ದೆಹಲಿಯಲ್ಲಿ ಈಗ ‘ಮೋದಿ ಮಾಸ್ಕ್’ದೇ ಹವಾ: ಬೆಣ್ಣೆನಗರಿಯ ಮಾಸ್ಕ್‌ಗೆ ಡಿಮಾಂಡಪ್ಪೋ ಡಿಮಾಂಡ್!
ಕಳೆದ ಅಕ್ಟೋಬರ್ನಲ್ಲಿ ಈ ಮಾಸ್ಕ್‌ನ್ನು ಪ್ರಧಾನಿ ಧರಿಸಿದ್ದಾರೆ ನೋಡಿ ಎಂದು ಬಿಜೆಪಿ ಸಂಘ ಪರಿವಾರದ ಸದಸ್ಯರೊಬ್ಬರು ಮಾಹಿತಿ ನೀಡಿದಾಗ ವಿವೇಕಾಂದರ ಸಂತಸಕ್ಕೆ ಪಾರವೇ ಇರಲಿಲ್ಲ.

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಧರಿಸಿದ ಗೋಪುರ ಮಾದರಿ ಕೇಸರಿ-ಬಿಳಿ ಮಾಸ್ಕ್‌ಗೂ, ಬೆಣ್ಣೆನಗರಿಗೂ ಎಲ್ಲಿಯ ನಂಟು ಅಂತೀರಾ..ಜಿಲ್ಲೆಯಲ್ಲಿ ಸಿದ್ಧಪಡಿಸಿದ ಈ ಮಾಸ್ಕ್‌ನ್ನು ಪ್ರಧಾನಿ ಮೋದಿ ಧರಿಸುವ ಮೂಲಕ ಇದೀಗ ಎಲ್ಲರ ಗಮನ ಜಿಲ್ಲೆಯತ್ತ ಹರಿದಿದೆ. ಹೌದು, ಜಿಲ್ಲೆಯಲ್ಲಿ ಸಿದ್ಧವಾದ ಈ ಅಪ್ಪಟ ಕಾಟನ್ ಬಟ್ಟೆಯ ಮಾಸ್ಕ್‌ನ್ನು ಪ್ರಧಾನಿ ಮೋದಿ ಧರಿಸುತ್ತಿದ್ದಾರೆ.
ಸ್ವತಃ ಪ್ರಧಾನಿ ಕಾರ್ಯಾಲಯವೇ ಪತ್ರ ಬರೆದಿದೆ
ಅಂದ ಹಾಗೆ, ಪ್ರಧಾನಿ ಧರಿಸಿದ ಮಾಸ್ಕ್ನ ನಗರದ ಎಂಸಿಸಿ ಬಿ-ಬ್ಲಾಕ್‌ನ, ಕುವೆಂಪು ನಗರದಲ್ಲಿರುವ ಸಾಮಾಜಿಕ ಕಾರ್ಯಕರ್ತ ಕೆ.ಪಿ.ವಿವೇಕಾನಂದರ ಮನೆಯಲ್ಲಿ ತಯಾರಿಸಲಾಗಿದೆ. ಇದೀಗ, ಸ್ವತಃ ಪ್ರಧಾನಿ ಕಾರ್ಯಾಲಯವೇ ವಿವೇಕಾನಂದರಿಗೆ ಪ್ರಶಂಸೆಯ ಪತ್ರ ಬರೆದಿದ್ದು ಇದರಿಂದ ತಯಾರಕರ ಉತ್ಸಾಹ ಹೆಚ್ಚಿದೆ. ಈ ನಡುವೆ, ಪ್ರಧಾನಿ ಮೋದಿ ಈ ಮಾಸ್ಕ್ ಧರಿಸಿದ ಬಳಿಕ ಬೆಣ್ಣೆನಗರಿಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿದೆ. ದೇಶದ ಕೆಲ ಸಂಸದರಿಗೆ ಮತ್ತು ರಾಜಕೀಯ ನಾಯಕರಿಗೆ ಇದೇ ವಿನ್ಯಾಸದ ಮಾಸ್ಕ್ಗಳನ್ನು ಕಳುಹಿಸಿ ಕೊಡಲಾಗಿದೆ. ಇದಲ್ಲದೆ, ಜನಸಾಮಾನ್ಯರೂ ಸಹ ಮನೆಗೆ ಬಂದು ಮಾಸ್ಕ್ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ, ಸಣ್ಣ ಮಟ್ಟದಲ್ಲಿ ಶುರುವಾದ ಮಾಸ್ಕ್ ತಯಾರಿಕೆ ಈಗ ಅದರ ತಯಾರಕರಿಯಲ್ಲಿ ಬಿಡುವಿಲ್ಲದೆ ತೊಡಗುವಂತೆ ಮಾಡಿದೆ.
ಇದೇ ಈ ಮಾಸ್ಕ್ನ ವಿಶೇಷತೆ! ಈ ಮಾಸ್ಕ್ನ ವಿಶೇಷತೆ ಅಂದ್ರೆ ಇದು ಕೇಸರಿ, ಬಿಳಿ, ಹಸಿರು ಹೀಗೆ ಹತ್ತು ಹಲವಾರು ಬಣ್ಣಗಳಲ್ಲಿ ಲಭ್ಯವಿರುವ ಜೊತೆಗೆ ಗೋಪುರ ಮಾದರಿಯಲ್ಲಿದೆ. ಮನೆಯಲ್ಲೇ ಸಿದ್ಧಗೊಳ್ಳುವ ಈ ಮಾಸ್ಕ್ಗಳನ್ನು ಕುಟುಂಬದ ಸದಸ್ಯರೆಲ್ಲರೂ ಸೇರಿ ಸಿದ್ಧಪಡಿಸುತ್ತಿದ್ದಾರೆ.
ತಾನು ಮಾಡಿದ ಮಾಸ್ಕ್ ಧರಿಸಿ ಅಗಸ್ಟ್ 15ಕ್ಕೆ ಕೆಂಪುಕೋಟೆ ಮೇಲೆ ಪ್ರಧಾನಿ ಧ್ವಜಾರೋಹಣ ಮಾಡಲಿ ಎಂಬ ಆಸೆಯಿಂದ ವಿವೇಕಾನಂದ ಇದನ್ನ ಸಿದ್ಧಪಡಿಸಿ ಕಳುಹಿಸಿದ್ದರು. ಆದ್ರೆ, ಅದು ಹೋಗಿ ತಲುಪಿದ್ದು ಕೊಂಚ ತಡವಾಯಿತು. ಆದರೆ, ಕಳೆದ ಅಕ್ಟೋಬರ್ನಲ್ಲಿ ಈ ಮಾಸ್ಕ್‌ನ್ನು ಪ್ರಧಾನಿ ಧರಿಸಿದ್ದಾರೆ ನೋಡಿ ಎಂದು ಬಿಜೆಪಿ ಸಂಘ ಪರಿವಾರದ ಸದಸ್ಯರೊಬ್ಬರು ಮಾಹಿತಿ ನೀಡಿದಾಗ ವಿವೇಕಾಂದರ ಸಂತಸಕ್ಕೆ ಪಾರವೇ ಇರಲಿಲ್ಲ.
ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಕೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್‌ಗೆ ಬಹಳಷ್ಟು ಬೇಡಿಕೆ ಸೃಷ್ಟಿಯಾಗಿತ್ತು. ಬಳಸಿ ಬಿಸಾಡುವ ಮಾಸ್ಕ್‌ಗಿಂತ ಮರುಬಳಕೆಯಾಗುವ ಹಾಗೂ ಸುರಕ್ಷತೆ ನೀಡುವ ಮಾಸ್ಕ್ಗಳನ್ನು ತಯಾರಿಸುವ ಉದ್ದೇಶದಿಂದ ಕೆ.ಪಿ. ವಿವೇಕಾನಂದ ಈ ಯೋಜನೆಯನ್ನು ಜಾರಿಗೆ ತಂದರು. ಇದಕ್ಕೆ, ನಗರದ ಎಲೆಕ್ಟ್ರಿಕಲ್ ವ್ಯಾಪಾರಿ ರಂಜಿತ್ ಮತ್ತು ಕುಟುಂಬ ಹಾಗೂ ಟೈಲರ್ ಜಿ.ಬಿ. ರಾಜು ಸಾಥ್ ನೀಡಿದ್ರು.
ಇದೀಗ, ಎಲ್ಲರೂ ಸೇರಿ ಬೆಣ್ಣೆನಗರಿಯ ಹೆಸರು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಹೀಗೆ ಸಿದ್ಧವಾದ ಮಾಸ್ಕ್ ಬಗ್ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ, ವಿವೇಕಾನಂದ ತಮ್ಮ ಪತ್ನಿ ಹಾಗೂ ಮೂರು ಮಕ್ಕಳ ಜೊತೆ ಸೇರಿ ನಿರಂತರ ಮಾಸ್ಕ್ ಸಿದ್ಧಪಡೆಸಲು ಶುರು ಮಾಡಿದ್ರು. ಇಂತಹ ಮಾಸ್ಕ್ಗಳನ್ನ ಪ್ರಧಾನಿ ಕಚೇರಿಗೂ ಕಳುಹಿಸಬಹುದು ಎಂದು ಸ್ಥಳೀಯರು ತಿಳಿಸಿದರು. ಆ ಪ್ರಕಾರ, ಇದನ್ನು ಪ್ರಧಾನಿಗೆ ಕಳುಹಿಸಿದ ವಿವೇಕಾನಂದರ ಮಾಸ್ಕ್‌ನ್ನು ಧರಿಸಿದ ಮೋದಿ ಆ ಮೂಲಕ ಇವರ ಶ್ರಮವನ್ನ ಶ್ಲಾಘಿಸಿದ್ದಾರೆ.
ಒಂದು ದಿನಕ್ಕೆ ತಯಾರಾಗುತ್ತೆ 25 ಮಾಸ್ಕ್
ಮಾಸ್ಕ್‌ಗೆ ಕಾಟನ್ ಬಟ್ಟೆ ಹಾಗೂ ಕ್ಯಾನ್ವಾಸ್ ಬಳಸಿದ್ದರಿಂದ ಅದು ಒರಟಾಗಿತ್ತು. ನೋಡಲು ಸಹ ಸುಂದರವಾಗಿತ್ತು. ಇದೀಗ, ದಿನಕ್ಕೆ 25 ಮಾಸ್ಕ್ಗಳನ್ನ ಸಿದ್ಧಪಡಿಸುವ ಸಾಮರ್ಥ್ಯ ವಿವೇಕಾನಂದರ ಕುಟುಂಬಕ್ಕಿದೆ. ಮೂಗು ಬಾಯಿಯನ್ನ ಅಚ್ಚು ಕಟ್ಟಾಗಿ ಮುಚ್ಚುವ ಅದ್ಭುತ ರೀತಿಯ ಮಾಸ್ಕ್ ಇದಾಗಿದೆ. ಈ ಮಾಸ್ಕ್ 10 ಬಣ್ಣಗಳಲ್ಲಿ ಲಭ್ಯವಿದೆ.
ಮೊದಲು, 7 ಸಾವಿರ ಮಾಸ್ಕ್ಗಳನ್ನು ಉಚಿತವಾಗಿ ಹಂಚಿದ ವಿವೇಕಾನಂದರು ಈಗ ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದೀಗ, ಬೆಣ್ಣೆನಗರಿಯಿಂದ ನೇರವಾಗಿ ಪ್ರಧಾನಿ ಕಚೇರಯಲ್ಲಿ ಸುದ್ದಿ ಮಾಡಿದ ಈ ಮಾಸ್ಕ್‌ಗೆ ಈಗ ಭಾರೀ ಬೇಡಿಕೆಯಿದೆ. ಕಡಿಮೆ ದರದಲ್ಲಿ ಅಪ್ಪಟ ಕಾಟನ್ ಬಟ್ಟೆಯಲ್ಲಿ ಮಾಸ್ಕ್ಗಳ ಉತ್ಪಾದನಾ ವೆಚ್ಚವನ್ನ ಮಾತ್ರ ಪಡೆದು ಮಾಸ್ಕ್ ಮಾರಾಟ ಮಾಡಲಾಗುತ್ತಿದೆ.
ಪ್ರಧಾನಿ ಮೋದಿ ಈ ಮಾಸ್ಕ್ ಧರಿಸಿದ್ದೇ ತಡ ಜಿಲ್ಲೆಯಲ್ಲೆಲ್ಲಾ ಒಂದು ರೀತಿ ಸಂಚಲನ ಮೂಡಿದೆ. ಕೆಲವರು ನೂರು ಇನ್ನೂರು ಮಾಸ್ಕ್ಗಳನ್ನ ಖರೀದಿಸಿ ತಮ್ಮ ಆತ್ಮೀಯರಿಗಗ ಹಂಚುತ್ತಿದ್ದಾರೆ. ಈಗ ಇದು ಕೇವಲ ಮಾಸ್ಕ್ ಎಂದು ಕರೆಸಿಕೊಳ್ಳುತ್ತಿಲ್ಲ. ಬದಲಿಗೆ ಮೋದಿ ಮಾಸ್ಕ್ ಆಗಿ ಕರೆಯಲಾಗುತ್ತದೆ. -ಬಸವರಾಜ್ ದೊಡ್ಮನಿ
ಇದನ್ನೂ ಓದಿ: PPE ಕಿಟ್ ಧರಿಸಿ ಲಸಿಕೆ ತಯಾರಿಕಾ ವಿಧಾನ ಪರಿಶೀಲಿಸಿದ ಪ್ರಧಾನಿ ಮೋದಿ; ವಿಜ್ಞಾನಿಗಳೊಂದಿಗೆ ಚರ್ಚೆ
Published On - 2:35 pm, Sat, 28 November 20