Leh Ladakh: ಲಡಾಖ್ ಸಂಪ್ರದಾಯದ ಪ್ರತಿನಿಧಿ ಸ್ಟಾಕ್ ವಿಲೇಜ್
ಅದೊಂದು ಪುಟ್ಟ ಹಳ್ಳಿ. ಲಡಾಖಿ ಸಂಪ್ರದಾಯದ ಪ್ರತಿನಿಧಿಯಂತಿರುವ ಅಲ್ಲಿ ಇನ್ನೂರು ವರ್ಷಗಳ ಹಳೆಯ ಮನೆಯೊಂದಿದೆ. ಆ ಮನೆ ಹೇಳುವ ಕಥೆಯೇನು? ಅಲ್ಲಿ ಸಿಗುವ ಲಡಾಖಿ ಸಾಂಪ್ರದಾಯಿಕ ಪುಷ್ಕಳ ಭೋಜನದ ಸವಿಯೇನು? ಇಲ್ಲಿದೆ ಓದಿ.
ಲೇಹ್ ಲಡಾಖ್ ಸುತ್ತಾಟ; ಭಾಗ – 4
ಲಡಾಖ್ ಪಟ್ಟಣದಿಂದ 20 ಕಿಲೋಮೀಟರ್ ದೂರ ಸಾಗಿದರೆ ಸಿಗುವ ಪುಟ್ಟ ಹಳ್ಳಿ ಸ್ಟಾಕ್ ವಿಲೇಜ್ (Stok Village). ಇದು ಲಡಾಖಿ (Ladakh) ಸಂಪ್ರದಾಯದ ಪ್ರತಿನಿಧಿಯಂತಿದೆ. ಲಡಾಖ್ ಸಂಪ್ರದಾಯವನ್ನು ಬಿಂಬಿಸುವ ಇನ್ನೂರು ವರ್ಷಗಳ ಹಳೆಯ ಮನೆಯೊಂದನ್ನು ಈಗಲೂ ಇಲ್ಲಿ ಉಳಿಸಿಕೊಳ್ಳಲಾಗಿದೆ. ಮ್ಯೂಸಿಯಂ ಆಗಿ ಪರಿವರ್ತಿಸಿ ಪ್ರವಾಸಿಗರ ದರ್ಶನಕ್ಕೆ ಮೀಸಲಿಟ್ಟಿದ್ದಾರೆ. ಮುಂಚಿತವಾಗಿ ಮಾಹಿತಿ ನೀಡಿ ಇಲ್ಲಿಗೆ ತೆರಳಿದರೆ ಮ್ಯೂಸಿಯಂ ನೋಡಿ ಒಂದಷ್ಟು ಫೋಟೊಗಳನ್ನೂ ಕ್ಲಿಕ್ಕಿಸಿಕೊಂಡು ಬರುವುದರ ಜೊತೆಗೆ ಲಡಾಖಿ ಸಂಪ್ರದಾಯದ ಪುಷ್ಕಳ ಭೋಜನದ ಸವಿಯನ್ನು ಇಲ್ಲಿ ಉಣ್ಣಬಹುದು. ಆದರೆ, ಪ್ರವಾಸಿಗರು ಮೊದಲೇ ಮಾಹಿತಿ ನೀಡಿರಬೇಕಾಗುತ್ತದೆ.
ಲೇಹ್ ಲಡಾಖ್ ಪ್ರದೇಶ ಕೃಷಿಗೆ ಹೇಳಿ ಮಾಡಿಸಿದಂತಹ ಪ್ರದೇಶ ಅಲ್ಲವಾದರೂ ಕೆಲವೊಂದು ಬೆಳೆಗಳನ್ನು ಇಲ್ಲಿ ಬೆಳೆಯುವುದನ್ನು ಕಾಣಬಹುದು. ಗೋಧಿ, ಬಾರ್ಲಿ, ಸಾಸಿವೆ, ಆಪ್ರಿಕಾಟ್ (ಒಂದು ವಿಧದ ಹಣ್ಣು) ಇತ್ಯಾದಿ ಇಲ್ಲಿನ ಬೆಳೆಗಳು.
ತುಪ್ಕಾ, ಚುತೇಗಿ (ಪಾಸ್ತಾ), ಕಂಭೀರ್ (ಮನೆಯಲ್ಲೇ ತಯಾರಿಸಿದ ಬ್ರೆಡ್), ಥುಕ್ಸಿಂಗ್ (ಸೂಪ್), ಖುನಕ್ (ಬೆಣ್ಣೆ ಚಹಾ), ಚುಲಿ (ಸಿಹಿ ಖಾದ್ಯ), ಮುಕ್ ಮುಕ್ (ಮೊಮೋಸ್) ಲಡಾಖ್‌ನ ಪ್ರಮುಖ ಖಾದ್ಯಗಳು. ಇವುಗಳ ಹೆಸರೆಲ್ಲ ಲಡಾಖಿ ಅಥವಾ ಬೋಧಿ ಭಾಷೆಯಲ್ಲಿವೆ. ಬೌದ್ಧ ಧರ್ಮದ ಅನುಯಾಯಿಗಳು ಲಡಾಖ್‌ನಲ್ಲಿ ಬಹುಸಂಖ್ಯೆಯಲ್ಲಿ ಇರುವುದರಿಂದ ಬೌದ್ಧ ಧರ್ಮದ ಆಚಾರ ವಿಚಾರ ಹೆಚ್ಚು ಕಾಣಬಹುದು. ಉಳಿದಂತೆ ಮುಸ್ಲಿಮರದ್ದು ಇಲ್ಲಿ ಎರಡನೇ ಅತಿಹೆಚ್ಚು ಜನಸಂಖ್ಯೆ. ಲೇಹ್ ಲಡಾಖ್ ಕೇಂದ್ರಾಡಳಿತ ಪ್ರದೇಶದ ಎರಡು ಜಿಲ್ಲೆಗಳಲ್ಲಿ ಒಂದು ಲಡಾಖ್, ಇನ್ನೊಂದು ಕಾರ್ಗಿಲ್.
ಭಾಗ – 1 ಓದಲು; Leh Ladakh: ಲೇಹ್ ಲಡಾಖ್; ಕಣಿವೆಗಳ ವಿಸ್ಮಯ ಲೋಕದಲ್ಲೊಂದು ಸುತ್ತು
ದೇಶಪ್ರೇಮ ಉಕ್ಕಿಸುವ ಹಾಲ್ ಆಫ್ ಫೇಮ್
ಲೇಹ್ ಪಟ್ಟಣದ ಅನತಿ ದೂರದಲ್ಲಿ ಭಾರತೀಯ ಸೇನೆಯ ಹಾಲ್ ಆಫ್ ಫೇಮ್ ಇದೆ. ಇಲ್ಲಿ ಸೇನೆಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ಹಾಗೂ ಭಾರತವು ಈವರೆಗೆ ಚೀನಾ, ಪಾಕಿಸ್ತಾನದ ವಿರುದ್ಧ ನಡೆಸಿದ ಯುದ್ಧಗಳ ವಿಸ್ತೃತ ವಿವರಣೆ, ಹುತಾತ್ಮ ಯೋಧರ ಸಾಹಸಗಾಥೆಯನ್ನು ಚಿತ್ರ, ನಕಾಶೆ ಸಹಿತ ಕಟ್ಟಿಕೊಡಲಾಗಿದೆ. ಸಂಜೆ ಹೊತ್ತಿಗೆ ಭಾರತೀಯ ಯೋಧರ ಶೌರ್ಯ, ಸಾಹಸಗಳನ್ನು ಸಾರ್ವಜನಿಕರಿಗೆ ತೋರಿಸಿಕೊಡುವ ಸಾಕ್ಷ್ಯಚಿತ್ರವೊಂದನ್ನು ಪ್ರದರ್ಶಿಸುತ್ತಾರೆ. 1947ರ ಭಾರತ- ಪಾಕಿಸ್ತಾನ ಯುದ್ಧದಿಂದ ತೊಡಗಿ 2020ರ ಗಾಲ್ವನ್ ಕಣಿವೆ ಸಂಘರ್ಷದ ವರೆಗಿನ ಸಂಪೂರ್ಣ ಚಿತ್ರಣ ಈ ಸಾಕ್ಷ್ಯಚಿತ್ರದಲ್ಲಿ ಕಟ್ಟಿಕೊಡಲಾಗಿದೆ.
ಭಾಗ – 2 ಓದಲು; Leh Ladakh: ನೂಬ್ರಾ ಕಣಿವೆಯೆಂಬ ವೈರುಧ್ಯಗಳ ಖನಿ; ಪ್ಯಾಂಗಾಂಗ್ ತ್ಸೊ ಪರ್ವತ ಸಾಗರ!
ಹೇಗೆ ಹೋಗಬಹುದು ಲೇಹ್ ಲಡಾಖ್‌ಗೆ?
ಲೇಹ್ ಲಡಾಖ್‌ಗೆ ರಸ್ತೆ ಮಾರ್ಗವಾಗಿಯೇ ಸಾಗುವುದಾದರೆ ಮನಾಲಿಗೆ ತೆರಳಿ ಅಲ್ಲಿಂದ ಪ್ರಯಾಣ ಬೆಳೆಸಬಹುದು. ಕಾಶ್ಮೀರಕ್ಕೆ ತೆರಳಿ ಅಲ್ಲಿಂದಲೂ ಸಂಚಾರ ಕೈಗೊಳ್ಳಬಹುದು. ಬೈಕ್ ರೈಡಿಂಗ್ ಸಾಹಸಿಗಳಿಗೆ ಬಾಡಿಗೆಗೆ ಬೈಕ್ಗಳು ದೊರೆಯುತ್ತವೆ. ಸ್ವಂತ ವಾಹನಗಳಲ್ಲಿಯೂ ತೆರಳಬಹುದು. ನಾವು ಎಲ್ಲಿಂದ ಲೇಹ್ ಲಡಾಖ್ ಸುತ್ತಾಟ (ಉದಾಹರಣೆಗೆ; ಲೇಹ್, ಮನಾಲಿ, ಕಾಶ್ಮೀರ) ಆರಂಭಿಸಬೇಕು ಎಂದುಕೊಂಡಿದ್ದೇವೆಯೋ ಆ ಗಮ್ಯದ ವರೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತೆರಳಿ ಅಲ್ಲಿ ವಾಹನಗಳನ್ನು ಬಾಡಿಗೆಗೆ ಪಡೆಯಲೂ ಅವಕಾಶವಿದೆ.
ವಿಮಾನದ ಮೂಲಕ ತೆರಳುವುದಾದರೆ ಲೇಹ್ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಲಡಾಖ್ ಯಾತ್ರೆ ಕೈಗೊಳ್ಳಬಹುದು. ಲೇಹ್ನಲ್ಲಿರುವುದು ಭಾರತೀಯ ಸೇನೆಯ ವ್ಯಾಪ್ತಿಯಲ್ಲಿರುವ ವಿಮಾನ ನಿಲ್ದಾಣ. ಪ್ರಯಾಣಿಕ ವಿಮಾನಕ್ಕೂ ಅದರಲ್ಲಿಯೇ ಕಾರ್ಯಾಚರಣೆಗೆ ಅನುಮತಿ ನೀಡಲಾಗುತ್ತಿದೆಯಷ್ಟೆ.
ಲೇಹ್ ಲಡಾಖ್ ಪ್ರವಾಸಕ್ಕೆ ಸೂಕ್ತ ಸಮಯ ಯಾವುದು?
ಸಾಮಾನ್ಯವಾಗಿ ಮಾರ್ಚ್ ನಂತರ ಜುಲೈ, ಆಗಸ್ಟ್ ವರೆಗೆ ಲೇಹ್ ಲಡಾಖ್ ಪ್ರವಾಸಕ್ಕೆ ಸೂಕ್ತ ಸಮಯ ಎನ್ನುತ್ತಾರೆ ಅಲ್ಲಿನ ಸ್ಥಳೀಯ ಪ್ರವಾಸಿ ಮಾರ್ಗದರ್ಶಕರು. ನಂತರ ಚಳಿಗಾಲದಲ್ಲಿ ಹಿಮಪಾತ ಇತ್ಯಾದಿ ಸಮಸ್ಯೆಗಳು ತಲೆದೋರಬಹುದಾದ್ದರಿಂದ ಪ್ರವಾಸ ಕಷ್ಟಸಾಧ್ಯ. ಮಾರ್ಚ್ ಬಳಿಕದ ಋತುವಿನಲ್ಲಿ ಕಣಿವೆಯಲ್ಲಿಯೂ ಆಹ್ಲಾದಕರ ವಾತಾವರಣ ಇರುತ್ತದೆ. ಹೆಚ್ಚಿನ ಚಳಿಯೂ ಇಲ್ಲದೆ, ತೀರಾ ಪ್ರಾಕೃತಿಕ ವೈಪರೀತ್ಯಗಳೂ ಇಲ್ಲದೆ ಸಂಚಾರ, ಪ್ರವಾಸ, ವಿಹಾರ ಸುಗಮ.
ಭಾಗ – 3 ಓದಲು; ಚಂಗ್ಲಾ ಪಾಸ್ ಎಂಬ ಬೆಳ್ಳಿ ಬೆಟ್ಟದಲ್ಲೊಂದು ಮಂಜಿನ ಸರೋವರ!
ಲೇಹ್ ಲಡಾಖ್ ಪ್ರವಾಸಕ್ಕೆ ಸಿದ್ಧತೆ ಹೇಗಿರಬೇಕು?
ಇದು ನಾವು ಯಾವ ರೀತಿಯ ಪ್ರವಾಸವನ್ನು ಕೈಗೊಳ್ಳುತ್ತೇವೆ ಎಂಬುದರ ಆಧಾರದಲ್ಲಿದೆ. ಬೈಕ್ ರೈಡಿಂಗ್ ಸಾಹಸ ಮಾಡುವುದಿದ್ದರೆ ಅದಕ್ಕೆ ತಕ್ಕುದಾದ ದಿರಿಸುಗಳು, ನೀ ಪ್ಯಾಡ್, ರೈಡಿಂಗ್ ಜಾಕೆಟ್, ಚಳಿ, ಹಿಮ ಮಳೆಯಿಂದ ರಕ್ಷಿಸಿಕೊಳ್ಳಲು ಬೇಕಾದ ಕೋಟ್ ಇತ್ಯಾದಿಗಳನ್ನು ಒಯ್ಯುವುದು ಉತ್ತಮ. ತುರ್ತು ಸಂದರ್ಭಗಳಲ್ಲಿ ಬೇಕಾಗುವ ಔಷಧ, ಪ್ರಾಥಮಿಕ ಚಿಕಿತ್ಸಾ ಪರಿಕರಗಳು ಜತೆಯಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ, ಒಮ್ಮೆ ಪ್ರಯಾಣ ಶುರು ಮಾಡಿದ ನಂತರ ಗಮ್ಯ ತಲುಪದೆ ಈ ಪ್ರದೇಶದಲ್ಲಿ ಮೆಡಿಕಲ್, ಅಂಗಡಿಗಳು ಸಿಗಲಾರವು. ಇನ್ನು ಕಾರು ಹಾಗೂ ಇತರ ನಾಲ್ಕು ಚಕ್ರ ವಾಹನಗಳಲ್ಲಿ ಸಾಗುವುದಿದ್ದರೂ ಪ್ರಾಥಮಿಕ ಅಗತ್ಯವೆನಿಸಿದ ಪರಿಕರಗಳನ್ನು ಒಯ್ಯುವುದು ಅಗತ್ಯ.
ಟೂರಿಸ್ಟ್ ಏಜೆನ್ಸಿ ಅಥವಾ ಸ್ಥಳೀಯ ಪ್ರವಾಸಿ ಮಾರ್ಗದರ್ಶಕರ ಅಗತ್ಯವಿದೆಯೇ?
ಇದೂ ಅಷ್ಟೆ, ನಮ್ಮ ಪ್ರವಾಸದ ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ. ದೇಶದ ಇತರ ಕಡೆಗಳಿಗೆ ಪ್ರವಾಸ ಹೋದಂತೆ ಗೂಗಲ್ ಮ್ಯಾಪ್ ನೋಡಿಕೊಂಡೇ ಸುತ್ತಾಡಬಲ್ಲೆ ಎಂಬ ಧೈರ್ಯ ಇಲ್ಲಿ ಮಾಡುವಂತಿಲ್ಲ. ಯಾಕೆಂದರೆ ಲೇಹ್ ಲಡಾಖ್ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಬಹಳ. ಬಿಎಸ್ಎನ್ಎಲ್, ಏರ್ಟೆಲ್ ಹಾಗೂ ಜಿಯೋ ಸಿಮ್ಗಳು ಇಲ್ಲಿ ಸೇವೆ ನೀಡುತ್ತಿದ್ದರೂ ಪಟ್ಟಣ ಪ್ರದೇಶಗಳಲ್ಲಷ್ಟೇ ನೆಟ್ವರ್ಕ್ ಲಭ್ಯ. ಅಷ್ಟಕ್ಕೂ ಭಾರತದ ಬೇರೆ ಯಾವುದೇ ರಾಜ್ಯದಿಂದ ಬಂದವರ ಪ್ರಿಪೇಯ್ಡ್ ಸಿಮ್ ಇಲ್ಲಿ ಕೆಲಸ ಮಾಡದು. ಪೋಸ್ಟ್ ಪೇಯ್ಡ್ ಸಿಮ್ ಇದ್ದರಷ್ಟೇ ಅದು ಇಲ್ಲಿ ಉಪಯೋಗಕ್ಕೆ ಬರಬಹುದು. ದುರ್ಗಮ ಪ್ರದೇಶಗಳ ಹಾಗೂ ಸಮುದ್ರ ಮಟ್ಟದಿಂದ ಅತಿಎತ್ತರದ ಪ್ರದೇಶಗಳಲ್ಲಿ ಆಲ್ಟಿಟ್ಯೂಡ್ ಸಿಕ್ನೆಸ್, ಆಮ್ಲಜನಕ ಲಭ್ಯತೆ ಸಮಸ್ಯೆ ಇತ್ಯಾದಿಗಳು ಪ್ರವಾಸಿಗರಿಗೆ ಎದುರಾಗಬಹುದು. ಟೂರಿಸ್ಟ್ ಏಜೆನ್ಸಿ ಅಥವಾ ಸ್ಥಳೀಯ ಪ್ರವಾಸಿ ಮಾರ್ಗದರ್ಶಕರ ನೆರವಿನೊಂದಿಗೆ ಪ್ರವಾಸವಾದರೆ ಆಮ್ಲಜನಕದ ಸಿಲಿಂಡರ್ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳು ಸುಲಭವಾಗಿ ದೊರೆಯುತ್ತದೆ. ಇಲ್ಲ ನಾವೇ ಯೋಜನೆ ರೂಪಿಸಿ ತೆರಳುತ್ತೇವೆ ಎಂದರೂ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡೇ ಪ್ರವಾಸ ಕೈಗೊಳ್ಳುವುದು ಉತ್ತಮ. ಸ್ಥಳೀಯ ಮಾರ್ಗದರ್ಶಕರೊಬ್ಬರನ್ನು ಜತೆಗೆ ಕರೆದುಕೊಂಡು ಹೋಗುವುದೇ ಕ್ಷೇಮ.
ನಾಲ್ಕಾರು ದಿನಗಳ ಪ್ರವಾಸವಾದರೆ ಕೆಲವೊಂದು ಪ್ರದೇಶಗಳ ಸೌಂದರ್ಯವನ್ನಷ್ಟೇ ಸವಿಯಬಹುದು. ಇನ್ನೂ ಒಂದಷ್ಟು ದಿನ ಸುತ್ತಾಡಲು ಸಮಯಾವಕಾಶವಿದೆ ಎಂದಾದರೆ ಕಾರ್ಗಿಲ್, ಬಟಾಲಿಕ್ ಸೇರಿದಂತೆ ಇನ್ನೂ ಒಂದಷ್ಟು ಪರ್ವತಶ್ರೇಣಿಗಳಲ್ಲಿ ವಿಹರಿಸಿ ಪ್ರಕೃತಿ ಸೌಂದರ್ಯ, ವಿಸ್ಮಯಗಳ ಸಿಹಿ ನೆನಪುಗಳ ಅನುಭವದ ಮೂಟೆಯನ್ನು ಹೊತ್ತುಕೊಂಡು ಮರಳಬಹುದು!
ಪ್ರವಾಸ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಮತ್ತಷ್ಟು ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Sat, 5 August 23