವಾಗ ಒಂದು ಕಾರು ಪಲ್ಟಿಯಾಗಿದೆ. ಇನ್ನುಳಿದ ಕಾರುಗಳು ಗ್ರಾಮದಿಂದ ಪರಾರಿಯಾಗಿವೆ. ಘಟನೆಯಲ್ಲಿ ಆರು ಜನ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಆರೂ ಜನರನ್ನ ಥಳಿಸಿ ದಿಬ್ಬೂರಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪತಿಯಿಂದ ಕಿಡ್ನಾಪ್ ದೂರು ದಾಖಲು
ಇದೀಗ, ವೈದ್ಯೆಯ ಪತಿ ಪೃಥ್ವಿ ಅವರು ತಮ್ಮ ಪತ್ನಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.