ಬೆಂಗಳೂರಿನಲ್ಲಿ ಜಲಪ್ರಳಯ: ಜನ ಪ್ರತಿನಿಧಿಗಳಿಗೆ ಗುತ್ತಿಗೆದಾರರ ಬಗ್ಗೆಯೇ ಒಲವು ಜಾಸ್ತಿ! ಅದಕ್ಕೇ ಈ ಪರದಾಟ..
ನಿನ್ನೆ ಮೊನ್ನೆ ಸುರಿದ ಭಾರೀ ಮಳೆಗೆ ನಗರ ನಲುಗಿದೆ. ದೃಶ್ಯ ಮಾಧ್ಯಮಗಳಲ್ಲಿ ಮತ್ತೆ ಮತ್ತೆ ಮಳೆಯದೇ ಸುದ್ದಿ. ಮಳೆ ನಿಂತಾಗ ಅಧಿಕಾರಿಗಳು, ಜನ ಪ್ರತಿನಿಧಿಗಳು ಮಳೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವುದು; ಅಲ್ಲಿನ ಜನರಿಗೆ ಸಾಂತ್ವನ ಹೇಳುವುದು. ಇದನ್ನು ನೋಡಿದ ಜನ, ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ತಮ್ಮ ದೈನಂದಿನ ಕೆಲಸದಲ್ಲಿ ಮುಳುಗುವುದು ಸರ್ವೇ ಸಾಮಾನ್ಯ. ಬೆಂಗಳೂರಿನ ಜನರಿಗೆ ಇದು ಹೊಸದಲ್ಲ. ಈ ಹಿಂದೆಯೂ ನಡೆದಿದೆ, ಮುಂದೆಯೂ ಇದೇ ಸ್ಥಿತಿ ಇರುವುದು ಖಂಡಿತ. ಈ […]
ನಿನ್ನೆ ಮೊನ್ನೆ ಸುರಿದ ಭಾರೀ ಮಳೆಗೆ ನಗರ ನಲುಗಿದೆ. ದೃಶ್ಯ ಮಾಧ್ಯಮಗಳಲ್ಲಿ ಮತ್ತೆ ಮತ್ತೆ ಮಳೆಯದೇ ಸುದ್ದಿ. ಮಳೆ ನಿಂತಾಗ ಅಧಿಕಾರಿಗಳು, ಜನ ಪ್ರತಿನಿಧಿಗಳು ಮಳೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವುದು; ಅಲ್ಲಿನ ಜನರಿಗೆ ಸಾಂತ್ವನ ಹೇಳುವುದು. ಇದನ್ನು ನೋಡಿದ ಜನ, ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ತಮ್ಮ ದೈನಂದಿನ ಕೆಲಸದಲ್ಲಿ ಮುಳುಗುವುದು ಸರ್ವೇ ಸಾಮಾನ್ಯ. ಬೆಂಗಳೂರಿನ ಜನರಿಗೆ ಇದು ಹೊಸದಲ್ಲ. ಈ ಹಿಂದೆಯೂ ನಡೆದಿದೆ, ಮುಂದೆಯೂ ಇದೇ ಸ್ಥಿತಿ ಇರುವುದು ಖಂಡಿತ.
ಈ ಬಾರಿ ಮಳೆ ನೀರು ನಿಂತ ಜಾಗ, ಈ ಹಿಂದೆಯೂ ಕೂಡ ಮುಳುಗಿತ್ತಾ? ಉದಾಹರಣೆಗೆ ಮೈಸೂರು ರಸ್ತೆಯನ್ನೆ ನೋಡಿ. ಮೆಟ್ರೋ ಲೈನ್ ಅಡಿ ಆಚೆ ಮತ್ತು ಈಚೆ ಇರುವ ಮೈಸೂರು ರಸ್ತೆಯಲ್ಲಿ ಓಡಾಡುವವರಿಗೆ ಗೊತ್ತು: ಜಲಾವೃತ್ತಕ್ಕೆ ಕಾರಣ ಇಂಜಿನಿಯರಿಂಗ್ ಮತ್ತು ಗುತ್ತಿಗೆದಾರರ ವೈಫಲತೆ ಎಂಬುದು. ನೀರು ಹರಿದು ಹೋಗಲು ಶೋಲ್ಡರ್ ಡ್ರೇನ್ ಗಳನ್ನ ಸರಿಯಾಗಿ ರಸ್ತೆಯ ಎರಡೂ ಕಡೆ (ಫುಟ್ ಪಾತ್ ಗೆ ತಾಗಿ) ತಗ್ಗು ಪ್ರದೇಶದಲ್ಲಿ ನಿರ್ಮಿಸದೇ ಇರುವುದು.
ಈ ಮೊದಲೇ ನಿರ್ಮಿಸಿರುವ ಶೋಲ್ಡರ್ ಡ್ರೇನ್ ಗಳನ್ನು ಮಳೆ ಶುರುವಾಗುವ ಮೊದಲೇ ಚೊಕ್ಕ ಮಾಡಿ ದಾರಿ ಬಿಡಿಸಿ ಕೊಡದೇ ಇರುವುದು ಮೈಸೂರು ರಸ್ತೆ ಮುಳುಗಲು ಕಾರಣವಾಯ್ತು. ಕೆಲವೆಡೆ, ಸ್ಮಾರ್ಟ ಸಿಟಿ ಕಾರ್ಯಕ್ರಮದ ಅಡಿ ಸಿಮೆಂಟ್ ರಸ್ತೆ ಮಾಡುವ ಕೆಲಸ ನಡೆಯುತ್ತಿದ್ದು, ಅಲ್ಲಿ ಶೋಲ್ಡರ್ ಡ್ರೇನ್ ಇಲ್ಲದೇ ನೀರು ನಿಂತಿದ್ದು ಕಾರಣವಾಗಿದೆ.
ಇನ್ನು ಹೊಸಕೆರೆಹಳ್ಳಿಯನ್ನ ತೆಗೆದು ಕೊಳ್ಳೋಣ. ರಾಜಕಾಲುವೆಯನ್ನ ಬಿಡಿಸಿಕೊಡದೇ ಇದ್ದಿದ್ದು, ತಗ್ಗು ಪ್ರದೇಶದಲ್ಲಿ ಮನೆ ಕಟ್ಟಿ, ಮಳೆ ನೀರು ಹೋಗಲು ದಾರಿ ಬಿಟ್ಟಿಲ್ಲದೇ ಇರೋದು ಅಲ್ಲಿ ಮಳೆಯ ಆವಾಂತರಕ್ಕೆ ಕಾರಣವಾಯ್ತು. ಮಳೆ ಮುಗಿದ ಮೇಲೆ ಇದೇ ಜನ, ಜನ ಪ್ರತಿನಿಧಿಗಳ ಹಿಂದೆ ಹೋಗಿ, ಪಾಲಿಕೆಯವರು ಅಕ್ರಮವಾಗಿ ಕಟ್ಟಿದ ಮನೆಯನ್ನು ಕೆಡವಲು ಬಂದರೆ ತಡೆ ತರುತ್ತಾರೆ. ಮತ ಗಳಿಕೆಗಾಗಿ, ಅಕ್ರಮವಾಗಿ ಕಟ್ಟಿದ ಮನೆಗಳನ್ನು ಕೆಡವುದೇ ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮ ಮಾಡಲು ಜನ ಪ್ರತಿನಿಧಿಗಳೇ ಸಹಾಯ ಮಾಡುವುದು ಹೊಸದೇನಲ್ಲ.
ಶಾಂತಿನಗರ, ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಏರಿಯಾ ಸಮಸ್ಯೆಯೇ ಬೇರೆ ನಿನ್ನೆ ಸಂಜೆ ಶಾಂತಿನಗರ ಮತ್ತು ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಏರಿಯಾಗಳಲ್ಲಿ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರ ಪರದಾಟ ಹೇಳಿತೀರದ್ದಾಗಿತ್ತು. ಈ ‘ತೀರದ’ ಪರದಾಟ ಏಕೆಂದ್ರೆ ಅಂದಿನ ನಗರ ನಿರ್ಮಾತೃಗಳು ಇವೆರಡೂ ಪ್ರದೇಶಗಳನ್ನು ಕೆರೆ ಕಟ್ಟೆಯನ್ನಾಗಿ ಪರಿಗಣಿಸಿ, ಬೃಹದಾದ ಕೆರೆಗಳನ್ನು ಕಟ್ಟಿದ್ದರು. ಆದರೆ ಈಗಿನ ನಗರ ಪ್ರಭೃತಿಗಳು ವಿಶಾಲವಾದ ಜಾಗ ಅನಾಯಾಸವಾಗಿ ಸಿಕ್ಕಿತೆಂದು ಬಸ್ ಸ್ಟ್ಯಾಂಡ್ ನಿರ್ಮಿಸಿದ್ದರೆ ಅದಕ್ಕೆ ಹೊಣೆಯಾರು? ಆಸುಖಾಸುಮ್ಮನೆ ಮಳೆರಾಯನನ್ನು ಶಪಿಸಿದರೆ ಹೇಗೆ?
ಬೇಸಿಗೆಯಲ್ಲೆ ಯಾಕೆ ಈ ಕೆಲಸ ಮಾಡಿರಲಿಲ್ಲ? ಈ ಬಾರಿ ಬಿ ಬಿ ಎಂ ಪಿ ಅಧಿಕಾರಿಗಳಿಗೆ ಕೋವಿಡ್ ಕೆಲಸ ಇತ್ತು. ಅವರಿಗೆ ಪ್ರಾಯಶಃ ಇದನ್ನು ತುರ್ತು ಎಂದು ಪರಿಗಣಿಸಲು ಆಗಿರಲಿಲ್ಲ ಎಂಬ ವಿಚಾರವನ್ನು ಒಪ್ಪಿಕೊಂಡರೂ, ಮೊದಲೇ ಪ್ಲಾನ್ ಮಾಡಿ, ಗುತ್ತಿಗೆ ಕರೆದು ಕೆಲಸ ನೀಡಬಹುದಿತ್ತಲ್ಲ? ಇಲ್ಲಿಯೇ ಇದೆ ಇದರ ಒಳ ಗುಟ್ಟು ಇರುವುದು.
ಈ ಹಿಂದೆ ಮಹಾಪೌರರಾಗಿದ್ದ ಓರ್ವ ಕಾಂಗ್ರೆಸ್ ನಾಯಕರ ಪ್ರಕಾರ, ಬಿ ಬಿ ಎಂ ಪಿ ಅಧಿಕಾರಿಗಳಿಗೆ ಆ ರೀತಿ ಯೋಜನಾಬದ್ಧವಾಗಿ ಕೆಲಸ ಮಾಡುವುದು ಇಷ್ಟವಿಲ್ಲ. ಅವರಿಗೆ ಬಿಕ್ಕಟ್ಟು ಬರಬೇಕು, ಆಗ ತುರ್ತು ಪರಿಸ್ಥಿತಿ ಎಂದು ಗುತ್ತಿಗೆ ಇಲ್ಲದೇ ಕೆಲಸ ಮಾಡಿಸಿ ಒಂದು ಕೆಲಸಕ್ಕೆ ಎರಡು ಬಿಲ್ ಮಾಡಿ ಹಣ ಮಾಡುವುದು ವಾಡಿಕೆ.
ಈ ಬಾರಿ ಕೂಡ ಅದೇ ಅಗುತ್ತೆ ಎಂಬುದು ಹೆಸರು ಹೇಳಲು ಇಚ್ಚಿಸದ ನಾಯಕರ ಅಭಿಪ್ರಾಯ. ಇನ್ನೊಂದೆಡೆ, ಅಧಿಕಾರಿಗಳ ಪ್ರಕಾರ, ಜನ ಪ್ರತಿನಿಧಿಗಳು ಹೇಳುವುದು ಒಂದು, ಒಳಗೆ ಮಾಡುವ ಕೆಲಸ ಇನ್ನೊಂದು. ಅಧಿಕಾರಿಗಳ ಕೈ ಕಟ್ಟಿ, ತಾವು ಹೇಳಿದಂತೆ ಕೆಲಸ ಮಾಡಬೇಕು ಎಂದು ಹಠ ಹೊತ್ತಿರುವ ಜನ ಪ್ರತಿನಿಧಿಗಳು ಯಾವಾಗಲೂ ಗುತ್ತಿಗೆದಾರರ ಬಗ್ಗೆ ಜಾಸ್ತಿ ಒಲವು ತೋರಿಸುತ್ತಾರೆ.
ಆಪತ್ತು (crisis) ಇಲ್ಲದ ದಿನಗಳಲ್ಲಿ ಜನರ ಹಿತದ ಬಗ್ಗೆ ಚಿಂತನೆ ಮಾಡುವುದಿಲ್ಲ ಎಂಬುದು ಅಧಿಕಾರಿಗಳ ವಾದ. ಇದಕ್ಕೆ ಪುಷ್ಠಿಕೊಡುವಂತೆ, ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿ ಯಾರಿಗೂ ಹಂಚದೇ ತಾವೇ ಇಟ್ಟುಕೊಂಡಿರೋದು ಭಾರೀ ಗೊಂದಲಕ್ಕೆ ಕಾರಣವಾಗಿರೋದು ನಿಜ.
ಬಾರದ ಮಂತ್ರಿಗಳು ವಿ. ಸೋಮಣ್ಣ, ಕೆ. ಗೋಪಾಲಯ್ಯ, ಡಾ. ಅಶ್ವತ್ಥ ನಾರಾಯಣ, ಬೈರತಿ ಬಸವರಾಜ್ ಮುಂತಾದ ಮಂತ್ರಿಗಳು ಮಳೆಯಿಂದ ಹಾನಿಪೀಡಿತ ಪ್ರದೇಶಕ್ಕೆ ಇನ್ನೂ ಭೇಟಿ ನೀಡಿಲ್ಲ. ಅವರು ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಗೆ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣಾ ಪ್ರಚಾರಕ್ಕೆ ಹೊರಟಿದ್ದಾರೆ, ಹಾಗಾಗಿ ಅವರಿಗೆ ಹಾನಿ ಪೀಡಿತ ಪ್ರದೇಶದ ಜನರನ್ನ ಭೀಟಿ ಮಾಡಲು ಸಮಯ ಸಿಕ್ಕಿಲ್ಲ.
Published On - 3:12 pm, Sat, 24 October 20