ಹೋಮ್ ಹೆಲ್ತ್ಕೇರ್ ಹಾಗೂ ವೆಲ್ನೆಸ್ ಉತ್ಪನ್ನಗಳ ಮಾರಾಟ ಮಾಡುವ ನ್ಯೂರೆಕಾ ಕಂಪೆನಿಯ ಷೇರು ಬಿಎಸ್ಇ ಸೂಚ್ಯಂಕದಲ್ಲಿ ಇಂದು 634.95ಕ್ಕೆ ಲಿಸ್ಟಿಂಗ್ ಆಗಿದೆ (Nureka share listing). ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ 53.75 ಪರ್ಸೆಂಟ್ ಪ್ರೀಮಿಯಂನೊಂದಿಗೆ 615 ರೂಪಾಯಿಗೆ ಲಿಸ್ಟಿಂಗ್ ಆಯಿತು. ಫೆಬ್ರವರಿ 15ರಿಂದ 17ರ ಮಧ್ಯೆ ಸಾರ್ವಜನಿಕ ವಿತರಣೆಗೆ (IPO) ಬಿಡುಗಡೆ ಮಾಡಲಾಗಿತ್ತು. ಈ ಮೂಲಕ ಕಂಪೆನಿಯು 100 ಕೋಟಿ ರೂಪಾಯಿ ಸಂಗ್ರಹಿಸಿತು. ಐಪಿಒಗೆ ನಲವತ್ತು ಪಟ್ಟು ಹೆಚ್ಚು ಬೇಡಿಕೆ ಬಂದಿತ್ತು.
ನಿವ್ವಳ ವಿತರಣೆ ಮೊತ್ತವಾದ 75 ಕೋಟಿ ರೂಪಾಯಿಯನ್ನು ಕಂಪೆನಿಯು ಹೆಚ್ಚುವರಿ ಕಾರ್ಯನಿರ್ವಹಣೆ ಬಂಡವಾಳಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ನ್ಯೂರೆಕಾ ಕಂಪೆನಿಯು ಹೋಮ್ ಹೆಲ್ತ್ಕೇರ್ ಹಾಗೂ ವೆಲ್ನೆಸ್ ಉತ್ಪನ್ನಗಳನ್ನು ಇ-ಕಾಮರ್ಸ್, ವಿತರಕರು, ರೀಟೇಲರ್ ಮೂಲಕ ಮಾರಾಟ ಮಾಡುತ್ತದೆ. ಜತೆಗೆ ತನ್ನದೇ ವೆಬ್ಸೈಟ್ drtrust.in ಮತ್ತು ಥರ್ಡ್ ಪಾರ್ಟಿ ಪ್ಲಾಟ್ಫಾರ್ಮ್ಗಳು ಮತ್ತು ರೀಟೇಲರ್ಗಳ ಮೂಲಕವೂ ಮಾರುತ್ತದೆ.
ಯಂತ್ರೋಪಕರಣಗಳು, ಭೂಮಿ ಮತ್ತು ಆಸ್ತಿ ಇಂಥವುಗಳ ಮೇಲೆ ನ್ಯೂರೆಕಾ ಕಂಪೆನಿಯು ಹೆಚ್ಚು ಹೂಡಿಕೆ ಮಾಡುವುದಿಲ್ಲ. ದೊಡ್ಡ ಮೊತ್ತದ ವೆಚ್ಚವನ್ನು ಮಾಡದೆ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಹಾಗೂ ಹಂಚುವುದು ಅದರ ವ್ಯಾಪಾರ ಮಾದರಿ. ಉದ್ಯಮವನ್ನು ವಿಸ್ತರಿಸುವ ಉದ್ದೇಶದಿಂದ 2019ರ ಅಕ್ಟೋಬರ್ನಲ್ಲಿ ಕ್ರೋಮಾ ಜತೆಗೆ ನ್ಯೂರೆಕಾ ಕೈ ಜೋಡಿಸಿತ್ತು. ಈ ಸಹಭಾಗಿತ್ವದ ಕಾರಣಕ್ಕೆ ನ್ಯೂರೆಕಾವು ತನ್ನ ಡಾ ಟ್ರಸ್ಟ್ ಮತ್ತು ಡಾ ಫಿಸಿಯೋ ಬ್ರ್ಯಾಂಡ್ಗಳನ್ನು ದೇಶದಾದ್ಯಂತ ಇರುವ 30 ಕ್ರೋಮಾ ಮಳಿಗೆಗಳಲ್ಲೂ ಮಾರಾಟ ಮಾಡುತ್ತದೆ.
ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ