AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Art Day 2026: ಏಪ್ರಿಲ್‌ 15 ರಂದೇ ಏಕೆ ವಿಶ್ವ ಕಲಾ ದಿನವನ್ನು ಆಚರಿಸುವುದು ಗೊತ್ತಾ?

ಕಲೆಗಳು ಮಾನವನ ಭಾವನೆಯನ್ನು ವ್ಯಕ್ತಪಡಿಸುವ ಪ್ರಮುಖ ಮಾಧ್ಯಮವಾಗಿದೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಅದೆಷ್ಟೋ ಕಲಾ ಪ್ರಕಾರಗಳು ನಶಿಸಿ ಹೋಗುತ್ತಿವೆ. ಈ ನಿಟ್ಟಿನಲ್ಲಿ ಕಲೆಗಳ ಮಹತ್ವವನ್ನು ಉತ್ತೇಜಿಸಲು, ವಿವಿಧ ಕಲಾ ಪ್ರಕಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಚಿತ್ರಕಲೆ, ಶಿಲ್ಪಕಲೆ, ಛಾಯಾಗ್ರಹಣ, ಸಂಗೀತ, ನೃತ್ಯ ಸೇರಿದಂತೆ ಪ್ರತಿಯೊಂದು ಪ್ರಕಾರದ ಕಲೆಗಳು ಮತ್ತು ಕಲಾವಿದರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಏಪ್ರಿಲ್‌ 15 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ.

World Art Day 2026: ಏಪ್ರಿಲ್‌ 15 ರಂದೇ ಏಕೆ ವಿಶ್ವ ಕಲಾ ದಿನವನ್ನು ಆಚರಿಸುವುದು ಗೊತ್ತಾ?
ವಿಶ್ವ ಕಲಾ ದಿನImage Credit source: Freepik
ಮಾಲಾಶ್ರೀ ಅಂಚನ್​
|

Updated on: Apr 15, 2026 | 9:37 AM

Share

ಕಲೆಗಳು (Art) ನಮ್ಮ ಸಂಸ್ಕೃತಿಯ ಜೀವಂತಿಕೆಯಾಗಿದ್ದು, ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ಈ  ಕಲೆಗಳು ಜನಜೀವನದೊಂದಿಗೆ ಬೆರೆತು ಹೋಗಿವೆ. ಅಲ್ಲದೆ ಕಲೆಗಳು ಮಾನವನ ಭಾವನೆ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಪ್ರಮುಖ ಮಾಧ್ಯಮವೂ ಹೌದು. ಈ ಜಗತ್ತಿನಾದ್ಯಂತ ಅನೇಕಾರು ಕಲಾ ಪ್ರಕಾರಗಳಿವೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ, ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳು ಕ್ಷೀಣಿಸುತ್ತಾ ಬರುತ್ತಿದೆ. ಹಾಗಾಗಿ ಸಾಮಾಜಿಕ ಅಭಿವೃದ್ಧಿಯಲ್ಲಿ ಕಲೆಯ ಮಹತ್ವವನ್ನು ಉತ್ತೇಜಿಸಲು, ಕಲೆ ಹಾಗೂ ಕಲಾವಿದರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಏಪ್ರಿಲ್‌ 15 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನ್ು‌ ತಿಳೀಯೋಣ ಬನ್ನಿ.

ವಿಶ್ವ ಕಲಾ ದಿನದ ಇತಿಹಾಸವೇನು?

ಅಂತರಾಷ್ಟ್ರೀಯ ಕಲಾ ಸಂಘದ ಸಾಮಾನ್ಯ ಸಭೆಯಲ್ಲಿ ವಿಶ್ವ ಕಲಾ ದಿನವನ್ನು ಆಚರಿಸುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು. ಮೊದಲ ಬಾರಿಗೆ  2012 ರಲ್ಲಿ ವಿಶ್ವ ಕಲಾದಿನವನ್ನು ಆಚರಿಸಲಾಯಿತು.  ವಿವಿಧ ಕಲಾ ವರ್ಗಗಳಿಂದ ಸುಮಾರು 150 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳ ಕಲೆಗಾರರ ಭಾವನೆಗಳಿಗೆ  ಗೌರವ ಸಲ್ಲಿಸಲಾಯಿತು ಮತ್ತು ಅವರ ಕೆಲಸಕ್ಕೆ ಪ್ರೋತ್ಸಾಹ ನೀಡಲಾಯಿತು.

ಏಪ್ರಿಲ್ 15 ರಂದೇ ವಿಶ್ವ ಕಲಾ ದಿನವನ್ನು ಆಚರಿಸುವುದೇಕೆ?

ಮಹಾನ್ ಇಟಾಲಿಯನ್ ವರ್ಣಚಿತ್ರಕಾರ ಲಿಯೊನಾರ್ಡೊ ಡಾ ವಿನ್ಸಿ ಅವರ ಜನ್ಮ ದಿನದ ಸವಿ ನೆನಪಿಗಾಗಿ ಏಪ್ರಿಲ್‌ 15 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಲಿಯೊನಾರ್ಡೊ ಡಾ ವಿನ್ಸಿ ಒಬ್ಬ ಪ್ರಸಿದ್ಧ ಇಟಾಲಿಯನ್ ವರ್ಣಚಿತ್ರಕಾರ, ಶಿಲ್ಪಿ, ವಾಸ್ತುಶಿಲ್ಪಿ, ಸಂಗೀತಗಾರ, ನುರಿತ ಮೆಕ್ಯಾನಿಕ್, ಎಂಜಿನಿಯರ್ ಮತ್ತು ವಿಜ್ಞಾನಿಯಾಗಿದ್ದರು. ಅವರು ತಮ್ಮ ಕಲೆಯಲ್ಲಿನ ಪ್ರಾವೀಣ್ಯತೆಯಿಂದಲೇ ಪ್ರಪಂಚದಾದ್ಯಂತ ಖ್ಯಾತಿಯನ್ನು ಪಡೆದವರು. ಇಂತಹ ಮಹಾನ್‌ ಕಲಾವಿದನ ಜನ್ಮ ದಿನದ ಸವಿ ನೆನಪಿಗಾಗಿ 2012 ರಲ್ಲಿ ವಿಶ್ವ ಕಲಾ ದಿನವನ್ನು ಆಚರಣೆಯನ್ನು ಪ್ರಾರಂಭಿಸಲಾಯಿತು.   ವಿಶ್ವ ಕಲಾ ದಿನದ ಅಧಿಕೃತ ಆಚರಣೆಯನ್ನು 2015 ರಲ್ಲಿ ಅಮೆರಿಕದ  ಲಾಸ್ ಏಂಜಲೀಸ್‌ನಲ್ಲಿ ನಡೆಸಲಾಯಿತು. ನಂತರ 2019 ರಲ್ಲಿ  ಯುನೆಸ್ಕೋ ಅಧಿಕೃತವಾಗಿ ವಿಶ್ವ ಕಲಾದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್‌ 15 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸುವುದೇಕೆ ಗೊತ್ತಾ?

ವಿಶ್ವ ಕಲಾ ದಿನದ ಮಹತ್ವವೇನು?

  • ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಪ್ರಕಾರ, ವಿಶ್ವ ಕಲಾ ದಿನದ ಗುರಿ ಸಮಾಜದಲ್ಲಿ ಕಲಾತ್ಮಕ ಅಭಿವ್ಯಕ್ತಿಗಳನ್ನು ದೃಢವಾಗಿ ಸಂಯೋಜಿಸುವುದು. ಇದಲ್ಲದೆ, ಸಾಮಾಜಿಕ ಅಭಿವೃದ್ಧಿಗೆ ಕಲೆಯ ಮಹತ್ವ ಮತ್ತು ಕೊಡುಗೆಯನ್ನು ಎತ್ತಿ ತೋರಿಸುವ ಗುರಿಯನ್ನು ಸಹ ಇದು ಹೊಂದಿದೆ.
  • ಈ ದಿನ ಕಲೆ ಮಾತ್ರವಲ್ಲದೆ ಕಲಾವಿದರ ಕೊಡುಗೆಗಳು ಕೂಡಾ ನಮ್ಮ ಸಂಸ್ಕೃತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ ಎಂಬುದನ್ನು ನೆನಪಿಸುತ್ತದೆ. ಈ ನಿಟ್ಟಿನಲ್ಲಿ ಕಲಾವಿದರು ಹಾಗೂ ಕಲೆಗೆ ಗೌರವವನ್ನು ಸಲ್ಲಿಸಬೇಕು ಎಂಬ ಉದ್ದೇಶದಿಂದ ವಿಶ್ವ ಕಲಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
  • ವಿಶ್ವ ಕಲಾ ದಿನದ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮೇಳನಗಳು, ಪ್ರದರ್ಶನಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳು ಮತ್ತು ಯುವಕರನ್ನು ಕಲೆಯಲ್ಲಿ ತೊಡಗಿಸಿಕೊಳ್ಳಲು, ಕಲೆಯ ಮೇಲಿನ ಅವರ ಆಸಕ್ತಿಯನ್ನು ಹೆಚ್ಚಿಸಲು  ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us