ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಫೆಬ್ರವರಿಯಲ್ಲಿ ಮತ್ತೆ ಇಳಿಕೆ; 2020ರ ಸೆಪ್ಟೆಂಬರ್ ನಂತರ ಕನಿಷ್ಠ ಪ್ರಮಾಣಕ್ಕೆ
ಭಾರತದಲ್ಲಿ ಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಸತತ ಎರಡನೇ ತಿಂಗಳು, 2021ರ ಫೆಬ್ರವರಿಯಲ್ಲೂ ಇಳಿಕೆ ಕಂಡಿದೆ. ಅಷ್ಟೇ ಅಲ್ಲ, 2020ರ ಸೆಪ್ಟೆಂಬರ್ ನಂತರ ಬೇಡಿಕೆ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಎರಡಕ್ಕೂ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ 2021ರ ಫೆಬ್ರವರಿ ತಿಂಗಳಲ್ಲಿ ಶೇಕಡಾ 4.9ರಷ್ಟು ಕುಸಿದು, 17.21 ಮಿಲಿಯನ್ ಟನ್ಗೆ ತಲುಪಿದೆ. ಹೀಗೆ ಸತತ ಎರಡನೇ ತಿಂಗಳು ಬೇಡಿಕೆ ಕಡಿಮೆ ಆಗಿದೆ. ಅಷ್ಟೇ ಅಲ್ಲ, ಸೆಪ್ಟೆಂಬರ್ 2020ರ ನಂತರ ಬೇಡಿಕೆಯು ಕನಿಷ್ಠ ಹಂತವನ್ನು ತಲುಪಿದೆ. ಈ ಅಂಶವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಪ್ಲಾನಿಂಗ್ ಮತ್ತು ಅನಾಲಿಸಿಸ್ ವಿಭಾಗದಿಂದ ತಿಳಿದುಬಂದಿದೆ. ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಇರುವುದರಿಂದ ತೈಲ ಮಾರ್ಕೆಟಿಂಗ್ ಕಂಪೆನಿಗಳು ತೈಲ ಬೆಲೆ ಪರಿಷ್ಕರಣೆಗೆ ಬ್ರೇಕ್ ಹಾಕುವ ಮುನ್ನ ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ತಿಂಗಳು ಅತಿ ಎತ್ತರದಲ್ಲಿತ್ತು.
ದೇಶದಲ್ಲಿ ಅತಿ ಹೆಚ್ಚು ಬಳಕೆ ಮಾಡುವ ತೈಲ ಡೀಸೆಲ್. ಅದು ಶೇ 8.5ರಷ್ಟು ಕುಸಿದು, 6.55 ಮಿಲಿಯನ್ ಟನ್ ತಲುಪಿದೆ. ಇನ್ನು ಪೆಟ್ರೋಲ್ ಬಳಕೆ ಶೇ 6.5ರಷ್ಟು ಕೆಳಗೆ ಇಳಿದು 2.4 ಮಿಲಿಯನ್ ಟನ್ ಆಗಿದೆ. ನಾಫ್ತಾ ಮಾರಾಟದಲ್ಲಿ ಯಾವ ಬದಲಾವಣೆ ಆಗಿಲ್ಲ. ರಸ್ತೆ ನಿರ್ಮಾಣಕ್ಕಾಗಿ ಬಳಸುವ ಬಿಟುಮನ್ ಶೇಕಡಾ 11ರಷ್ಟು ಇಳಿದಿದೆ. ಕಚ್ಚಾ ತೈಲ ಪೂರೈಕೆ ಮಾಡುವ ಸಮೂಹವಾದ ಒಪೆಕ್ ತಿಂಗಳ ತೈಲ ವರದಿಯು ಗುರುವಾರ ತಿಳಿಸಿದ ಪ್ರಕಾರ, 2021ರಲ್ಲಿ ಭಾರತದ ತೈಲ ಬೇಡಿಕೆ ಶೇ 13.6ರಷ್ಟು ಹೆಚ್ಚಳವಾಗಿ ದಿನಕ್ಕೆ 4.99 ಮಿಲಿಯನ್ ಬ್ಯಾರೆಲ್ಸ್ ತಲುಪಲಿದೆ ಎಂದು ಅಂದಾಜು ಮಾಡಲಾಗಿದೆ.
ಭಾರತದ ತೈಲ ಬೇಡಿಕೆ 2020ರಲ್ಲಿ ಶೇ 10.54 ಇಳಿದು 4.40 ಬಿಪಿಡಿ ಮುಟ್ಟಿತ್ತು. 2019ರಲ್ಲಿ ಇದು 4.91 ಮಿಲಿಯನ್ ಬಿಪಿಡಿ ಇತ್ತು. ಪ್ರೋತ್ಸಾಹದಾಯಕವಾದ ಸ್ಥೂಲ ಆರ್ಥಿಕ ಸೂಚ್ಯಂಕಗಳು, ಕೊವಿಡ್- 19 ಪ್ರಕರಣದಲ್ಲಿನ ಗಣನೀಯ ಇಳಿಕೆ, 2021ರಲ್ಲಿ ಭಾರತದಲ್ಲಿ ತೈಲ ಬೇಡಿಕೆಗೆ ಗಟ್ಟಿ ಅಡಿಪಾಯವನ್ನು ಒದಗಿಸಿಕೊಟ್ಟಿದೆ ಎಂದು ವರದಿ ಹೇಳಿದೆ. ಕೈಗಾರಿಕೆ ಚಟುವಟಿಕೆಯಲ್ಲಿ ಈಚೆಗೆ ಆಗಿರುವ ಸಕಾರಾತ್ಮಕ ಪ್ರಗತಿಯಿಂದ 2021ರಲ್ಲಿ ತೈಲ ಬೇಡಿಕೆ ಬೆಳವಣಿಗೆಗೆ ಮುಖ್ಯ ಕಾರಣ ಆಗಿದೆ. ಸಾರಿಗೆ ವಲಯದಲ್ಲಿ ಸಹ ಆರೋಗ್ಯಕರ ಚೇತರಿಕೆ ಆಗಿರುವುದು ಬೇಡಿಕೆ ಕುದುರುವುದಕ್ಕೆ ಕಾರಣ ಆಗಿದೆ. 2021ರಲ್ಲಿ ಕೂಡ ವಿಮಾನ ಯಾನ ವಲಯ ಒತ್ತಡದಲ್ಲಿ ಇರಲಿದೆ ಮತ್ತು ಅದರಲ್ಲಿ ಅನಿಶ್ಚಿತತೆ ಇರಲಿದೆ ಎನ್ನಲಾಗಿದೆ.
ತಿಂಗಳಿಂದ ತಿಂಗಳಿಗೆ ಬೆಳವಣಿಗೆ ಕಂಡುಬರುತ್ತಿದ್ದರೂ ದೇಶೀಯ ವಿಮಾನ ಕಾರ್ಯಾಚರಣೆ ಇದೇ ಅವಧಿಯಲ್ಲಿ 2020ನೇ ಇಸವಿಯಲ್ಲಿ ದಾಖಲಾಗಿದ್ದ ಪ್ರಮಾಣಕ್ಕಿಂತ ಶೇಕಡಾ 10ಕ್ಕೂ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಒಪೆಕ್ ವರದಿ ಹೇಳಿದೆ. ಭಾರತದ ಆರ್ಥಿಕತೆಯು 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 0.4ರ ವಾಸ್ತವ ಜಿಡಿಪಿಗೆ ವಿಸ್ತರಣೆ ಆಗಿದೆ. ಅದಕ್ಕೂ ಮುನ್ನ ಎರಡು ತ್ರೈಮಾಸಿಕ ನಕಾರಾತ್ಮಕ ಬೆಳವಣಿಗೆ ದಾಖಲಿಸಿತ್ತು. ಕೊವಿಡ್- 19 ಪ್ರಕರಣಗಳು ಕಡಿಮೆ ಆದ ಮೇಲೆ ಲಾಕ್ಡೌನ್ ನಿರ್ಬಂಧಗಳನ್ನು ತೆರವು ಮಾಡಿದ ಮೇಲೆ ಈ ಬೆಳವಣಿಗೆ ಆಗಿದೆ. ಭಾರತದಲ್ಲಿ ಆರ್ಥಿಕ ಬೆಳವಣಿಗೆಯು ಮುಖ್ಯವಾಗಿ ನವೆಂಬರ್ ಮಧ್ಯಭಾಗದಲ್ಲಿ ದೀಪಾವಳಿಯಲ್ಲಿ ಗ್ರಾಹಕರು ಮಾಡಿದ ಹೆಚ್ಚಿನ ಖರ್ಚಿನಿಂದಾಗಿ ಆರ್ಥಿಕ ಬೆಳವಣಿಗೆ ಕಂಡುಬಂತು. 2020ರಲ್ಲಿ ಭಾರತದ ಜಿಡಿಪಿಯು ಶೇಕಡಾ 7ರಷ್ಟು ಇಳಿಕೆ ಆಗಿದೆ. ಆದರೆ 2021ರಲ್ಲಿ ಶೇಕಡಾ 9ರಷ್ಟು ಬೆಳವಣಿಗೆ ಆಗುವ ಅಂದಾಜು ಮಾಡಲಾಗಿದೆ.
ಇದನ್ನೂ ಓದಿ: Petrol rate: ಪೆಟ್ರೋಲ್ ಮೇಲೆ ಕೇಂದ್ರ, ರಾಜ್ಯಗಳಿಗೆ ಕಟ್ಟುವ ತೆರಿಗೆ ಲೆಕ್ಕ ಇಲ್ಲಿದೆ
Published On - 8:05 pm, Fri, 12 March 21