ಬೆಳಗಿನ ಉಪಹಾರಕ್ಕೆ ತಯಾರಿಸಿ ದೇಸಿ ಶೈಲಿಯ ರವೆ ಬ್ರೆಡ್ ಟೋಸ್ಟ್
ಬೆಳಗಿನ ಉಪಹಾರಕ್ಕೆ ಏನಾದರೂ ವಿಭಿನ್ನವಾದ ಖಾದ್ಯವನ್ನು ತಯಾರಿಸಬೇಕೆಂದು ನೀವು ಯೋಚಿಸುತ್ತಿದ್ದರೆ, ದೇಸಿ ಶೈಲಿಯ ಬ್ರೆಡ್ ಟೋಸ್ಟ್ ತಯಾರಿಸಿ. ರವೆ ಮತ್ತು ಮೊಸರನ್ನು ಬಳಸಿ ತಯಾರಿಸಲಾಗುವ ಈ ವಿಶೇಷ ಖಾದ್ಯವು ರುಚಿಕರವಾದುದು ಮಾತ್ರವಲ್ಲದೆ ಪೌಷ್ಟಿಕ ಉಪಹಾರದ ಆಯ್ಕೆಯಾಗಿದೆ. ಆಗಿದೆ. ತ್ವರಿತವಾಗಿ ತಯಾರಿಸಬಹುದಾದ ಈ ಒಂದು ಉಪಹಾರದ ಪಾಕವಿಧಾನದ ಮಾಹಿತಿ ಇಲ್ಲಿದೆ.

ಇಂದಿನ ವೇಗದ ಜೀವನಶೈಲಿಯಲ್ಲಿ ಹಾಗೂ ಕೆಲಸದ ಕಾರಣದಿಂದ ಸುಲಭವಾದ ಉಪಹಾರ ಆಯ್ಕೆ ಮಾಡಬೇಕೆಂದಾಗ ಮೊದಲಿಗೆ ನೆನಪಿಗೆ ಬರುವುದೇ ಬ್ರೆಡ್. ತ್ವರಿತ ಉಪಹಾರದ ಪಟ್ಟಿಯಲ್ಲಿ ಬ್ರೆಡ್ ಅಗ್ರಸ್ಥಾನದಲ್ಲಿದೆ. ಬ್ರೆಡ್ ಜಾಮ್, ಟೋಸ್ಟ್, ಸ್ಯಾಂಡ್ ವಿಚ್, ಕಟ್ಲೆಟ್, ಈ ಎಲ್ಲಾ ಖಾದ್ಯಗಳನ್ನು ಬ್ರೆಡ್ನಿಂದ ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದು. ಬ್ರೆಡ್ ಟೋಸ್ಟ್ ವಿಚಾರಕ್ಕೆ ಬಂದಾಗ ಇದರಲ್ಲಿ ಹಲವು ಆಯ್ಕೆಗಳಿವೆ. ನೀವು ಸಾಮಾನ್ಯ ಟೋಸ್ಟ್, ಫ್ರೆಂಚ್ ಟೋಸ್ಟ್ ತಿಂದಿರಬಹುದು. ಆದರೆ ದೇಸಿ ವೆಜ್ ಟೋಸ್ಟ್ನ್ನು ಸವಿದಿದ್ದೀರಾ? ನೀವು ಬೆಳಗಿನ ಉಪಹಾರಕ್ಕೆ ಏನಾದರೂ ತ್ವರಿತವಾದ ಖಾದ್ಯ ಮಾಡಬೇಕೆಂದಿದ್ದರೆ ದೇಸಿ ರವೆ ಟೋಸ್ಟ್ ಮಾಡಬಹುದು. ಇದಕ್ಕೆ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಕ್ಯಾರೆಟ್ ನಂತಹ ತರಕಾರಿಗಳನ್ನು ಹಾಕಿರುವುದರಿಂದ ಇದೊಂದು ಪೌಷ್ಟಿಕ ಉಪಹಾರ ಆಯ್ಕೆಯಾಗಿದೆ. ದೇಸಿ ರವೆ ಟೋಸ್ಟ್ ಮಾಡುವುದು ಹೇಗೆ ಎಂಬುದು ತಿಳಿಯಿರಿ.
ರವೆ ಟೋಸ್ಟ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು
• 1/4 ಕಪ್ ರವೆ
• 1/2 ಮೊಸರು
• ಸಣ್ಣಗೆ ಹೆಚ್ಚಿದ ಈರುಳ್ಳಿ
• ಹಸಿ ಮೆಣಸಿನಕಾಯಿ
• ಹಸಿರು ಬಣ್ಣದ ಕ್ಯಾಪ್ಸಿಕಂ
• ತುರಿದ ಕ್ಯಾರೆಟ್
• ಕರಿಮೆಣಸಿನ ಪುಡಿ
• ಬ್ರೆಡ್
• ಬೆಣ್ಣೆ
ಇದನ್ನೂ ಓದಿ: ಬೀದಿಬದಿಯಲ್ಲಿ ಸಿಗುವ ಎಳನೀರಿನಲ್ಲಿ ಅಧಿಕ ನೀರು ಇದೆಯೋ, ಇಲ್ವೋ ಎಂದು ಪತ್ತೆ ಮಾಡುವುದು ಹೀಗೆ
ರವೆ ಟೋಸ್ಟ್ ತಯಾರಿಸುವುದು ಹೇಗೆ:
ರವೆ ಟೋಸ್ಟ್ ಮಾಡಲು ಮೊದಲು ರವೆ ಮತ್ತು ಮೊಸರನ್ನು ಸೇರಿಸಿ ದಪ್ಪನೆಯ ಹಿಟ್ಟು ತಯಾರಿಸಿಕೊಳ್ಳಿ. ಈಗ ಸಣ್ಣಗೆ ಹೆಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ರವೆ ಹಿಟ್ಟಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಈ ಹಿಟ್ಟಿನ ಮಿಶ್ರಣವನ್ನು 10 ರಿಂದ 15 ನಿಮಿಷಗಳ ಕಾಲ ಹಾಗೇನೇ ಬಿಡಿ. ನಂತರ ಬ್ರೆಡ್ ಸ್ಲೈಸ್ ತೆಗೆದುಕೊಂಡು ಅದರ ಮೇಲೆ ಬೆಣ್ಣೆಯನ್ನು ಹಚ್ಚಿ, ನಂತರ ಅದನ್ನು ಹಿಟ್ಟಿನಲ್ಲಿ ಅದ್ದಿ ಅಥವಾ ಬ್ರೆಡ್ನ ಎರಡೂ ಬದಿ ಹಿಟ್ಟನ್ನು ಹರಡಿ ನಂತರ ಒಂದು ಪ್ಯಾನ್ಗೆ ಬೆಣ್ಣೆ ಹಾಕಿ ಅದು ಕಾದ ಬಳಿಕ ಬ್ರೆಡ್ನ್ನು ಅದರಲ್ಲಿ ಹುರಿಯಿರಿ. ಎರಡೂ ಬದಿ ಹುರಿದ ಬಳಿಕ ತಯಾರಾದ ರವೆ ಟೋಸ್ಟ್ ಚಟ್ನಿ ಅಥವಾ ಸಾಸ್ ನೊಂದಿಗೆ ಬಡಿಸಿ.




