ಮಾಸ್ಕ್ ಹಾಕದವರಿಗೆ ‘ದಂಡ’ದಶಗುಣಂ: 3 ಸಾವಿರ ಕೇಸ್, 4 ಲಕ್ಷ ರೂ ದಂಡ
ರಾಮನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಜಿಲ್ಲೆಯ ಜನರು ಕೊರೊನಾ ವಿರುದ್ಧದ ಮುಂಜಾಗ್ರತಾ ಕ್ರಮಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ಪೊಲೀಸರು ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ, 4 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ದಂಡವನ್ನು ಸಹ ವಸೂಲಿ ಮಾಡಿದ್ದಾರೆ. ಅಂದ ಹಾಗೆ, ಜಿಲ್ಲೆಯ ನಾಲ್ಕು ತಾಲೂಕು ಹಾಗೂ 22 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು 3,212 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ […]

ರಾಮನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಜಿಲ್ಲೆಯ ಜನರು ಕೊರೊನಾ ವಿರುದ್ಧದ ಮುಂಜಾಗ್ರತಾ ಕ್ರಮಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಾಸ್ಕ್ ಧರಿಸದೆ ಸಂಚರಿಸುವವರ ವಿರುದ್ಧ ಪೊಲೀಸರು ಇಲ್ಲಿಯವರೆಗೆ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ, 4 ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತದ ದಂಡವನ್ನು ಸಹ ವಸೂಲಿ ಮಾಡಿದ್ದಾರೆ.
ಅಂದ ಹಾಗೆ, ಜಿಲ್ಲೆಯ ನಾಲ್ಕು ತಾಲೂಕು ಹಾಗೂ 22 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು 3,212 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಮಧ್ಯೆ ಎಚ್ಚರಿಕೆ ಕೊಟ್ಟು ಬಿಟ್ಟುಕಳುಹಿಸಿರುವ ಪ್ರಕರಣಗಳು ಲೆಕ್ಕಕ್ಕೇ ಇಲ್ಲ.
ಜಿಲ್ಲಾ ಪೊಲೀಸ್ ವ್ಯಾಪ್ತಿಯ ರಾಮನಗರ ಪುರ ಠಾಣೆಯಲ್ಲಿ 198, ಐಜೂರು ಠಾಣಾ ವ್ಯಾಪ್ತಿಯಲ್ಲಿ 114, ರಾಮನಗರ ಗ್ರಾಮಾಂತರದಲ್ಲಿ 142, ಬಿಡದಿಯಲ್ಲಿ 238 ಕೇಸ್ ದಾಖಲಾಗಿದೆ. ಇತ್ತ ರಾಮನಗರ ತಾಲೂಕಿನಲ್ಲಿ ಒಟ್ಟು 692 ಪ್ರಕರಣಗಳು, ಕನಕಪುರ ತಾಲೂಕಿನಲ್ಲಿ 522 ಪ್ರಕರಣ, ಚನ್ನಪಟ್ಟಣ ತಾಲೂಕಿನಲ್ಲಿ 417 ಹಾಗೂ ಮಾಗಡಿ ತಾಲೂಕಿನಲ್ಲಿ 253 ಪ್ರಕರಣಗಳು ದಾಖಲಾಗಿವೆ.
ಇನ್ನು ಕಗ್ಗಲಿಪುರ ಠಾಣಾ ವ್ಯಾಪ್ತಿಯಲ್ಲಿ 466, ಕುಂಬಳಗೂಡು ಠಾಣಾ ವ್ಯಾಪ್ತಿಯಲ್ಲಿ 252, ತಾವರೆಕೆರೆ ಠಾಣಾ ವ್ಯಾಪ್ತಿಯಲ್ಲಿ 117 ಪ್ರಕರಣಗಳು ದಾಖಲಿಸಿ ದಂಡ ವಿಧಿಸಲಾಗಿದೆ. ರಾಮನಗರ ಸಂಚಾರಿ ಠಾಣಾ ಪೊಲೀಸರು 178, ಚನ್ನಪಟ್ಟಣ ಸಂಚಾರಿ ಠಾಣಾ ಪೊಲೀಸರು 215 ಮತ್ತು ಕನಕಪುರ ಸಂಚಾರಿ ಠಾಣಾ ಪೊಲೀಸರು 99 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇನ್ನೊಂದೆಡೆ, ಜಿಲ್ಲೆಯಲ್ಲಿರುವ ರಾಮನಗರ, ಚನ್ನಪಟ್ಟಣ, ಕನಕಪುರ ನಗರಸಭೆಗಳು ಮತ್ತು ಮಾಗಡಿ ಹಾಗೂ ಬಿಡದಿ ಪುರಸಭೆಗಳಲ್ಲಿ 1 ಲಕ್ಷದವರೆಗೆ ದಂಡ ಸಂಗ್ರಹಿಸಲಾಗಿದೆ.
-ಪ್ರಶಾಂತ್



