ಈ ಮಳೆಗಾಲದಲ್ಲಿ ಒಗೆದ ಬಟ್ಟೆಗಳು ವಾಸನೆ ಬರದಂತೆ ತಡೆಯಲು ಈ ಸಲಹೆ ಪಾಲಿಸಿ
ಈ ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದೇ ದೊಡ್ಡ ಸಮಸ್ಯೆ. ಹೌದು ಸರಿಯಾಗಿ ಸೂರ್ಯನ ಬೆಳಕು ಬೀಳದಿರುವ ಕಾರಣ ಮಳೆಗಾಲದಲ್ಲಿ ಒಗೆದ ಬಟ್ಟೆಗಳು ಒಣಗಲು ಸಿಕ್ಕಾಪಟ್ಟೆ ಸಮಯವನ್ನು ತೆಗೆದುಕೊಳ್ಳುತ್ತದೆ. ಜೊತೆಗೆ ಸರಿಯಾಗಿ ಒಣಗದೆ ಬಟ್ಟೆ ವಾಸನೆ ಕೂಡಾ ಬರುತ್ತದೆ. ನೀವು ಸಹ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ರೆ ಈ ಮಳೆಗಾಲದಲ್ಲಿ ಒಗೆದ ಬಟ್ಟೆಗಳು ವಾಸನೆ ಬರದಂತೆ ತಡೆಯಲು ಈ ಸಲಹೆ ಪಾಲಿಸಿ.

ಈ ಮಳೆಗಾಲದಲ್ಲಿ (rainy season) ಬಟ್ಟೆ ಒಣಗಿಸುವುದು ಒಂದು ಸಮಸ್ಯೆಯಾದ್ರೆ, ಒಗೆದ ಬಟ್ಟೆಗಳಲ್ಲಿ ವಾಸನೆ ಬರೋದು ಇನ್ನೊಂದು ಸಮಸ್ಯೆ. ಹೌದು ಮಳೆಗಾದಲ್ಲಿ ಸೂರ್ಯನ ಬೆಳಕು ಸರಿಯಾಗಿ ಬೀಳದೆ ಇರುವ ಕಾರಣ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಜೊತೆಗೆ ಬಟ್ಟೆ ಒಣಗಳು ಸಾಕಷ್ಟು ಸಮಯವನ್ನು ಸಹ ತೆಗೆದುಕೊಳ್ಳುತ್ತದೆ. ಹೀಗೆ ಬೆಳಕು, ಗಾಳಿಯ ಅನುಪಸ್ಥಿತಿಯ ಕಾರಣ ಒಗೆದ ಬಟ್ಟೆಗಳು ವಾಸನೆ ಬರಲು (Cloths Smelling) ಪ್ರಾರಂಭಿಸುತ್ತದೆ. ನೀವು ಕೂಡಾ ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಹಾಗಿದ್ದರೆ ಮಳೆಗಾಲದಲ್ಲಿ ಒಗೆದ ಬಟ್ಟೆಗಳು ವಾಸನೆ ಬರದಂತೆ ತಡೆಯಲು ಈ ಒಂದಷ್ಟು ಸಲಹೆಗಳನ್ನು ಪಾಲಿಸಿ.
ಮಳೆಗಾಲದಲ್ಲಿ ಬಟ್ಟೆ ವಾಸನೆ ಬರದಂತೆ ತಡೆಯಲು ಸಲಹೆಗಳು:
ರಾಶಿ ಹಾಕಬೇಡಿ: ಅನೇಕ ಜನರು ಬಟ್ಟೆ ಒಗೆಯುವ ಮೊದಲು ಒದ್ದೆಯಾದ ಸೇರಿದಂತೆ, ಎಲ್ಲಾ ಬಟ್ಟೆಗಳನ್ನು ಒಂದೇ ಕಡೆ ರಾಶಿ ಹಾಕುತ್ತಾರೆ. ಇದು ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ಬಟ್ಟೆಗಳು ವಾಸನೆ ಬರಲು ಆರಂಭಿಸುತ್ತದೆ. ಈ ವಾಸನೆ ಒಗೆದ ನಂತರವೂ ಹೋಗುವುದಿಲ್ಲ. ಹಾಗಾಗಿ ಬಟ್ಟೆಗಳನ್ನು ರಾಶಿ ಹಾಕುವ ಅಭ್ಯಾಸವನ್ನು ಮೊದಲು ಬಿಟ್ಟುಬಿಡಿ.
ಹೆಚ್ಚು ಹೊತ್ತು ನೆನೆಸಬೇಡಿ: ಹೆಚ್ಚಿನವರು ಒಗೆಯಬೇಕಾದ ಬಟ್ಟೆಗಳನ್ನು ಡಿಟೆರ್ಜೆಂಟ್ ಪೌಡರ್ ಹಾಕಿ ಸುಮಾರು ಹೊತ್ತುಗಳ ಕಾಲ ನೀರಿನಲ್ಲಿ ನೆನೆಸಿಡುತ್ತಾರೆ. ಹೀಗೆ ಬಟ್ಟೆಗಳನ್ನು ಹೆಚ್ಚು ಹೊತ್ತು ನೆನೆಸುವುದು ಒಳ್ಳೆಯದಲ್ಲ. ಮಳೆಗಾಲದಲ್ಲಿ ಬಟ್ಟೆಗಳನ್ನು ದೀರ್ಘಕಾಲ ನೆನೆಸಿವುದುದರಿಂದ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತದೆ. ಇದರಿಂದ ಬಟ್ಟೆಗಳಿಂದ ಕೆಟ್ಟ ವಾಸನೆ ಬರಲು ಆರಂಭಿಸುತ್ತದೆ.
ಅಡಿಗೆ ಸೋಡಾ: ಬಟ್ಟೆ ಒಗೆಯುವಾಗ ಡಿಟೆರ್ಜೆಂಟ್ ಜೊತೆ ಅಡುಗೆ ಸೋಡಾವನ್ನು ಸೇರಿಸಿ. ಇದು ಬಟ್ಟೆಯ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಇದು ಬಟ್ಟೆಗಳನ್ನು ತಾಜಾವಾಗಿರಿಸುತ್ತದೆ.
ವಿನೆಗರ್: ಬಟ್ಟೆಗಳಿಂದ ವಾಸನೆ ಬರುವುದನ್ನು ತಡೆಯಲು ವಿನೆಗರ್ ಸಹ ಸಹಕಾರಿ. ಇದಕ್ಕಾಗಿ ಬಟ್ಟೆ ಒಗೆದ ಬಳಿಕ ಅದನ್ನು ತೊಳೆಯುವ ನೀರಿಗೆ ಅರ್ಧ ಕಪ್ ವಿನೆಗರ್ ಸೇರಿಸಿ, ಅಥವಾ ಬಟ್ಟೆ ಒಗೆಯುವಾಗ ನಿಮ್ಮ ಡಿಟೆರ್ಜೆಂಟ್‌ಗೆ ವಿನೆಗರ್ ಸೇರಿಸಿ. ಈ ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಬಟ್ಟೆಗಳು ವಾಸನೆ ಬರದಂತೆ ತಡೆಯಲು ಸಹಾಯ ಮಾಡುತ್ತದೆ.
ಚೆನ್ನಾಗಿ ಒಣಗಿಸಿ: ಬಟ್ಟೆಗಳ ವಾಸನೆಯನ್ನು ಕಡಿಮೆ ಮಾಡಲು ಅವುಗಳನ್ನು ಚೆನ್ನಾಗಿ ಒಣಗಿಸಬೇಕು. ಅದಕ್ಕಾಗಿ ಮಳೆಗಾಲದಲ್ಲಿ ನೀವು ತೆರೆದ ಕಿಟಕಿ, ಬಾಲ್ಕನಿ ಅಥವಾ ಫ್ಯಾನ್ ಅಡಿಯಲ್ಲಿ ಬಟ್ಟೆ ಒಣಗಲು ಬಿಡಿ, ಇದರಿಂದ ಬಟ್ಟೆ ಬೇಗ ಒಣಗುವುದು ಮಾತ್ರವಲ್ಲದೆ, ಇದು ಕೆಟ್ಟ ವಾಸನೆ ಬಾರದಂತೆ ತಡೆಯುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಈ ರೀತಿಯ ಬಟ್ಟೆ ಧರಿಸುವುದು ಬೆಸ್ಟ್
ಕಂಡೀಷನರ್ ಬಳಸಿ: ಬಟ್ಟೆ ಒಗೆದ ನಂತರ ಆ ಬಟ್ಟೆಯನ್ನು ಪರಿಮಳಯುತವಾದ ಫ್ಯಾಬ್ರಿಕ್ ಕಂಡೀಷನರ್‌ನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ಇದರಿಂದ ಬಟ್ಟೆಗಳು ಯಾವುದೇ ರೀತಿಯಲ್ಲೂ ವಾಸನೆ ಬರುವುದಿಲ್ಲ.
ಚೆನ್ನಾಗಿ ಒಣಗಿದ ನಂತರವೇ ಬಟ್ಟೆ ಮಡಸಿ: ಕೆಲವರು ಸ್ವಲ್ಪ ಒಣಗಿದ ತಕ್ಷಣವೇ ಆ ಬಟ್ಟೆಗಳನ್ನು ಮಡಚಿಡುತ್ತಾರೆ. ಇದರಲ್ಲಿ ತೇವಾಂಶ ಹಾಗೆಯೇ ಉಳಿಯುವ ಕಾರಣ ಇದರಿಂದ ವಾಸನೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಂಪೂರ್ಣವಾಗಿ ಒಣಗಿದ ಬಳಿಕವೇ ಬಟ್ಟೆಗಳನ್ನು ಮಡಚಿ ಇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ