April 2024: ಏಪ್ರಿಲ್ ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆ
2024 ರ ಏಪ್ರಿಲ್ ತಿಂಗಳು ವರ್ಷದ 4ನೇ ತಿಂಗಳಾಗಿದ್ದು, ಈ ತಿಂಗಳಲ್ಲಿ ಹಲವು ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳಿವೆ. ಅದಲ್ಲದೇ, ಹಲವು ಪ್ರಮುಖ ಧಾರ್ಮಿಕ ದಿನಗಳು ಸಹ ಸೇರಿಕೊಂಡಿವೆ. ಹಾಗಾದ್ರೆ ಏಪ್ರಿಲ್ ತಿಂಗಳಲ್ಲಿ ಬರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನಗಳ ಬಗೆಗಿನ ಮಾಹಿತಿಯು ಇಲ್ಲಿದೆ.

ಕಣ್ಣು ಮುಚ್ಚಿ ತೆರೆಯುವುದರೊಳಗೆ 2024 ರ ನಾಲ್ಕನೇ ತಿಂಗಳು ಬಂದೆ ಬಿಟ್ಟಿತು. ಈ ತಿಂಗಳಿನಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನ ಹೀಗೆ ಪ್ರತಿಯೊಂದು ದಿನವು ಒಂದೊಂದು ವಿಶೇಷತೆಗಳನ್ನು ಒಳಗೊಂಡಿದೆ. ವಿಶ್ವದಾದಂತ್ಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ.
ಏಪ್ರಿಲ್ 01, ಮೂರ್ಖರ ದಿನ:
ಪ್ರತಿ ವರ್ಷ ಏಪ್ರಿಲ್ 1 ರಂದು ಮೂರ್ಖರ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಮೊದಲ ಬಾರಿಗೆ 1381ರಲ್ಲಿ ಆಚರಿಸಲಾಯಿತು.
ಏಪ್ರಿಲ್ 01 ಒಡಿಶಾ ಸಂಸ್ಥಾಪನ ದಿನ:
ಏಪ್ರಿಲ್ 01, 1936 ರಂದು, ಒಡಿಶಾ ರಾಜ್ಯವು ಪ್ರತ್ಯೇಕ ಪ್ರಾಂತ್ಯವಾಗಿ ಬೇರ್ಪಟ್ಟಿತು. ಹೀಗಾಗಿ ಪ್ರತಿ ವರ್ಷವು ಏಪ್ರಿಲ್ 1 ರಂದು ಒಡಿಶಾ ಸಂಸ್ಥಾಪನ ದಿನವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಉತ್ಕಲ್ ದಿವಸ್ ಎಂದು ಕೂಡ ಕರೆಯುತ್ತಾರೆ.
ಏಪ್ರಿಲ್ 02, ವಿಶ್ವ ಆಟಿಸಂ ಜಾಗೃತಿ ದಿನ:
ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್(ಎಎಸ್‍ಡಿ) ಕುರಿತು ವಿಶ್ವದಾದ್ಯಂತ ಅರಿವು ಮೂಡಸುವ ಸಲುವಾಗಿ ಏಪ್ರಿಲ್ 02 ನ್ನು ವಿಶ್ವ ಆಟಿಸಂ ಜಾಗೃತಿ ದಿನವಾಗಿ ಆಚರಿಸಲಾಗುತ್ತಿದೆ.
ಏಪ್ರಿಲ್ 04, ಅಂತರಾಷ್ಟ್ರೀಯ ಗಣಿ ಜಾಗೃತಿ ದಿನ:
ಪ್ರತಿ ವರ್ಷ ಏಪ್ರಿಲ್ 4 ರಂದು ಗಣಿ ಅರಿವು ಮತ್ತು ಗಣಿ ಕ್ರಿಯೆಯಲ್ಲಿ ಸಹಾಯಕ್ಕಾಗಿ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.
ಏಪ್ರಿಲ್ 05, ರಾಷ್ಟ್ರೀಯ ಕಡಲ ದಿನ:
ಪ್ರತಿ ವರ್ಷ ಏಪ್ರಿಲ್ 5 ರಂದು ಭಾರತದಲ್ಲಿ ರಾಷ್ಟ್ರೀಯ ಸಮುದ್ರ ದಿನವನ್ನು ಆಚರಿಸಲಾಗುತ್ತದೆ. ಕಾಂಟಿನೆಂಟಲ್ ವಾಣಿಜ್ಯ, ವ್ಯಾಪಾರ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಸಮುದ್ರದ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.
ಏಪ್ರಿಲ್ 06,ಅಂತರಾಷ್ಟ್ರೀಯ ಅಭಿವೃದ್ಧಿ ಮತ್ತು ಶಾಂತಿಗಾಗಿ ಕ್ರೀಡಾ ದಿನ:
ಜಗತ್ತಿನಾದ್ಯಂತ ನಮ್ಮ ವೈಯಕ್ತಿಕ ಜೀವನ ಮತ್ತು ಸಮುದಾಯಗಳಲ್ಲಿ ಕ್ರೀಡೆ ಮತ್ತು ದೈಹಿಕ ಚಟುವಟಿಕೆಯ ಪಾತ್ರದ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಏಪ್ರಿಲ್ 07, ವಿಶ್ವ ಆರೋಗ್ಯ ದಿನ:
ಪ್ರತಿ ವರ್ಷ ಏಪ್ರಿಲ್ 7ನೇ ತಾರೀಕಿನಂದು ಪ್ರಪಂಚದಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯ ಹಾಗೂ ಯೋಗಕ್ಷೇಮದ ಪ್ರಾಮುಖ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಏಪ್ರಿಲ್ 10, ವಿಶ್ವ ಹೋಮಿಯೋಪತಿ ದಿನ:
ಹೋಮಿಯೋಪತಿಯ ಸಂಸ್ಥಾಪಕ ಡಾ. ಹ್ಯಾನೆಮನ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 10 ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ.
ಏಪ್ರಿಲ್ 11, ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ:
ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು 2003 ರಲ್ಲಿ ಆಚರಿಸಲಾಯಿತು. ಗರ್ಭಿಣಿಗೆ ಮಹಿಳೆಯರಿಗೆ ಹೆರಿಗೆಯ ಮೊದಲು ಹಾಗೂ ನಂತರದಲ್ಲಿ ಅಗತ್ಯವಿರುವ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಏಪ್ರಿಲ್ 11, ರಾಷ್ಟ್ರೀಯ ಸಾಕು ಪ್ರಾಣಿ ದಿನ:
ಪ್ರತಿ ವರ್ಷ ಏಪ್ರಿಲ್ 11 ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ರಾಷ್ಟ್ರೀಯ ಸಾಕುಪ್ರಾಣಿಗಳ ದಿನವನ್ನು ಆಚರಿಸಲಾಗುತ್ತದೆ. ಸಾಕುಪ್ರಾಣಿಗಳು ನಮ್ಮ ಜೀವನದಲ್ಲಿ ತರುವ ಸಂತೋಷವನ್ನು ಆಚರಿಸಲು ಮತ್ತು ಪ್ರಾಣಿಗಳ ಕಲ್ಯಾಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
ಏಪ್ರಿಲ್ 13, ಜಲಿಯನ್ ವಾಲಾ ಬಾಗ್ ಹತ್ಯಾಕಂಡ:
ನಿರಾಯುಧ ಭಾರತೀಯರ ಹತ್ಯೆ ಮತ್ತು ನೂರಾರು ಜನರನ್ನು ಗಾಯಾಳುಗಳ್ಳನಾಗಿಸಿದ ದಿನವಾಗಿದೆ. ಏಪ್ರಿಲ್ 13, 1919 ರಂದು ಈ ದುರಂತ ಘಟನೆಯೊಂದು ನಡೆದ ಕಹಿ ದಿನವಾಗಿದೆ.
ಏಪ್ರಿಲ್ 14, ಡಾ. ಬಿ.ಆರ್. ಅಬೇಂಡ್ಕರ್ ಜಯಂತಿ:
ಭಾರತೀಯ ರಾಜಕಾರಣಿ ಮತ್ತು ಸಮಾಜ ಸುಧಾರಕ ಬಿಆರ್ ಅಂಬೇಡ್ಕರ್ ಅವರ ಸ್ಮರಣೆಗಾಗಿ ಆಚರಿಸಲಾಗುತ್ತದೆ. ಇದು 1891 ರ ಏಪ್ರಿಲ್ 14 ರಂದು ಜನಿಸಿದ ಅಂಬೇಡ್ಕರ್ ಅವರ ಜನ್ಮದಿನವು ಕೂಡ ಹೌದು. ಈ ದಿನವನ್ನು ಸಮಾನತೆಯ ದಿನ ಎಂದು ಕರೆಯಲಾಗುತ್ತದೆ.
ಏಪ್ರಿಲ್ 15, ವಿಶ್ವ ಕಲಾ ದಿನ:
ಕಲೆಯ ಅಭಿವೃದ್ಧಿ, ಕಲೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸಲು ಪ್ರತಿ ವರ್ಷ ಏಪ್ರಿಲ್ 15 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ.
ಏಪ್ರಿಲ್ 17, ವಿಶ್ವ ಹಿಮೋಫಿಲಿಯಾ ದಿನ:
ರಕ್ತ ಹೆಪ್ಪುಗಟ್ಟದೇ ಇರುವುದು ಹಿಮೋಫಿಲಿಯಾದ ಪ್ರಮುಖ ಲಕ್ಷಣವಾಗಿದೆ. ಕನ್ನಡದಲ್ಲಿ ʼಕುಸುಮರೋಗʼ ಎನ್ನಲಾಗುತ್ತದೆ. ಪ್ರತಿವರ್ಷ ಏಪ್ರಿಲ್ 17 ರಂದು ವಿಶ್ವ ಹಿಮೋಫಿಲಿಯಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಏಪ್ರಿಲ್ 18, ವಿಶ್ವ ಪರಂಪರೆ ದಿನ:
ಪಾರಂಪರಿಕ ತಾಣಗಳು, ಸ್ಮಾರಕಗಳ ಇತಿಹಾಸಗಳನ್ನು ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಪರಂಪರೆ ದಿನವನ್ನು ಏಪ್ರಿಲ್ 18 ರಂದು ಆಚರಿಸಲಾಗುತ್ತದೆ.
ಏಪ್ರಿಲ್ 19,ವಿಶ್ವ ಯಕೃತ್ ದಿನ:
ಯಕೃತ್ತಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಏಪ್ರಿಲ್ 21, ರಾಷ್ಟ್ರೀಯ ನಾಗರಿಕ ಸೇವೆಗಳ ದಿನ:
ಭಾರತದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1947 ರಲ್ಲಿ ನವದೆಹಲಿಯ ಮೆಟ್‌ಕಾಫ್ ಹೌಸ್‌ನಲ್ಲಿ ಆಡಳಿತಾತ್ಮಕ ಸೇವೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ದಿನದ ಸವಿನೆನಪಿಗಾಗಿ ರಾಷ್ಟ್ರೀಯ ನಾಗರಿಕ ಸೇವೆಗಳ ದಿನವನ್ನು ಆಚರಿಸಲಾಗುತ್ತಿದೆ.
ಏಪ್ರಿಲ್ 21, ಮಹಾವೀರ ಜಯಂತಿ:
ಏಪ್ರಿಲ್ 21 ರಂದು ಜೈನ ಧರ್ಮದ ಸಂಸ್ಥಾಪಕರಾದ 24ನೇ ತೀರ್ಥಂಕರ ಮಹಾವೀರ ಅವರ ಜನ್ಮದಿನವಾಗಿದೆ. ಜೈನ ಸಮುದಾಯದ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಒಂದು ಎನ್ನಬಹುದು.
ಏಪ್ರಿಲ್ 22, ಭೂ ದಿನ:
1970 ರಲ್ಲಿ ಮೊದಲ ಭೂಮಿ ದಿನ ಆಚರಿಸಲಾಯಿತು. 193 ರಾಷ್ಟ್ರಗಳಲ್ಲಿ ಈ ದಿನ ಆಚರಿಸಲಾಗುತ್ತಿದ್ದು, ಭೂಮಿಯನ್ನು ಉಳಿಸುವ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ.
ಏಪ್ರಿಲ್ 23, ಹನುಮಾನ್ ಜಯಂತಿ:
ಹನುಮಾನ್ ಜಯಂತಿಯು ಭಗವಾನ್ ರಾಮನ ಭಕ್ತನಾದ ಭಗವಾನ್ ಹನುಮಂತನ ಜನ್ಮದಿನವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹನುಮಾನ್ ಜಯಂತಿಯು ಚೈತ್ರ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯಂದು ಬರುತ್ತದೆ. ಈ ಬಾರಿ ಏಪ್ರಿಲ್ 23 ರಂದು ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ.
ಏಪ್ರಿಲ್ 24, ರಾಷ್ಟ್ರೀಯ ಪಂಚಾಯತ್ ರಾಜ್ ದಿನ:
1993 ರ ಏಪ್ರಿಲ್ 24 ರಂದು ಪಂಚಾಯತ್ ರಾಜ್ ನ 1992 ರ ಸಂವಿಧಾನ ತಿದ್ದುಪಡಿ [73ನೇ ತಿದ್ದುಪಡಿ] ಜಾರಿಗೆ ಬಂದ ದಿನವಾಗಿದೆ. ಹೀಗಾಗಿ ಪಂಚಾಯತ್ ರಾಜ್ ಸಚಿವಾಲಯ ಪ್ರತಿವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸುತ್ತಿದೆ.
ಏಪ್ರಿಲ್ 25, ವಿಶ್ವ ಮಲೇರಿಯಾ ದಿನ:
ಪ್ರಪಂಚದಾದಂತ್ಯ ಮಲೇರಿಯಾವನ್ನು ನಿಯಂತ್ರಿಸಲು ಮತ್ತು ಸಂಪೂರ್ಣ ನಿರ್ಮೂಲನೆಗಾಗಿ ಜಾಗತಿಕ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ
ಏಪ್ರಿಲ್ 26, ವಿಶ್ವ ಬೌದ್ಧಿಕ ಆಸ್ತಿ ದಿನ:
ಬೌದ್ಧಿಕ ಆಸ್ತಿಯ ಪ್ರಾಮುಖ್ಯತೆ ಮತ್ತು ತಿಳುವಳಿಕೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಇದನ್ನು ಏಪ್ರಿಲ್ 26 ರಂದು ಆಚರಿಸಲಾಗುತ್ತದೆ.
ಏಪ್ರಿಲ್ 27,ವಿಶ್ವ ಪಶುವೈದ್ಯಕೀಯ ದಿನ:
ವಿಶ್ವ ಪಶುವೈದ್ಯಕೀಯ ಸಂಘವು 2000 ರಲ್ಲಿ ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಿತು. ಪ್ರಾಣಿಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ವಿಶ್ವದಾದ್ಯಂತ ಪಶುವೈದ್ಯರ ಕೆಲಸವನ್ನು ಗುರುತಿಸುವ ಸಲುವಾಗಿ ಏಪ್ರಿಲ್ ಕೊನೆಯ ಶನಿವಾರದಂದು ಈ ದಿನವನ್ನು ಆಚರಿಸಲಾಗುತ್ತದೆ.
ಏಪ್ರಿಲ್ 29, ಅಂತರಾಷ್ಟ್ರೀಯ ನೃತ್ಯ ದಿನ:
ವಿಶ್ವದಾದ್ಯಂತ ಏಪ್ರಿಲ್ 29 ರಂದು ಆಚರಿಸುವ ಅಂತರಾಷ್ಟ್ರೀಯ ನೃತ್ಯ ದಿನದ ಉದ್ದೇಶ ನೃತ್ಯದ ಮಹತ್ವವನ್ನು ಎಲ್ಲರಿಗೂ ತಿಳಿಸುವುದಾಗಿದೆ.
ಏಪ್ರಿಲ್ 30, ಆಯುಷ್ಮಾನ್ ಭಾರತ್ ದಿವಸ್:
ಸೆಪ್ಟೆಂಬರ್ 23, 2018 ರಂದು ಸರ್ಕಾರವು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಯೋಜನೆಯನ್ನು ಬಿಡುಗಡೆ ಮಾಡಿದ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 30 ರಂದು ಆಯುಷ್ಮಾನ್ ಭಾರತ್ ದಿವಸ್ ಅನ್ನು ಆಚರಿಸಲಾಗುತ್ತಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ