Early Dinner Benefits: ರಾತ್ರಿಯ ಭೋಜನವನ್ನು ಸೂರ್ಯಾಸ್ತದ ಮುಂಚೆ ಸೇವಿಸಿ, ಅನುಷ್ಕಾ ಶರ್ಮಾ ಸಲಹೆ ಇಲ್ಲಿದೆ
ರಾತ್ರಿಯ ಭೋಜನವನ್ನು ಬೇಗನೆ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳು ದೊರಕುತ್ತವೆ. ಹಾಗೂ ಇದು ತೂಕವನ್ನು ಕಳೆದುಕೊಳ್ಳಲು, ಚೆನ್ನಾಗಿ ನಿದ್ದೆ ಮಾಡಲು ಮತ್ತು ಸಂತೋಷವಾಗಿರಲು ಹೇಗೆ ಸಹಾಯ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಬೆಳಗ್ಗಿನ ಉಪಾಹಾರಕ್ಕೆ ಜನರು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಆದರೆ ರಾತ್ರಿಯ ಊಟದ ಬಗ್ಗೆ ಅಷ್ಟೇನೂ ಗಮನ ಹರಿಸುವುದಿಲ್ಲ. ದಿನದ ಆರಂಭ ಎಷ್ಟು ಮುಖ್ಯವೋ, ಅಂತ್ಯವೂ ಅಷ್ಟೇ ಮುಖ್ಯ. ನೀವು ಏನು ಮತ್ತು ಎಷ್ಟು ತಿನ್ನುತ್ತೀರಿ ಎನ್ನುವುದಕ್ಕಿಂತ ನೀವು ಯಾವಾಗ ತಿನ್ನುತ್ತಿರಿ ಎಂಬುದು ಮುಖ್ಯವಾಗಿದೆ. ಆದ್ದರಿಂದ ದಿನದ ಕೊನೆಯ ಆಹಾರವಾದ ರಾತ್ರಿಯ ಭೋಜನವನ್ನು ಸರಿಯಾದ ಸಮಯಕ್ಕೆ ಸೇವಿಸುವುದು ತುಂಬಾ ಮುಖ್ಯ. ಏಕೆಂದರೆ ಇದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮನ್ನು ಬೀರುತ್ತದೆ ಎನ್ನುತ್ತಾರೆ ತಜ್ಞರು.
ಹೆಚ್ಚು ಶಕ್ತಿಯುತವಾಗಿರಲು ಹಾಗೂ ಚೈತನ್ಯಭರಿತವಾಗಿ ಎಚ್ಚರಗೊಳ್ಳಲು ಸಹಕಾರಿ:
ಇತ್ತೀಚಿಗೆ ನಟಿ ಅನುಷ್ಕಾ ಶರ್ಮಾ ಸಂಜೆ 5:30 ರಿಂದ 6 ಗಂಟೆಯ ಒಳಗೆ ಅವರ ರಾತ್ರಿಯ ಭೋಜನವನ್ನು ಮಾಡುತ್ತಾರಂತೆ. ಬೇಗನೇ ರಾತ್ರಿಯ ಊಟವನ್ನು ಮಾಡಿ ಮುಗಿಸುವ ಅಭ್ಯಾಸ ರೂಪಿಸಿಕೊಂಡಾಗಿನಿಂದ ತನ್ನ ಆರೋಗ್ಯವು ಬಹಳ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ. ದಿನದ ಕೊನೆಯ ಊಟವನ್ನು ಬೇಗ ತಿಂದರೆ ಹೇಗೆ ಚೆನ್ನಾಗಿ ನಿದ್ರೆ ಬರುತ್ತದೆ ಮತ್ತು ತನ್ನೆಲ್ಲಾ ನಿದ್ರೆಯ ಸಮಸ್ಯೆಯು ಪರಿಹಾರಗೊಂಡಿತು ಎಂಬುದರ ಬಗ್ಗೆಯೂ ಹೇಳಿದ್ದಾರೆ. “ನಾನು ಚೈತನ್ಯಭರಿತವಾಗಿ ಎಚ್ಚರಗೊಳ್ಳುತ್ತೇನೆ, ನಾನು ಹೆಚ್ಚು ಶಕ್ತಿಯುತವಾಗಿದ್ದೇನೆ, ನಾನು ಸ್ಪಷ್ಟವಾಗಿ ಯೋಚಿಸಲು ಆರಂಭಿಸಿದ್ದೇನೆ. ಈ ಎಲ್ಲಾ ಉತ್ತಮ ಅಂಶ ರಾತ್ರಿಯ ಬೋಜನವನ್ನು ಬೇಗ ತಿಂದು ಮುಗಿಸುವ ಅಭ್ಯಾಸದಿಂದ ದೊರಕಿದ್ದು ಎಂದು ಹೇಳಿದ್ದಾರೆ. ಹಾಗಾಗಿ ಉತ್ತಮ ಆರೋಗ್ಯ ಮತ್ತು ಉಲ್ಲಾಸದಾಯಕವಾಗಿ ಎಚ್ಚರಗೊಳ್ಳಲು ರಾತ್ರಿಯ ಬೋಜನವನ್ನು ಸೂರ್ಯಾಸ್ತದ ಮುಂಚೆ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ.
ರಾತ್ರಿಯ ಊಟವನ್ನು ಬೇಗನೇ ತಿನ್ನುವುದು ಒಟ್ಟಾರೆ ಯೋಗಕ್ಷೇಮವನ್ನು ಹೇಗೆ ಹೆಚ್ಚಿಸಬಹುದು:
ಪೌಷ್ಟಿಕ ತಜ್ಞೆ ರಾಶಿ ಚೌಧರಿ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ದಿನ ಕೊನೆಯ ಊಟವನ್ನು ಬೇಗ ಮಾಡಿ ಮುಗಿಸುವುದರಿಂದ ಸಿಗುವ ಲಾಭದ ಬಗ್ಗೆ ತಿಳಿಸಿದ್ದಾರೆ. “ನೀವು ಬೇಗನೆ ರಾತ್ರಿಯ ಊಟವನ್ನು ಸೇವಿಸುವುದರಿಂದ ಹಲವಾರು ವಿಭಿನ್ನ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಎಂದು ಅವರು ಹೇಳುತ್ತಾರೆ.
ನಮ್ಮ ನಿದ್ರೆಯ ಹಾರ್ಮೋನು ಆಗಿರುವ ಮೆಲಟೋನಿನ್ ಸೂರ್ಯಾಸ್ತದ ನಂತರ ನಮ್ಮ ರಕ್ತದಲ್ಲಿ ಬಿಡುಗಡೆಗೊಳ್ಳಲು ಪ್ರಾರಂಭಿಸುತ್ತದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಕಡಿಮೆ ಮಾಡಲು ಕರುಳಿಗೆ ಸಂಕೇತವನ್ನು ನೀಡುತ್ತದೆ, ಹೀಗಾಗಿ ರಾತ್ರಿ ಸಮಯದಲ್ಲಿ ಜೀರ್ಣಕ್ರಿಯೆ ಪ್ರಕ್ರಿಯೆ ಕಡಿಮೆಗೊಳ್ಳುತ್ತದೆ. ಹಾಗಾಗಿ ರಾತ್ರಿ ಭೋಜನವನ್ನು ಸೂರ್ಯಾಸ್ತದ ಮೊದಲು ಅಂದರೆ 6 ಗಂಟೆಯೊಳಗೆ ಮಾಡಿ ಮುಗಿಸಿದರೆ, ನಾವು ಸೇವಿಸಿದ ಆಹಾರ ಮಲಗುವ ಮೊದಲು ಚೆನ್ನಾಗಿ ಜೀರ್ಣವಾಗುತ್ತದೆ. ಇದರಿಂದ ಬಹುತೇಕ ನಾವು ಖಾಲಿ ಹೊಟ್ಟೆಯಲ್ಲಿ ಮಲಗುತ್ತೇವೆ. ಜೀರ್ಣಕ್ರಿಯೆಯು ಪೂರ್ಣಗೊಂಡಾಗ, ನಮ್ಮ ದೇಹವು ಆಂತರಿಕ ಚಿಕಿತ್ಸೆ, ಚೇತರಿಕೆ ಮತ್ತು ದುರಸ್ತಿಗಾಗಿ ಎಲ್ಲಾ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರಿಂದ ಬೆಳಗ್ಗೆ ಚೈತನ್ಯಭರಿತವಾಗಿ ಎಚ್ಚರಗೊಳ್ಳುತ್ತೇವೆ.
ಅಲ್ಲದೆ ರಾತ್ರಿಯ ಭೋಜನವನ್ನು ಸಂಜೆ 5 ರಿಂದ 6 ಗಂಟೆಯ ಒಳಗೆ ತಿನ್ನುವುದರಿಂದ ಅದು ನಮ್ಮ ಅನಾರೋಗ್ಯಕರ ಕಡು ಬಯಕೆಗಳನ್ನು ನಿಗ್ರಹಿಸುತ್ತದೆ. ಮತ್ತು ಈ ರೀತಿಯಾಗಿ ನಾವು ಹೆಚ್ಚುವರಿಯಾಗಿ ಸೇವನೆ ಮಾಡುವ ಆಹಾರವನ್ನು ಕಡಿತಗೊಳಿಸದಾಗ ಇದು ತೂಕ ನಷ್ಟಕ್ಕೂ ಸಹಕಾರಿಯಾಗುತ್ತದೆ.
ಇದನ್ನೂ ಓದಿ: ಜೀವನಶೈಲಿ ಬದಲಾಯಿಸಿ ಹಾಗೂ ಮುಟ್ಟಿನ ಸಮಯದ ನೋವಿನಿಂದ ಮುಕ್ತಿ ಪಡೆಯಿರಿ
ರಾತ್ರಿಯ ಊಟ ಬೇಗನೆ ಮಾಡಿ ಮುಗಿಸುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ:
ಬೇಗನೆ ರಾತ್ರಿಯ ಊಟವನ್ನು ಮಾಡಿದಾಗ ಮೆಲಟೋನಿನ್ ಹಾರ್ಮೋನು ಬಿಡುಗಡೆಯಾಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಸರಿಸುಮಾರು ರಾತ್ರಿ 10 ರಿಂದ ಮಧ್ಯರಾತ್ರಿ 2 ಗಂಟೆಯ ನಡುವೆ ಗರಿಷ್ಟ ಪ್ರಮಾಣದಲ್ಲಿ ಈ ಹಾರ್ಮೋನು ಜೊತೆಗೆ ಪುನಶ್ಚೇತನಕಾರಿ ಕಿಣ್ವಗಳು ಇವೆಲ್ಲವೂ ಬಿಡುಗಡೆಗೊಳ್ಳುತ್ತದೆ. ಹೀಗೆ ರಾತ್ರಿ ಊಟವನ್ನು ಬೇಗನೆ ತಿನ್ನುವುದರಿಂದ ಆಹಾರ ಜೀರ್ಣವಾಗಲು ಸಾಕಷ್ಟು ಸಮಯ ಸಿಗುತ್ತದೆ. ನಂತರ ಆಹಾರವು ನಮ್ಮ ದೇಹದಲ್ಲಿ ಸರಿಯಾಗಿ ಹೀರಲ್ಪಡುತ್ತದೆ ಮತ್ತು ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ, ನಾವು ಬೆಳಗ್ಗೆ ಹೊಸ ಶಕ್ತಿ, ಚೈತನ್ಯ ಮತ್ತು ಉಲ್ಲಾಸ ಭಾವನೆಯಿಂದ ಎಚ್ಚರಗೊಳ್ಳುತ್ತೇವೆ. ಇದರಿಂದ ದಿನವಿಡಿ ಸಂತೋಷದಾಯಕವಾಗಿರುತ್ತೇವೆ ಎಂದು ಚೌಧರಿ ಹೇಳುತ್ತಾರೆ.
ರಾತ್ರಿ ಭೋಜನವನ್ನು ತಡವಾಗಿ ಮಾಡುವ ಅನಾನುಕೂಲತೆಗಳು:
ರಾತ್ರಿ ತಡವಾಗಿ ಊಟ ಮಾಡಿದರೆ, ಆಹಾರದಲ್ಲಿರುವ ಕ್ಯಾಲೋರಿಗಳು ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ದೇಹದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಪ್ರತಿದಿನ ರಾತ್ರಿ ಭೋಜನವನ್ನು ತಡವಾಗಿ ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆಯು ಇರುತ್ತದೆ. ಇದಲ್ಲದೆ ಈ ಅಭ್ಯಾಸ ಅಜೀರ್ಣ ಮತ್ತು ಎದೆಯುರಿ ಸಮಸ್ಯೆಗಳನ್ನೂ ಉಂಟುಮಾಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: