Ganesh Pooja: ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣೇಶನ ಪೂಜೆ ಏಕೆ? ಇದರ ಹಿಂದೆ ಇದೆ ಪೌರಾಣಿಕ ಕಥೆ

ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಗಣೇಶನಿಗೆ ಪ್ರಥಮ ಪೂಜ್ಯ ಸ್ಥಾನ ಹೇಗೆ ಸಿಕ್ಕಿತು ಎಂಬುದರ ಹಿಂದೆ ಆಸಕ್ತಿದಾಯಕ ಪೌರಾಣಿಕ ಕಥೆಯಿದೆ. ಶಿವ-ಪಾರ್ವತಿಯ ಸುತ್ತ ಏಳು ಬಾರಿ ಪ್ರದಕ್ಷಿಣೆ ಹಾಕಿದ ಗಣೇಶನ ಬುದ್ಧಿವಂತಿಕೆ, ಭಕ್ತಿ ಮತ್ತು ಶಿವ ನೀಡಿದ ವರದ ಕುರಿತು ಈ ಕಥೆಯಲ್ಲಿ ತಿಳಿಯಿರಿ.

Ganesh Pooja: ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣೇಶನ ಪೂಜೆ ಏಕೆ? ಇದರ ಹಿಂದೆ ಇದೆ ಪೌರಾಣಿಕ ಕಥೆ
Ganapathi Pooja
Edited By:

Updated on: Sep 12, 2026 | 10:42 AM

ಮುಖ್ಯಾಂಶಗಳು

  • ಶುಭ ಕಾರ್ಯಕ್ಕೂ ಮೊದಲು ಗಣೇಶನ ಪೂಜೆ ಏಕೆ?
  • ಗಣೇಶನಿಗೆ ‘ಪ್ರಥಮ ಪೂಜ್ಯ’ ಸ್ಥಾನ ಸಿಕ್ಕಿದ್ದು ಹೇಗೆ?
  • ಗಣೇಶನ ಈ ಪೌರಾಣಿಕ ಕಥೆ ನಿಮಗೆ ಗೊತ್ತೇ?

ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯ ಅಥವಾ ಹೊಸ ಕೆಲಸ ಆರಂಭಿಸುವ ಮುನ್ನ ಗಣೇಶನನ್ನು ಪೂಜಿಸುವ (Ganapathi Pooja) ಸಂಪ್ರದಾಯವಿದೆ. ಮದುವೆ, ಗೃಹಪ್ರವೇಶ, ಪೂಜೆ ಸೇರಿದಂತೆ ಹಲವು ಶುಭ ಸಂದರ್ಭಗಳಲ್ಲಿ ಮೊದಲು ಗಣಪತಿಗೆ ಪೂಜೆ ಸಲ್ಲಿಸಲಾಗುತ್ತದೆ. ಗಣೇಶನನ್ನು ಪ್ರಥಮ ಪೂಜ್ಯ ಎಂದು ಕರೆಯಲು ಇದೇ ಕಾರಣ. ಆದರೆ ಎಲ್ಲ ದೇವರಿಗಿಂತ ಮೊದಲು ಗಣೇಶನನ್ನೇ ಏಕೆ ಪೂಜಿಸಲಾಗುತ್ತದೆ ಎಂಬ ಪ್ರಶ್ನೆಗೆ ಒಂದು ಕುತೂಹಲಕಾರಿ ಪೌರಾಣಿಕ ಕಥೆಯೂ ಇದೆ.

ಯಾರು ಮೊದಲು ಇಡೀ ಬ್ರಹ್ಮಾಂಡ ಸುತ್ತಿ ಬರುತ್ತಾರೆ?

ಪೌರಾಣಿಕ ನಂಬಿಕೆಗಳ ಪ್ರಕಾರ, ಒಂದು ಬಾರಿ ದೇವತೆಗಳ ನಡುವೆ ಒಂದು ಚರ್ಚೆ ನಡೆಯಿತು. ಭೂಮಿಯಲ್ಲಿ ಮೊದಲು ಯಾರನ್ನು ಪೂಜಿಸಬೇಕು ಎಂಬ ಪ್ರಶ್ನೆ ಉದ್ಭವಿಸಿತು. ಈ ವಿಚಾರಕ್ಕೆ ಪರಿಹಾರ ಕಂಡುಕೊಳ್ಳಲು ದೇವತೆಗಳು ಶಿವ ಮತ್ತು ಪಾರ್ವತಿಯ ಬಳಿಗೆ ಹೋದರು.

ಆಗ ಶಿವನು ಒಂದು ಷರತ್ತು ವಿಧಿಸಿದನು. ಯಾರು ಮೊದಲು ಇಡೀ ಬ್ರಹ್ಮಾಂಡವನ್ನು ಸುತ್ತಿ ಬಂದು ತಲುಪುತ್ತಾರೋ, ಅವರನ್ನೇ ಪ್ರಥಮ ಪೂಜ್ಯ ಎಂದು ಪರಿಗಣಿಸಲಾಗುವುದು ಎಂದು ಹೇಳಿದನು. ಈ ಮಾತು ಕೇಳುತ್ತಿದ್ದಂತೆ ದೇವತೆಗಳು ತಮ್ಮ ತಮ್ಮ ವಾಹನಗಳಲ್ಲಿ ಬ್ರಹ್ಮಾಂಡದ ಸುತ್ತು ಹಾಕಲು ಹೊರಟರು. ಕಾರ್ತಿಕೇಯ ಕೂಡ ತನ್ನ ನವಿಲಿನ ಮೇಲೆ ಕುಳಿತು ತಕ್ಷಣವೇ ಹೊರಟನು.

ಗಣೇಶನಿಗೆ ಇತ್ತು ಬೇರೆ ಯೋಚನೆ

ಗಣೇಶನ ವಾಹನ ಮೂಷಿಕ. ಅದು ವೇಗವಾಗಿ ಸಾಗಲು ಸಾಧ್ಯವಿಲ್ಲ ಎಂಬುದು ಗಣೇಶನಿಗೂ ತಿಳಿದಿತ್ತು. ಹೀಗಾಗಿ ಅವರು ಇತರ ದೇವತೆಗಳಂತೆ ಬ್ರಹ್ಮಾಂಡದ ಸುತ್ತು ಹಾಕಲು ಹೊರಡಲಿಲ್ಲ. ಬದಲಿಗೆ ತಮ್ಮ ಬುದ್ಧಿವಂತಿಕೆಯನ್ನು ಬಳಸಿದ ಗಣೇಶ, ಶಿವ ಮತ್ತು ಪಾರ್ವತಿಯನ್ನು ಒಂದೇ ಸ್ಥಳದಲ್ಲಿ ಕೂರಿಸಿ ಅವರ ಸುತ್ತಲೂ ಏಳು ಬಾರಿ ಪ್ರದಕ್ಷಿಣೆ ಹಾಕಿದರು. ನಂತರ ಕೈಮುಗಿದು ಅವರ ಮುಂದೆ ನಿಂತರು.

ಗಣೇಶ ಹೀಗೆ ಮಾಡಿದ್ದೇಕೆ ಎಂದು ಶಿವ ಕೇಳಿದಾಗ, ನನ್ನ ಪಾಲಿಗೆ ತಂದೆ-ತಾಯಿಗಿಂತ ದೊಡ್ಡ ತೀರ್ಥ ಮತ್ತೊಂದಿಲ್ಲ. ತಂದೆ-ತಾಯಿಯಲ್ಲೇ ಇಡೀ ಜಗತ್ತು ಅಡಗಿದೆ ಎಂದು ಗಣೇಶ ಉತ್ತರಿಸಿದನೆಂದು ಪೌರಾಣಿಕ ಕಥೆ ಹೇಳುತ್ತದೆ.

Ganesh Chaturthi: ಗಣೇಶ ಹಬ್ಬದಲ್ಲಿ ಮೋದಕ, ಲಡ್ಡು ತಿನ್ನುವ ಮುನ್ನ ಈ ಆರೋಗ್ಯ ಸಲಹೆ ತಿಳಿಯಿರಿ

ಗಣೇಶನಿಗೆ ಸಿಕ್ಕ ಪ್ರಥಮ ಪೂಜ್ಯ ಸ್ಥಾನ

ಗಣೇಶನ ಉತ್ತರ ಮತ್ತು ತಂದೆ-ತಾಯಿಯ ಮೇಲಿನ ಅವರ ಭಕ್ತಿಯನ್ನು ಕಂಡು ಶಿವನು ಸಂತೋಷಪಟ್ಟನು. ಗಣೇಶನನ್ನು ಅಪ್ಪಿಕೊಂಡು, ಇನ್ನು ಮುಂದೆ ಮೂರು ಲೋಕಗಳಲ್ಲಿಯೂ ಯಾವುದೇ ಶುಭ ಕಾರ್ಯ ಆರಂಭಿಸುವ ಮೊದಲು ಮೊದಲು ಗಣೇಶನನ್ನೇ ಪೂಜಿಸಬೇಕು ಎಂದು ವರ ನೀಡಿದನೆಂದು ನಂಬಲಾಗಿದೆ.

ಅಂದಿನಿಂದ ಯಾವುದೇ ಶುಭ ಅಥವಾ ಮಂಗಳ ಕಾರ್ಯದ ಆರಂಭದಲ್ಲಿ ಗಣೇಶನ ಪೂಜೆ ಮಾಡುವ ಸಂಪ್ರದಾಯ ಮುಂದುವರಿದಿದೆ. ಗಣೇಶನನ್ನು ವಿಘ್ನ ನಿವಾರಕ ಎಂದೂ ಭಕ್ತರು ನಂಬುತ್ತಾರೆ. ಯಾವುದೇ ಕೆಲಸ ಆರಂಭಿಸುವ ಮುನ್ನ ಗಣಪತಿಯನ್ನು ಸ್ಮರಿಸುವುದರಿಂದ ಅಡ್ಡಿ-ಆತಂಕಗಳು ದೂರವಾಗಿ ಕಾರ್ಯ ಯಶಸ್ವಿಯಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 am, Sat, 12 September 26

Loading...
Unable to load recommendations.
Follow Us