Healthy Lifestyle Tips: ನೀವು ಸಹ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಕುಡಿಯುತ್ತಿದ್ದೀರಾ? ಅದರ ಪರಿಣಾಮ ಇಲ್ಲಿದೆ
ಬಹುತೇಕ ಹೆಚ್ಚಿನವರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಶಾಲಾ-ಕಾಲೇಜುಗಳಲ್ಲಿ, ಕಚೇರಿಗಳಲ್ಲಿ, ಮನೆಗಳಲ್ಲಿಯೂ ಅನೇಕರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಕುಡಿಯುತ್ತಾರೆ. ಆದರೆ ಇದು ಖಂಡಿತವಾಗಿಯೂ ಒಳ್ಳೆಯ ಅಭ್ಯಾಸವಲ್ಲ. ಏಕೆಂದರೆ ಯಾವುದೇ ರೀತಿಯ ಪ್ಲಾಸ್ಟಿಕ್ ಆಗಿರಲಿ ಅದು ಪರಿಸರಕ್ಕೆ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಹಾಗಾದರೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಉಂಟಾಗುವ ಅನಾನುಕೂಲಗಳು ಯಾವುವು ಎಂಬುದನ್ನು ನೋಡೋಣ.
ಪ್ಲಾಸ್ಟಿಕ್ ವಸ್ತುಗಳು ನಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಪ್ಲಾಸ್ಟಿಕ್ ವಸ್ತುಗಳಿಲ್ಲದೆ ಇಲ್ಲದೆ ಇಂದಿನ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯ ಪ್ಲಾಸ್ಟಿಕ್ ಮೇಲೆ ಎಷ್ಟು ಅಲವಂಬಿತನಾಗಿದ್ದಾನೆಂದರೆ ಅವನು ಕುಡಿಯುವ ನೀರಿನ ಬಾಟಲಿಗಳಿಂದ ಹಿಡಿದು ಊಟದ ಡಬ್ಬಿಗಳವರೆಗೆ, ಬಹುತೇಕ ಪ್ಲಾಸ್ಟಿಕ್ ವಸ್ತುಗಳನ್ನೇ ಬಳಕೆ ಮಾಡುತ್ತಿದ್ದಾನೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿವಿಧ ಬಣ್ಣದ, ವಿನ್ಯಾಸದ ಪ್ಲಾಸ್ಟಿಕ್ ಬಾಟಲಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹೆಚ್ಚಿನವರು ಇಂತಹ ಪ್ಲಾಸ್ಟಿಕ್ ಬಾಟಲಿಗಳಲ್ಲಿಯೇ ನೀರನ್ನು ಕುಡಿಯುತ್ತಾರೆ. ಈ ಬಾಟಲಿಯಿಂದ ನೀರು ಕುಡಿಯುವುದರಿಂದ ನಿಮ್ಮ ಬಾಯಾರಿಕೆ ತಣಿಸುತ್ತದೆ ನಿಜ, ಆದರೆ ಇದು ದೇಹದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ಕಾರಣ ಏನೆಂದರೆ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದರಿಂದ ನೀರಿನ ಜೊತೆಗೆ ಬಾಟಲಿಗಳಲ್ಲಿರುವ ಮೈಕ್ರೋಪ್ಲಾಸ್ಟಿಕ್ಗಳೂ ಕೂಡಾ ದೇಹ ಸೇರುತ್ತದೆ. ಮೈಕ್ರೋಪ್ಲಾಸ್ಟಿಕ್ಗಳು ಪ್ಲಾಸ್ಟಿಕ್ನ ಸಣ್ಣ ತುಂಡುಗಳಾಗಿವೆ. ಇದು 5 ಮಿಲಿಮೀಟರ್ಗಳಿಗಿಂತಲೂ ಚಿಕ್ಕದಾಗಿದೆ. ಪ್ಲಾಸ್ಟಿಕ್ ಆಗಿರುವುದರಿಂದ ಈ ತುಣುಕುಗಳು ದೇಹದಲ್ಲಿ ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ಇದು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಬಿಸುತ್ತದೆ. ಇದರ ಪರಿಣಾಮ ಬಹಳ ಸಮಯದ ನಂತರ ಗೋಚರಿಸುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೆ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಹಲವು ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಖಂಡಿತವಾಗಿಯೂ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
ಹಾಗಾದರೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದರಿಂದ ಉಂಟಾಗುವ ಹಾನಿಗಳಾವುವು?
ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳ ಅಪಾಯ:
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಕುಡಿಯುವುದರಿಂದ ಅದರಲ್ಲಿರುವ ಅಪಾಯಕಾರಿ ರಾಸಾಯನಿಕಗಳು ಕೂಡ ನಮ್ಮ ದೇಹವನ್ನು ಸೇರುತ್ತವೆ, ಇದು ನಮಗೆ ಅನೇಕ ರೀತಿಯಲ್ಲಿ ಹಾನಿಯನ್ನು ಉಂಟುಮಾಡುತ್ತದೆ. ಪ್ಲಾಸ್ಟಿಕ್ನಲ್ಲಿರುವ ಸೀಸ, ಕ್ಯಾಡ್ಮಿಯಂ ಮತ್ತು ಪಾದರಸದಂತಹ ಹಾನಿಕಾರಕ ರಾಸಾಯನಿಕಗಳು ದೇಹವನ್ನು ಪ್ರವೇಶಿಸಿದರೆ, ಕ್ಯಾನ್ಸರ್ ಮತ್ತು ಅಂಗವೈಕಲ್ಯದಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯು ಗಮನಾರ್ಹವಾಗಿ ಹೆಚ್ಚುತ್ತದೆ. ಮತ್ತು ಇದು ಕರುಳು ಮತ್ತು ಯಕೃತ್ತಿನಂತಹ ದೇಹದಲ್ಲಿನ ಪ್ರಮುಖ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತದೆ.
ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ:
ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುವುದಲ್ಲದೆ, ಅದು ನಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೂ ಕೆಟ್ಟ ಪರಿಣಾಮವನ್ನು ಬೀರುತ್ತದೆ. ವಾಸ್ತವವಾಗಿ ಪ್ಲಾಸ್ಟಿಕ್ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ನೀರಿನ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತದೆ, ಇದರಿಂದಾಗಿ ನಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.
ಸಂತಾನೋತ್ಪತ್ತಿ ಸಮಸ್ಯೆಗಳು:
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನಿರಂತರವಾಗಿ ನೀರನ್ನು ಕುಡಿಯುವುದರಿಂದ ಅದರಲ್ಲಿರುವ ರಾಸಾಯನಿಕಗಳಿಂದ ಪುರುಷರು ಮತ್ತು ಮಹಿಳೆ ಇಬ್ಬರಲ್ಲೂ ಸಂತಾನೋತ್ಪತ್ತಿ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ ಇದರಲ್ಲಿನ ಹಾನಿಕಾರಕ ರಾಸಾಯನಿಕಗಳಿಂದಾಗಿ ಅಂಡಾಶಕ್ಕೆ ಸಂಬಂಧಿಸಿದ ಕಾಯಿಲೆಗಳು, ಸ್ತನಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ. ಇದಲ್ಲದೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಕುಡಿಯುವುದರಿಂದ ಪುರುಷರಲ್ಲಿ ವೀರ್ಯದ ಸಂಖ್ಯೆಯೂ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಮದ್ಯಪಾನ ಮಾಡುವಾಗ ಅಪ್ಪಿತಪ್ಪಿಯೂ ಈ ಆಹಾರ ಪದಾರ್ಥಗಳನ್ನು ಸೇವಿಸಬೇಡಿ, ಯಾಕೆ ಗೊತ್ತಾ?
ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ:
ಒಂದು ಅಧ್ಯಯನದ ಪ್ರಕಾರ ವಿಶೇಷವಾಗಿ ಮಹಿಳೆಯರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಸೇವಿಸಿದರೆ ಟೈಪ್-2 ಮದುಮೇಹದ ಅಪಾಯವು ಹೆಚ್ಚುತ್ತದೆ ಎಂದು ತಿಳಿದು ಬಂದಿದೆ. ಪ್ಲಾಸ್ಟಿಕ್ ಥಾಲೇಟ್ಸ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ, ಇದು ಮಹಿಳೆಯರಲ್ಲಿ ಮಧುಮೇಹದ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನ ಹೇಳಿದೆ.
ಈ ರೀತಿ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ:
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದರಿಂದ ಹಲವಾರು ಅನಾನುಕೂಲಗಳಿವೆ. ಅಂತಹ ಪರಿಸ್ಥಿತಿಯಲ್ಲಿ ನೀರು ಕುಡಿಯಲು BPA ಮುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಲು ಪ್ರಯತ್ನಿಸಿ. ಇದರ ಹೊರತಾಗಿ ಗಾಜು, ತಾಮ್ರ ಅಥವಾ ಸ್ಟೇನ್ಲೆಸ್ ಸ್ಟೀಲ್ ಬಾಟಲಿಗಳನ್ನು ಬಳಸಿದರೆ ಉತ್ತಮ. ಅಲ್ಲದೆ ನೀವು ಬಾಟಲಿಗಳನ್ನು ಕಾಲ ಕಾಲಕ್ಕೆ ಚೆನ್ನಾಗಿ ತೊಳೆಯಬೇಕು ಎಂಬುದನ್ನು ನೆನಪಿಲ್ಲಿಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: