ಕೊರೊನಾ ಆಸ್ಪತ್ರೆಯಲ್ಲೊಬ್ಬ ಯೋಗ ಗುರು ಚಾಂದ್ ಪಾಶಾ!
ಬಳ್ಳಾರಿ: ಕೊರೊನಾ ಸೊಂಕಿತರಾಗಿ ಬಳ್ಳಾರಿಯ ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದಲ್ಲಿ 8 ದಿನಗಳ ಹಿಂದೆ ದಾಖಲಾಗಿರುವ ಬಳ್ಳಾರಿ ಜಿಲ್ಲೆ ಕಂಪ್ಲಿ ಪುರಸಭೆಯ ಸದಸ್ಯ ಚಾಂದ್ ಪಾಶಾ ಸೊಂಕಿತರಿಗೆ ಯೋಗಾಸನದ ವಿವಿಧ ಭಂಗಿಗಳು ಹಾಗೂ ಸೂರ್ಯ ನಮಸ್ಕಾರಗಳನ್ನು ಕಲಿಸುವುದರ ಜತೆಗೆ ನೈತಿಕ ಸ್ಥೈರ್ಯ ತುಂಬುವುದರ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆತ್ಮಸ್ಥೈರ್ಯವೇ ಸರ್ವಸ್ವ; ಧೈರ್ಯವೇ ಮುಖ್ಯ. ನೊಂದು ಈ ಕೊರೊನಾ ಚಿಕಿತ್ಸೆಗೆ ಸೊಂಕಿತರಾಗಿ ಬರಬೇಡಿ, ಏನೂ ಆಗಲ್ಲ. ಬಿ ಹ್ಯಾಪಿಯಾಗಿರಿ ಎಂದು ಹೊಸದಾಗಿ ಬರುವ ಸೊಂಕಿತರಲ್ಲಿ ಹಾಗೂ ಊಟ-ನೀರು ಸೇವಿಸದೇ […]

ಬಳ್ಳಾರಿ: ಕೊರೊನಾ ಸೊಂಕಿತರಾಗಿ ಬಳ್ಳಾರಿಯ ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದಲ್ಲಿ 8 ದಿನಗಳ ಹಿಂದೆ ದಾಖಲಾಗಿರುವ ಬಳ್ಳಾರಿ ಜಿಲ್ಲೆ ಕಂಪ್ಲಿ ಪುರಸಭೆಯ ಸದಸ್ಯ ಚಾಂದ್ ಪಾಶಾ ಸೊಂಕಿತರಿಗೆ ಯೋಗಾಸನದ ವಿವಿಧ ಭಂಗಿಗಳು ಹಾಗೂ ಸೂರ್ಯ ನಮಸ್ಕಾರಗಳನ್ನು ಕಲಿಸುವುದರ ಜತೆಗೆ ನೈತಿಕ ಸ್ಥೈರ್ಯ ತುಂಬುವುದರ ಮೂಲಕ ಗಮನ ಸೆಳೆಯುತ್ತಿದ್ದಾರೆ. 
ಆತ್ಮಸ್ಥೈರ್ಯವೇ ಸರ್ವಸ್ವ; ಧೈರ್ಯವೇ ಮುಖ್ಯ. ನೊಂದು ಈ ಕೊರೊನಾ ಚಿಕಿತ್ಸೆಗೆ ಸೊಂಕಿತರಾಗಿ ಬರಬೇಡಿ, ಏನೂ ಆಗಲ್ಲ. ಬಿ ಹ್ಯಾಪಿಯಾಗಿರಿ ಎಂದು ಹೊಸದಾಗಿ ಬರುವ ಸೊಂಕಿತರಲ್ಲಿ ಹಾಗೂ ಊಟ-ನೀರು ಸೇವಿಸದೇ ಮುಂದೇನು ನಮ್ಮ ಗತಿ ಅಂತ ಸೊಂಕಿತರ ವಾರ್ಡ್‍ನಲ್ಲಿ ತಲೆಯ ಮೇಲೆ ಕೈಹೊತ್ತಿ ಕುಳಿತವರಿಗೆ ಸ್ಫೂರ್ತಿಯ ಮಾತುಗಳನ್ನಾಡುತ್ತಾರೆ.
ಅವರಿಗೆ ಪ್ರತಿನಿತ್ಯ ಬೆಳಗ್ಗೆ ಯೋಗಾಸನದ ವಿವಿಧ ಭಂಗಿಗಳನ್ನು ಕಲಿಸಿಕೊಡುತ್ತಿದ್ದಾರೆ ಮತ್ತು ಸೂರ್ಯ ನಮಸ್ಕಾರದ ಮಹತ್ವದ ಬಗ್ಗೆ ತಿಳಿಸಿಕೊಡುವುದರ ಜತೆಗೆ ಸಂಸ್ಕೃತ ಶ್ಲೋಕಗಳನ್ನೂ ಚಾಂದ್ ಪಾಶಾ ಪಠಿಸುತ್ತಿರುವುದು ವಿಶೇಷ!
ಸಂಸ್ಕೃತ ಶ್ಲೋಕಗಳನ್ನೂ ಪಠಿಸುತ್ತಾರೆ
ಚಾಂದ್ ಪಾಶಾ ಕಳೆದ 8 ದಿನಗಳಿಂದಲೂ ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಯೋಗ ಹಾಗೂ ಸೂರ್ಯ ನಮಸ್ಕಾರ ಕಲಿಸುವುದರ ಜತೆಗೆ ತನ್ನೊಂದಿಗೆ ಚಿಕಿತ್ಸೆಗೆ ದಾಖಲಾಗಿರುವವರಿಗೆ ಸ್ವತಃ ತನ್ನದೇ ಖರ್ಚಿನಲ್ಲಿ ಕಷಾಯಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸಿ ತನ್ನ ಕೈಯಾರೆ ಪ್ರತಿನಿತ್ಯ ಕಷಾಯ ಸಿದ್ದಪಡಿಸಿ 50 ಜನರಿಗೆ ಕುಡಿಸುತ್ತಿದ್ದಾರೆ.
14 ವರ್ಷಗಳಿಂದಲೂ ಈ ರೀತಿಯ ಯೋಗಾಸನ ಮತ್ತು ಸೂರ್ಯ ನಮಸ್ಕಾರ ಹಾಗೂ ವಿವಿಧ ರೀತಿಯ ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಿದ್ದೇನೆ. ಈ ಕೊರೊನಾವೇನು ದೊಡ್ಡ ರೋಗವಲ್ಲ. ಬೇಗ ಗುಣಮುಖರಾಗಿ ಮನೆಗೆ ಹೋಗುತ್ತೇವೆ ಎಂದು ತಿಳಿಸುವ ಚಾಂದ್ ಪಾಶಾ, ಇನ್ನು ಮೂರ್ನಾಲ್ಕು ದಿನಗಳಲ್ಲಿ ಕೊರೊನಾ ಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ ಸಂತಸ
ಚಾಂದ್ ಪಾಶಾ ಅವರು ಇಲ್ಲಿ ದಾಖಲಾಗಿರುವ ಎಲ್ಲರಿಗೂ ಆತ್ಮಸ್ಥೈರ್ಯದ ಮಾತುಗಳನ್ನಾಡುವ ಮೂಲಕ ಅವರನ್ನು ಚಿಂತೆಯಿಂದ ವಿಮುಕ್ತಿ ಮಾಡಿಸಿ ಅವರನ್ನು ಸಂತೋಷದಿಂದ ಇರುವಂತೆ ಮಾಡುತ್ತಿದ್ದಾರೆ. ನಿಜಕ್ಕೂ ಈ ವ್ಯಕ್ತಿ ನಮಗೆಲ್ಲರಿಗೂ ಅದ್ಭುತ ಸ್ಪೂರ್ತಿ ಎಂದು ವಿಮ್ಸ್ ಸರಕಾರಿ ದಂತ ಮಹಾವಿದ್ಯಾಲಯದ ಕೋವಿಡ್ ನೋಡಲ್ ಅಧಿಕಾರಿ ಡಾ.ರಾಘವೇಂದ್ರ ಅವರು ಸಂತಸ ವ್ಯಕ್ತಪಡಿಸುತ್ತಾರೆ.
ಜಿಲ್ಲಾಧಿಕಾರಿ ನಕುಲ್ ಪ್ರಶಂಸೆ
ಚಾಂದ್ ಪಾಶಾ ಅವರು ವಿವಿಧ ಯೋಗಾಸನದ ಭಂಗಿಗಳ ವಿಡಿಯೋ ಗಮನಿಸಿದೆ ಹಾಗೂ ಅವರಾಡುವ ಸ್ಪೂರ್ತಿಯುತ ಮಾತುಗಳನ್ನ ಆಲಿಸಿದೆ. ತುಂಬಾ ಸಂತೋಷವಾಯ್ತು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ತಿಳಿಸಿದ್ದಾರೆ.
-ಬಸವರಾಜ ಹರನಹಳ್ಳಿ
Published On - 10:42 am, Fri, 17 July 20




