Woman Health: ಖಾಸಗಿ ಭಾಗಗಳ ಸ್ವಚ್ಛತೆಯ ಬಗ್ಗೆ ಈ ಅಂಶಗಳನ್ನು ನೆನಪಿಡಿ
ಅನಾದಿ ಕಾಲದಿಂದಲೂ ಮಹಿಳೆಯರ ಬಗೆಗಿನ ಮಾತುಗಳನ್ನಾಡಲು ಜನ ಹಿಂದೇಟು ಹಾಕುವುದು ಸಾಮಾನ್ಯ. ಅದು ಮಹಿಳೆಯರ ಮಾಸಿಕ ದಿನಗಳ ಬಗ್ಗೆ ಇರಬಹುದು ಅಥವಾ ಖಾಸಗಿ ಅಂಗಗಳ ಸ್ವಚ್ಛತೆಯ ಬಗೆಗೆ ಇರಬಹುದು. ಅದು ಮುಚ್ಚಿಡುವ ವಿಷಯ ಎಂದೇ ಭಾವಿಸಲಾಗಿದೆ.
ಅನಾದಿ ಕಾಲದಿಂದಲೂ ಮಹಿಳೆಯರ ಬಗೆಗಿನ ಮಾತುಗಳನ್ನಾಡಲು ಜನ ಹಿಂದೇಟು ಹಾಕುವುದು ಸಾಮಾನ್ಯ. ಅದು ಮಹಿಳೆಯರ ಮಾಸಿಕ ದಿನಗಳ ಬಗ್ಗೆ ಇರಬಹುದು ಅಥವಾ ಖಾಸಗಿ ಅಂಗಗಳ ಸ್ವಚ್ಛತೆಯ ಬಗೆಗೆ ಇರಬಹುದು. ಅದು ಮುಚ್ಚಿಡುವ ವಿಷಯ ಎಂದೇ ಭಾವಿಸಲಾಗಿದೆ. ಆದರೆ ಸರಿಯಾದ ಮಾಹಿತಿ, ವಿಚಾರ ತಿಳಿದಿರದೇ ಇದ್ದರೆ ಸೋಂಕು ತಗುಲಿ ಅಪಾಯವುಂಟಾಗುತ್ತದೆ. ಅದರಲ್ಲೂ ಖಾಸಗಿ ಅಂಗಗಳ ಸ್ವಚ್ಛತೆ ಪ್ರತೀ ಹೆಣ್ಣಿಗೆ ಮುಖ್ಯವಾಗಿರುತ್ತದೆ. ಯಾವ ಕೆಲಸಗಳನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿದಿರಬೇಕು. ಸರಿಯಾದ ಮಾರ್ಗದರ್ಶನವಿಲ್ಲದಿದ್ದರೆ ಸ್ವಚ್ಛತೆಗೆಂದು ಮಾಡುವ ಕೆಲವು ಕೆಲಸಗಳು ಖಾಸಗಿ ಅಂಗಗಳ ಸೋಂಕಿಗೆ ತುತ್ತಾಗಬಹುದು. ಖಾಸಗಿ ಭಾಗದ ಸ್ವಚ್ಛತೆಯು ಲೈಂಗಿಕ ಕ್ರಿಯೆ ಮತ್ತು ಗರ್ಭಧರಿಸುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಯಾವುದನ್ನು ಮಾಡಬೇಕು, ಯಾವ ಕ್ರಮಗಳನ್ನು ಕೈಗೊಳ್ಳಬಾರದು ಎನ್ನುವ ಮಾಹಿತಿ ಇಲ್ಲಿದೆ ನೋಡಿ,
ಒಳಡುಪುಗಳನ್ನು ಒಣಗಿಸಿ ಧರಿಸಿ: ಖಾಸಗಿ ಅಂಗಗಳ ಸುರಕ್ಷತೆಯ ಮೊದಲ ಕ್ರಮ ಎಂದರೆ ಒಳಉಡುಪುಗಳನ್ನು ಒಣಗಿಸಿ ಧರಿಸಬೇಕು. ತೇವಾಂಶವುಳ್ಳ ಬಟ್ಟೆಗಳನ್ನು ಧರಿಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಬಿಸಿನೀರಿನಲ್ಲಿ ತೊಳೆದು ಆದಷ್ಟು ಬಿಸಿಲಿನಲ್ಲಿ ಒಣಗಿಸಿ. ಇದರಿಂದ ಬ್ಯಾಕ್ಟೀರಿಯಾಗಳು ನಾಶವಾಗಿ, ಸೋಂಕು ಹರಡುವುದನ್ನು ತಪ್ಪಿಸುತ್ತದೆ.
ನ್ಯಾಪ್ಕಿನ್ಗಳ ಬದಲಾವಣೆ: ಮಾಸಿಕ ದಿನಗಳಲ್ಲಿ ಸ್ವಚ್ಛತೆ ಮೊದಲ ಆದ್ಯತೆಯಾಗಿರಬೇಕು. ಹೀಗಾಗಿ ಪ್ರತೀ 4 ರಿಂದ 6 ಗಂಟೆಗಳಿಗೊಮ್ಮೆ ನ್ಯಾಪ್ಕಿನ್ಗಳನ್ನು ಬದಲಾಯಿಸಿ. ನೀವು ಟಾಂಪೂನ್ಗಳನ್ನು ಬಳಸುತ್ತಿದ್ದರೆ ತಪ್ಪದೇ 6 ಗಂಟೆಗಳಿಗೊಮ್ಮೆ ಬದಲಾಯಿಸಿ. ಇಲ್ಲದಿದ್ದರೆ ಸ್ಕಿನ್ ರಾಶಸ್ಗಳಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.
ಸೋಪ್, ಪರಿಮಳಯುಕ್ತ ವಸ್ತುಗಳ ಬಳಕೆ ಬೇಡ: ಯೋನಿಯನ್ನು ಸ್ವಚ್ಛಗೊಳಿಸುವಾಗ ಸೋಫ್ ಅಥವಾ ಪರಿಮಳಯುಕ್ತ ಪದಾರ್ಥಗಳ ಬಳಕೆಯನ್ನು ತಪ್ಪಿಸಿ. ನೆನಪಿಡಿ. ಲೈಂಗಿಕ ಕ್ರಿಯೆಯ ಬಳಿಕ ತಪ್ಪದೆ ನಿಮ್ಮ ಖಾಸಗಿ ಅಂಗಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಆದಷ್ಟು ಉಗುರು ಬೆಚ್ಚಗಿನ ನೀರನ್ನು ಬಳಸಿ ಸ್ವಚ್ಛಮಾಡಿಕೊಳ್ಳಿ. ಇಲ್ಲದಿದ್ದರೆ ತುರಿಕೆ ಅಥವಾ ಬ್ಯಾಕ್ಟೀರಿಯಾಗಳ ಉತ್ಪತ್ತಿಗೆ ಕಾರಣವಾಗಬಹುದು.
ಸುರಕ್ಷಿತ ಲೈಂಗಿಕ ಕ್ರಿಯೆ: ಖಾಸಗಿ ಭಾಗಗಳ ಸುರಕ್ಷತೆಗೆ ಲೈಂಗಿಕ ಕ್ರಿಯೆಯೂ ಮುಖ್ಯವಾಗಿರುತ್ತದೆ. ಹೀಗಾಗಿ ಸುರಕ್ಷಿತ ಲೈಂಗಿಕ ಕ್ರಿಯೆಯನ್ನು ಅಭ್ಯಾಸ ಮಾಡಿಕೊಳ್ಳಿ. ಎಚ್ಐವಿ ಅಥವಾ ಎಸ್ಟಿಐ ಸೋಂಕಿನ ಬಗ್ಗೆ ಎಚ್ಚರಿಕೆಯಿರಲಿ. ಕಾಂಡೋಮ್ಗಳ ಬಳಕೆಯ ಮೊದಲು ಪರೀಕ್ಷಿಸಿಕೊಳ್ಳಿ. ಕೆಲವೊಮ್ಮೆ ಅಲರ್ಜಿ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಸುರಕ್ಷಿತ ಲೈಂಗಿಕ ಕ್ರಿಯೆಯ ಅಭ್ಯಾಸ ಮಾಡಿಕೊಳ್ಳಿ.
ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯದಿರಿ: ಖಾಸಗಿ ಅಂಗಗಳ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸ್ವಂತ ಚಿಕಿತ್ಸೆ ಬೇಡ. ಆಗಾಗ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಆದ್ದರಿಂದ ಸ್ತ್ರೀರೋಗ ತಜ್ಞರನ್ನು ಆಗಾಗ ಸಂಪರ್ಕಿಸಿ. ಇದು ನಿಮ್ಮ ಅಸಹಜ ಸಮಸ್ಯೆಗಳನ್ನು ತಪ್ಪಿಸಲು ಸಹಾಯಕವಾಗುತ್ತದೆ.
(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್ನ ಅಭಿಪ್ರಾಯವಾಗಿರುವುದಿಲ್ಲ. ತಜ್ಞರು ನೀಡಿದ ವರದಿಗಳನ್ನುಆಧರಿಸಿ ಮಾಹಿತಿ ನೀಡಲಾಗಿದೆ)
ಇದನ್ನೂ ಓದಿ:
Communication Gap: ಕಮ್ಯುನಿಕೇಷನ್ ಗ್ಯಾಪ್ನಿಂದ ಸಂಗಾತಿಗಳಲ್ಲಿ ಆಗುವ ಸಮಸ್ಯೆಗಳೇನು?