ಫಿಟ್ ಆಗಿರಲು ಬಯಸಿದರೆ ಈ 3 ಅಭ್ಯಾಸಗಳನ್ನು ಬಿಟ್ಟುಬಿಡಿ; ಮಿಲೇನಿಯಲ್ಸ್, ಜೆನ್ ಝೀಗಳಿಗೆ ಧೋನಿ ಫಿಟ್ನೆಸ್ ಸಲಹೆ
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಫಿಟ್ನೆಸ್ಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆಯನ್ನು ನೀಡಿದ್ದಾರೆ. ಧೋನಿ ಪ್ರಸಿದ್ಧ ಬರಹಗಾರ ಜಾವೇದ್ ಅಖ್ತರ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಸಂವಹನ ನಡೆಸುವಾಗ, ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು, ದೈಹಿಕ ಚಟುವಟಿಕೆಯ ಕೊರತೆ, ಫಾಸ್ಟ್ಫುಡ್ ಪ್ರವೃತ್ತಿ ಇವೆಲ್ಲವೂ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಯುವಕರು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ನಿಯಮಿತವಾಗಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ತಮ್ಮ 45 ವರ್ಷ ವಯಸ್ಸಿನಲ್ಲೂ ಫಿಟ್ ಆಗಿದ್ದಾರೆ. ಹೌದು ಪ್ರತಿದಿನ ವ್ಯಾಯಾಮ, ವಾಕಿಂಗ್ ಮತ್ತು ಆರೋಗ್ಯಕರ ಸಮತೋಲಿತ ಆಹಾರ ಸೇವನೆಯ ಮೂಲಕ ಫಿಟ್ ಆಂಡ್ ಫೈನ್ ಆಗಿದ್ದಾರೆ. ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ, ವಾಕಿಂಗ್ ಮಾಡ್ತಾರೆ. ಅದೇ ರೀತಿ ಅವರು ಇಂದಿನ ಬ್ಯುಸಿ ಜೀವನದಲ್ಲಿಯೂ ಆರೋಗ್ಯಕ ಜೀವನಶೈಲಿ ಮತ್ತು ಫಿಟ್ನೆಸ್ಗೆ ಹೆಚ್ಚಿನ ಆದ್ಯತೆ ನೀಡಲೇಬೇಕು ಎಂದು ಮಿಲೇನಿಯಲ್ಸ್, ಜೆನ್ ಝೀಗಳಿಗೆ ಸಲಹೆ ನೀಡಿದ್ದಾರೆ. ಪ್ರಸಿದ್ಧ ಬರಹಗಾರ ಜಾವೇದ್ ಅಖ್ತರ್ ಅವರೊಂದಿಗಿನ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ, ಇಂದಿನ ಜಡ ಜೀವನಶೈಲಿಯಿಂದಾಗಿ, ದೇಹವು ಸಾಕಷ್ಟು ವ್ಯಾಯಾಮ ಪಡೆಯುತ್ತಿಲ್ಲ. ಇದರ ಪರಿಣಾಮ ತಕ್ಷಣಕ್ಕೆ ಗೋಚರಿಸದಿದ್ದರೂ, 30 ವರ್ಷದ ಬಳಿಕ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತದೆ. ಆದ್ದರಿಂದ ಯುವಕರು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದಾರೆ. ಜೊತೆಗೆ ಫಿಟ್ ಆಗಿರಲು ಯುವಕರು ಈ ಕೆಲವು ಅಭ್ಯಾಸಗಳನ್ನು ತ್ಯಜಿಸಬೇಕು ಎಂದು ಹೇಳಿದ್ದಾರೆ.
ಫಿಟ್ ಆಗಿರಲು ಏನು ಮಾಡಬೇಕು?
ನೀವು ಫಿಟ್ ಆಗಿರಲು ಬಯಸಿದರೆ, ನಿಮ್ಮ ದೈನಂದಿನ ದಿನಚರಿಯನ್ನು ಸ್ವಲ್ಪ ಉತ್ತಮವಾಗಿ ಯೋಜಿಸಿ ಎಂದು ಧೋನಿ ಹೇಳುತ್ತಾರೆ. ನೀವು ದೀರ್ಘಕಾಲ ಕುಳಿತು ಕೆಲಸ ಮಾಡುತ್ತಿದ್ದರೆ, ಸ್ವಲ್ಪ ನಡೆಯಿರಿ. ನಡೆಯುವುದರಿಂದ ದೇಹವು ಸಕ್ರಿಯವಾಗಿರುತ್ತದೆ ಮತ್ತು ಸ್ನಾಯುಗಳು ಬಲವಾಗಿರುತ್ತವೆ. ಕಾರ್ಬೋಹೈಡ್ರೇಟ್ಗಳು ಮತ್ತು ಫಾಸ್ಟ್ ಫುಡ್ ಆಹಾರಗಳನ್ನು ಕಡಿಮೆ ಮಾಡಿ. ಹೆಚ್ಚಿನ ಜನರು ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ರಾತ್ರಿಯಲ್ಲಿ ದಾಲ್-ರೈಸ್ ಮತ್ತು ರೋಟಿಯನ್ನು ತಿನ್ನುತ್ತಾರೆ. ನಿತ್ಯ ಆಕ್ಟಿವ್ ಆಗಿಲ್ಲದವರಿಗೆ ಈ ಆಹಾರ ಉತ್ತಮವಲ್ಲ. ಯಾವಾಗಲೂ ಸಮತೋಲಿತ ಆಹಾರವನ್ನು ಅಳವಡಿಸಿಕೊಳ್ಳಬೇಕು. ಫಿಟ್ನೆಸ್ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲಿರುವ ಒಂದು ರೀತಿಯ ಉತ್ತಮ ಹೂಡಿಕೆ.
ವಿಡಿಯೋ ಇಲ್ಲಿದೆ ನೋಡಿ:
Excellent tips by M S Dhoni regarding how to maintain a healthy lifestyle MS Dhoni’s message goes beyond cricket!
In an era of fast food, screens and sedentary lifestyles: ✅ Make physical activity a daily habit. ✅ Encourage children to play sports. ✅ Build healthy habits early. ✅ Teach children to accept failure and bounce back. ✅ Treat fitness as an investment in lifelong health.
Sports build not just stronger bodies, but resilience, discipline and character. Let children play, not just study!
(Video: Amit Gargasya)
— Dr Sudhir Kumar MD DM (@hyderabaddoctor) October 25, 2026
ಫಿಟ್ ಆಂಡ್ ಫೈನ್ ಆಗಿರಲು ಯಾವೆಲ್ಲಾ ಅಭ್ಯಾಸಗಳನ್ನು ಬಿಟ್ಟುಬಿಡಬೇಕು?
ಎಂ.ಎಸ್ ಧೋನಿ ಯುವಕರು ಮೂರು ವಿಷಯಗಳನ್ನು ತ್ಯಜಿಸುವಂತೆ ಒತ್ತಾಯಿಸಿದ್ದಾರೆ. ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ, ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಅವರು ಹೇಳುತ್ತಾರೆ. ಅವು ಯಾವುವು ಎಂದರೆ;
- ಜಡತ್ವವನ್ನು ಬಿಟ್ಟುಬಿಡಬೇಕು: ಇಂದು ಬಹುತೇಕರು ದೀರ್ಘಕಾಲ ಕುಳಿತೇ ಕೆಲಸ ಮಾಡುತ್ತಾರೆ. ಒಂದೇ ಕಡೆ ದೀರ್ಘಕಾಲ ಕುಳಿತಿರುವುದರಿಂದ ಜಡತ್ವ ಬೆಳೆಯುತ್ತವೆ. ಅಲ್ಲದೆ ಇಂದಿನ ದಿನಗಳಲ್ಲಿ ಹಿಂದೆಲ್ಲಾ ಇದ್ದಂತೆ ಸಾಕಷ್ಟು ದೂರ ನಡೆಯಬೇಕೆಂದಿಲ್ಲ, ಬುಕ್ ಮಾಡಿದ ತಕ್ಷಣ ಕ್ಯಾಬ್, ಆಟೋ ಕಾಲ ಬುಡಕ್ಕೆ ಬರುತ್ತದೆ. ಇದರಿಂದ ಹೆಚ್ಚು ನಡೆಯಬೇಕಾದ ಪರಿಸ್ಥಿತಿಯೇ ಬರೋದಿಲ್ಲ. ಆದರೆ ಇದರಿಂದ ಆರೋಗ್ಯಕ್ಕೆ ಯಾವುದೇ ಲಾಭಗಳಿಲ್ಲ. ಹಾಗಾಗಿ ಎಷ್ಟೇ ಬ್ಯುಸಿ ಇದ್ದರೂ ದಿನದಲ್ಲಿ ಅರ್ಧ ಗಂಟೆಗಳ ಕಾಲ ನಡೆಯಿರಿ, ಮೊಬೈಲ್ ಪಕ್ಕಕ್ಕಿಟ್ಟು ಮೈದಾನಕ್ಕೆ ಇಳಿದು ಕ್ರಿಕೆಟ್, ವಾಲಿಬಾಲ್ ಇತ್ಯಾದಿ ಆಟಗಳನ್ನು ಆಡಿ ಎಂದು ಧೋನಿ ಹೇಳುತ್ತಾರೆ. ಕ್ರೀಡೆಗಳು ದೇಹವನ್ನು ಸಕ್ರಿಯವಾಗಿರಿಸುವುದು ಮಾತ್ರವಲ್ಲದೆ ಮನಸ್ಸನ್ನು ಆರೋಗ್ಯವಾಗಿಡುತ್ತದೆ.
- ಫಾಸ್ಟ್ ಫುಡ್ ನಿಂದ ದೂರವಿರಿ: ಭಾರತದಲ್ಲಿ ಫಾಸ್ಟ್ ಫುಡ್ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮೊಮೊಸ್, ಚೌ ಮೇನ್, ಪಿಜ್ಜಾ ಮತ್ತು ಬರ್ಗರ್ಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಿದ್ದಾರೆ. ಇವು ಯಾವುದೂ ಆರೋಗ್ಯಕರವಲ್ಲ. ಜಂಕ್ ಫುಡ್ ಅನ್ನು ಹೆಚ್ಚಾಗಿ ಹುರಿಯಲಾಗುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರತಿದಿನ ಅಥವಾ ಅತಿಯಾಗಿ ಜಂಕ್ ಫುಡ್ ತಿನ್ನುವುದು ದೇಹಕ್ಕೆ ಹಾನಿಕಾರಕವಾಗಿದೆ. ಇದರ ಪರಿಣಾಮ 30 ವರ್ಷ ವಯಸ್ಸಿನ ನಂತರ ದೇಹದಲ್ಲಿ ಗೋಚರಿಸುತ್ತದೆ. ಆದ್ದರಿಂದ ಜಂಕ್ ಫುಡ್ ಸೇವನೆಯಿಂದ ದೂರವಿದ್ದು, ಆರೋಗ್ಯಕ ಸಮತೋಲಿತ ಆಹಾರಗಳನ್ನು ಸೇವನೆ ಮಾಡಬೇಕು ಎನ್ನುತ್ತಾರೆ ಧೋನಿ.
- ಸಕ್ಕರೆಯುಕ್ತ ವಿದಾಯ ಹೇಳಿ: ನೀವು ದೀರ್ಘಕಾಲದವರೆಗೆ ಫಿಟ್ ಆಗಿರಲು ಬಯಸಿದರೆ, ಸಕ್ಕರೆ ಮತ್ತು ಸಕ್ಕರೆಯುಕ್ತ ಆಹಾರಗಳ ಸೇವನೆಯನ್ನು ತಪ್ಪಿಸಬೇಕು. ಸಕ್ಕರೆ ಆಹಾರಗಳು ಮಧುಮೇಹ ಮತ್ತು ಬೊಜ್ಜುತನಕ್ಕೆ ಕಾರಣವಾಗಬಹುದು. ನೀವು ಅವುಗಳನ್ನು ತಿನ್ನುವುದನ್ನು ಮುಂದುವರಿಸಿದರೆ, 30 ವರ್ಷ ವಯಸ್ಸಿನ ನಂತರ ದೇಹವು ದುರ್ಬಲವಾಗಲು ಪ್ರಾರಂಭಿಸಬಹುದು. ಅದ್ದರಿಂದ ಸಕ್ಕರೆಯುಕ್ತ ಆಹಾರಗಳನ್ನು ಸೇವಿಸಬೇಡಿ.
ಇದನ್ನೂ ಓದಿ: ಒಂದು ತಿಂಗಳು ಸಕ್ಕರೆ ಸೇವಿಸುವುದನ್ನು ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ ಗೊತ್ತಾ?
ಕ್ರೀಡೆಗಳು ಯಶಸ್ಸು ಮತ್ತು ವೈಫಲ್ಯವನ್ನು ನಿಭಾಯಿಸಲು ಹೇಗೆ ಕಲಿಸುತ್ತವೆ:
ದೈಹಿಕ ಆರೋಗ್ಯದ ಜೊತೆಗೆ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಯಶಸ್ಸು ಮತ್ತು ವೈಫಲ್ಯವನ್ನು ನಿಭಾಯಿಸುವುದು ಹೇಗೆ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ ಧೋನಿ. ಪಂದ್ಯವನ್ನು ಸೋತರೆ ಆಟಗಾರರು ತಮ್ಮ ದೌರ್ಬಲ್ಯಗಳನ್ನು ಗುರುತಿಸಲು, ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ತಮ್ಮ ಪ್ರದರ್ಶನವನ್ನು ಸುಧಾರಿಸಲು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಅದೇ ರೀತಿ, ಗೆಲುವು ಆಟಗಾರರಿಗೆ ನಿರಂತರ ಪ್ರಯತ್ನ ಮತ್ತು ಶಿಸ್ತಿನ ಅಗತ್ಯವನ್ನು ಕಳೆದುಕೊಳ್ಳದೆ ಯಶಸ್ಸನ್ನು ಹೇಗೆ ನಿಭಾಯಿಸಬೇಕೆಂದು ಕಲಿಸುತ್ತದೆ. ಮುಖ್ಯವಾಗಿ ಮಕ್ಕಳನ್ನು ಕ್ರೀಡೆಗಳನ್ನು ಆಡಲು ಪ್ರೋತ್ಸಾಹಿಸುವುದರಿಂದ ಅವರು ವೈಫಲ್ಯಗಳನ್ನು ಮೆಟ್ಟಿ ನಿಂತು ಯಶಸ್ಸು ಹೇಗೆ ಸಾಧಿಸಬಹುದು ಎಂಬುದನ್ನು ಕಲಿಯುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




