ಚಳಿಗಾಲದಲ್ಲಿ ಎಸಿ ಆಫ್ ಮಾಡಿಡುವಾಗ ಈ ಸೂಕ್ಷ್ಮ ಸಂಗತಿಗಳ ಬಗ್ಗೆ ಇರಲಿ ಗಮನ
ಚಳಿಗಾಲದಲ್ಲಿ ಅಷ್ಟಾಗಿ ಎಸಿಯನ್ನು ಯಾರು ಕೂಡ ಬಳಕೆ ಮಾಡೋದಿಲ್ಲ. ಚಳಿಗಾಲ ಮುಗಿಯುವರೆಗೂ ಅದನ್ನು ಆಫ್ ಮಾಡಿಡುತ್ತಾರೆ. ಆದರೆ ಆ ಎಸಿಯ ಒಳಾಂಗಣ ಮತ್ತು ಹೊರಾಂಗಣ ಘಟಕದ ಬಗ್ಗೆ ಕಾಳಜಿವಹಿಸುವುದನ್ನು ಮರೆತೇ ಬಿಡುತ್ತಾರೆ. ಈ ಸಣ್ಣ ತಪ್ಪು ಮುಂದಿನ ಬಾರಿ ಎಸಿ ಸರಿಯಾಗಿ ಕಾರ್ಯನಿರ್ವಹಿಸದಿರಲು ಕಾರಣವಾಗಬಹುದು. ಆದ್ದರಿಂದ ಚಳಿಗಾಲದಲ್ಲಿ ಎಸಿ ಆಫ್ ಮಾಡಿಡುವಾಗ ಈ ಕೆಲವೊಂದು ವಿಷಯಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು.

ಇನ್ನೇನೂ ಚಳಿಗಾಲ ಆರಂಭವಾಗುತ್ತಿದೆ. ಈ ಸೀಸನ್‌ನಲ್ಲಿ ಮೈ ಕೊರೆಯುವು ಚಳಿ ಇರುವುದರಿಂದ ಅಷ್ಟಾಗಿ ಯಾರು ಕೂಡ ಎಸಿ (air conditioner) ಬಳಕೆ ಮಾಡೋದೇ ಇಲ್ಲ. ಹಲವು ದಿನಗಳವರೆಗೆ ಅಂದರೆ ಚಳಿಗಾಲ ಮುಗಿಯುವವರೆಗೆ ಎಸಿ ಆಫ್ ಮಾಡಿಡುತ್ತಾರೆ. ಹೀಗೆ ಆಫ್ ಮಾಡಿಟ್ಟ ಎಸಿಯನ್ನು ಬಹುದಿನಗಳ ನಂತರ ಆನ್ ಮಾಡಿದಾಗ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕೆ ನಾವು ಮಾಡುವ ಕೆಲವೊಂದು ತಪ್ಪುಗಳೇ ಕಾರಣ. ಈ ತಪ್ಪಿನಿಂದ ಎಸಿ ಸರಿ ಪಡಿಸಲು ದುಡ್ಡು ಖರ್ಚು ಮಾಡಬೇಕಾಗುತ್ತದೆ. ಹೀಗಿರುವಾಗ ಚಳಿಗಾಲದಲ್ಲಿ ಎಸಿ ಆಫ್ ಮಾಡಿಡುವಾಗ ಈ ಕೆಲವೊಂದು ಸಂಗತಿಗಳ ಬಗ್ಗೆ ಕಾಳಜಿಯನ್ನು ವಹಿಸಿ.
ಎಸಿ ಆಫ್ ಮಾಡಿ ಬಹು ದಿನಗಳ ಬಳಿಕ ಆನ್ ಮಾಡಿದಾಗ ಅದು ಏಕೆ ಹಾಳಾಗುತ್ತದೆ?
ಚಳಿಗಾಲದಲ್ಲಿ ತಿಂಗಳುಗಟ್ಟಲೆ ಎಸಿ ಆಫ್ ಮಾಡಿಡುವುದರಿಂದ ಎಸಿ ಹಾಳಾಗುವುದು ಸಾಮಾನ್ಯ. ಎಸಿ ಆನ್ ಆಗಿರುವಾಗ, ಅದರ ಫ್ಯಾನ್ ಮತ್ತು ಭಾರೀ ಗಾಳಿಯ ಹರಿವಿನಿಂದ ಧೂಳು ಮತ್ತು ಕೊಳಕು ಸಂಗ್ರಹವಾಗುವುದಿಲ್ಲ. ಅದೇ ಎಸಿ ಆಫ್ ಇದ್ದಾಗ ಧೂಳು, ಹೊಗೆ ಮತ್ತು ಹೊಗೆಯ ಸೂಕ್ಷ್ಮ ಪದರವು ಎಸಿ ಘಟಕದಲ್ಲಿ ಅಂಟಿಕೊಳ್ಳುತ್ತದೆ. ಇನ್ನೂ ಚಳಿಗಾಲದಲ್ಲಿನ ತೇವಾಂಶವು ಎಸಿಯ ಹೊರಾಂಗಣ ಘಟಕದ ತಾಮ್ರದ ಕೊಳವೆಗಳು, ಫ್ಯಾನ್ ಬ್ಲೇಡ್‌ಗಳು ತುಕ್ಕು ಹಿಡಿಯಲು ಪ್ರಾರಂಭಿಸುತ್ತದೆ. ಇವೆಲ್ಲಾ ಎಸಿ ಹಾಳಾಗಲು ಕಾರಣವಾಗುತ್ತದೆ. ಹೀಗಿರುವಾಗ ಎಸಿ ಆಫ್ ಮಾಡಿಡುವ ಸಂದರ್ಭದಲ್ಲಿ ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ವಹಿಸುವ ಮೂಲಕ ಎಸಿ ಹಾಳಾಗುವುದನ್ನು ತಪ್ಪಿಸಬಹುದು.
ಎಸಿಯನ್ನು ಕವರ್‌ನಿಂದ ಮುಚ್ಚಿ:
ಸರಿಯಾದ ಕವರ್ ಎಸಿ ಹಾಳಾಗದಂತೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಯಾವಾಗಲೂ ಜಲನಿರೋಧಕ ಮತ್ತು ಧೂಳು ನಿರೋಧಕ AC ಕವರ್‌ಗಳನ್ನು ಆರಿಸಿ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ರೀತಿಯ ಕವರ್‌ಗಳು ಲಭ್ಯವಿದೆ, ಆದರೆ ಅವೆಲ್ಲವೂ ನಿಮ್ಮ ಯಂತ್ರಕ್ಕೆ ಸೂಕ್ತವಲ್ಲ. ಪ್ಲಾಸ್ಟಿಕ್ ಕವರ್‌ಗಳು ಚೆನ್ನಾಗಿ ಕಾಣಿಸಬಹುದು, ಆದರೆ ಅವು ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು, ಇದು ಅಚ್ಚು ಬೆಳೆಯಲು ಅಥವಾ ದುರ್ವಾಸನೆಗೆ ಕಾರಣವಾಗಬಹುದು. ಹಾಗಾಗಿ ಉತ್ತಮ ಗುಣಮಟ್ಟದ ಕವರ್‌ಗಳನ್ನೇ ಆಯ್ಕೆ ಮಾಡಿ. ಬ್ರಾಂಡೆಡ್ ಕವರ್‌ಗಳು ಸುಮಾರು 325 ರಿಂದ 350 ರೂ.ಗಳಿಗೆ ಲಭ್ಯವಿದೆ. ನಿಮ್ಮ ಎಸಿಯ ತೂಕ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕವರ್ ಸರಿಯಾದ ಗಾತ್ರದಲ್ಲಿರಬೇಕು. ಕವರ್ ಗಾತ್ರ ತಪ್ಪಾಗಿದ್ದರೆ ಎಸಿಯೊಳಗೆ ಧೂಳು ಮತ್ತು ಕೊಳಕು ಪ್ರವೇಶಿಸಲು ಕಾರಣವಾಗಬಹುದು.
ಸ್ವಚ್ಛಗೊಳಿಸಿದ ನಂತರವೇ ಎಸಿಗೆ ಕವರ್ ಹಾಕಿ:
ಕೆಲವರು ಎಸಿಯನ್ನು ಆಫ್ ಮಾಡಿ ಅದರ ಮೇಲೆ ಕವರ್ ಹಾಕುತ್ತಾರೆ, ಇದು ಎಸಿಗೆ ಹಾನಿಯನ್ನುಂಟುಮಾಡುತ್ತದೆ. ಹಾಗಾಗಿ ಕವರ್ ಹಾಕುವ ಮುನ್ನ ಎಸಿಯ ಫಿಲ್ಟರ್, ಫ್ಯಾನ್ ಮತ್ತು ಹೊರಾಂಗಣ ಘಟಕವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈ ರೀತಿ ಮಾಡದಿದ್ದರೆ ಎಸಿ ಒಳಗೆ ಉಳಿದಿರುವ ಯಾವುದೇ ಧೂಳು ಅಥವಾ ತೇವಾಂಶವು ಎಸಿಗೆ ಹಾನಿಯನ್ನು ಉಂಟುಮಾಡಬಹುದು. ಆದ್ದರಿಂದ ಎಸಿಯನ್ನು ಸಂಪೂರ್ಣವಾಗಿ ಕ್ಲೀನ್ ಮಾಡಿದ ಬಳಿಕವೇ ಕವರ್ ಹಾಕಿ.
ಎಸಿಯ ಹೊರಾಂಗಣ ಘಟಕಕ್ಕೂ ಕವರ್ ಹಾಕಲು ಮರೆಯದಿರಿ:
ವಾಸ್ತವವಾಗಿ, ಇಡೀ ಎಸಿಯ ಮುಖ್ಯ ಭಾಗವೆಂದರೆ ಈ ಹೊರಾಂಗಣ ಘಟಕ. ಹೆಚ್ಚಿನ ಜನರು ಎಸಿಯ ಹೊರಾಂಗಣ ಘಟಕದ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಒಳಾಂಗಣ ಘಟಕವನ್ನು ಮಾತ್ರವಲ್ಲದೆ, ಹೊರಾಂಗಣ ಘಟಕವನ್ನೂ ಮುಚ್ಚಿ. ಏಕೆಂದರೆ ಮನೆಯ ಹೊರಗೆ ಬಾಲ್ಕನಿಯಲ್ಲಿ ಅಥವಾ ಟೆರೇಸ್‌ನಲ್ಲಿರುವ ಎಸಿಯ ಹೊರಾಂಗಣ ಘಟಕ ಬಿಸಿಲು, ಇಬ್ಬನಿ, ಧೂಳು, ಹೊಗೆ, ಆರ್ದ್ರತೆ ಮತ್ತು ಪಕ್ಷಿ ಹಿಕ್ಕೆಗಳಿಂದ ತುಂಬಿ ಅದು ಹಾಳಾಗುತ್ತದೆ. ಹಾಗಾಗಿ ಅದನ್ನು ಕೂಡ ಕವರ್‌ನಿಂದ ಮುಚ್ಚಿಡಿ.
ಇದನ್ನೂ ಓದಿ: ಹಬ್ಬದ ಕ್ಲೀನಿಂಗ್ ಸಮಯದಲ್ಲಿ ಈ ವಸ್ತುಗಳನ್ನು ಮನೆಯಿಂದ ಬಿಸಾಡಿ
ಕವರ್ ತುಂಬಾ ಬಿಗಿಯಾಗಿ ಕಟ್ಟಬೇಡಿ:
ಅನೇಕ ಜನರು ತಮ್ಮ ಎಸಿ ಒಳಗೆ ಧೂಳು ಬರದಂತೆ ಕವರ್ ಅನ್ನು ಬಿಗಿಯಾಗಿ ಕಟ್ಟುತ್ತಾರೆ. ಆದರೆ ಇದು ತಪ್ಪು. ತುಂಬಾ ಬಿಗಿಯಾಗಿರುವ ಕವರ್ ಗಾಳಿಯ ಹರಿವನ್ನು ನಿರ್ಬಂಧಿಸಬಹುದು, ಇದು ತೇವಾಂಶ ಸಂಗ್ರಹಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಕವರ್ ಅನ್ನು ಸ್ವಲ್ಪ ಸಡಿಲವಾಗಿ ಕಟ್ಟಿ.
ಎಸಿಯನ್ನು ಸರ್ವಿಸ್ ಮಾಡಿಸಿ:
ಸಾಧ್ಯವಾದರೆ, ಎಸಿಯನ್ನು ಆಫ್ ಮಾಡುವ ಮೊದಲು ಒಮ್ಮೆ ಸರ್ವೀಸ್ ಮಾಡುವುದು ಸೂಕ್ತ. ಸರ್ವೀಸ್ ಮಾಡಿದ ನಂತರ, ಯೂನಿಟ್ ಅನ್ನು 1 ದಿನ ಸಂಪೂರ್ಣವಾಗಿ ಒಣಗಲು ಬಿಡಿ ಮತ್ತು ನಂತರವೇ ಎಸಿಗೆ ಕವರ್ ಹಾಕಿ.
ಕಾಲಕಾಲಕ್ಕೆ ಎಸಿಯನ್ನು ಪರಿಶೀಲಿಸಿ:
ನೀವು ನಿಮ್ಮ AC ಯನ್ನು ದೀರ್ಘಕಾಲದವರೆಗೆ ಮುಚ್ಚುತ್ತಿದ್ದರೆ, ಪ್ರತಿ 3 ರಿಂದ 4 ವಾರಗಳಿಗೊಮ್ಮೆ ಕವರ್ ತೆಗೆದು ಯಂತ್ರವನ್ನು ಪರೀಕ್ಷಿಸಿ. ಒಳಗೆ ಅಚ್ಚು, ವಾಸನೆ ಅಥವಾ ತೇವಾಂಶವಿದೆಯೇ ಎಂದು ಪರಿಶೀಲಿಸಿ. ಆ ರೀತಿ ಇದ್ದರೆ ಅದನ್ನು ತಕ್ಷಣವೇ ಸ್ವಚ್ಛಗೊಳಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




