ದೇಶವನ್ನು ಮುನ್ನಡೆಸುವ ಯುವಜನತೆ ಸ್ವಾಮಿ ವಿವೇಕಾನಂದರ ಈ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು
ಯುವಶಕ್ತಿಯೇ ದೇಶದ ನಿಜವಾದ ಶಕ್ತಿ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಈ ಮಾತಿನಂತೆ ಯುವಜನರು ಮತ್ತು ವಿದ್ಯಾರ್ಥಿಗಳು ಜೊತೆ ಸೇರಿ ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಹೋರಾಡಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಮಾಡಿದ್ದಾರೆ. ಇದೇ ರೀತಿ ಯುವಶಕ್ತಿ ಯೂತ್ ಐಕಾನ್ ಸ್ವಾಮಿ ವಿವೇಕಾನಂದರ ಈ ಸಂದೇಶಗಳನ್ನು ಪಾಲಿಸುವ ಮೂಲಕ ದೇಶವನ್ನು ಬಲಿಷ್ಟ ರಾಷ್ಟ್ರವನ್ನಾಗಿ ನಿರ್ಮಿಸಲು, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಶ್ರಮಿಸಬೇಕು.

ಮುಖ್ಯಾಂಶಗಳು
- ಸ್ವಾಮಿ ವಿವೇಕಾನಂದರು ಯುವಶಕ್ತಿಯನ್ನು ದೇಶದ ಶಕ್ತಿ ಎಂದು ಹೇಳಿದ್ದಾರೆ
- ವಿವೇಕಾನಂದರು ಯುವಕರಿಗಾಗಿ ಸ್ಫೂರ್ತಿದಾಯಕ ಕಿವಿಮಾತುಗಳನ್ನು ಹೇಳಿದ್ದಾರೆ
- ದೇಶದ ಪ್ರಗತಿಗಾಗಿ ಯುವಕರು ವಿವೇಕಾನಂದರ ಈ ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು
ಯುವಶಕ್ತಿ (youth) ತಿರುಗಿ ಬಿದ್ದರೆ ಸಮಾಜದಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತವೆ ಎಂಬುದಕ್ಕೆ ಯುವಜನರು ಮತ್ತು ವಿದ್ಯಾರ್ಥಿಗಳು ಜೊತೆ ಸೇರಿ ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ನಡೆಸಿದ ಪ್ರತಿಭಟನೆಯೇ ಸಾಕ್ಷಿ. ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ ಸ್ವಾಮಿ ವಿವೇಕಾನಂದರು ಅದೆಷ್ಟೋ ವರ್ಷಗಳ ಮುಂಚೆಯೇ ಯುವಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದರು, ಯುವಶಕ್ತಿಯಿಂದ ದೇಶದ ಬದಲಾವಣೆ ಸಾಧ್ಯ ಎಂದು ನಂಬಿದ್ದರು. ಇಂದಿನ ಜೆನ್ ಝೀ ಯುವಕರು ಭಾರತವನ್ನು ಮತ್ತಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು, ಜೀವನದಲ್ಲಿ ಉನ್ನತಿಯನ್ನು ಕಾಣಲು ಸ್ವಾಮಿ ವಿವೇಕಾನಂದರ ಈ ಕೆಲವೊಂದು ವಿಚಾರಧಾರೆಗಳನ್ನು, ಮಾತುಗಳನ್ನು ತಪ್ಪದೇ ಪಾಲಿಸಬೇಕು.
ಯುವಜನತೆ ಸ್ವಾಮಿ ವಿವೇಕಾನಂದರ ಈ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು:
ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ: ನಮ್ಮ ಗುರಿ ಮತ್ತು ಆಕಾಂಕ್ಷೆಗಳನ್ನು ನಾವು ಎಂದಿಗೂ ಬಿಟ್ಟುಕೊಡಬಾರದು ಎಂದು ವಿವೇಕಾನಂದರು ಹೇಳಿದ್ದಾರೆ. ಯುವಕರು ತಮ್ಮ ಗುರಿಗಳನ್ನು ಸಾಧಿಸಲು ತಮ್ಮ ಪ್ರಯತ್ನಗಳಲ್ಲಿ ದೃಢಸಂಕಲ್ಪ ಮತ್ತು ನಿರಂತರವಾಗಿರಬೇಕು ಎಂದು ಅವರು ಒತ್ತಾಯಿಸುತ್ತಿದ್ದರು. ಜೀವನದಲ್ಲಿ ಎಷ್ಟೇ ವೈಫಲ್ಯಗಳು ಎದುರಾದರೂ ಅದನ್ನು ಮೆಟ್ಟಿ ನಿಂತು ಗುರಿ ಮುಟ್ಟುವ ತನಕ ಛಲವನ್ನು ಬಿಡಬಾರದು. ಆಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಯುವಕರು ಯಾವಾಗಲೂ ದೇಶವನ್ನು ಇನ್ನಷ್ಟು ಉತ್ತಮವನ್ನಾಗಿ ಮಾಡಲು, ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಶ್ರಮಿಸಬೇಕು. ಗುರಿ ಮತ್ತು ಆಕಾಂಕ್ಷೆಗಳನ್ನು ಎಂದಿಗೂ ಬಿಟ್ಟುಕೊಡಬಾರದು. ಅಂದುಕೊಂಡ ಗುರಿಯನ್ನು ಸಾಧಿಸಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಚ್ಚರವಾಗಿರಬೇಕು.
ನಿಮ್ಮನ್ನು ದುರ್ಬಲ ಎಂದು ಭಾವಿಸಬೇಡಿ: ನಮ್ಮನ್ನು ನಾವು ದುರ್ಬಲರು ಎಂದುಕೊಳ್ಳುವುದೇ ದೊಡ್ಡ ಪಾಪ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ನನ್ನಿಂದ ಸಾಧ್ಯವಿಲ್ಲ, ಗುರಿಯನ್ನು ತಲುಪಲು ಸಾಧ್ಯವಿಲ್ಲ ಎಂದು ಯೋಚಿಸಿದರೆ ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ, ಅದೇ ರೀತಿ ತಪ್ಪುಗಳು ನಡೆದಾಗ ಅದನ್ನು ಪ್ರಶ್ನಿಸುವ ಧೈರ್ಯ ಇಲ್ಲದಿದ್ದರೆ ದೇಶವನ್ನು ಮುನ್ನಡೆಸಲು ಕೂಡ ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಧೈರ್ಯ ಮತ್ತು ಸಾಮರ್ಥ್ಯಗಳ ಮೇಲೆ ನಂಬಿಕೆ ಇಡಿ, ಯಶಸ್ಸಿಗಾಗಿ ಹೋರಾಡಿ, ಅದೇ ರೀತಿ ನೀಟ್ ಪ್ರಶ್ನೆಪತ್ರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಧೈರ್ಯದಿಂದ ಹೋರಾಟ ನಡೆಸಿದಂತೆ, ತಪ್ಪುಗಳು, ದುರಾಡಳಿತದ ವಿರುದ್ಧ ಧ್ವನಿಯನ್ನು ಎತ್ತಿ. ಆಗ ಮಾತ್ರ ಯುವಕರು ಉತ್ತಮ ರಾಷ್ಟ್ರವನ್ನು ನಿರ್ಮಿಸಬಹುದು.
ಸವಾಲುಗಳನ್ನು ಎದುರಿಸಲು ಯಾವುದೇ ಭಯ ಬೇಡ: ವಿವೇಕಾನಂದರು ಭಯವಿಲ್ಲದೆ ಎಂತಹದ್ದೇ ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದ್ದಾರೆ. ಭಯವು ಪ್ರಗತಿ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಅವರು ನಂಬಿದ್ದರು. ಯುವಜನರು ತಮ್ಮ ಭಯಗಳನ್ನು ಎದುರಿಸಲು, ಸವಾಲುಗಳನ್ನು ಸ್ವೀಕರಿಸಲು ಕಲಿಯಬೇಕು ಆಗ ಮಾತ್ರ ಕನಸುಗಳು ನನಸಾಗಲು ಸಾಧ್ಯ. ಅದೇ ರೀತಿ ಭಯವನ್ನು ಬಿಟ್ಟು ದೇಶದಲ್ಲಿ ನಡೆಯುವ ತಪ್ಪುಗಳನ್ನು ಪ್ರಶ್ನಿಸಿದಾಗ, ಅಭಿವೃದ್ಧಿಗಾಗಿ ಧ್ವನಿ ಎತ್ತಿದಾಗ ದೇಶವು ಇನ್ನಷ್ಟು ಬಲಿಷ್ಠಗೊಳ್ಳಲು ಸಾಧ್ಯ. ನಿಮಗಾಗಿ ಹೋರಾಡಲು ಎಂದಿಗೂ ಭಯಪಟ್ಟುಕೊಳ್ಳಬೇಡಿ.
ಭರವಸೆ ಕಳೆದುಕೊಳ್ಳಬಾರದು: ಯುವಜನರು ದೇಶದ ಶಕ್ತಿ, ಅವರು ಭರವಸೆ ಕಳೆದುಕೊಳ್ಳಬಾರದು, ಜೀವನದಲ್ಲಿ ಭರವಸೆ ನದಿಯಂತೆ ಹರಿಯುತ್ತಿರಬೇಕು ಎಂದು ವಿವೇಕಾನಂದರು ಹೇಳುತ್ತಾರೆ. ನಮ್ಮ ಗುರಿ ದೊಡ್ಡದಾಗಿದ್ದಷ್ಟು ಹೋರಾಟ ದೊಡ್ಡದಾಗಿರುತ್ತದೆ, ಆ ಹೋರಾಟದ ಹಾದಿಯಲ್ಲಿ ಭರವಸೆಯನ್ನು ಕಳೆದುಕೊಳ್ಳಬಾರದು. ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ದೃಢವಾದ ಭರವಸೆಯನ್ನು ಇಟ್ಟಾಗ ಮಾತ್ರ ಇಂದು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿರುದ್ಧದ ಹೋರಾಟದಲ್ಲಿ ಜೆನ್ ಝೀಗಳು ವಿಜಯವನ್ನು ಸಾಧಿಸಿದಂತೆ ಯಾವುದೇ ಹೋರಾಟವನ್ನು ಜಯಿಸಲು ಸಾಧ್ಯ. ಹಾಗಾಗಿ ಎಂದಿಗೂ ಜೀವನದಲ್ಲಿ ಭಯವಸೆಯನ್ನು ಕಳೆದುಕೊಳ್ಳಬಾರದು.
ಇದನ್ನೂ ಓದಿ: ಕಾರ್ಗಿಲ್ ಯುದ್ಧ ನಡೆಯುವುದಕ್ಕೆ ಮುಖ್ಯ ಕಾರಣವೇನು? ಕದನದಲ್ಲಿ ಭಾರತ ಗೆದ್ದು ಬೀಗಿದ ಪರಾಕ್ರಮದ ಕಥೆಯನ್ನು ತಿಳಿಯಿರಿ
ಉತ್ತಮ ಶಿಕ್ಷಣ ಪಡೆಯಿರಿ, ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ: ಯುವಕರು ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಚಿಂತೆಯ ಮೂಲಕ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಸಕಾರಾತ್ಮಕ ಮನೋಭಾವದ ಜೊತೆಗೆ ಸರಿಯಾದ ಶಿಕ್ಷಣ, ವ್ಯಕ್ತಿತ್ವ, ಬಲವಾದ ಇಚ್ಛಾಶಕ್ತಿ ರಾಷ್ಟ್ರ ನಿರ್ಮಾಣಕ್ಕೆ ಅತ್ಯಗತ್ಯ ಎಂದು ಹೇಳಿದ್ದಾರೆ. ಹಾಗಾಗಿ ಯುವಕರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸಬೇಕು.
ಭಾರತವು ಯುವ ಜನರಿಂದ ತುಂಬಿದ ರಾಷ್ಟ್ರವಾಗಿದ್ದು, ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಆದರ್ಶಗಳನ್ನು ಪಾಲಿಸಿ ಸರಿ ದಾರಿಯಲ್ಲಿ ನಡೆಯುವ ಮೂಲಕ ಹಾಗೂ ಯುವ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




