ನಗರವನ್ನು ಸ್ವಚ್ಛವಾಗಿ ಇಡುವ ದೃಷ್ಟಿಯಿಂದ ಸರ್ಕಾರ ಒಂದಷ್ಟು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದೇನೋ ನಿಜ, ಆದರೆ ನಿರ್ಮಾಣ ಮಾಡಿದ ಎಲ್ಲಾ ಶೌಚಾಲಯಗಳು ಜನರಿಗೆ ಉಪಯುಕ್ತವಾಗಿರುತ್ತದೆ ಎಂದು ಹೇಳುವುದು ಕಷ್ಟಸಾಧ್ಯ.
ಜನರ ಬಳಕೆಗೆ ಯೋಗ್ಯವಾದ ಶೌಚಾಲಯಗಳೇನೋ ಇವೆ. ಆದರೆ ಅವುಗಳ ಶುಚಿತ್ವ ಕೇವಲ ಒಂದು ಅಥವಾ ಎರಡು ವರ್ಷಗಳಿಗಷ್ಟೇ ಸೀಮಿತವಾಗಿರುತ್ತದೆ. ಇನ್ನು ಮೇಲ್ನೋಟಕ್ಕೆ ಶೌಚಾಲಯಗಳನ್ನು ನಿರ್ಮಾಣ ಮಾಡಿ ಅವು ಬಳಕೆಗೆ ಯೋಗ್ಯವಾಗಿದೆಯೋ ಇಲ್ಲವೋ ಎನ್ನುವುದನ್ನು ಮರುಪರಿಶೀಲನೆಯನ್ನೂ ನಡೆಸದ ಅದೆಷ್ಟೋ ಉದಾಹರಣೆಗಳಿದೆ.
ನವೆಂಬರ್ 19 ವಿಶ್ವ ಶೌಚ ದಿನ. ಈ ಸಂದರ್ಭದಲ್ಲಿ TV9 ಡಿಜಿಟಲ್ ಬೆಂಗಳೂರು ನಗರದಲ್ಲಿರುವ ಶೌಚಾಲಯಗಳ ಸ್ಥಿತಿಗತಿಯನ್ನು ಅವಲೋಕಿಸಿತು. ಬೇರೆ ಬೇರೆ ಕಡೆ ಇರುವ ಸಾರ್ವಜನಿಕ ಶೌಚಾಲಯಗಳನ್ನು ಭೇಟಿ ನೀಡಿತು. ಶೌಚಾಲಯದ ಶುಚಿತ್ವ ಕಾಪಾಡುವಲ್ಲಿ ಬಿಬಿಎಂಪಿ ಮುಖ್ಯ ಪಾತ್ರವಹಿಸಿದೆ. ಆದರೆ ನಗರಗಳಲ್ಲಿ ಬಳಕೆಗೆ ಯೋಗ್ಯವಲ್ಲದ ಸಾರ್ವಜನಿಕ ಶೌಚಾಲಯದ ಬಗ್ಗೆಯೂ ಹೆಚ್ಚಿನ ಗಮನಹರಿಸುವುದು ಸೂಕ್ತ.
ಚಾಮರಾಜಪೇಟೆ, ಮೆಜೆಸ್ಟಿಕ್ ಮತ್ತು ನ್ಯೂಬೆಲ್ ರಸ್ತೆಯಲ್ಲಿ ಪಾಳುಬಿದ್ದ ಶೌಚಾಲಯಗಳಿದ್ದು, ಲಕ್ಷಾಂತರ ರೂಪಾಯಿ ವ್ಯಯ ಮಾಡಿ ನಿರ್ಮಾಣ ಮಾಡಿದ ಶೌಚಾಲಯ ಬಳಕೆಗೆ ಬಾರದ ಸ್ಥಿತಿಯಲ್ಲಿದೆ. ಶುಚಿತ್ವ ಇಲ್ಲ, ಎಲ್ಲಾ ಶೌಚಾಲಯಗಳನ್ನು ಹೊರಗುತ್ತಿಗೆ ನೀಡಿದ್ದರಿಂದ BBMP ಪ್ರತಿ ದಿನ ನೋಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಗುತ್ತಿಗೆದಾರರು ಯಾವ ಲಂಗು ಲಗಾಮಿಲ್ಲದೇ ಮನಸ್ಸಿಗೆ ಬಂದಂತೆ ನಡೆಸುತ್ತಿದ್ದಾರೆ. ಇದರಿಂದಾಗಿಯೇ, ತುಂಬಾ ಕಡೆ ಸಾರ್ವಜನಿಕ ಶೌಚಾಲಯಗಳು ಬಳಕೆಗೆ ಯೋಗ್ಯವಲ್ಲದ ಸ್ಥಿತಿಗೆ ಬಂದು ನಿಂತಿವೆ.
ಆದರೆ ಬಿಬಿಎಂಪಿ ಹೇಳೋದೆ ಬೇರೆ..
ಈ ನಿಟ್ಟಿನಲ್ಲಿಯೇ ನವೆಂಬರ್ 19ರಂದು ‘ವಿಶ್ವ ಶೌಚಾಲಯ ದಿನ’ ಎಂದು ಪರಿಗಣಿಸಲಾಗಿದ್ದು, ಶೌಚಾಲಯದ ಬಳಕೆ ಮತ್ತು ಅದರ ನಿರ್ವಹಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಚಿಕ್ಕ ಪ್ರಯತ್ನವನ್ನು ಮಾಡಲಾಗುತ್ತಿದೆ.
ಈ ದಿನದಂದು ಬಿಬಿಎಂಪಿ ಮತ್ತಷ್ಟು ಶುಚಿತ್ವವನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿದೆ. ಇದಕ್ಕೆ ಅನುಗುಣವಾಗಿ ರೋಗಾಣುಗಳನ್ನು ದೂರವಿಡುವ ಕ್ರಮಗಳನ್ನು ಅನುಸರಿಸುತ್ತಿದೆ ಹಾಗೂ ಸ್ಯಾನಿಟೈಸರ್ಗಳನ್ನು ಬಳಕೆಗೆ ಇಡಲಾಗಿದೆ ಮತ್ತು ಎಲ್ಲಾ ಸಾರ್ವಜನಿಕ ಶೌಚಾಲಯಗಳನ್ನು ಗೂಗಲ್ ಮ್ಯಾಪ್ ಮೂಲಕ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗಿದೆ ಎಂದು BBMP ವಿಶೇಷ ಆಯುಕ್ತರಾದ ರಣದೀಪ್ ಹೇಳಿದರು.
ಇ-ಶೌಚಾಲಯಗಳು: ಇದು ತಾಂತ್ರಿಕವಾಗಿ ಅಭಿವೃದ್ಧಿಯನ್ನು ಹೊಂದಿದ್ದ ವ್ಯವಸ್ಥೆಯಾಗಿದ್ದು, ನಗರದಲ್ಲಿ ಒಟ್ಟು 169 ಇ-ಶೌಚಾಲಯಗಳು ಇವೆ. ಇವುಗಳ ಮಾಲೀಕತ್ವವನ್ನು ಪ್ರಾರಂಭದ ಹಂತದಲ್ಲಿ ಇನ್ಫೋಸಿಸ್ ಸಂಸ್ಥೆ ಹೊಂದಿತ್ತು. ಸದ್ಯ ಇಆರ್ಎಎಂ ಸಂಸ್ಥೆಗೆ ಇದರ ಉಸ್ತುವಾರಿಯನ್ನು ವಹಿಸಲಾಗಿದ್ದು, ಇ-ಶೌಚಾಲಯದ ನಿರ್ವಹಣೆಯನ್ನು ಮಾಡುತ್ತಿದೆ. -ಪ್ರೀತಿ ಶೆಟ್ಟಿಗಾರ್