Martyr’s Day 2021: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ದಿನ; ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಭಗತ್ಸಿಂಗ್, ಸುಖ್ದೇವ್, ರಾಜ್ಗುರುಗೆ ನಮನ
Shaheed Diwas 2021: ಭಾರತದಲ್ಲಿನ ರಾಜಕೀಯ ಸ್ಥಿತಿಯ ಬಗ್ಗೆ ವರದಿ ಮಾಡುವ ಸಲುವಾಗಿ ಬ್ರಿಟಿಷ್ ಸರ್ಕಾರ ಸರ್ ಜಾನ್ ಸೈಮನ್ ನೇತೃತ್ವದಲ್ಲಿ ಆಯೋಗವೊಂದನ್ನು ಸ್ಥಾಪಿಸಿತು. ಅದಕ್ಕೆ ಸೈಮನ್ ಆಯೋಗ ಎಂದೇ ನಾಮಕರಣವಾಯಿತು. ಆದರೆ ಈ ಕಮಿಷನ್ ವಿರುದ್ಧ ಭಾರತದ ಕೆಲವರು ಹೋರಾಟಗಾರರು ತಿರುಗಿಬಿದ್ದರು.
ಇಂದು ಮೂವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ದಿನ. ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಲು ಕ್ರಾಂತಿ ಕಾರಿ ಮಾರ್ಗವೇ ಸೂಕ್ತ ಎಂದು ನಂಬಿ, ಅದೇ ನಿಟ್ಟಿನಲ್ಲಿ ಹೋರಾಟ ಮಾಡಿದ ಭಗತ್ ಸಿಂಗ್, ಸುಖ್ದೇವ್ ಮತ್ತು ಶಿವರಾಮ್ ರಾಜಗುರು ಅವರನ್ನು ಗಲ್ಲಿಗೇರಿಸಿದ ದಿನ ಇಂದು . 1931ರ ಮಾರ್ಚ್ 23ರ ರಾತ್ರಿ ಲಾಹೋರ್ ಜೈಲಿನಲ್ಲಿ ಈ ಮೂವರೂ ಜೀವ ತ್ಯಾಗ ಮಾಡಿದ್ದರು. ಆ ಹೊತ್ತಲ್ಲೂ ಕೂಡ ಅವರು ಅತ್ಯಂತ ಶಾಂತರಾಗಿದ್ದೇ ತಮ್ಮ ಕ್ರಾಂತಿಕಾರಿ ಮನೋಭಾವ ತೋರಿದ್ದರು. ಸ್ವತಃ ತಾವೇ ಸ್ಟೂಲ್ ಹತ್ತಿ ನಿಂತಿದ್ದರು. ಕೊನೇ ಕ್ಷಣದಲ್ಲೂ ಇನ್ಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಯನ್ನು ಕೂಗಿ ಬ್ರಿಟಿಷರಿಗೆ ಉರಿ ಮುಟ್ಟಿಸಿದರು. ಅಷ್ಟೇ ಅಲ್ಲ, ತಮ್ಮ ಕುತ್ತಿಗೆಗೆ ನೇಣು ಬಿಗಿಯುವ ಕೆಲಸವನ್ನೂ ಬ್ರಿಟಿಷ್ ಪೊಲೀಸ್ ಅಧಿಕಾರಿಗಳಿಗೆ ಕೊಡಲಿಲ್ಲ. ತಾವೇ ಬಿಗಿದುಕೊಂಡು, ಭಾರತಾಂಬೆಗೆ ತಮ್ಮ ಪ್ರಾಣ ಅರ್ಪಿಸಿದರು.
ಭಾರತದಲ್ಲಿನ ರಾಜಕೀಯ ಸ್ಥಿತಿಯ ಬಗ್ಗೆ ವರದಿ ಮಾಡುವ ಸಲುವಾಗಿ ಬ್ರಿಟಿಷ್ ಸರ್ಕಾರ ಸರ್ ಜಾನ್ ಸೈಮನ್ ನೇತೃತ್ವದಲ್ಲಿ ಆಯೋಗವೊಂದನ್ನು ಸ್ಥಾಪಿಸಿತು. ಅದಕ್ಕೆ ಸೈಮನ್ ಆಯೋಗ ಎಂದೇ ನಾಮಕರಣವಾಯಿತು. ಆದರೆ ಈ ಕಮಿಷನ್ ವಿರುದ್ಧ ಭಾರತದ ಕೆಲವರು ಹೋರಾಟಗಾರರು ತಿರುಗಿಬಿದ್ದರು. ಸೈಮನ್ ಆಯೋಗದಲ್ಲಿ ಒಬ್ಬರೂ ಭಾರತೀಯರಿಗೆ ಅವಕಾಶ ಕೊಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದವು. ಇದೇ ಹೊತ್ತಲ್ಲಿ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಆರ್ಮಿ ಸಂಘಟನೆ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಮರುನಾಮಕರಣವಾಯಿತು. ಬ್ರಿಟಿಷರ ವಿರುದ್ಧ ಭಾರತೀಯರನ್ನು ಒಗ್ಗಟ್ಟು ಮಾಡುವ ಸಲುವಾಗಿ ಸ್ಥಾಪಿತವಾಗಿದ್ದ ಈ ಸಂಘಟನೆಯಲ್ಲಿ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖ್ದೇವ್, ರಾಜ್ಗುರು, ಸಚೀಂದ್ರ ನಾಥ್ ಸನ್ಯಾಲ್ ಸೇರಿ ಹಲವು ಕ್ರಾಂತಿಕಾರಿ ಮನೋಭಾವ ಯುವಕರೇ ಇದ್ದರು. ಇವೆಲ್ಲ ಬ್ರಿಟಿಷರ ವಿರುದ್ಧ ತುಂಬ ಕ್ರೂರವಾಗಿಯೇ ತಿರುಗಿಬಿದ್ದಿದ್ದರು.
1928ರ ಅಕ್ಟೋಬರ್ 30ರಂದು ಸೈಮನ್ ಆಯೋಗ ಲಾಹೋರ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಈ ಆಯೋಗವನ್ನು ವಿರೋಧಿಸಿ ಲಾಲಾ ಲಜಪತ್ ರಾಯ್ ನೇತೃತ್ವದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ಲಾಠಿ ಚಾರ್ಜ್ ಮಾಡುವಂತೆ ಜೇಮ್ಸ್ ಎ ಸ್ಕಾಟ್ ಆದೇಶಿಸಿದರು. ಈ ಲಾಠಿ ಚಾರ್ಜ್ನಲ್ಲಿ ಲಾಲಾ ಲಜಪತ್ರಾಯ್ ಅವರು ಗಂಭೀರವಾಗಿ ಗಾಯಗೊಂಡು, ನಂತರ ನವೆಂಬರ್ 17ರಂದು ಮೃತಪಟ್ಟರು. ಈ ಸಾವನ್ನು ಗಂಭೀರವಾಗಿ ಪರಿಗಣಿಸಿದ ಭಗತ್ಸಿಂಗ್ ಆದಿಯಾಗಿ ಉಳಿದ ಯುವಕರು ಸೇಡಿನ ಪ್ರತಿಜ್ಞೆ ಮಾಡಿದರು. ಸ್ಕಾಟ್ನನ್ನು ಕೊಲ್ಲಲು ನಿರ್ಧರಿಸಿದರು. 1928ರ ಡಿಸೆಂಬರ್ 17ರಂದು ಆ ದಿನ ಬಂದೇ ಬಿಟ್ಟಿತು. ಆದರೆ ಅಂದು ಭಗತ್ ಸಿಂಗ್ ಮತ್ತು ರಾಜ್ಗುರು, ತಪ್ಪಾಗಿ ಗುರುತಿಸಿಕೊಂಡು ಪೊಲೀಸ್ ವರಿಷ್ಠಾಧಿಕಾರಿ ಸ್ಕಾಟ್ನ ಬದಲು, ಸಹಾಯಕ ಅಧಿಕಾರಿ ಜಾನ್ ಪಿ. ಸ್ವಾಂಡರ್ಸ್ನಿಗೆ ಗುಂಡು ಹಾರಿಸಿದ್ದರು. ಆತ ಲಾಹೋರ್ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಯಿಂದ ಹೊರಬರುತ್ತಿದ್ದಂತೆ ಸ್ವಾಂಡರ್ಸ್ನ ಕೊಲೆ ಮಾಡಿದ್ದರು. ಮುಂದೆ ರಹಸ್ಯವಾಗಿ ಬಾಂಬ್ ತಯಾರಿಸಿ, ಸ್ಫೋಟಿಸಿದರು. ಆದರೆ ನಂತರ ಬ್ರಿಟಿಷರಿಂದ ಬಂಧಿತರಾದರು.
1931ರ ಹೊತ್ತಿಗೆ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ನ ಬಹುತೇಕ ಸದಸ್ಯರು ಬ್ರಿಟಿಷರ ಹಿಡಿತದಲ್ಲಿದ್ದರು. ವಿಚಾರಣೆಗಳನ್ನೂ ಎದುರಿಸಿದರು ಅದರಲ್ಲಿ ಭಗತ್ಸಿಂಗ್, ರಾಜ್ಗುರು, ಸುಖ್ದೇವ್ರನ್ನು ನೇಣಿಗೇರಿಸಲು ಬ್ರಿಟಿಷ್ ಸರ್ಕಾರ ನಿರ್ಧರಿಸಿಬಿಟ್ಟಿತ್ತು. 1931ರ ಮಾರ್ಚ್ 24ರಂದು ಅವರನ್ನು ಗಲ್ಲಿಗೇರಿಸಲು ನ್ಯಾಯಾಲಯ ಆದೇಶ ನೀಡಿದಾಗ್ಯೂ ಒಂದು ದಿನ ಮುಂಚೆಯೇ ಅವರನ್ನು ನೇಣಿಗೇರಿಸಲಾಯಿತು. ದೇಶಾದ್ಯಂತ ನಡೆಯಬಹುದಾದ ಪ್ರತಿಭಟನೆಗೆ ಹೆದರಿ ಬ್ರಿಟಿಷರು ಹೀಗೆ ಮಾಡಿದ್ದರು.
ತಾರುಣ್ಯದಲ್ಲೇ ಜೀವತ್ಯಾಗ ಇನ್ನು ಭಗತ್ ಸಿಂಗ್, ಸುಖ್ದೇವ್ ಮತ್ತು ರಾಜಗುರು ದೇಶಕ್ಕಾಗಿ ಜೀವತ್ಯಾಗ ಮಾಡುವಾಗ ಇನ್ನೂ ಯುವಕರು. ಭಗತ್ ಸಿಂಗ್ ಮತ್ತು ಸುಖ್ದೇವ್ಗೆ 24ವರ್ಷವಾದರೆ, ರಾಜ್ಗುರು ಅವರಿಗೆ ಕೇವಲ 23 ವರ್ಷ. ಜೀವನವನ್ನೆಲ್ಲ ದೇಶಕ್ಕಾಗಿಯೇ ಮುಡಿಪಾಗಿಟ್ಟ ಇವರು ಇಂದಿಗೂ ಅದೆಷ್ಟೋ ಜನರಿಗೆ ಮಾದರಿ. ನಿಜವಾದ ಸ್ವಾತಂತ್ರ್ಯ ಹೋರಾಟಗಾರರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರಿಂದ ಗೌರವ ಮೂವರು ಕ್ರಾಂತಿಕಾರಿಗಳ ಬಲಿದಾನದ ದಿನವಾದ ಇಂದು, ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾ ಭಗತ್ಸಿಂಗ್, ರಾಜಗುರು, ಸುಖ್ದೇವ್ ಹುತಾತ್ಮ ದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಭಾರತಾಂಬೆಗಾಗಿ ಪ್ರಾಣ ತ್ಯಾಗ ಮಾಡಿದ ಈ ಮಹಾನ್ ಪುತ್ರರು ಸದಾ ಮಾದರಿ. ದೇಶದ ಪ್ರತಿ ಪೀಳಿಗೆಗೂ ಸ್ಫೂರ್ತಿ ಎಂದು ಹೇಳಿದ್ದಾರೆ. ಹಾಗೇ, ಇನ್ನೂ ಹಲವು ರಾಜಕಾರಣಿಗಳು ಕ್ರಾಂತಿಕಾರಿಗಳಿಗೆ ಗೌರವ ಸಲ್ಲಿಸಿದ್ದಾರೆ.
आजादी के क्रांतिदूत अमर शहीद वीर भगत सिंह, सुखदेव और राजगुरु को शहीदी दिवस पर शत-शत नमन। मां भारती के इन महान सपूतों का बलिदान देश की हर पीढ़ी के लिए प्रेरणास्रोत बना रहेगा। जय हिंद! #ShaheedDiwas pic.twitter.com/qs3SqAHkO9
— Narendra Modi (@narendramodi) March 23, 2021